ತನ್ನ ಸಿಗ್ನೇಚರ್ ಸ್ಟೈಲಲ್ಲೇ ಸುನಿ ಕಥೆ ಹೆಣೆದಿದ್ದಾರೆ. ಮುಂದೇನಾಗಬಹುದು ಅನ್ನುವ ಹಿಂಟ್ ಅನ್ನು ಆರಂಭದಲ್ಲೆ ಕೊಟ್ಟು ಪ್ರೇಕ್ಷಕನನ್ನು ಸರಣಿ ಆಘಾತಗಳ ಹೊಡೆತದಿಂದ ಪಾರು ಮಾಡುತ್ತಾರೆ. ಅಲ್ಲಲ್ಲಿ ನೋವು ನಿವಾರಕ ಗುಳಿಗೆಗಳಂಥಾ ಫನ್ ಇದೆ.
ಪ್ರಿಯಾ ಕೆರ್ವಾಶೆ
ವಿಸ್ಮೃತಿ, ಸ್ಮರಣೆ ಅನ್ನುವುದನ್ನು ಕನಸು, ವಾಸ್ತವದಂತೆ ಕಟ್ಟಿಕೊಡುವ ಸಿನಿಮಾವಿದು. ನಿರ್ದೇಶಕ ಸಿಂಪಲ್ ಸುನಿ ‘ಸಿಂಪಲ್ಲಾಗೊಂದು ಲವ್‌ಸ್ಟೋರಿ’ ಕಾಲದಿಂದಲೇ ಮರೆವು, ನೆನಪಿನ ವ್ಯಾಮೋಹಕ್ಕೆ ಬಿದ್ದವರು. ಈ ಸಿನಿಮಾದಲ್ಲೂ ಆ ಪ್ರೀತಿಗೆ ನೀರೆರೆದಿದ್ದಾರೆ. ಅವರ ಅಗಾಧ ಕಥಾಸಂಗ್ರಹದ ಸ್ಯಾಂಪಲನ್ನೂ ದಯಪಾಲಿಸಿದ್ದಾರೆ. ಒಂದೇ ಒಂದು ಮಾತಿನಲ್ಲಿ ಹೊರಬರುವ ಶಾಪ ಎಷ್ಟೆಲ್ಲ ಕಥೆಗಳ ಸೃಷ್ಟಿಗೆ ಕಾರಣವಾಗುತ್ತಲ್ಲಾ ಅನ್ನುವ ಅಚ್ಚರಿ ಚಿತ್ರದ ಬೋನಸ್.
ಅವಳ ಹೆಸರು ಆಧುನಿಕ. ಪುರಾತನ ಕಾಲದಲ್ಲಿ ಮನಸ್ಸು ನೆಟ್ಟವಳು. ಅವನು ಪುರಾತನ್. ಆಧುನಿಕ ಮನಸ್ಥಿತಿಯ ವಿಎಫ್‌ಎಕ್ಸ್ ಕಲಾವಿದ. ಸೋಷಲ್ ಮೀಡಿಯಾದಲ್ಲಿ ತನ್ನನ್ನೇ ಹೋಲುವ ಚಿತ್ರ ಕಂಡು ಕುತೂಹಲದಿಂದ ಚಿತ್ರಕಾರ್ತಿ ಆಧುನಿಕಳನ್ನು ಹುಡುಕಿಕೊಂಡು ಬರುವ ಪುರಾತನ್ ಮುಂದೆ ಬಿಚ್ಚಿಕೊಳ್ಳುವ ಜನ್ಮ ಜನ್ಮಾಂತರಗಳ ಪ್ರೇಮದ ಕಥೆಯೇ ‘ಗತವೈಭವ’.
ತನ್ನ ಸಿಗ್ನೇಚರ್ ಸ್ಟೈಲಲ್ಲೇ ಸುನಿ ಕಥೆ ಹೆಣೆದಿದ್ದಾರೆ. ಮುಂದೇನಾಗಬಹುದು ಅನ್ನುವ ಹಿಂಟ್ ಅನ್ನು ಆರಂಭದಲ್ಲೆ ಕೊಟ್ಟು ಪ್ರೇಕ್ಷಕನನ್ನು ಸರಣಿ ಆಘಾತಗಳ ಹೊಡೆತದಿಂದ ಪಾರು ಮಾಡುತ್ತಾರೆ. ಅಲ್ಲಲ್ಲಿ ನೋವು ನಿವಾರಕ ಗುಳಿಗೆಗಳಂಥಾ ಫನ್ ಇದೆ. ವಾಸ್ಕೋಡಗಾಮ ಭಾರತಕ್ಕೆ ಯಾಕೆ ಬಂದ ಅನ್ನೋ ಕಥೆ ಅದಕ್ಕೊಂದು ಉದಾಹರಣೆ. ಇದ್ದದ್ದರಲ್ಲಿ ಮಂಗಳೂರ ಕಂಬಳ ಓಡಿಸುವ ಹುಡುಗನ ಕಥೆ ತೀವ್ರವಾಗಿದೆ.
ಚಿತ್ರ: ಗತವೈಭವ
ನಿರ್ದೇಶನ: ಸಿಂಪಲ್ ಸುನಿ
ತಾರಾಗಣ: ಆಶಿಕಾ ರಂಗನಾಥ್, ದುಷ್ಯಂತ, ಕಾರ್ತಿಕ್ ರಾವ್, ಕೃಷ್ಣ ಹೆಬ್ಬಾಳೆ
ರೇಟಿಂಗ್ : 3
ನಾಯಕ ದುಷ್ಯಂತ ಅವರಿಗೆ ಮೊದಲ ಸಿನಿಮಾದಲ್ಲೇ ಮೂರ್ನಾಲ್ಕು ಪಾತ್ರ ನಿಭಾಯಿಸುವ ಅವಕಾಶ ಸಿಕ್ಕಿದೆ, ಮತ್ತವರು ಅದರ ಸದ್ಬಳಕೆ ಮಾಡಿಕೊಂಡಿದ್ದಾರೆ. ಆಶಿಕಾ ಅವರೇ ಹೇಳಿದಂತೆ ಅವರ ಮಂಗಳಾ ಎಂಬ ಸಾಧ್ವಿಯ ಪಾತ್ರ ಮನಸ್ಸಲ್ಲಿ ನಿಲ್ಲುತ್ತದೆ. ಜ್ಯೂಡಾ ಸ್ಯಾಂಡಿ ಹಾಡು, ವಿಲಿಯಂ ಅವರ ಕ್ಯಾಮರಾ ವರ್ಕ್ ಚೆನ್ನಾಗಿದೆ. ಕಥೆಗಿಂತ ಪಾತ್ರ, ಪಾತ್ರಕ್ಕಿಂತ ಚುರುಕು ಮಾತು ರುಚಿಕರ.
