ವಿಲನ್ ಪವರ್‌ಫುಲ್ ಇದ್ದಾಗಲೇ ಹೀರೋಗೆ ಮರ್ಯಾದೆ. ಇನ್ನು ಕಿಚ್ಚ ಸುದೀಪ್ ಥರದ ಡಬಲ್ ಪವರ್ ವಿಲನ್‌ಗಳಿದ್ದರೆ ಹೀರೋ ಲೆವೆಲ್ಲೇ ಬೇರೆಯಾಗುತ್ತದೆ. ದಬಾಂಗ್ 3 ಆ ಮಾತಿಗೆ ಪುರಾವೆ. ಪೆನ್ಸಿಲ್ ಗೆರೆ ಎಳೆದಂತಿರುವ ಮೀಸೆಯ, ರೇಬಾನ್ ಗ್ಲಾಸನ್ನು ಅಂಗಿ ಮೇಲಿಟ್ಟುಕೊಳ್ಳುವ ಚುಲ್ ಬುಲ್ ಪಾಂಡೆ ಖಡಕ್ ಎಂಟ್ರಿ ಕೊಟ್ಟು ಸ್ಕ್ರೀನಲ್ಲಿ ಮಜಾ
ಮಾಡುತ್ತಿರುವಾಗ ಮಾತೇ ಇಲ್ಲದೆ ಸೈಲೆಂಟಾಗಿ ಎಂಟ್ರಿ ಕೊಡುತ್ತಾರೆ ಕಿಚ್ಚ.
ರಾಜೇಶ್ ಶೆಟ್ಟಿ
ಒಂದೇ ಒಂದು ಕಣ್ಣೋಟ ಸಾಕು ಸುದೀಪ್ ನಟನೆ ಶಕ್ತಿ ತೋರಿಸೋಕೆ. ಆ ಟೈಮಲ್ಲಿ ಸಲ್ಮಾನ್ ಖಾನ್‌ನಂತಹ ಸಲ್ಮಾನ್ ಖಾನ್ ಕೂಡ ಮಂಕು ಮಂಕು.
ಈ ಚಿತ್ರಕ್ಕೆ ಕಳೆ ತಂದಿರುವುದು ಇಬ್ಬರು. ಒಬ್ಬ ಸುದೀಪ್. ಇನ್ನೊಬ್ಬರು ಸಾಯಿ ಮಂಜ್ರೇಕರ್. ಸಾಯಿ ಎಂಬ ಹುಡುಗಿ ಸ್ನಿಗ್ಧ ಮುಗ್ಧ ಸೌಂದರ್ಯ ಮತ್ತು ಮುಖಭಾವದಿಂದ ಮನ ಗೆದ್ದರೆ ಮಾತಿಗಿಂತ ಕಣ್ಣಲ್ಲೇ ತಿಂದು ಹಾಕುವ ಪಾಗಲ್ ಪ್ರೇಮಿ ಪಾತ್ರದಲ್ಲಿ ಸುದೀಪ್ ಬೇಸರವನ್ನೂ ಸಿಟ್ಟನ್ನೂ ತರಿಸುತ್ತಾರೆ. ಪ್ರೀತಿ ಸೋತ ಕಾರಣಕ್ಕೆ ಕ್ರೌರ್ಯ ಮೆರೆಯುವ, ಸೋಲುವ ಹಂತದಲ್ಲೂ ಗೆಲ್ಲುತ್ತೇನೆ ಎಂದು ಎದ್ದುನಿಲ್ಲುವ ಸುದೀಪ್ ಪಾತ್ರವೇ ಈ ಚಿತ್ರದ ಹೈಲೈಟ್. ಪ್ರೀತಿ ಉಂಟಾದ ಮಧುರ ಕ್ಷಣ, ಪ್ರೇಮ ಸೋತ ನೋವಿನ ಗಳಿಗೆ, ದ್ವೇಷ ಸಾಧಿಸುವ ವಿಲನ್ ಟೈಮು ಈ ಎಲ್ಲಾ ಹಂತದಲ್ಲೂ ಕಿಚ್ಚನ ಒಂದೊಂದು ಎಕ್ಸ್‌ಪ್ರೆಷನ್ನೂ ಮನಸಲ್ಲಿ ಉಳಿಯುತ್ತದೆ ಅನ್ನುವುದು ದಬಾಂಗ್ ಹೆಚ್ಚುಗಾರಿಕೆ. ಅದನ್ನು ಹೊರತುಪಡಿಸಿ ಇದು ಶುದ್ಧ ಸಲ್ಮಾನ್ ಖಾನ್ ಸಿನಿಮಾ.
ನಿರೀಕ್ಷೆ ಸುಳ್ಳು ಮಾಡದ ದಬಾಂಗ್ 3; ಸುದೀಪ್ ಸಖತ್ ಸ್ಟೈಲ್‌ಗೆ ಜೈ ಎಂದ ಪ್ರೇಕ್ಷಕರು!
ತಮಾಷೆ ಫೈಟಿಂಗು, ಬೇಕುಬೇಕಾದಾಗ ಹಾಡು ವಿತ್ ಸಲ್ಲು ಸ್ಟೈಲ್ ಡಾನ್ಸು, ಒಂಚೂರು ಎಮೋಷನ್ನು, ಒಂದೊಳ್ಳೆ ಇಂಟರ್‌ವಲ್ ಸೀನು, ಧಾಂಧೂಂ ಬಿಲ್ಡಪ್ಪು ಎಲ್ಲವೂ ಇದೆ. ಆದರೆ ಕತೆ, ಚಿತ್ರಕತೆ ಹೇಗಿದೆ ಎಂದು ಕೇಳಿದರೆ ಸಲ್ಮಾನ್ ಖಾನ್ ಫ್ಯಾನ್ಸು ಮೆಚ್ಚಲಾರರು. ಈ ಹಿಂದಿನ ದಬಾಂಗ್ ಸಿನಿಮಾ ನೋಡಿದವರಿಗೆ ಚುಲ್‌ಬುಲ್ ಪಾಂಡೆಯ ಹಳೇ ಕತೆ ಕೂಡ ಇಲ್ಲಿ ಗೊತ್ತಾಗುತ್ತದೆ. ಅವನಿಗೆ ಆ ಹೆಸರು ಹೇಗೆ ಬಂತು, ಕನ್ನಡಕ ಅಂಗಿ ಮೇಲಿಟ್ಟುಕೊಳ್ಳುವುದೇಕೆ ಎಂಬ ಪ್ರಶ್ನೆಗೆ ಕ್ಯೂಟ್ ಆಗಿರುವ ಉತ್ತರ ಸಿಗುತ್ತದೆ.
ಇದೊಂದು ಕನ್ನಡ ಸಿನಿಮಾ ಅನ್ನಿಸುವುದಕ್ಕೆ ಸಂಭಾಷಣೆ ಬರೆದ ಗುರುದತ್ತ ಗಾಣಿಗ ಮತ್ತು ಹಾಡುಗಳನ್ನು ಬರೆದ ಅನೂಪ್ ಭಂಡಾರಿ ಕಾಣಿಕೆ ದೊಡ್ಡದು. ಕಿಚ್ಚನ ದನಿ ಅವರದೇ. ಉಳಿದದ್ದು ನಂದಿತಾ ಶ್ವೇತಾ, ಉಗ್ರಂ ಮಂಜು, ರವಿಶಂಕರ್ ನೀಡಿದ್ದಾರೆ. ಸಲ್ಲುಗೆ ದನಿ ನೀಡಿದ್ದು ಸುಮಂತ್. ಸಲ್ಮಾನ್ ಖಾನ್‌ಗೆ ದನಿ ನೀಡುವುದು ಎಷ್ಟು ಕಷ್ಟ ಅಂತ ಸಿನಿಮಾ ನೋಡಿದರೆ ಗೊತ್ತಾಗುತ್ತದೆ.
ಪ್ರಭುದೇವ ಸಿನಿಮಾ ಅಂದ ಮೇಲೆ ಚಮಕ್ ಡಾನ್ಸು ಇರಲೇಬೇಕು. ಅವರು ಹೇಳಿಕೊಟ್ಟ ಸ್ಟೆಪ್ಪನ್ನು ಸಲ್ಮಾನ್ ಖಾನ್ ಪಾಲಿಸುವುದನ್ನು ನೋಡಲು ಎರಡು ಕಣ್ಣು ಸಾಲದು. ಈ ಸಿನಿಮಾ ನೋಡಿದಾಗ ಒಂದು ಹಳೆಯ ಕತೆ ನೆನಪಾಗುತ್ತದೆ.
ಒಬ್ಬರು ಪ್ರತಿಭಾವಂತ ಡಾನ್ಸರ್ ಇದ್ದರು. ಚಿಕ್ಕಂದಿನಲ್ಲಿ ಅವರು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರು. ಜನ ಮೆಚ್ಚುತ್ತಿದ್ದರು. ಜನಪ್ರಿಯತೆ, ಕೀರ್ತಿ ಬಂದ ಮೇಲೆ ಅವರು ಕುಣಿದಂತೆ ತಾಳ ಹಾಕುವವರು ತಾಳ ಹಾಕಬೇಕಾಗುತ್ತಿತ್ತು. ಜನ ಆಗಲೂ ಎಂಜಾಯ್ ಮಾಡುತ್ತಿದ್ದರು. ಅಷ್ಟೇ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 21, 2019, 11:50 AM IST