ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​​ ರಾಜ್‌ಕುಮಾರ್ ಕೊನೆ ಸಿನಿಮಾ 'ಜೇಮ್ಸ್​'ಗೆ ಭರ್ಜರಿ ವೆಲ್​ಕಮ್​​ ಸಿಕ್ಕಿದ್ದು, ಕೋಟ್ಯಂತರ ಫ್ಯಾನ್ಸ್ ಗ್ರ್ಯಾಂಡ್​ ವೆಲ್​ಕಮ್​ ಮಾಡ್ತಿದ್ದಾರೆ.

ಬೆಂಗಳೂರು (ಮಾ. 17): ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​​ ರಾಜ್‌ಕುಮಾರ್ (Puneeth Rajkumar) ಕೊನೆ ಸಿನಿಮಾ 'ಜೇಮ್ಸ್​'ಗೆ (James) ಭರ್ಜರಿ ವೆಲ್​ಕಮ್​​ ಸಿಕ್ಕಿದ್ದು, ಕೋಟ್ಯಂತರ ಫ್ಯಾನ್ಸ್ (Fans) ಗ್ರ್ಯಾಂಡ್​ ವೆಲ್​ಕಮ್​ ಮಾಡ್ತಿದ್ದಾರೆ. ಈ ವೇಳೆ ಕಮಲಾನಗರದ ವೀರಭದ್ರೇಶ್ವರ ಥಿಯೇಟರ್ (Veerabhadreshwara Theater) ಬಳಿ ಅಪ್ಪುವಿನ ಸಂದೇಶ ಇಂದು ಸಾಕಾರಗೊಂಡಿತ್ತು.‌ 'ಕೆಟ್ಟದನ್ನು ಬಿಟ್ಟಾಕಿ ಒಳ್ಳೇದನ್ನ ಮಾಡ್ತಾ ಇರೋಣ' ಎನ್ನುವ ಪುನೀತ್ ಅವರ ಪ್ರೇರಣೆಯ ಮಾತುಗಳನ್ನು ಅಭಿಮಾನಿಗಳು ಚಾಚೂ ತಪ್ಪದೇ ಪಾಲಿಸಿದ್ದಾರೆ. 'ಜೇಮ್ಸ್' ಇದು ಸಿನಿಮಾ ಅಲ್ಲ ಎಮೋಷನ್ ಅನ್ನೋದು ಥಿಯೇಟರ್‌ಗಳ ಮುಂದಿನ ಚಿತ್ರಣ ಕಣ್ಣಿಗೆ ಕಟ್ಟಿದಂತಿತ್ತು.

ಒಂದು ಕಡೆ ಅಪ್ಪು ಇಲ್ಲದೇ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಅಪ್ಪುನೇ ಗಿಫ್ಟ್ ಕೊಟ್ಟ ಹಾಗೆ ತೆರೆಗೆ ಅಪ್ಪಳಿಸಿರುವ 'ಜೇಮ್ಸ್' ಚಿತ್ರ. ಇದು ಸಂಭ್ರಮ ಪಡಬೇಕೋ ಅಪ್ಪು ಇಲ್ಲ ಅಂತ ಬೇಸರ ಪಟ್ಟುಕೊಳ್ಳಬೇಕೋ ಎನ್ನುವ ಮಿಶ್ರ ಸಂಕಟದಲ್ಲಿ ಅಪ್ಪು ಅಭಿಮಾನಿಗಳು ಮಿಂದೆದ್ದಿದ್ದಾರೆ. ವಿಶೇಷವಾಗಿ ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಇಡೀ ದಿನ ಅನ್ನ ಸಂತರ್ಪಣೆ ನಡೆಯಿತು. ಬೆಳಗ್ಗೆ 5:30 ಕ್ಕೆ‌ ಮೊದಲ ಶೋ ಆರಂಭವಾಗುತ್ತಿದ್ದಂತೆ ಅಭಿಮಾನಿಗಳಿಗೆ ಟೀ ವಿತರಿಸಲಾಯ್ತು. ಮೊದಲ ಶೋ ಮುಗಿದ ಬಳಿಕ ತಿಂಡಿಗಾಗಿ ಮಸಾಲೆ ದೋಸೆ ನೀಡಲಾಯ್ತು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿಗೆ ಉಚಿತವಾಗಿ ತಿಂಡಿ ವ್ಯವಸ್ಥೆ ಅಪ್ಪು ಅಭಿಮಾನಿಗಳು ಮಾಡಿದ್ದರು. 

Puneeth Rajkumar: ರಾಜ್ಯಾದ್ಯಂತ ಅಪ್ಪು ಹುಟ್ಟುಹಬ್ಬ: 'ಜೇಮ್ಸ್' ಬಿಡುಗಡೆಯ ಸಂಭ್ರಮ

ಪುನೀತ್‌ಗೆ ಇಷ್ಟವಾದ ಬಿರಿಯಾನಿಯನ್ನು ಮಧ್ಯಾಹ್ನದ ಊಟಕ್ಕೆ ನೀಡಲಾಯ್ತು. ಸುಮಾರು 100 ಕೆಜಿ ಚಿಕನ್ ಬಳಸಿ ಬಿರಿಯಾನಿ ತಯಾರಿಸಿದ್ದ ಅಪ್ಪು ಅಭಿಮಾನಿಗಳ ಸಂಘದಿಂದ ಅಭಿಮಾನಿಗಳ ಹಸಿವನ್ನು ನೀಗಿಸಿದರು. ಇದೇ ವೇಳೆ 'ಜೇಮ್ಸ್' ಚಿತ್ರದ ಮೊದಲ ಶೋ ವೀಕ್ಷಿಸಿದ ಅಭಿಮಾನಿಗಳಿಗೆ ಲಕ್ಕಿ ಡಿಪ್ ಮೂಲಕ ‌ಚಿನ್ನದ ನಾಣ್ಯವನ್ನ ಕೊಡಲಾಯ್ತು. ಸಿ 6 ಸೀಟ್ ನಂಬರ್‌ನ ತಿಲಕ್ ಎನ್ನುವ ಪ್ರೇಕ್ಷಕನಿಗೆ 2 ಗ್ರಾಂ ಚಿನ್ನದ ನಾಣ್ಯವನ್ನು (Gold Coin) ಸಚಿವ ಗೋಪಾಲಯ್ಯ (Gopalaiah) ವಿತರಿಸಿದರು. ಇದರ ಜೊತೆಗೆ ಫಸ್ಟ್ ಡೇ ಫಸ್ಟ್ ಶೋನಲ್ಲಿ ಒಂದು ಸೀಟ್ ಸೀಟ್ ನಂಬರ್ 17 ಅಪ್ಪುಗಾಗಿಯೇ ಥಿಯೇಟರ್ ಮಾಲೀಕರು ಮೀಸಲಿಟ್ಟಿದ್ದರು.

ಇನ್ನೂ ಕೆಲಸಕ್ಕೆ ರಜೆ ಹಾಕಿ ಸುಮಾರು 70 ಮಹಿಳಾ ಪೌರ ಕಾರ್ಮಿಕರು 'ಜೇಮ್ಸ್' ಸಿನಿಮಾವನ್ನು ವೀಕ್ಷಿಸಿದರು. ಅಪ್ಪು ಫೈಟಿಂಗ್, ಡ್ಯಾನ್ಸು, ಡೈಲಾಗ್ ಎಲ್ಲವೂ ಸೂಪರ್ ಎಂದು ಚಿತ್ರದ ಬಗ್ಗೆ ಹೊಗಳಿದರು. ಕೆಲ ಅಭಿಮಾನಿಗಳು ಶೋ ಬಳಿಕ ಅಪ್ಪು ಅನುಪಸ್ಥಿತಿಯನ್ನು ನೆನಯುತ್ತಾ ಕಣ್ಣೀರು ಹಾಕಿದರು. ಸದ್ಯ ವೀರಭದ್ರೇಶ್ವರ ಥಿಯೇಟರ್ ಹೊರಗೆ ಅಭಿಮಾನಿಗಳಿಗೆ ಸಂಜೆಯ ಸ್ನ್ಯಾಕ್ಸ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

'ಜೇಮ್ಸ್‌' ಸಿನಿಮಾ ರಾಜ್ಯಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಸುಮಾರು 400ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ಜೇಮ್ಸ್‌' ದರ್ಶನವಾಗುತ್ತಿದೆ. 150ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ ಸ್ಕ್ರೀನ್‌ಗಳಲ್ಲಿ 'ಜೇಮ್ಸ್' ಅಬ್ಬರ ಶುರುವಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಚಿತ್ರದ ಶೋ ಆರಂಭವಾಗಿದ್ದು, ಈಗಾಗಲೇ ಚಿತ್ರದ ಮೊದಲ ದಿನದ ಟಿಕೆಟ್‌ಗಳು ಸೋಲ್ಡೌಟ್ ಆಗಿವೆ. ವಿಶೇಷವಾಗಿ ರಾಜ್ಯದ ಎಲ್ಲ ಬಹುತೇಕ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನವನ್ನು ಕಾಣುತ್ತಿವೆ. ಬೆಂಗಳೂರುವೊಂದರಲ್ಲೇ 800ಕ್ಕೂ ಹೆಚ್ಚಿನ ಶೋ ಪ್ರದರ್ಶನ ಕಾಣುತ್ತಿದ್ದು,. ಕರ್ನಾಟಕದಾದ್ಯಂತ ಒಟ್ಟು 1700 ಶೋಗಳು ಇರುತ್ತವೆ. 

Puneeth Rajkumar: ಗುಮ್ಮಟನಗರಿ ವಿಜಯಪುರದಲ್ಲಿ 'ಜೇಮ್ಸ್‌ ಜಾತ್ರೆ': ಅಭಿಮಾನಿಗಳಿಂದ ನಾನಾ ಸೇವೆ!

ನ್ಯೂಜೆರ್ಸಿಯಲ್ಲಿ ಅಪ್ಪು ಜೇಮ್ಸ್‌ ಜಾತ್ರೆ: ನ್ಯೂಜೆರ್ಸಿಯಲ್ಲಿ ಶನಿವಾರ ಪುನೀತ್‌ ಸ್ಮರಣೆ ನಡೆಯಲಿದ್ದು ಸುಮಾರು 150 ಕಾರುಗಳ ಮೆರವಣಿಗೆ ನಡೆಯಲಿದೆ. ನ್ಯೂಜೆರ್ಸಿಯ ನಾತ್ರ್ ಬ್ರೂನ್ಸ್‌ವಿಕ್‌ ಕಮ್ಯೂನಿಟಿ ಪಾರ್ಕ್‌ನಲ್ಲಿ ಕನ್ನಡಿಗರೆಲ್ಲ ಒಟ್ಟು ಸೇರಿ ಅಪ್ಪು ಅವರನ್ನು ಸ್ಮರಿಸಲಿದ್ದಾರೆ. ಬಳಿಕ 5 ಕಿಮೀ ದೂರ ಕಾರುಗಳ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಪುನೀತ್‌ ಅವರ ಭಾವಚಿತ್ರ, ಕನ್ನಡ ಬಾವುಟಗಳ ಪ್ರದರ್ಶನ ನಡೆಯಲಿದೆ. ಬಳಿಕ ನೂರಾರು ಕನ್ನಡಿಗರು ಇಲ್ಲಿನ ರೀಗಲ್‌ ಥಿಯೇಟರ್‌ನಲ್ಲಿ 'ಜೇಮ್ಸ್‌' ಚಿತ್ರ ವೀಕ್ಷಿಸಲಿದ್ದಾರೆ. 200ಕ್ಕೂ ಹೆಚ್ಚು ಮಂದಿ ಅಪ್ಪು ಜಾತ್ರೆಯಲ್ಲಿ ಭಾಗವಹಿಸಲಿದ್ದಾರೆ.