Film Review: ಜೇಮ್ಸ್‌

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೇಮ್ಸ್‌ ಸಿನಿಮಾ ಗೆಲ್ಲಿಸಿದ ಸಿನಿ ರಸಿಕರು. ಎಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಸಿನಿ ರಸಿಕರ ಮನಸ್ಸಿನಲ್ಲಿ ಮನೆ ಮಾಡಿದ ಯುವರತ್ನ
 

Kannada Puneeth Rajkumar james film review vcs

ರಾಜೇಶ್‌ ಶೆಟ್ಟಿ

ಜೇಮ್ಸ್‌ ಚಿತ್ರದಲ್ಲಿ ಕೆಲವೇ ಸೆಕೆಂಡುಗಳ ಒಂದು ಪುಟ್ಟ ದೃಶ್ಯವಿದೆ. ಈ ದೃಶ್ಯದಿಂದ ಕತೆ ಗೊತ್ತಾಗುವುದಿಲ್ಲವಾದ್ದರಿಂದ ನಿಶ್ಚಿಂತೆಯಿಂದ ಓದಬಹುದು. ಆ ದೃಶ್ಯದಲ್ಲಿ ಅಪ್ಪು ಕೋಮಾಗೆ ಹೋಗಿ ಆಸ್ಪತ್ರೆಯಲ್ಲಿ ಮಲಗಿರುತ್ತಾರೆ. ಆಮೇಲೆ ಸ್ವಲ್ಪ ಹೋರಾಟದ ನಂತರ ಕೋಮಾದಿಂದ ಎದ್ದು ಆಚೆ ಬರುತ್ತಾರೆ. ಸಿನಿಮಾದಲ್ಲಿ ಆಗಿದ್ದು ನಿಜ ಜೀವನದಲ್ಲೂ ಆಗಿದ್ದರೆ ಎಷ್ಟು ಚೆನ್ನಾಗಿತ್ತು ಅನ್ನಿಸುವಂತೆ ಮಾಡುವುದೇ ಜೇಮ್ಸ್‌ ಸಿನಿಮಾ.

ಗ್ಯಾರೇಜಿನಲ್ಲಿ ನಿಲ್ಲಿಸಿರುವ ಚಂದದ ಕಾರಿನ ಮೇಲೆ ಹಾಕಿರುವ ಟರ್ಪಾಲು ಎತ್ತಿ ಕೊಡವಿ ಕಾರು ಹತ್ತಿ ಕುಳಿತು ರಸ್ತೆಯಲ್ಲಿ ಸಿಗುವ ಎಲ್ಲಾ ಕಾರು, ಬೈಕುಗಳನ್ನು ಹಿಂದಕ್ಕೆ ಹಾಕಿ ಗೆದ್ದು ಬೀಗಿ ತುಟಿ ಮೇಲೆ ಸಣ್ಣ ನಗು ಧರಿಸಿಕೊಂಡು ಎಂಟ್ರಿ ಕೊಡುವ ಪುನೀತ್‌ರನ್ನು ನೋಡುವಾಗ ಮನಸ್ಸು ತುಂಬಿ ಬರುತ್ತದೆ. ಯಾವಾಗ ಮಾತು ಶುರು ಮಾಡುತ್ತಾರೋ ಎಂದು ಕಾಯುತ್ತಿದ್ದಾಗ ಬಾಂಡ್, ಜೇಮ್‌ಸ್ಬಾಂಡ್ ಎಂಬ ಶಿವಣ್ಣನ ದನಿ ಕೇಳುವಾಗ ನಿಜಕ್ಕೂ ಪುನೀತ್ ಕಾಡುತ್ತಾರೆ.

ತಾರಾಗಣ: ಪುನೀತ್ ರಾಜ್‌ಕುಮಾರ್,ಪ್ರಿಯಾ ಆನಂದ್, ರಂಗಾಯಣ ರಘು,ಶರತ್‌ಕುಮಾರ್, ಶ್ರೀಕಾಂತ್
ನಿರ್ದೇಶನ: ಚೇತನ್ ಕುಮಾರ್
ರೇಟಿಂಗ್: ****

 

Record Break ಮಾಡಿದ ಜೇಮ್ಸ್: ಮೊದಲ ದಿನವೇ 20 ಕೋಟಿ ಕಲೆಕ್ಷನ್‌..!

ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಜೇಮ್ಸ್‌ ಎಂಬ ಹೆಸರಿಟ್ಟಾಗಲೇ ಜೇಮ್ಸ್‌ ಬಾಂಡ್ ಸ್ಟೈಲಿನ ಸಿನಿಮಾ ಎಂದು ನಿರ್ಧರಿಸಿಬಿಟ್ಟಿದ್ದಾರೆ. ಪ್ರತೀ ಫ್ರೇಮಲ್ಲೂ ಪುನೀತ್ ಅವರು ಸ್ಟೈಲಿಷ್ ಜೇಮ್ಸ್‌ ಬಾಂಡ್. ಹಾರಿ ಎಗರಿ ಒಬ್ಬೊಬ್ಬನ ಗೋಣು ಮುರಿಯುವ ಫೈಟರ್, ಬಂದೂಕನ್ನು ಆಟಿಕೆಯಂತೆ ಬಳಸಿ ಹತ್ತಾರು ಮಂದಿಯನ್ನು ಸುಟ್ಟು ಬಿಸಾಕುವ ಶೂಟರ್, ಗೆಳೆಯರನ್ನು ಪ್ರೀತಿಯಿಂದ ನೋಡುವ ಒಬ್ಬ ಬ್ರದರ್ ಎಲ್ಲವೂ ಆಗಿ ಪುನೀತ್ ಕಣ್ಣು ಮನಸ್ಸಲ್ಲಿ ಉಳಿದುಹೋಗುತ್ತಾರೆ. 
ಜೇಮ್ಸ್‌ ವನ್ ಮ್ಯಾನ್ ಶೋ. ದೊಡ್ಡ ತಾರಾಗಣ, ಮತ್ತೆ ಮತ್ತೆ ನೋಡಬೇಕೆನ್ನಿಸುವ ಲೊಕೇಶನ್‌ಗಳು, ಮೆಚ್ಚುಗೆ ಹುಟ್ಟಿಸುವ ಸೆಟ್‌ಗಳು ಎಲ್ಲವೂ ಇಲ್ಲಿ ಅದ್ದೂರಿ. ಸೆಂಟಿಮೆಂಟಿಗೆ ಗೆಳೆಯರು, ಹೊಡೆದು ಹಾಕಲು ಕೈಗೊಂದು ಕಾಲಿಗೊಂದು ವಿಲನ್‌ಗಳು, ಜಾಣತನ ತೋರಿಸಲು ಬೇಕಾಗುವ ಸಿಚುವೇಷನ್‌ಗಳು, ಹೋರಾಡಲೊಂದು ಡ್ರಗ್ ಮಾಫಿಯಾ, ಮೆಚ್ಚಿಕೊಳ್ಳುವುದಕ್ಕೆ ದೇಶಪ್ರೇಮವನ್ನು ಹೊಂದಿಸಿಕೊಂಡಿರುವ ಈ ಸಿನಿಮಾ ಒಂಥರಾ ಯುದ್ಧದ ಥರ ಇದೆ. ಹಾಗಾಗಿಯೇ ಚೇತನ್ ಅವರು ಪುನೀತ್ ಕೈಯಲ್ಲಿ ಕೊಲ್ಲಿಸುವ ಮಂದಿಯ ಲೆಕ್ಕ ಇಲ್ಲಿ ಸಿಗುವುದಿಲ್ಲ. ವಿಲನ್‌ಗಳು ಎಷ್ಟು ಎಂಬುದನ್ನು ಲೆಕ್ಕ ಹಾಕಲು ಬೆರಳುಗಳು ಸಾಲುವುದಿಲ್ಲ.

Kannada Puneeth Rajkumar james film review vcs

ಮೊದಲಾರ್ಧದ ವೇಗ, ಇಂಟರ್ವಲ್ ಸಮಯದಲ್ಲಿನ ಹಿನ್ನೆಲೆ ಸಂಗೀತ, ಸ್ವಾಮಿ ಗೌಡರ ಛಾಯಾಗ್ರಹಣ ಮೆಚ್ಚುಗೆಗೆ ಅರ್ಹ. ದೊಡ್ಡ ದೊಡ್ಡ ಕಲಾವಿದರೆಲ್ಲಾ ಇಲ್ಲಿ ಸೂಟು ಬೂಟು ಧರಿಸಿಕೊಂಡು ಕಳೆಕಳೆಯಾಗಿ ಕಾಣಿಸುತ್ತಾರೆ. ಹಾಡು ಯಾವುದಾದರೂ ನೆನಪಲ್ಲಿ ಉಳಿಯುತ್ತದಾ ಎಂದರೆ ಹೇಳುವುದು ಕಷ್ಟ. ಎಂದಿನಂತೆ ನಿರ್ದೇಶಕ ಚೇತನ್‌ರ ಸೌಂದರ್ಯ ಪ್ರಜ್ಞೆ ಚಿತ್ರದುದ್ದಕ್ಕೂ ಕಾಣಿಸುತ್ತದೆ. ಫ್ಯಾಮಿಲಿ ಆಡಿಯನ್ಸಿಗೆ ಏನಾದರೂ ಇದೆಯಾ ಎಂದು ಕೇಳಿದರೆ ದ್ವಿತೀಯಾರ್ಧ ಕೈಗೆ ಸಿಗುತ್ತದೆ. ಉಳಿದಂತೆ ಆ್ಯಕ್ಷನ್ನು ಎಲ್ಲವನ್ನೂ ಮರೆಸುತ್ತದೆ.

James 2022: ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳಿಂದ 'ಜೇಮ್ಸ್​' ಜಾತ್ರೆ!

ಮೇಕಿಂಗ್‌ನಲ್ಲಿರುವ ಅದ್ದೂರಿತನ, ಚಿತ್ರಕತೆಯಲ್ಲಿರಬೇಕಾದ ಜಾಣತನ, ದೇಶಕ್ಕೆ ಒಳ್ಳೆಯದು ಮಾಡಬೇಕೆಂಬ ಒಳ್ಳೆಯತನ ಎಲ್ಲವುದರ ಆಚೆಗೆ ಈ ಸಿನಿಮಾ ನೋಡಿ ಆಚೆ ಬಂದ ಮೇಲೂ ಮನಸ್ಸಲ್ಲಿ ಉಳಿಯುವುದು ಕೊನೆಯಲ್ಲಿ ಬರುವ ಮೇಕಿಂಗ್ ದೃಶ್ಯಗಳಲ್ಲಿ ಕಾಣಸಿಗುವ ಪುನೀತ್ ಅವರ ನಗುಮುಖ. ಮಾಸದೇ ಉಳಿದ ಆ ನಗುಮುಖವೇ ಈ ಸಿನಿಮಾಗೆ ಶ್ರೀರಕ್ಷೆ.

"

Latest Videos
Follow Us:
Download App:
  • android
  • ios