ಮದುವೆ ಫಿಕ್ಸ್ ಆಗಿದೆ, ಪ್ರೀವೆಡ್ಡಿಂಗ್ ಫೋಟೋಶೂಟ್ ನಡೀತಿದೆ, ಈ ನಡುವೆ ಮದುಮಗಳಿಗೆ ಫೋಟೋಗ್ರಾಫರ್ ಮೇಲೇ ಆಕರ್ಷಣೆ ಆಗಿದೆ. ಮುಂದ? ಹೀಗೊಂದು ಒನ್‌ಲೈನ್‌ನೊಂದಿಗೆ ಪ್ರೇಕ್ಷಕನಿಗೆ ಮುಖಾಮುಖಿಯಾಗುವ ಸಿನಿಮಾ‘ಫುಲ್ ಮೀಲ್ಸ್’.
ಪ್ರಿಯಾ ಕೆರ್ವಾಶೆ
ಮದುವೆ ಫಿಕ್ಸ್ ಆಗಿದೆ, ಪ್ರೀವೆಡ್ಡಿಂಗ್ ಫೋಟೋಶೂಟ್ ನಡೀತಿದೆ, ಈ ನಡುವೆ ಮದುಮಗಳಿಗೆ ಫೋಟೋಗ್ರಾಫರ್ ಮೇಲೇ ಆಕರ್ಷಣೆ ಆಗಿದೆ. ಮುಂದ? ಹೀಗೊಂದು ಒನ್‌ಲೈನ್‌ನೊಂದಿಗೆ ಪ್ರೇಕ್ಷಕನಿಗೆ ಮುಖಾಮುಖಿಯಾಗುವ ಸಿನಿಮಾ‘ಫುಲ್ ಮೀಲ್ಸ್’. ಟೈಟಲ್ ನೋಡಿ ಇದು ಊಟಕ್ಕೋ, ಹೊಟೇಲ್ ಬಗೆಗಿನ ಸಿನಿಮಾವೇನೋ ಅಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಇದೊಂದು ಕಹಿ ಸಿಹಿ ಬೆರೆತ ಲವ್‌ಸ್ಟೋರಿ. ಟೈಟಲ್‌ಗೂ ಕಥೆಗೂ ಏನು ಕನೆಕ್ಷನ್ ಅನ್ನೋ ಪ್ರಶ್ನೆಗೆ ನಿರ್ಬಂಧವಿದೆ. ಸ್ಟ್ರಗ್ಲಿಂಗ್ ಫೋಟೋಗ್ರಾಫರ್ ಲಕ್ಕಿಗೆ ದೊಡ್ಡ ಮದುವೆ ಫೋಟೋಗ್ರಾಫರ್ ಆಗುವ ಕನಸು.
ಆದರೆ ಅವನ ಪ್ರತಿಭೆ ತೋರಿಸುವ ಸಣ್ಣ ಅವಕಾಶವೂ ಸಿಗುವುದಿಲ್ಲ. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂದ್ರೆ, ಈ ಫೋಟೋಗ್ರಾಫರ್ ಹತ್ತು ಸುಳ್ಳು ಹೇಳಿ ಮದುವೆ ಮೊದಲಿನ ಫೋಟೋಗ್ರಫಿ ಮಾಡಲು ಮುಂದಾಗುತ್ತಾನೆ. ಆದರೆ ಅಲ್ಲಿ ಮದುಮಗಳೇ ಈತನಿಗೆ ಬಿದ್ದು ಬಿಡ್ತಾಳೆ. ಇನ್ನೊಂದೆಡೆ ಮೇಕಪ್ ಆರ್ಟಿಸ್ಟ್ ಪ್ರೀತಿಗೆ ಈ ಲಕ್ಕಿ ಮೇಲೆ ಲವ್ವು. ಇಬ್ಬರು ಪ್ರೇಮದೇವತೆಯರ ನಡುವೆ ಲಕ್ಕಿ ‘ಅವಲಕ್ಕಿ’ಯಂತೆ ನುಜ್ಜುಗೊಜ್ಜಾಗುತ್ತಾನಾ ಅಂದುಕೊಂಡರೆ ಅಲ್ಲೊಂದು ಟ್ವಿಸ್ಟ್.
ಚಿತ್ರ: ಫುಲ್ ಮೀಲ್ಸ್
ನಿರ್ದೇಶನ: ಎನ್ ವಿನಾಯಕ
ತಾರಾಗಣ: ಲಿಖಿತ್ ಶೆಟ್ಟಿ, ಖುಷಿ ರವಿ, ತೇಜಸ್ವಿನಿ ಶರ್ಮಾ
ರೇಟಿಂಗ್: 3
ಜೊತೆಗೆ ಹಿಸ್ಟರಿ, ಎಕನಾಮಿಕ್ಸ್, ಕೆಮಿಸ್ಟ್ರಿ ಎಲ್ಲಾ ಬಂದು ಸಿನಿಮಾದ ಟ್ರ್ಯಾಕೇ ಬದಲಾಗುತ್ತೆ. ಸಿನಿಮಾದ ಮೊದಲ ಭಾಗದಲ್ಲಿ ಲವಲವಿಕೆ ಗಮನ ಸೆಳೆಯುತ್ತದೆ. ಎರಡನೇ ಭಾಗದಲ್ಲಿ ಎಮೋಶನ್, ಮುಂಗಾರು ಮಳೆ ಸ್ಟೋರಿ ಲೈನ್ ಎಲ್ಲ ಸೇರಿ ಮಾಮೂಲಿ ಚಿತ್ರಗಳ ಮಾದರಿಗೆ ಚಿತ್ರ ಹೊರಳಿಕೊಳ್ಳುತ್ತೆ. ಕ್ಲೈಮ್ಯಾಕ್ಸ್ ಪ್ರೇಕ್ಷಕನಿಗೆ ಹೆಚ್ಚಿನ ತ್ರಾಸು ಕೊಡೋದಿಲ್ಲ. ಲಿಖಿತ್, ಖುಷಿ ಪಾತ್ರಗಳ ನಾಡಿಮಿಡಿತ ಅರಿತು ನಟಿಸಿದ್ದಾರೆ. ಹೆಚ್ಚೇನೂ ನಿರೀಕ್ಷೆ ಇಡದೇ ಹೋದರೆ ಫುಲ್‌ಮೀಲ್ಸ್‌ನಲ್ಲಿ ರಂಜನೆ ಪಡೆಯಬಹುದು.


