Kasina Sara Review: ಮಣ್ಣಿಗೆ ಮರಳಿದ ವಿದ್ಯಾವಂತನ ಕತೆ
ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಉಮಾಶ್ರೀ ಅಭಿನಯಿಸಿರುವ ಕಾಸಿನ ಸರ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಕಂಡಿದೆ. ಸಿನಿಮಾ ಹೇಗಿದೆ?
ಆರ್ ಕೇಶವಮೂರ್ತಿ
ಅಣ್ಣ- ತಮ್ಮ, ಕುಟುಂಬ ಹಾಗೂ ಊರಿನ ಕತೆಯಾಗಿ ಶುರುವಾಗಿ, ಕೊನೆಗೆ ಕೃಷಿ ಕ್ರಾಂತಿ, ಭೂಮಿಯ ಸತ್ವ ಉಳಿಸುವ ಸಿನಿಮಾ ಎನಿಸಿಕೊಳ್ಳುವುದೇ ‘ಕಾಸಿನ ಸರ’ ಚಿತ್ರದ ಉತ್ತಮ ಗುಣ. ನಿರ್ದೇಶಕ ಎನ್ ಆರ್ ನಂಜುಂಡೇಗೌಡ ಯಾವುದೇ ಅಬ್ಬರ ಮತ್ತು ಮೇಕಿಂಗ್ ಪವಾಡಗಳು ಇಲ್ಲದೆ ಕೃಷಿಯೆಂಬ ಸರಳ ಜೀವನ ಶೈಲಿಯನ್ನು ಅಷ್ಟೇ ಸರಳವಾಗಿ ತೆರೆ ಮೇಲೆ ನಿರೂಪಿಸುತ್ತಾ ಹೋಗುತ್ತಾರೆ. ನಿರ್ದೇಶಕರ ಈ ಸೈಲೆಂಟ್ ನಿರೂಪಣೆಗೆ ತಕ್ಕಂತೆ ಚಿತ್ರದ ಪಾತ್ರಧಾರಿಗಳು ಕೂಡ ಬಂದು ಹೋಗುವ ಕೆಲಸವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ಓದಿ ಪದವಿ ತೆಗೆದುಕೊಂಡವರು ಹಳ್ಳಿಗಳಿಗೆ ಬಂದರೆ ಏನಾಗುತ್ತದೆ, ಕೃಷಿ ಓದಿದ ವಿದ್ಯಾವಂತರು ಭೂಮಿಗಿಳಿದು ಬೇಸಾಯ ಮಾಡಲು ಆರಂಭಿಸಿದಾಗ ಎಂಥ ಬದಲಾವಣೆ ಆಗುತ್ತದೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಿರುವ ಸಿನಿಮಾ ಇದು.
ತಾರಾಗಣ: ವಿಜಯ್ ರಾಘವೇಂದ್ರ, ಹರ್ಷಿಕಾ ಪೂಣಚ್ಚ, ಉಮಾಶ್ರೀ, ನೀನಾಸಂ ಅಶ್ವತ್‌್ಥ, ಸಂಗೀತ, ಮಂಡ್ಯ ರಮೇಶ್, ಅಶ್ವಿನ್ ಹಾಸನ್
ನಿರ್ದೇಶನ: ಎನ್ ಆರ್ ನಂಜುಂಡೇಗೌಡ
ರೇಟಿಂಗ್: 3
ಹಳ್ಳಿಯಲ್ಲಿ ಕೃಷಿ ಮಾಡಿಕೊಂಡಿದ್ದ ಅಣ್ಣ, ನಗರಕ್ಕೆ ಕೂಲಿಗೆ ಹೊರಡುತ್ತಾನೆ. ನಗರದಲ್ಲಿ ಓದಿದ ನಾಯಕ ಹಳ್ಳಿಗೆ ಬರುತ್ತಾನೆ. ಈ ರೂಪಾಂತರ ಮೂಲಕ ಕೃಷಿ, ಜೀವನ, ಹಳ್ಳಿಗಳು, ಸಾವಯವ ಬೇಸಾಯ, ಕೂಡು ಕುಟುಂಬಗಳು, ಸಂಬಂಧಗಳ ಮಹತ್ವ ಸಾರುವ ಕೆಲಸವನ್ನು ನಿರ್ದೇಶಕರು ಸಮರ್ಥವಾಗಿ ಮಾಡುತ್ತಾರೆ.
ಕೃಷಿಯ ಮಹತ್ವ ಸಾರುವ ಸಿನಿಮಾ ಕಾಸಿನ ಸರ: ನಂಜುಂಡೇಗೌಡ
ಇಷ್ಟಕ್ಕೂ ನಾಯಕ ಯಾಕೆ ಉದ್ಯೋಗ ಬೇಡ ಎನ್ನುತ್ತಾನೆ, ವಿದೇಶಿ ಕಂಪನಿಗಳು ಕೊಡುವ ಬಿತ್ತನೆ ಬೀಜಗಳಿಗೆ ಭೂಮಿಯನ್ನು ಒಡ್ಡಿದರೆ ಏನಾಗುತ್ತದೆ, ಇದರ ವಿರುದ್ಧ ನಾಯಕ ಯಾಕೆ ಮಾತನಾಡುತ್ತಾನೆ, ಕಾಸಿನ ಸರಕ್ಕೂ ಈ ಕತೆಗೂ ಏನು ಸಂಬಂಧ ಎಂಬುದನ್ನು ನೀವು ತೆರೆ ಮೇಲೆ ನೋಡಬೇಕು. ವಿದ್ಯಾವಂತ ರೈತನಿಗೆ ಹಳ್ಳಿಯಲ್ಲಿ ಪ್ರೇಮ ಕತೆಯೂ ಹುಟ್ಟಿಕೊಳ್ಳುತ್ತದೆ. ನಟ ವಿಜಯ್ ರಾಘವೇಂದ್ರ ಎಂದಿನಂತೆ ತಮ್ಮ ಸಹಜ ನಟನೆಯಿಂದ ಗಮನ ಸೆಳೆಯುತ್ತಾರೆ. ಹರ್ಷಿಕಾ ಪೂಣಚ್ಚ ಅವರ ಪಾತ್ರದಷ್ಟುಚೆಂದ. ಉಮಾಶ್ರೀ, ನೀನಾಸಂ ಅಶ್ವತ್‌್ಥ ಅವರು ನೆನಪಿನಲ್ಲಿ ಉಳಿಯುತ್ತಾರೆ. ಮಂಡ್ಯ ರಮೇಶ್ ಪಾತ್ರ ಕತೆಗೆ ತಿರುವುಗಳನ್ನು ಕೊಡುತ್ತದೆ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ಎರಡು ಹಾಡುಗಳಲ್ಲಿ ನಗುತ್ತದೆ.