ನಟ ಚೇತನ್ ಅಹಿಂಸಾ ಅವರು, ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇಲ್ಲ ಎಂದು ಆರೋಪಿಸಿದ್ದಾರೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ರೈತರ ಜಮೀನು ಕಬಳಿಸಿ ಕಾಂಕ್ರೀಟ್ ಕಾಡು ಮಾಡಲು ಹೊರಟಿದ್ದಾರೆ ಮತ್ತು ಎಲ್ಲವನ್ನೂ ವ್ಯಾಪಾರದ ದೃಷ್ಟಿಯಿಂದ ನೋಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಡಿಕೆ ಶಿವಕುಮಾರ್​ ಮತ್ತು ಕಾಂಗ್ರೆಸ್​ ಕುರಿತು ಚೇತನ್​ ಅಹಿಂಸಾ ಶಾಕಿಂಗ್​ ಸ್ಟೇಟ್​ಮೆಂಟ್​!

ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ (Chetan Ahimsa) ಸದಾ ಒಂದಿಲ್ಲೊಂದು ವಿಷಯಗಳಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇವರು ಮಾತನಾಡುವುದು ಯಾವುದಾದರೊಂದು ಕಾರಣಕ್ಕೆ ವಿವಾದವೂ ಆಗುವುದು ಉಂಟು. ಡಾ.ರಾಜ್‌ ಕುಮಾರ್ ಸ್ಮಾರಕದ ಭೂಮಿಗೆ ಸರ್ಕಾರದಿಂದ ಎರಡೂವರೆ ಎಕರೆ ಪ್ರದೇಶ ನೀಡಿದ್ದನ್ನು ಪ್ರಶ್ನಿಸಿ ನಟ ಅಹಿಂಸಾ ಚೇತನ್ ಮಾಡಿದ್ದ ಪೋಸ್ಟ್ ಭಾರೀ ವಿವಾದ ಉಂಟಾಗಿತ್ತು. ಇದಕ್ಕೆ ಸಾ ರಾ ಗೋವಿಂದ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ನಿನ್ನೆ ಚೇತನ್ ಅಹಿಂಸಾ ಮನೆ ಮುಂದೆ ಬಂದು ಆಕ್ರೋಶ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದರು. ಅಹಿಂಸಾ ಚೇತನ್ ಡಾ ರಾಜ್ ಕುಮಾರ್ ಅಭಿಮಾನಿಗಳಿಗೆ ಕ್ಷಮೆ ಕೂಡ ಕೇಳಿದ್ದರು.

ಶಾಕಿಂಗ್​ ಸ್ಟೇಟ್​ಮೆಂಟ್​

ಹೀಗೆ ಸದಾ ಒಂದಿಲ್ಲೊಂದು ಕಾರಣಗಳಿಂದ ಸದ್ದು ಮಾಡ್ತಿರೋ ಚೇತನ್​ ಅವರು ಇದೀಗ ಡಿ.ಕೆ.ಶಿವಕುಮಾರ್​ ಮತ್ತು ಕಾಂಗ್ರೆಸ್​ ಕುರಿತು ಶಾಕಿಂಗ್ ಸ್ಟೇಟ್​ಮೆಂಟ್​ ಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್​ ಅವರು ಮುಖ್ಯಮಂತ್ರಿ ಆಗ್ತಿರೋ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಕೆ.ಶಿವಕುಮಾರ್​ ಅಂತ ಅಲ್ಲ. ಕಾಂಗ್ರೆಸ್​ನಲ್ಲಿ ಎಂಎಲ್​​ಎ, ಎಂಪಿ ಯಾರಿಗೂ ದೂರದೃಷ್ಟಿ ಇಲ್ಲ. ಕರ್ನಾಟಕವನ್ನು ಅಭಿವೃದ್ಧಿ ಮಾಡಬೇಕು ಎನ್ನುವುದು ಯಾರ ಮನಸ್ಸಿನಲ್ಲಿಯೂ ಇದ್ದಂತಿಲ್ಲ ಎಂದಿದ್ದಾರೆ.

ಬಿಡದಿ ಟೌನ್​ಷಿಪ್​

ಡಿ.ಕೆ.ಶಿವಕುಮಾರ್​ ಅವರು ಬಿಡದಿ ಟೌನ್​ಷಿಪ್​ನಲ್ಲಿ ರೈತರ ಜಮೀನನ್ನು ಕಬಳಿಸಿ, ಕಾಂಕ್ರೀಟ್​ ಕಾಡು ಮಾಡಲು ಹೊರಟಿದ್ದಾರೆ. ಮೇಕೇದಾಟು, ಡಿಕೆದಾಟು ಎಂದೆಲ್ಲಾ ಮುಳುಗಡೆಯಾಗುತ್ತಿದೆ. ಇದನ್ನೆಲ್ಲಾ ನಾವು ಒಪ್ಪುವುದಿಲ್ಲ. ಬೆಂಗಳೂರು ನಾಶ ಮಾಡಿದ್ದು ಸಾಕಾಗಲ್ಲ ಎಂದು ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಮಧ್ಯಮ ಕರ್ನಾಟಕ, ಹಳೆ ಮೈಸೂರು ನಾಶವಾಗ್ತಿದೆ. ಎಲ್ಲವನ್ನೂ ನೆಗ್ಲೆಕ್ಟ್​ ಮಾಡುತ್ತಿದ್ದಾರೆ ಎಂದು ಚೇತನ್​ ಆರೋಪಿಸಿದ್ದಾರೆ.

ಅವರು ಎಲ್ಲವನ್ನೂ ವ್ಯಾಪಾರದ ದೃಷ್ಟಿಯಿಂದ ನೋಡುತ್ತಿದ್ದಾರೆ. ಜನರ ಬದುಕಿನ ಏಳಿಗೆಗೋಸ್ಕರ ಏನು ಮಾಡುವುದಿಲ್ಲ. ಇದು ಡಿ.ಕೆ.ಶಿವಕುಮಾರ್​ ಒಬ್ಬರದ್ದೇ ವಿಷ್ಯ ಅಲ್ಲ, ಕಾಂಗ್ರೆಸ್​ನಲ್ಲಿ ಇರುವವರು ಎಲ್ಲರೂ ಅಂಥವರೇ ಎಂದಿದ್ದಾರೆ ಅಹಿಂಸಾ ಚೇತನ್​.