ಒಂದು ಸುಂದರ ಮಲೆನಾಡು. ಎಲ್ಲಿ ನೋಡಿದರಲ್ಲಿ ಹಸಿರು. ಅಲ್ಲೊಂದು ಪ್ರೇಮತಾಪದ ಜೋಡಿ. ಹೀರೋ ಅಕ್ಕಪಕ್ಕ ತರಲೆ ಪೋಲಿ ಗೆಳೆಯರು. ಹಸಿರು ಬೆಟ್ಟದ ಮೇಲೆ ಸುಂದರ ಡಾನ್ಸು. ಲಂಗ ದಾವಣಿಯ ಸಹನಟಿಯರು. ಪಂಚೆ ತೊಟ್ಟಿರುವ ಸಹ ನಟರು.
ರಾಜೇಶ್ ಶೆಟ್ಟಿ
ಒಂದು ಸುಂದರ ಮಲೆನಾಡು. ಎಲ್ಲಿ ನೋಡಿದರಲ್ಲಿ ಹಸಿರು. ಅಲ್ಲೊಂದು ಪ್ರೇಮತಾಪದ ಜೋಡಿ. ಹೀರೋ ಅಕ್ಕಪಕ್ಕ ತರಲೆ ಪೋಲಿ ಗೆಳೆಯರು. ಹಸಿರು ಬೆಟ್ಟದ ಮೇಲೆ ಸುಂದರ ಡಾನ್ಸು. ಲಂಗ ದಾವಣಿಯ ಸಹನಟಿಯರು. ಪಂಚೆ ತೊಟ್ಟಿರುವ ಸಹ ನಟರು. ಹಿಂದೆ ಹಾರುತ್ತಿರುವ ಬಣ್ಣಗಳು. ಮನಮೋಹಕ ದೃಶ್ಯಗಳು. ಹುಡುಗಿಯರಿಗೆ ಕಾಳುಹಾಕುವ ಹಾಸ್ಯಮಯ ಸನ್ನಿವೇಶಗಳು. ಸಿಂಹಾದ್ರಿ ಸಿಂಹ ಶೈಲಿಯ ಸೊಗಸಾದ ಗ್ರಾಫಿಕ್. ಮನ ಮರುಗುವವರಿಗೆ ಭಾವನಾತ್ಮಕ ಸನ್ನಿವೇಶಗಳು. ಜೊತೆಗೆ ಈ ಕಾಲಕ್ಕೊಂದು ಮನಮುಟ್ಟುವ ಸಂದೇಶ.
ಒಟ್ಟಾರೆ ವಿಂಟೇಜ್ ಎಸ್.ನಾರಾಯಣ್ ಇಲ್ಲಿ ಮತ್ತೊಮ್ಮೆ ಸಿಗುತ್ತಾರೆ. ಒಮ್ಮೆ ಆ ಕಾಲಕ್ಕೆ ಹೋಗಿ ಬಂದ ಫೀಲ್ ತರುತ್ತಾರೆ. ಒಂದು ಘನಗಟ್ಟಿ ಕತೆ ಇದೆ ಇಲ್ಲಿ. ಅಪ್ಪ, ಅಮ್ಮನಿಗೆ ಯಾಮಾರಿಸಿಕೊಂಡು ಬದುಕುತ್ತಿದ್ದ ನಾಯಕನ ಬದುಕಿಗೆ ಹುಡುಗಿ ಬರುತ್ತಾಳೆ. ಅಲ್ಲಿಂದ ಮುಂದೆ ತಿರುವುಗಳೋ ತಿರುವುಗಳು. ಆಫ್‌ಲೈನಲ್ಲಿದ್ದ ಪ್ರೇಮ ಆನ್‌ಲೈನಿಗೆ ಬರುತ್ತದೆ. ಮಂಕುಬೂದಿ ಎರಚುವವರು ಎದುರಾಗುತ್ತಾರೆ. ಪ್ರೇಮದ ಮಧ್ಯೆ ಹುಡುಕಾಟದ ಟ್ರ್ಯಾಕ್ ಬಂದು ಮಹಾ ಪಯಣ ಶುರುವಾಗುತ್ತದೆ.
ಚಿತ್ರ: ಮಾರುತ
ನಿರ್ದೇಶನ: ಎಸ್.ನಾರಾಯಣ್
ತಾರಾಗಣ: ದುನಿಯಾ ವಿಜಯ್, ಶ್ರೇಯಸ್ ಮಂಜು, ಬೃಂದಾ ಆಚಾರ್ಯ, ಸಾಧು ಕೋಕಿಲ, ತಾರಾ, ಶರತ್ ಲೋಹಿತಾಶ್ವ
ಸಿನಿಮಾ ತಾರಾಗಣ ದೊಡ್ಡದಿದೆ. ಅದರಲ್ಲಿ ಶ್ರೇಯಸ್ ಮಂಜು, ಸಾಧು ಕೋಕಿಲ ಬಹುತೇಕ ಕಾಣಿಸಿಕೊಂಡು ಕತೆಗೆ ಆಧಾರವಾಗಿದ್ದರೆ ದುನಿಯಾ ವಿಜಯ್ ಒಂದು ಖಡಕ್ ಪಾತ್ರ ಮಾಡಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ನಗುವುದು ಕೊನೆಯಲ್ಲಿ ಮಾತ್ರ. ಅವರು ನಕ್ಕಾಗ ಪ್ರೇಕ್ಷಕನಿಗೂ ಸಮಾಧಾನ.ಎಸ್.ನಾರಾಯಣ್ ಅವರು ಇಲ್ಲಿ ಬಹಳ ಸಂಕೀರ್ಣವಾದ ಸಮಸ್ಯೆ ಕುರಿತು ಮಾತನಾಡಿ ಸೊಗಸಾದ ಸಂದೇಶ ನೀಡಿದ್ದಾರೆ. ಅಷ್ಟರ ಮಟ್ಟಿಗೆ ಮಾರುತ ಭಾರಿ ಡಿಫರೆಂಟು.


