ಶಿವರಾಜ್‌ಕುಮಾರ್, ಸಾಯಿಕುಮಾರ್ ಮತ್ತು ಜಯರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪವನ್ ಒಡೆಯರ್ ನಿರ್ದೇಶನದ ‘ಬೇಲ್’ ಸಿನಿಮಾ ಆ್ಯಕ್ಷನ್, ಹಾಸ್ಯ ಮತ್ತು ಭಾವನಾತ್ಮಕ ಅಂಶಗಳನ್ನು ಒಳಗೊಂಡ ಕಮರ್ಷಿಯಲ್ ಎಂಟರ್‌ಟೇನರ್.

ರಾಜೇಶ್ ಶೆಟ್ಟಿ

ಕಾನೂನಿನ ಸಡಿಲ ಕೊಂಡಿಗಳನ್ನು ಬಳಸಿಕೊಂಡು ಪಾರಾಗುವ ಕ್ರಿಮಿನಲ್‌ಗಳಿಗೆ ವ್ಯವಸ್ಥೆಯ ಹೊರಗೆ ನಿಂತು ಪಾಠ ಕಲಿಸುವ ಲವಲವಿಕೆಯ ಥ್ರಿಲ್ಲರ್‌ ಬೇಲ್‌. ನಿವೃತ್ತ ಐಪಿಎಸ್ ಅಧಿಕಾರಿ, ನಿವೃತ್ತ ನ್ಯಾಯಾಧೀಶ ಮತ್ತು ನಿವೃತ್ತಿ ವಿಜ್ಞಾನಿ ಸ್ನೇಹಿತರ ಸಾಹಸ ಗಾಥೆಯಿದು. ಪುಟ್ಟ ಬಾಲಕಿಯೊಬ್ಬಳ ಅಳುವಿನಿಂದ ಶುರುವಾಗಿ ನಗುವಿನಿಂದ ಮುಕ್ತಾಯವಾಗುವ ಎಮೋಷನಲ್ ಆ್ಯಕ್ಷನ್ ಡ್ರಾಮಾ .

ಈ ಸಿನಿಮಾದ ವಿಶೇಷತೆಯೇ ಇದರ ತಾರಾಗಣ. ಶಿವಣ್ಣ, ಜಯರಾಮ್‌ ಮತ್ತು ಸಾಯಿಕುಮಾರ್‌ ಪಾತ್ರಗಳು ನಗಿಸುತ್ತಾ ಮೆಚ್ಚಿಸುತ್ತಾ ಕತೆಯನ್ನು ಮುಂದಕ್ಕೆ ಕರೆದೊಯುತ್ತವೆ. ಶಿವಣ್ಣ ಮತ್ತು ಸಾಯಿಕುಮಾರ್‌ ಗಾಂಭೀರ್ಯ ಮೆರೆದರೆ, ಜಯರಾಮ್‌ ಅವರದೇ ಶೈಲಿಯಲ್ಲಿ ಮಜಾ ಕೊಡುತ್ತಿರುತ್ತಾರೆ. ದೀಕ್ಷಿತ್ ಶೆಟ್ಟಿ ಮತ್ತು ಯೋಗಿ ಉತ್ತಮ ಪಾತ್ರ ನಿರ್ವಹಣೆ ತೋರಿದ್ದಾರೆ. ಅದರಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ.

ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ ಸ್ವತಃ ಕಾನೂನನ್ನು ಕೈಗೆತ್ತಿಕೊಳ್ಳುವ ಹಳೆಯ ಮಾದರಿಯೇ ಚಿತ್ರದ ಬೆನ್ನೆಲುಬು. ಮೊದಲಾರ್ಧವನ್ನು ಒಂದು ರೀತಿ ಬುದ್ಧಿವಂತಿಕೆಯಿಂದ ಹೆಣೆದಿದ್ದಾರೆ ನಿರ್ದೇಶಕರು. ದ್ವಿತೀಯಾರ್ಧದಲ್ಲಿ ಮೊದಲಾರ್ಧದ ಸನ್ನಿವೇಶಗಳಿಗೆ ಸವಾಲು ಎಸೆಯುವಂತಹ ಸನ್ನಿವೇಶ ಎದುರಾಗುತ್ತದೆ. ಈ ಸಂದರ್ಭದಲ್ಲಿ ಅನವಶ್ಯ ಹಾಡುಗಳು ಬಂದು ಕೊಂಚ ಚಿತ್ರಾನ್ನದಲ್ಲಿ ಕಡ್ಲೆ ಬದಲಿಗೆ ಕಲ್ಲು ಸಿಕ್ಕಂತೆ ಅನ್ನಿಸುತ್ತದೆ. ಶಿವಣ್ಣನ ಮೀಸೆಯೇ ಚಿತ್ರದ ಹೈಲೈಟ್ ಅನ್ನಿಸಿದರೆ ಅಚ್ಚರಿಯಿಲ್ಲ.

ಚಿತ್ರ: ಬೇಲ್

ನಿರ್ದೇಶನ: ಪವನ್ ಒಡೆಯರ್

ತಾರಾಗಣ: ಶಿವರಾಜ್‌ಕುಮಾರ್, ಸಾಯಿಕುಮಾರ್, ಜಯರಾಮ್, ದೀಕ್ಷಿತ್ ಶೆಟ್ಟಿ, ಯೋಗಿ, ಸಂಜನಾ ಆನಂದ್

ರೇಟಿಂಗ್: 3

ಒಟ್ಟಾರೆಯಾಗಿ, ‘ಬೇಲ್’ ತೀಕ್ಷ್ಣವಾದ ಬುದ್ಧಿವಂತಿಕೆಯ ಕ್ರೈಂ ಇನ್ವೆಸ್ಟಿಗೇಷನ್ ಸಿನಿಮಾವಲ್ಲ. ಬದಲಿಗೆ ಆ್ಯಕ್ಷನ್, ಭಾವನೆ, ಹಾಸ್ಯ ಮತ್ತು ತಾರಾ ವರ್ಚಸ್ಸನ್ನು ನೆಚ್ಚಿಕೊಂಡಿರುವ ಕಮರ್ಷಿಯಲ್ ಎಂಟರ್‌ಟೇನರ್. ಶಿವಣ್ಣನ ಮಾಸ್ ಅವತಾರ ಮತ್ತು ಹಿರಿಯ ನಟರ ಜುಗಲ್ಬಂದಿ ಕಣ್ತುಂಬಿಕೊಳ್ಳಲು ಬಯಸುವ ಅಭಿಮಾನಿಗಳಿಗೆ ಇದು ಮನರಂಜನೆ ನೀಡುತ್ತದೆ.