Record Break ಮಾಡಿದ ಜೇಮ್ಸ್: ಮೊದಲ ದಿನವೇ 20 ಕೋಟಿ ಕಲೆಕ್ಷನ್..!
* 386 ಚಿತ್ರಮಂದಿರ ಹೌಸ್‌ಫುಲ್
* ಪುನೀತ್ ಕೊನೆಯ ಸಿನಿಮಾ ‘ಜೇಮ್ಸ್’ಗೆ ರಾಜ್ಯಾದ್ಯಂತ ಅಭೂತ ಪ್ರತಿಕ್ರಿಯೆ
* ಮೊನ್ನೆ ರಾತ್ರಿಯಿಂದಲೇ ಕ್ಯೂ ನಿಂತು ಸಿನಿಮಾ ನೋಡಿದ ಅಭಿಮಾನಿಗಳು
ಬೆಂಗಳೂರು(ಮಾ.18): ಗುರುವಾರ ಬಿಡುಗಡೆಯಾದ ಪುನೀತ್ ರಾಜ್‌ಕುಮಾರ್(Puneeth Rajkumar) ನಟನೆಯ ಕೊನೆಯ ಚಿತ್ರ ‘ಜೇಮ್ಸ್’ಗೆ(James) ರಾಜ್ಯಾದ್ಯಂತ(Karnataka) ಅಭೂತ ಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ ಒಟ್ಟು 4000ಕ್ಕೂ ಅಧಿಕ ಪ್ರದರ್ಶನಗಳು ನಡೆದಿದೆ. ಈ ಪೈಕಿ ಕರ್ನಾಟಕವೊಂದರಲ್ಲೇ 2500 ಪ್ರದರ್ಶನ ಕಂಡಿದೆ. ರಾಜ್ಯಾದ್ಯಂತ 386 ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ದಾಖಲಾಗಿದೆ. ಮೊದಲ ದಿನವೇ ಅಂದಾಜು 20 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಒಟ್ಟು ಪ್ರದರ್ಶನಗಳ ಸಂಖ್ಯೆ, ಸಿನಿಮಾ ಕಲೆಕ್ಷನ್(Cinema Collection), ಬೆಳಗ್ಗಿನ ಪ್ರದರ್ಶನಗಳ ಸಂಖ್ಯೆ ಎಲ್ಲದರಲ್ಲೂ ಜೇಮ್ಸ್ ಸಿನಿಮಾ ದಾಖಲೆ(Record) ಬರೆದಿದೆ.
ಪ್ರಸ್ತುತ 150ರಷ್ಟು ಮಲ್ಟಿಪ್ಲೆಕ್ಸ್‌ಗಳಲ್ಲಿ ‘ಜೇಮ್ಸ್’ ಪ್ರದರ್ಶನ ಕಾಣುತ್ತಿದ್ದು, ಜನರ ಪ್ರತಿಕ್ರಿಯೆ ನೋಡಿ ಅನೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೋಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಆಂಧ್ರದ 500 ಥಿಯೇಟರ್‌ಗಳು, ತಮಿಳ್ನಾಡಿನಲ್ಲಿ 150, ಕೇರಳದ 100, ಮಹಾರಾಷ್ಟ್ರ, ಉತ್ತರ ಭಾರತ ಸೇರಿ 400 ಥಿಯೇಟರ್‌ಗಳಲ್ಲಿ ಜೇಮ್ಸ್ ಚಿತ್ರ ಪ್ರದರ್ಶನ ಕಂಡಿದೆ. ಅಮೆರಿಕಾದ 32 ರಾಜ್ಯಗಳಲ್ಲಿ 100ಕ್ಕೂ ಹೆಚ್ಚು ಶೋಗಳು ನಿಗದಿಯಾಗಿವೆ. ಕೆನಡಾದಲ್ಲಿ 12 ಕಡೆ ಜೇಮ್ಸ್ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಒಟ್ಟು ವಿಶ್ವದ 50ಕ್ಕೂ ಹೆಚ್ಚು ದೇಶಗಳಲ್ಲಿ ಜೇಮ್ಸ್ ಪ್ರದರ್ಶನ ಕಂಡಿದೆ. ಬಹುತೇಕ ಎಲ್ಲಾ ಕಡೆಗಳಲ್ಲಿ ಜೇಮ್ಸ್‌ಗೆ ಮೆಚ್ಚುಗೆ ಸಿಕ್ಕಿದೆ. ವಿಶೇಷ ಎಂದರೆ ಈ ಹಿಂದೆ ಯಾವ ಕನ್ನಡ ಚಿತ್ರವೂ ವಿದೇಶದಲ್ಲಿ ಈ ಮಟ್ಟಿಗೆ ಪ್ರದರ್ಶನವಾದ ಉದಾಹರಣೆ ಇಲ್ಲ.
Puneeth Rajkumar: ಅಪ್ಪು ಹುಟ್ಟುಹಬ್ಬಕ್ಕೆ ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ
ಬೆಂಗಳೂರಿನ(Bengaluru) ವೀರೇಶ್, ಪ್ರಸನ್ನ, ವೀರಭದ್ರೇಶ್ವರ ಥಿಯೇಟರ್‌ಗಳಲ್ಲಿ ಬೆಳಗಿನ ಜಾವ 4.05ಕ್ಕೆ ಜೇಮ್ಸ್ ಪ್ರದರ್ಶನ ಆರಂಭವಾಗಿತ್ತು. ಬೆಳಗಿನ ಜಾವ ಇಷ್ಟೊಂದು ಸಂಖ್ಯೆಯಲ್ಲಿ ಕನ್ನಡ ಚಿತ್ರವೊಂದು ಪ್ರದರ್ಶನ ಕಂಡಿದ್ದು ಇದೇ ಮೊದಲು ಎನ್ನಲಾಗಿದೆ. ಇದಲ್ಲದೇ ಮೊದಲ ದಿನವೇ ಕೆಲವು ಥಿಯೇಟರ್‌ಗಳಲ್ಲಿ 6 ಶೋ ನಡೆಸಲಾಗಿತ್ತು. ಹೆಚ್ಚಿನೆಲ್ಲ ಕಡೆ 4 ರಿಂದ 5 ಶೋಗಳು ನಡೆದವು. ಅಭಿಮಾನಿಗಳಿಂದ(Fans) 150ಕ್ಕೂ ಹೆಚ್ಚು ಫ್ಯಾನ್ಸ್ ಶೋ ಆಯೋಜನೆಯಾಗಿತ್ತು.
ಬುಧವಾರ ಸಂಜೆಯಿಂದಲೇ ರಾಜ್ಯದೆಲ್ಲೆಡೆ ಜೇಮ್ಸ್ ಹವಾ ಶುರುವಾಗಿತ್ತು. ಬೆಂಗಳೂರಿನ ಹೆಚ್ಚಿನೆಲ್ಲ ಥಿಯೇಟರ್‌ಗಳಲ್ಲಿ ಅಪ್ಪು ಅವರ ಬೃಹತ್ ಕಟೌಟ್‌ಗಳು ರಾರಾಜಿಸುತ್ತಿದ್ದವು. ಅನೇಕ ಥಿಯೇಟರ್‌ಗಳಲ್ಲಿ ಪುನೀತ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಲಾಗಿತ್ತು. ಮುಂಜಾನೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಥಿಯೇಟರ್‌ಗಳ ಮುಂದೆ ಜಮಾಯಿಸಿದ ಪುನೀತ್ ಭಾವಚಿತ್ರಕ್ಕೆ ಅಭಿಮಾನಿಗಳು ಪುಷ್ಪವೃಷ್ಟಿಮಾಡುತ್ತಿದ್ದರು, ಜಯಘೋಷ ಮುಗಿಲು ಮುಟ್ಟುವಂತಿತ್ತು.
ಬೆಂಗಳೂರಿನ ವೀರೇಶ್ ಥಿಯೇಟರ್‌ನಲ್ಲಿ ‘ಅಪ್ಪು ಉತ್ಸವ’ ಆಚರಿಸಲಾಯಿತು. ಪುನೀತ್ ಅವರ ಮೊದಲ ಸಿನಿಮಾದಿಂದ ಕೊನೆಯ ಚಿತ್ರದವರೆಗಿನ 50 ಕಟೌಟ್ ಹಾಕಲಾಗಿತ್ತು. ಪ್ರತೀ ಕಟೌಟ್‌ಗೂ ಭಾರೀ ಗಾತ್ರದ ಹೂವಿನ ಹಾರ ಹಾಕಲಾಗಿತ್ತು. ನೇತ್ರದಾನ, ರಕ್ತದಾನ, ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ, ಅನ್ನದಾನ, ಮೆರವಣಿಗೆ ಇತ್ಯಾದಿ ಕಾರ್ಯಕ್ರಮಗಳು ಇಲ್ಲಿ ನಡೆದವು.
ಫಸ್ಟ್ ಶೋ ನೋಡಿದ ರಾಘಣ್ಣ
ವೀರೇಶ್ ಥಿಯೇಟರ್‌ನಲ್ಲಿ ಫಸ್ಟ್ ಡೇ ಫಸ್ಟ್ ಶೋವನ್ನು ಅಭಿಮಾನಿಗಳೊಂದಿಗೆ ನೋಡಿದ ರಾಘವೇಂದ್ರ ರಾಜ್‌ಕುಮಾರ್, ‘ಇಷ್ಟೊಂದು ಜನ ಎದೆಯೊಳಗೆ ಅಪ್ಪುವನ್ನು ಇಟ್ಟುಕೊಂಡು ಬಂದಿದ್ದಾರೆ, ಹೀಗಿರುವಾಗ ಅಪ್ಪು ಇಲ್ಲ ಅಂತ ನಾನು ಹೇಗೆ ಹೇಳಲಿ, ಈ ವೀರೇಶ್ ಚಿತ್ರಮಂದಿರದಲ್ಲಿ ನಮ್ಮ ತಂದೆ ರಾಜ್‌ಕುಮಾರ್ ಅವರು ನಾವು ಮೂರೂ ಜನ ಮಕ್ಕಳ ಮೊದಲ ಸಿನಿಮಾದ ಶೋಗಳನ್ನ ನೋಡುತ್ತಿದ್ದರು. ಇವತ್ತೂ ಇಲ್ಲಿ ಅಪ್ಪ ಹಾಗೂ ಅಪ್ಪು ನಮ್ಮ ಜೊತೆಗೆ ಕೂತು ಸಿನಿಮಾ ನೋಡುತ್ತಿದ್ದಾರೆ ಅಂತಲೇ ಭಾವನೆ. ಇದು ಕೇವಲ ಸಿನಿಮಾ ಅಲ್ಲ’ ಎಂದು ಹೇಳಿದರು.
James 2022: ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಅಪ್ಪು ಅಭಿಮಾನಿಗಳಿಂದ 'ಜೇಮ್ಸ್' ಜಾತ್ರೆ!
ನಾಯಕಿ ಪ್ರಿಯಾ ಆನಂದ್ ಕಣ್ಣೀರು
‘ಜೇಮ್ಸ್’ ಚಿತ್ರದ ನಾಯಕಿ ಪ್ರಿಯಾ ಆನಂದ್(Priya Anand) ಅಭಿಮಾನಿಗಳೊಂದಿಗೆ ಬೆಂಗಳೂರಿನ ನವರಂಗ್ ಥಿಯೇಟರ್‌ನಲ್ಲಿ ಚಿತ್ರ ನೋಡಿದರು. ಪ್ರದರ್ಶನವನ್ನು ಆನಂದಿಸಿದರೂ, ಸಿನಿಮಾ ವೀಕ್ಷಣೆ ಬಳಿಕ ಅವರು ಕಣ್ಣೀರೊರೆಸುತ್ತಾ ಅಪ್ಪು ಅವರನ್ನು ನೆನೆಸಿಕೊಂಡು ಹೊರಬರುತ್ತಿರುವ ದೃಶ್ಯ ಮನ ಮಿಡಿಯುವಂತಿತ್ತು.
ಹೊರ ರಾಜ್ಯದಲ್ಲೂ ಮೆಚ್ಚುಗೆ
ಹೊರ ರಾಜ್ಯದಲ್ಲಿ ಬೇರೆ ಭಾಷೆಗಳ ಜೇಮ್ಸ್ ಶೋಗೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಅಲ್ಲೂ ಜೇಮ್ಸ್ ಸಿನಿಮಾವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ ಅಂತ ನಿರ್ಮಾಪಕ ಕಿಶೋರ್ ಪತ್ತಿಕೊಂಡ ತಿಳಿಸಿದ್ದಾರೆ.
ಈಗಲೇ 3 ವಾರದ ಟಿಕೆಟ್ ಬುಕ್
ವೀರೇಶ್ ಚಿತ್ರಮಂದಿರವೊಂದರಲ್ಲೇ ಈವರೆಗೆ 7200 ಸೀಟು ಬುಕಿಂಗ್ ಆಗಿದೆ. ರಾಜ್ಯದ ಶೇ.90 ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನಗೊಂಡಿದೆ. ಗುರುವಾರ ಒಂದೇ ದಿನ ರಾಜ್ಯದಲ್ಲಿ ಸುಮಾರು 2500 ಶೋಗಳಾಗಿವೆ. ಇದರಿಂದ ತೆರಿಗೆ ಹೊರತುಪಡಿಸಿ 22 ರಿಂದ 25 ಕೋಟಿ ರು. ಗಳಿಕೆಯ ನಿರೀಕ್ಷೆ ಇದೆ. ಮೂರು ವಾರಗಳಿಗೆ ಚಿತ್ರದ ಶೇ.80 ಟಿಕೆಟ್ ಬುಕಿಂಗ್ ಆಗಿದೆ ಅಂತ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ ಹೇಳಿದ್ದಾರೆ.
4000 ಒಟ್ಟು ಪ್ರದರ್ಶನಗಳ ಸಂಖ್ಯೆ: 2500 ಕರ್ನಾಟಕದಲ್ಲಿ ಪ್ರದರ್ಶನ
150+ ಫ್ಯಾನ್ಸ್ ಶೋಗಳು
20 ಕೋಟಿ ಮೊದಲ ದಿನ ಚಿತ್ರದ ಗಳಿಕೆ
50+ ಚಿತ್ರ ಪ್ರದರ್ಶನ ಕಂಡ ದೇಶಗಳು
ಎಲ್ಲೆಲ್ಲಿ ಎಷ್ಟು ಪ್ರದರ್ಶನ
2500 ಕರ್ನಾಟಕ
500 ಆಂಧ್ರಪ್ರದೇಶ
150 ತಮಿಳುನಾಡು
100 ಕೇರಳ
400 ಇತರೆ ರಾಜ್ಯಗಳು
100 ಅಮೆರಿಕ
12 ಕೆನಡಾ