ಕೋಮಲ್, ಸೋನಾಲ್ ಮಾಂತೆರೋ ಮತ್ತು ವಿನೋದ್ ಪ್ರಭಾಕರ್ ನಟನೆಯ ‘ರಿಲ್ಯಾಕ್ಸ್’ ಸಿನಿಮಾ ಹೇಗಿದೆ? ಕಾಮಿಡಿ, ಅಪಹರಣದ ರಹಸ್ಯ, ಅನಿರೀಕ್ಷಿತ ತಿರುವುಗಳು ಮತ್ತು ಚಿತ್ರದ ಸಂಪೂರ್ಣ ವಿಮರ್ಶೆ ಓದಿ.
ಆರ್.ಕೇಶವಮೂರ್ತಿ
ಶ್ರೀಮಂತಿಕೆ ಮತ್ತು ಅಂತಸ್ತಿನ ದರ್ಪದಲ್ಲಿ ಮೆರೆಯುವವಳಿಗೆ ಸಾಮಾನ್ಯ ಜನರ ಕಷ್ಟಗಳನ್ನು ಹೇಗೆ ಅರ್ಥ ಮಾಡಿಸುವುದು ಎಂಬ ಕುತೂಹಲದಲ್ಲಿ ಹುಟ್ಟಿಕೊಂಡಿರುವ ಕತೆಯೇ ‘ರಿಲ್ಯಾಕ್ಸ್’. ‘ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರು’ ಎಂಬ ಮಾತಿನಂತೆ ಬಂಗಲೆಯಂತಹ ಮನೆಯಲ್ಲಿ ನಾಯಕ ಮತ್ತು ನಾಯಕಿಯನ್ನು ಕೂಡಿ ಹಾಕಲಾಗಿದೆ. ನಾಯಕಿ ಶ್ರೀಮಂತನ ಮಗಳು, ನಾಯಕ ಬಡವ. ಹಾಗಾದರೆ ಈ ಇಬ್ಬರನ್ನು ಅಪಹರಿಸಿ ಮನೆಯಲ್ಲಿ ಬಂಧಿಸಿರುವುದು ಯಾರು? ಅದರ ಹಿಂದಿನ ಉದ್ದೇಶವೇನು? ಈ ಪ್ರಶ್ನೆಗಳಿಗೆ ಉತ್ತರ ‘ರಿಲ್ಯಾಕ್ಸ್’ .
ತಮಾಷೆ, ಸಣ್ಣದೊಂದು ಸಂದೇಶ, ಕಾಮಿಡಿ ಟೈಮಿಂಗ್ನ ಸಂಭಾಷಣೆಗಳು, ಕೋಮಲ್ ಅವರ ಮ್ಯಾನರಿಸಂ ಮತ್ತು ಸೋನಾಲ್ ಮಾಂತೆರೋ ಅವರ ಸ್ಕ್ರೀನ್ ಪ್ರೆಸೆನ್ಸ್ ಚಿತ್ರದ ಪ್ರಮುಖ ಆಕರ್ಷಣೆಗಳು. ಸಿನಿಮಾ ನೋಡುತ್ತಿದ್ದಂತೆ ಕೋಮಲ್ ಅವರ ಹಿಂದಿನ ದಿನಗಳ ‘ಮಿಸ್ಟರ್ ಗರಗಸ’ ಮಾದರಿಯ ಚಿತ್ರಗಳು ನೆನಪಾಗುತ್ತವೆ. ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡಿರುವ ಈ ಚಿತ್ರದಲ್ಲಿ ಒಂದೇ ಮನೆಯಲ್ಲಿ ಬಂಧಿಯಾಗುವ ನಾಯಕ, ನಾಯಕಿ ಆರಂಭದಲ್ಲಿ ಹಾವು-ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಾರೆ.
ಕ್ರಮೇಣ ಸ್ನೇಹಿತರಾಗುತ್ತಾರೆ. ಆ ಸ್ನೇಹ ಪ್ರೀತಿಗೆ ತಿರುಗುತ್ತದೆಯೇ? ನಾಯಕ ನಾಯಕಿಯ ವಿಚಾರದಲ್ಲಿ ಮೃದು ಧೋರಣೆ ತಳೆಯುವುದರ ಹಿಂದಿನ ಉದ್ದೇಶವೇನು? ಇವೆಲ್ಲವನ್ನೂ ಹಾಸ್ಯದ ಮೂಲಕ ಕಟ್ಟಿಕೊಡಲಾಗಿದೆ. ಅಪಹರಣದ ಹಿಂದಿನ ಕಾರಣ ಮತ್ತು ವಿನೋದ್ ಪ್ರಭಾಕರ್ ಅವರ ಪಾತ್ರದ ವಿಶೇಷತೆಯನ್ನು ತಿಳಿಯಲು ಸಿನಿಮಾ ನೋಡಬೇಕು.
ಚಿತ್ರ: ರಿಲ್ಯಾಕ್ಸ್
ತಾರಾಗಣ: ಕೋಮಲ್, ಸೋನಾಲ್ ಮಾಂತೆರೋ, ವಿನೋದ್ ಪ್ರಭಾಕರ್, ಅಚ್ಯುತ್ ಕುಮಾರ್
ನಿರ್ದೇಶನ: ಶ್ರೀನಿವಾಸ್ ಮಂಡ್ಯ
ರೇಟಿಂಗ್: 3
ಕೋಮಲ್ ಮತ್ತು ಸೋನಾಲ್ ಮಾಂತೆರೋ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ವಿನೋದ್ ಪ್ರಭಾಕರ್ ಅವರ ಪಾತ್ರ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸುತ್ತದೆ. ಒಂದೇ ಮನೆಯ ಚೌಕಟ್ಟಿನಲ್ಲಿ ಇಡೀ ಕತೆಯನ್ನು ಹೇಳಿರುವ ನಿರ್ದೇಶಕ ಶ್ರೀನಿವಾಸ್ ಮಂಡ್ಯ ಅವರ ಪ್ರಯತ್ನ ಗಮನಾರ್ಹ. ಮನರಂಜನೆಯ ಉದ್ದೇಶದಲ್ಲಿ ಚಿತ್ರ ಬಹುತೇಕ ಯಶಸ್ವಿಯಾಗಿದೆ.












