ಚಿತ್ರ ವಿಮರ್ಶೆ: ಒಡೆಯ
ಅಲ್ಲಿ ನೋಡು ಗಜೇಂದ್ರ ಅಂದಾಗ ನೀಟಾಗಿ ತಲೆ ಬಾಚ್ಕೊಂಡು, ಚೆಂದದ ಪ್ಯಾಂಟು ಷರ್ಟು ತೊಟ್ಕೊಂಡು, ಮುಖದಲ್ಲೊಂದು ಮಂದಹಾಸ ಇಟ್ಕೊಂಡು, ಕೈ ಮುಗಿದು ಘನ ಗಾಂಭೀರ್ಯದಿಂದ ನಡೆದುಕೊಂಡು ಬರುವ ಆರಡಿ ಪ್ಲಸ್ ಕಟೌಟ್ ದರ್ಶನ್ ಮುಖ ಕಂಡಾಗ ಇಡೀ ಸ್ಕ್ರೀನಲ್ಲಿ ಬೆಳಕು. ಥೇಟರ್ ತುಂಬಾ ಶಿಳ್ಳೆ, ಚಪ್ಪಾಳೆ, ಬೊಬ್ಬೆ ಇತ್ಯಾದಿ. ಆಗ ಅಲ್ಲಿ ಇರುವ ನೂರು ಮಂದಿ ವಿಲನ್ನುಗಳ ತೂಕವೇ ಒಂದಾದರೆ ವಿರುದ್ಧ ದಿಕ್ಕಿಗೆ ನಿಂತ ದರ್ಶನ್‌ರದ್ದೇ ಒಂದು ತೂಕ. ಅಲ್ಲಿಗೆ ಆ ಸ್ಕ್ರೀನ್ ಸಮತೂಕ.
ರಾಜೇಶ್ ಶೆಟ್ಟಿ
ಹೆಗಲ ಮೇಲೆ ಚೂರು ಜವಾಬ್ದಾರಿಯನ್ನು, ಕಣ್ಣಲ್ಲಿ ವಿಶ್ವಾಸದ ಹೊಳಪನ್ನು, ಕೈಯಲ್ಲಿ ತಾಕತ್ತನ್ನು ಯಾವಾಗ ತೋರಿಸಬೇಕು ಅಂತ ಗೊತ್ತಿರುವ ಒಬ್ಬ ಅಣ್ಣ ಗಜೇಂದ್ರ. ತನ್ನ ವ್ಯಕ್ತಿತ್ವ ಏನು ಮತ್ತು ತನ್ನನ್ನು ಇಷ್ಟಪಡುವವರಿಗೆ ಏನು ಬೇಕು ಅಂತ ಗೊತ್ತಿರುವವರ ಹಾಗೆ ಒಡೆಯ ಪಾತ್ರವನ್ನು ಆವರಿಸಿಕೊಂಡಿರುವ ದರ್ಶನ್. ತನ್ನವರಿಗೋಸ್ಕರ ಪ್ರಾಣ ಹೋಗೋ ಟೈಮಲ್ಲಿ ಬೇಕಾದ್ರೂ ಎದ್ದು ಬರ್ತಾನೆ ಇವನು ಅಂತ ಅಣ್ಣ ಹೇಳಿದರೆ, ಪ್ರೀತಿಯಿಂದ ಕೇಳಿದರೆ ಪ್ರಾಣ ಬೇಕಾದ್ರೂ ಕೊಡ್ತಾನೆ ನಮ್ಮಣ್ಣ ಅಂತ ಹೇಳೋ ತಮ್ಮಂದಿರು. ಆ ಟೈಮಲ್ಲಿ ಬೀಳೋ ಶಿಳ್ಳೆಗಳ ಲೆಕ್ಕ ಹಿಡಿಯೋದು ಕಷ್ಟ.
ಇಂದು ದರ್ಶನೋತ್ಸವ;ಒಡೆಯ ಪಕ್ಕಾ ಕಮರ್ಷಿಯಲ್ ಸಿನಿಮಾ!
ಮೊದಮೊದಲು ಗಜೇಂದ್ರ ಶಾಂತಸ್ವರೂಪಿ. ತಾನಾಯಿತು, ತನ್ನ ತಮ್ಮಂದಿರಾಯಿತು. ಅಣ್ಣ ತಮ್ಮಂದಿರನ್ನು ಬೇರೆ ಮಾಡ್ತಾರೆ ಅನ್ನುವ ಕಾರಣಕ್ಕೆ ಮದುವೆ ಆಗಲೊಲ್ಲದ ಯಜಮಾನ. ತಮ್ಮ ಪಾಡಿಗೆ ಇದ್ದ ಅಣ್ಣಂಗೊಂದು ಲವ್ ಆಗತ್ತೆ ಅನ್ನುವುದೇ ಒಂದು ಟ್ವಿಸ್ಟು. ಅಲ್ಲಿಯವರೆಗೆ ಆರಾಮಾಗಿ ನಗ್‌ನಗ್ತಾ ಓಡಾಡಿಕೊಂಡಿದ್ದ ತರುಣನೊಬ್ಬನ ಹೆಗಲಿಗೆ ಇದ್ದಕ್ಕಿದ್ದಂತೆ ಘನಗಂಭೀರ ಜವಾಬ್ದಾರಿಯೊಂದು ಬಿದ್ದಾಗ ಆ ಟೆನ್ಷನ್ ಅನ್ನು ತೋರಿಸದೆಯೇ ಓಡಾಡುವ ದರ್ಶನ್ ಪಾತ್ರ ಯಾರಿಗೆ ಇಷ್ಟವಾಗಲ್ಲ..
ಅಲ್ಲದೇ ಎರಡೆರಡು ಕುಟುಂಬವನ್ನು ರಕ್ಷಿಸುವಂತಹ ಹೊಣೆ, ತಾಕತ್ತು, ಧೈರ್ಯ, ಶೌರ್ಯ ಇರುವುದು ದರ್ಶನ್ ಒಬ್ಬರಿಗೇ. ಹಾಗಾಗಿ ಇಂಟರ್‌ವಲ್ ನಂತರ ಅವರು ಎತ್ತದ ಆಯುಧವಿಲ್ಲ. ಎದುರಿಗೆ ಬಂದವರೆಲ್ಲಾ ಕಚಕ್ ಪಚಕ್ ಡಚಕ್. ಈ ಮಧ್ಯೆ ಫ್ಯಾಮಿಲಿ ಸೆಂಟಿಮೆಂಟುಂಟು. ಅದನ್ನು ಸಮರ್ಥವಾಗಿ ದಾಟಿಸುವ ಹೊಣೆ ದೇವರಾಜ್, ಚಿತ್ರಾ ಶೆಣೈ ಅವರ ಮೇಲುಂಟು. ಕಣ್ಣಲ್ಲೇ ಮಾತಾಡಬಲ್ಲ ಕಲಾವಿದರಿಗೆ ಅದೆಲ್ಲಾ ಸಲೀಸು.
ಮೊಟ್ಟ ಮೊದಲ ಬಾರಿ ನಿರ್ಮಾಪಕರನ್ನು ಸಹಾಯ ಕೇಳಿದ ದರ್ಶನ್ ತಾಯಿ!
ಚಿಕ್ಕಣ್ಣ, ಸಾಧು ಇರುವಾಗ ಕಾಮಿಡಿಗೆ ಬರವಿಲ್ಲ. ಇಲ್ಲಿ ಅದಕ್ಕೆ ಮತ್ತೊಬ್ಬ ಪಂಚಿಂಗ್ ಸ್ಟಾರ್ ಸಾಥ್ ಇದೆ. ಅವರು ಸಂಭಾಷಣಾಕಾರ ಪ್ರಶಾಂತ್ ರಾಜಪ್ಪ. ರಣಾಂಗಣದಲ್ಲಿ ದರ್ಶನ್ ಹೋರಾಡಿದಂತೆ ಪೆನ್ನು ಹಿಡಿದು ಪ್ರಶಾಂತ್ ರಾರಾಜಿಸುವುದಕ್ಕೆ ಸಿನಿಮಾನೇ ಸಾಕ್ಷಿ. ಒಡೆಯ ಚಿತ್ರದ ಮೂಲಕ ಮತ್ತೊಬ್ಬ ಡಿಂಪಲ್ ಕ್ವೀನ್ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಅವರು ಸನ ತಿಮ್ಮಯ್ಯ. ನಕ್ಕಾಗ ಅವರ ಕೆನ್ನೆ ಮೇಲೆ ಮೂಡುವ ಗುಳಿಯೇ ಅವರ ಛಲ, ಬಲ ಎಲ್ಲಾ.
ಕುಟುಂಬ ಕಾಪಾಡುವ ದೇವರಂಥ ಮನುಷ್ಯನ ಕತೆ ಇಲ್ಲಿ ಹೊಸದಲ್ಲ. ಆದರೆ ಹೊಸ ಜನ್ಮ ಎತ್ತಿದ ದೇವರೂ ರಾಕ್ಷಸನನ್ನು ಕೊಲ್ಲಲೇಬೇಕು. ಹೊಸ ರೂಪದಲ್ಲಿ, ಹೊಸ ಚಿತ್ರಕತೆಯಲ್ಲಿ ಬಂದಿರುವ ದರ್ಶನ್ ಕೂಡ ವಿಲನ್‌ಗಳನ್ನು ತಾರಾಮಾರಾ ಬಾರಿಸಲೇಬೇಕು. ಕುಟುಂಬ ಒಗ್ಗೂಡಿಸಲೇಬೇಕು. ಹೇಳಿಕೇಳಿ ಇದು ‘ವೀರಂ’ ಚಿತ್ರದ ರೀಮೇಕ್. ಆದರೆ ಅದನ್ನು ಮರೆಸುವುದು ದರ್ಶನ್. ಅವರ ಸ್ಕ್ರೀನ್ ಪ್ರೆಸೆನ್ಸ್ ನೋಡಿದರೆ ಗಹನವಾದ ಚಿಂತನ ಮಂಥನಗಳೆಲ್ಲಾ ಇಲ್ಲಿ ದೂರಾದೂರ. ಅದೇ ಈ ಸಿನಿಮಾದ ಶಕ್ತಿ ಮತ್ತು ಯಶಸ್ಸು.
ರಿಲೀಸ್ ದಿನವೇ ಕಣ್ಣೀರಿಟ್ಟ 'ಒಡೆಯ' ಚಿತ್ರದ ನಟಿ!
ಡಿಸೆಂಬರ್ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ