ಮೊದಲನೆಯದು ಮಕ್ಕಳ ಮಾತು. ಪ್ರಣೀಲ್ ಮತ್ತು ಸಮರ್ಥ ಎಂಬ ಪುಟಾಣಿಗಳಿಬ್ಬರೂ ಅಚ್ಚ ಉತ್ತರ ಕರ್ನಾಟಕ ಭಾಷೆಯಲ್ಲಿ ಸೊಗಸಾಗಿ ಮಾತನಾಡುತ್ತಾರೆ. ಅವರ ನಟನೆ, ಡೈಲಾಗ್‌ಗಳು ಒಪ್ಪಿಸಿದಂತಿರದೇ ಬಲು ಸಹಜವಾಗಿದೆ.
ಪ್ರಿಯಾ
ವಿಶಾಲ ಬಯಲಿನ ಮಧ್ಯೆ ಚಿಕ್ಕ ಹುಡುಗ ಬಿದ್ದಿದ್ದಾನೆ. ಮೇಲೆ ಹತ್ತಾರು ಗಾಳಿಪಟಗಳು ಬಾನಿಗೆ ತೋರಣ ಕಟ್ಟುತ್ತಿವೆ. ಇವನ ಪಟ ಧರಾಶಾಹಿಯಾಗಿದೆ. ಅದನ್ನು ಹಿಡಿದ ಇನ್ನೊಬ್ಬ ಬಾಲಕ ‘ಹನುಮ್ಯಾ...’ ಎಂದು ಕೂಗುತ್ತಾನೆ. ಬಿದ್ದ ಹುಡುಗನ ಮೈಯಲ್ಲಿ ಸಣ್ಣ ಚಲನೆ. ಇದ್ದಬದ್ದ ಚೈತನ್ಯವನ್ನೆಲ್ಲ ಒಗ್ಗೂಡಿಸಿ ಹನುಮ್ಯಾ ಮೇಲಕ್ಕೇಳುತ್ತಾನೆ. ಬಿದ್ದ ಪಟ ಮೇಲೆ ಮೇಲೆ ಏರುತ್ತ ಆಕಾಶಕ್ಕೆ ನೆಗೆಯುತ್ತದೆ. ಈ ಸಣ್ಣ ದೃಶ್ಯ ಇಡೀ ಸಿನಿಮಾವನ್ನು ಸಂಕೇತಿಸುವಂತಿದೆ. ವೀರೇನ್ ಬಗಾಡೆ ನಿರ್ದೇಶನದ ‘ಕೈಟ್ ಬ್ರದರ್ಸ್’ ಉತ್ತರ ಕರ್ನಾಟಕ ಭಾಷೆಯಲ್ಲಿ, ಪರಿಸರದಲ್ಲಿ ಮೂಡಿಬಂದಿರುವ ಮಕ್ಕಳ ಚಿತ್ರ. ಸಿನಿಮಾದಲ್ಲಿ ಗಮನ ಸೆಳೆಯುವ ಕೆಲವೊಂದು ಅಂಶಗಳಿವೆ.
ಮೊದಲನೆಯದು ಮಕ್ಕಳ ಮಾತು. ಪ್ರಣೀಲ್ ಮತ್ತು ಸಮರ್ಥ ಎಂಬ ಪುಟಾಣಿಗಳಿಬ್ಬರೂ ಅಚ್ಚ ಉತ್ತರ ಕರ್ನಾಟಕ ಭಾಷೆಯಲ್ಲಿ ಸೊಗಸಾಗಿ ಮಾತನಾಡುತ್ತಾರೆ. ಅವರ ನಟನೆ, ಡೈಲಾಗ್‌ಗಳು ಒಪ್ಪಿಸಿದಂತಿರದೇ ಬಲು ಸಹಜವಾಗಿದೆ. ಕವಿ ಬೇಂದ್ರೆ ಅವರನ್ನು ಹೋಲುವ ಸರಳ ಸಾತ್ವಿಕ ಮೇಷ್ಟ್ರು ಮತ್ತವರ ಸೈಕಲ್ಲು ಮನಸ್ಸಲ್ಲುಳಿಯುತ್ತದೆ. ಅಪರೂಪದ ಉತ್ತರ ಕರ್ನಾಟಕದ ಪ್ರಕೃತಿ ಸೌಂದರ್ಯ ಇದರಲ್ಲಿ ಸೆರೆಯಾಗಿದೆ. ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆ, ಮತ್ತದಕ್ಕೆ ಎಳೆಯ ಜೀವಗಳು ಹುಡುಕುವ ಪರಿಹಾರ ಮನಸ್ಸು ಬೆಚ್ಚಗಾಗಿಸುತ್ತದೆ.
ಚಿತ್ರ: ಕೈಟ್ ಬ್ರದರ್ಸ್
ನಿರ್ದೇಶನ: ವೀರೇನ್ ಬಗಾಡೆ
ತಾರಾಗಣ: ಪ್ರಣೀಲ್ ನಾಡಿಗೇರ್, ಸಮರ್ಥ ಆಶಿ, ವಿನೋದ್ ಬಗಾಡೆ
ರೇಟಿಂಗ್: 3.5
ಗೆಳೆಯ ಹನುಮನಿಗೆ ಸಪೋರ್ಟಿವ್ ಆಗಿದ್ದು, ಆತನ ಗೆಲುವಲ್ಲೇ ತನ್ನ ಗೆಲುವು ಕಾಣುವ ಪುಟ್ಟ ಶ್ರೀರಾಮ; ಪುರಾಣದ ರಾಮನಿಗೂ ಮಿಗಿಲಾಗುತ್ತಾನೆ. ನಿರ್ದೇಶಕ ವೀರೇನ್ ಬಗಾಡೆ ಕಲಾತ್ಮಕ ಶೈಲಿಯಲ್ಲಿ ಪರಿಣಾಮಕಾರಿಯಾಗಿ ಇಡೀ ಸಿನಿಮಾವನ್ನು ಪ್ರಸ್ತುತಪಡಿಸುತ್ತಾರೆ. ಆರಂಭದ ದೃಶ್ಯಗಳು ಕೊಂಚ ದೀರ್ಘ ಅನಿಸುತ್ತವೆ. ಹಳ್ಳಿ ಹುಡುಗರ ಕಣ್ಣಲ್ಲಿ ಮಹಾನಗರವೊಂದು ಹುಟ್ಟಿಸುವ ಅಚ್ಚರಿ, ದಿಗ್ಭ್ರಮೆಯ ಚಂದದ ಇಮೇಜ್‌ಗಳಿವೆ. ಅಶೋಕ್ ಕಶ್ಯಪ್ ಅವರ ಸಿನಿಮಾಟೋಗ್ರಫಿ ಸೊಗಸಾಗಿದೆ. ಹತ್ತಾರು ಹೊಸ ನೋಟಗಳನ್ನು ದಯಪಾಲಿಸುವ ಪ್ರಜ್ಞಾವಂತರು ಕಣ್ತುಂಬಿಕೊಳ್ಳಬೇಕಾದ ಸಿನಿಮಾವಿದು.
