ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಸುರೇಶ್ ಕುಮಾರ್ ಅವರು ಗೃಹಲಕ್ಷ್ಮಿ ಯೋಜನೆಯ 5 ಸಾವಿರ ಕೋಟಿ ರೂಪಾಯಿ ಹಣದ ಬಗ್ಗೆ ಪ್ರಶ್ನಿಸಿದ್ದಾರೆ. 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಆರೋಪಿಸಿ, ಈ ಹಣದ ಹಣೆಬರಹದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸಿದ್ದರಾಮಯ್ಯನವರನ್ನು ಆಗ್ರಹಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಪ್ರಹಸನ ಒಂದು ಹಂತಕ್ಕೆ ಬಂದಿದೆ. ಸದ್ಯ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ರಾಜೀನಾಮೆ ನೀಡಿದ್ದು, ಉಪ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಕಸರತ್ತು ನಡೆಯುತ್ತಿದೆ. ಇದರ ನಡುವೆಯೇ, ಮಾಜಿ ಸಚಿವ ಸುರೇಶ್ ಕುಮಾರ್ ಅವರು, ಬಿಡುಗಡೆಯಾದರೂ ಜನರಿಗೆ ಇನ್ನೂ ಸಿಗದ 5 ಸಾವಿರ ಕೋಟಿ ರೂಪಾಯಿ ಲೆಕ್ಕ ನೀಡುವಂತೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರು ಬರೆದಿರುವುದನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.
ಸುರೇಶ್ ಕುಮಾರ್ ಬರೆದಿದ್ದೇನು?
ಮಾನ್ಯ ಶ್ರೀ ಸಿದ್ದರಾಮಯ್ಯನವರೇ.
ನಮಸ್ಕಾರ.
ತಮ್ಮ ಪಕ್ಷದ ಸೂಚನೆಯಂತೆ ತಾವು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೀರಿ. ಇಂದಿನ ತಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಹೊಸ ನಾಯಕರನ್ನು ಆರಿಸಲಾಗುತ್ತದೆ ಎಂಬುದು ಮಾಧ್ಯಮಗಳ ಮೂಲಕ ತಿಳಿದುಬಂದಿದೆ.
ತಮ್ಮ ಮುಂದಿನ ದಿನಗಳು ಶುಭಕರವಾಗಿರಲಿ ಎಂದು ನಾನು ಮನ:ಪೂರ್ವಕವಾಗಿ ಹಾರೈಸುತ್ತೇನೆ. ಈ ಸಮಯದಲ್ಲಿ ತಮ್ಮಲ್ಲಿ ಒಂದು ವಿನಮ್ರ ಮನವಿಯನ್ನು ಮಾಡಿಕೊಳ್ಳುತ್ತಿದ್ದೇನೆ. ತಾವು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಜೊತೆಗೆ ಅದೇ ಸಮಯದಲ್ಲಿ ನಮ್ಮ ರಾಜ್ಯದ ಹಣಕಾಸು ಸಚಿವರೂ ಆಗಿದ್ದಿರಿ. ಇಡೀ ದೇಶದಲ್ಲಿ ದಾಖಲೆ ಸಂಖ್ಯೆಯ ಬಜೆಟ್ ಗಳನ್ನು ಮಂಡಿಸಿದ ಹೆಗ್ಗಳಿಕೆ ನಿಮ್ಮದು. ಒಂದು ರೀತಿಯಲ್ಲಿ ನಮ್ಮ ರಾಜ್ಯದ ಆರ್ಥಿಕ ತಜ್ಞರು ತಾವು.
ಕಳೆದ ವರ್ಷ, 2025 ಡಿಸೆಂಬರ್ 9 ರಂದು, ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ, ವಿಧಾನಸಭೆಯಲ್ಲಿ ನಮ್ಮ ಪಕ್ಷದ ಶಾಸಕರಾದ ಶ್ರೀ ಮಹೇಶ ಟೆಂಗಿನಕಾಯಿರವರು ಒಂದು ಬಹಳ ಮಹತ್ವದ ವಿಚಾರವನ್ನು ಸದನದ ಗಮನಕ್ಕೆ ತಂದರು.
ತಮ್ಮ ಪಕ್ಷದ ಚುನಾವಣಾ ಗ್ಯಾರಂಟಿಯಾದ, ಬಹಳಷ್ಟು ಜನರ ಮತವನ್ನು ಗಳಿಸಲು ಸಾಧನವಾಗಿದ್ದ, ಗೃಹಲಕ್ಷ್ಮಿ ಯೋಜನೆಯಲ್ಲಿ ಸಂಭವಿಸಿದ್ದ ಬಹಳ ಗಂಭೀರ ಪ್ರಮಾದವನ್ನು ಅಂದು ಶ್ರೀ ಮಹೇಶ ಟೆಂಗಿನಕಾಯಿ ಪ್ರಸ್ತಾಪಿಸಿದರು. 2025 ಫೆಬ್ರವರಿ ಹಾಗೂ ಮಾರ್ಚಿ ತಿಂಗಳುಗಳ ಗೃಹಲಕ್ಷ್ಮಿ ಯೋಜನೆಯ ಹಣ ರಾಜ್ಯದ ಕುಟುಂಬಗಳಿಗೆ ತಲುಪದಿರುವ ಆರೋಪ ಮಾಡಿದರು. ಇದರ ಒಟ್ಟು ಮೊತ್ತ ₹ 5000 ಕೋಟಿ. (#ಹೌದು. #ಐದು_ಸಾವಿರ_ಕೋಟಿ) )
1.14 ಕೋಟಿ ಗೃಹಲಕ್ಷ್ಮಿಯರ ಪಾಲಿಗೆ ಇದೊಂದು ದೊಡ್ಡ ವಂಚನೆ. ತಮ್ಮ ಸಚಿವ ಸಂಪುಟದ ಮಾನ್ಯ ಸಚಿವೆ ಹಣ ಪಾವತಿಯಾಗಿದೆ ಎಂದು ಮೊದಲು ಹೇಳಿದ್ದರು. ಆದರೆ ನನ್ನ ಗೆಳೆಯ ಶಾಸಕ ಪಾವತಿ ಆಗಿಲ್ಲದಿರುವುದನ್ನು ದಾಖಲೆ ಸಮೇತ ಸಭೆಯ ಗಮನಕ್ಕೆ ತಂದು ₹ 5000 ಕೋಟಿ ಎಲ್ಲಿ ಹೋಯಿತು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು. ಅದಕ್ಕೆ ಸರಕಾರದ ನಿರುತ್ತರವೇ ಉತ್ತರವಾಗಿತ್ತು. ಇದು ಸಣ್ಣ ಮೊತ್ತವಲ್ಲ. ಮತ್ತು ಈ ಹಣ ಫಲಾನುಭವಿಗಳಿಗೆ ತಲುಪದಿರುವುದು ಸಣ್ಣ ಪ್ರಮಾದವಲ್ಲ. ರಾಜ್ಯದ ತಿಜೋರಿಯನ್ನೇ ಲೂಟಿ ಹೊಡೆದಿರುವ ಸ್ಪಷ್ಟ ಉದಾಹರಣೆ ಇದು ಎಂದು ಅಂದು ಸದನ ಮತ್ತು ಇಡೀ ರಾಜ್ಯ ಭಾವಿಸಿತು.
ಮಾನ್ಯರೇ. ರಾಜ್ಯದ ಜನತೆಯಿಂದ ಸಂಗ್ರಹ ಮಾಡಿರುವ ತೆರಿಗೆಯ ಪಾವಿತ್ರ್ಯತೆ ಕುರಿತು ನಾನು ನಿಮಗೆ ಏನೂ ಹೇಳಬೇಕಿಲ್ಲ. ಪ್ರತಿಯೊಂದು ಪೈಸೆಗೂ ಸರ್ಕಾರ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕಿದೆ. ಇದು ಜನತೆ ಅಪೇಕ್ಷಿಸುವ ಉತ್ತರದಾಯಿತ್ವ. ಕಳೆದ ಡಿಸೆಂಬರ್ 9 ರ ಮಾನ್ಯ ಶಾಸಕರ ಈ ಪ್ರಸ್ತಾವನೆಗೆ ಇದೀಗ ಐದು ತಿಂಗಳು ಪೂರ್ಣಗೊಂಡಿವೆ. ಆದರೆ ಆ ಪ್ರಶ್ನೆಗೆ ಉತ್ತರ ದೊರಕಿಲ್ಲ. ರಾಜ್ಯದ ಗೃಹಲಕ್ಷ್ಮಿಯರಿಗೆ ಈ ಹಣ ತಲುಪಿಲ್ಲ. ಈ ಬಾರಿ ಮೊತ್ತದ ಹಣ ಎಲ್ಲಿ, ಯಾರಿಗೆ ಹೋಗಿದೆ ಎಂಬುದು ಇದುವರೆಗೂ ರಾಜ್ಯದ ನಾಗರಿಕರಿಗೆ ತಿಳಿದುಬಂದಿಲ್ಲ. ತಮ್ಮಲ್ಲಿ ನನಗೆ ಗೌರವವಿರುವುದರಿಂದ, ನಾನು ಈ ಮನವಿ ಮಾಡಿಕೊಳ್ಳುತ್ತಿದ್ದೇನೆ.
ರಾಜ್ಯದ ಗೃಹಲಕ್ಷ್ಮಿಯರಿಗೆ ತಲುಪಬೇಕಾಗಿದ್ದ, 2025 ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳ ಹಣದ ಸ್ಥಿತಿಗತಿ ಏನು ಎಂಬುದನ್ನು ರಾಜ್ಯಕ್ಕೆ ತಿಳಿಸಬೇಕಿರುವುದು ರಾಜ್ಯದ ತಿಜೋರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದ ನಿಮ್ಮ ಜವಾಬ್ದಾರಿ. ಇದು ಯಾವುದೇ ಸರಕಾರದ ನೈತಿಕತೆ ಪ್ರಶ್ನೆ. ಆ ಜವಾಬ್ದಾರಿಯನ್ನು ತಾವು ಪ್ರಾಮಾಣಿಕವಾಗಿ ನಿರ್ವಹಿಸಿ ರಾಜ್ಯಕ್ಕೆ ಈ ಭಾರಿ ಮೊತ್ತದ ಹಣದ ಹಣೆಬರಹದ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಆಗ್ರಹಿಸುತ್ತೇನೆ.
ತಮ್ಮ ವಿಶ್ವಾಸಿ
ಎಸ್ ಸುರೇಶ್ ಕುಮಾರ್
ಎಂದು ಬರೆದಿದ್ದಾರೆ.
ಭಾರಿ ಚರ್ಚೆ
ಸುರೇಶ್ ಕುಮಾರ್ ಅವರ ಈ ಪತ್ರದ ಕುರಿತು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಇದಾಗಲೇ ಭಾಗ್ಯಲಕ್ಷ್ಮಿ ಹಣ ಬಂದಿಲ್ಲ ಎಂದು ಕೆಲವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಅದರ ಬೆನ್ನಲ್ಲೇ ಗೃಹಲಕ್ಷ್ಮಿಯ ಫಲಾನುಭವಿಗಳ ಪಟ್ಟಿ ಪರಿಷ್ಕರಣೆ ಮಾಡುತ್ತಿದೆ ಸರ್ಕಾರ. ಇದರ ನಡುವೆಯೇ 5 ಸಾವಿರ ಕೋಟಿಯ ಲೆಕ್ಕ ಕೇಳಿದ್ದಾರೆ ಸುರೇಶ್ ಕುಮಾರ್.


