ಅನೀಶ್ ಒಂದು ಸಂಕೀರ್ಣ ಸಮಸ್ಯೆಯನ್ನು ಇಲ್ಲಿ ಬಹಳ ಲವಲವಿಕೆಯಿಂದ, ಘನತೆಯಿಂದ ನಿರ್ವಹಿಸಿದ್ದಾರೆ. ಅಷ್ಟರ ಮಟ್ಟಿಗೆ ಅವರ ಪ್ರಯತ್ನ ಮೆಚ್ಚುಗೆಗೆ ಅರ್ಹ. ಅಕ್ಷಯ್ ಎಂಬ ತರುಣ ಆಕಸ್ಮಿವಾಗಿ ಪ್ರೀತಿಯಲ್ಲಿ ಬೀಳುವಲ್ಲಿಂದ ಕತೆ ಆರಂಭವಾಗುತ್ತದೆ.
ರಾಜೇಶ್
ಸಂಬಂಧಗಳು ಬಹಳ ಸಂಕೀರ್ಣ. ಸ್ವಲ್ಪ ಹದಗೆಟ್ಟರೂ ಬದುಕುಗಳು ಕಷ್ಟಗಳ ಕುಲುಮೆಗೆ ಬೀಳುತ್ತವೆ. ಯಾರು ಹುಷಾರಾಗಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುತ್ತಾರೋ ಅವರು ನಿರಾಳರಾಗುತ್ತಾರೆ. ಈ ಸಿನಿಮಾ ಸಂಬಂಧಗಳ ಸಂಕೀರ್ಣತೆಯನ್ನು ಮಾತನಾಡುತ್ತದೆ. ಟಾಕ್ಸಿಕ್ ಸಂಬಂಧಗಳಲ್ಲಿ ಸಿಕ್ಕಿ ಒದ್ದಾಡುವವರ ಕುರಿತು ಚರ್ಚಿಸುತ್ತದೆ. ಸಂಬಂಧಗಳನ್ನು ಅರಿತುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಸಾರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾ ಅನೀಶ್ ತೇಜೇಶ್ವರ್ ನಿರ್ದೇಶಕರಾಗಿ ಮಾಗಿರುವುದನ್ನು ಕಾಣಿಸುತ್ತದೆ.
ಅನೀಶ್ ಒಂದು ಸಂಕೀರ್ಣ ಸಮಸ್ಯೆಯನ್ನು ಇಲ್ಲಿ ಬಹಳ ಲವಲವಿಕೆಯಿಂದ, ಘನತೆಯಿಂದ ನಿರ್ವಹಿಸಿದ್ದಾರೆ. ಅಷ್ಟರ ಮಟ್ಟಿಗೆ ಅವರ ಪ್ರಯತ್ನ ಮೆಚ್ಚುಗೆಗೆ ಅರ್ಹ. ಅಕ್ಷಯ್ ಎಂಬ ತರುಣ ಆಕಸ್ಮಿವಾಗಿ ಪ್ರೀತಿಯಲ್ಲಿ ಬೀಳುವಲ್ಲಿಂದ ಕತೆ ಆರಂಭವಾಗುತ್ತದೆ. ನಿಧಾನಕ್ಕೆ ಅವನಿಗೆ ಆ ಸಂಬಂಧ ತನಗಲ್ಲ ಎಂಬುದು ಅರ್ಥವಾಗುತ್ತಾ ಹೋಗುತ್ತದೆ. ಅಷ್ಟರಲ್ಲಿ ಹೊಸ ಹುಡುಗಿಯ ಪ್ರವೇಶವಾಗುತ್ತದೆ. ಮುಂದೇನು ಎಂಬುದು ಕಥನ ಕುತೂಹಲ. ಕೊಂಚ ತೀವ್ರತೆ ಬಯಸುವ ಸಿನಿಮಾ ಇದು. ಆದರೆ ಇಲ್ಲಿ ಸ್ವಲ್ಪ ಸಾವಧಾನವಿದೆ.
ಚಿತ್ರ: ಲವ್ ಓಟಿಪಿ
ನಿರ್ದೇಶನ: ಅನೀಶ್ ತೇಜೇಶ್ವರ್
ತಾರಾಗಣ: ಅನೀಶ್ ತೇಜೇಶ್ವರ್, ಸ್ವರೂಪಿಣಿ, ಜಾಹ್ನವಿ ಕಲಕೇರಿ, ರಾಜೀವ್ ಕನಕಾಲ, ನಾಟ್ಯ ರಂಗ, ಚೇತನ್ ಗಂಧರ್ವ
ರೇಟಿಂಗ್: 3
ಈ ಸಿನಿಮಾದಲ್ಲಿ ಅವಸರದಲ್ಲಿ ಪ್ರೀತಿಯಲ್ಲಿ ಬೀಳುವ ಹುಮ್ಮಸ್ಸಿನ ತರುಣನಾಗಿ ಮತ್ತು ಈ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಮೆಚ್ಯೂರ್ಡ್ ವ್ಯಕ್ತಿಯಾಗಿ ಅನೀಶ್ ಉತ್ತಮವಾಗಿ ನಟಿಸಿದ್ದಾರೆ. ಉತ್ಕಟವಾಗಿ ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಸ್ವರೂಪಿಣಿಯವರು ಬಹಳ ಸೊಗಸಾಗಿ ಅಭಿಯಸಿದ್ದಾರೆ. ಜಾಹ್ನವಿ ಕಲಕೇರಿ, ನಾಟ್ಯ ರಂಗ ಈ ಕತೆಗೆ ಬಲವಾಗಿದ್ದಾರೆ. ಯುವ ಮನಸ್ಸುಗಳನ್ನು ಯೋಚನೆಗೆ ಹಚ್ಚುವಂತಹ, ಮತ್ತೊಮ್ಮೆ ತಮ್ಮ ಸಂಬಂಧಗಳನ್ನು ನೋಡಿಕೊಳ್ಳಲು ಪ್ರೇರೇಪಿಸುವ, ಬದುಕು ದೊಡ್ಡದು ಎಂದು ನೆನಪಿಸುವ ಸಿನಿಮಾ ಇದು.
