Karavali Movie Review: ಕಂಬಳದ ವೈಭವದಂತೆ ಚಿತ್ರದಲ್ಲೂ ವೈಭವವಿದೆ. ಹಸಿರು, ಮಳೆ, ಸಮುದ್ರ, ಬೆಟ್ಟ, ಗದ್ದೆ ಸೇರಿ ಸೊಗಸಾದ ವಾತಾವರಣದಲ್ಲಿ ಕತೆ ನಡೆಯುತ್ತದೆ. ನೋಡುತ್ತಾ ನೋಡುತ್ತಾ ಮನಸ್ಸು ತಂಪಾಗುತ್ತದೆ.

- ರಾಜೇಶ್ ಶೆಟ್ಟಿ

ಈ ಸಿನಿಮಾವನ್ನು ಎಷ್ಟು ವೈಭವೋಪೇತವಾಗಿ ಕಟ್ಟಿದ್ದಾರೆ ಎಂದರೆ ತಂತ್ರಜ್ಞರ ಬಗ್ಗೆ ಪ್ರೀತಿ ಹುಟ್ಟುತ್ತದೆ. ಕರಾವಳಿಯಲ್ಲಿ ಕಂಬಳದ ಕೋಣ ಬೆಳೆಸಲು ಎಷ್ಟು ಕಷ್ಟ ಪಡುತ್ತಾರೋ ಅಷ್ಟೇ ಕಷ್ಟ ಪಟ್ಟು ಸಿನಿಮಾ ಮಾಡಿರುವುದು ಗೊತ್ತಾಗುತ್ತದೆ. ಅಭಿಮನ್ಯು ಸದಾನಂದನ್ ತನ್ನ ಕ್ಯಾಮೆರಾ ಮೂಲಕ, ಸಚಿನ್‌ ಬಸ್ರೂರು ಸಂಗೀತದ ಮೂಲಕ, ಗುರುದತ್‌ ಗಾಣಿಗ ಪರಿಕಲ್ಪನೆ ಮೂಲಕ ಈ ಸಿನಿಮಾವನ್ನು ವಿಭಿನ್ನವಾಗಿ ದಾಟಿಸುತ್ತಾ ಹೋಗಿದ್ದಾರೆ.

ಕಂಬಳದ ವೈಭವದಂತೆ ಚಿತ್ರದಲ್ಲೂ ವೈಭವವಿದೆ. ಹಸಿರು, ಮಳೆ, ಸಮುದ್ರ, ಬೆಟ್ಟ, ಗದ್ದೆ ಸೇರಿ ಸೊಗಸಾದ ವಾತಾವರಣದಲ್ಲಿ ಕತೆ ನಡೆಯುತ್ತದೆ. ನೋಡುತ್ತಾ ನೋಡುತ್ತಾ ಮನಸ್ಸು ತಂಪಾಗುತ್ತದೆ. ನಾಯಕ ಪಾತ್ರಧಾರಿ ಒಂದು ಊರಿನಿಂದ ದನ ಹುಡುಕಿಕೊಂಡು ಆಕಸ್ಮಿಕವಾಗಿ ಮತ್ತೊಂದು ಊರಿಗೆ ಹೋಗುವಲ್ಲಿಂದ ಕತೆ ಆರಂಭವಾಗುತ್ತದೆ. ಆ ಊರು, ಅಲ್ಲಿನ ದೊಡ್ಡವರು, ಅಲ್ಲಿ ಏನು ನಡೆಯುತ್ತದೆ ಎಂಬುದೇ ಕತೆಯ ಕೇಂದ್ರ.

ಅವೆಲ್ಲದರ ಜೊತೆಗೆ ಪ್ರಮುಖ ಪಾತ್ರಕ್ಕೊಂದು ಗಟ್ಟಿಯಾದ ಪಾತ್ರ ಪೋಷಣೆ ಇದ್ದಿದ್ದರೆ ಗಾಢತೆ, ಗೂಢತೆ ಇನ್ನಷ್ಟು ಜಾಸ್ತಿಯಾಗಿರುತ್ತಿತ್ತು. ಇಂಟರ್ವಲ್ ಹೊತ್ತಿಗೆ ಬರುವ ರಾಜ್‌ ಬಿ ಶೆಟ್ಟಿ ಪಾತ್ರ ವಿಜೃಂಬಿಸುತ್ತದೆ. ಆದರೆ ಆ ಪಾತ್ರದ ಅಂತರಾಳ ಏನು ಅಂತ ಅರಿವಿಗೆ ಬರುವುದಿಲ್ಲ. ರಮೇಶ್ ಇಂದಿರಾ ಪಾತ್ರ ಕ್ರೂರವಾಗಿದೆಯಾದರೂ ಆ ಕ್ರೂರತೆಗೊಂದು ಗಟ್ಟಿ ಬುಡವಿಲ್ಲ. ಈ ಸಿನಿಮಾದಲ್ಲಿ ನಿಜಕ್ಕೂ ಮನಸ್ಸು ತಟ್ಟುವುದು ಮಿತ್ರಾ.

ಚಿತ್ರ: ಕರಾವಳಿ

ನಿರ್ದೇಶನ: ಗುರುದತ್‌ ಗಾಣಿಗ

ತಾರಾಗಣ: ಪ್ರಜ್ವಲ್ ದೇವರಾಜ್‌, ರಾಜ್‌ ಬಿ. ಶೆಟ್ಟಿ, ಮಿತ್ರಾ, ರಮೇಶ್ ಇಂದಿರಾ, ಸಂಪದಾ, ಸುಶ್ಮಿತಾ ಭಟ್, ಶ್ರೀಧರ್‌

ರೇಟಿಂಗ್: 3

ಕೋಣದ ಜೊತೆಗಿನ ಒಡನಾಟ, ಕಂಬಳದ ಮೇಲಿನ ಪ್ರೀತಿಯನ್ನು ಅವರು ಅತ್ಯಂತ ಸಮರ್ಥವಾಗಿ ದಾಟಿಸಿದ್ದಾರೆ. ಆ ಪಾತ್ರಕ್ಕೊಂದು ಆದಿಯಿದೆ, ಅಂತ್ಯವಿದೆ, ಘನತೆಯಿದೆ. ಈ ಸಿನಿಮಾ ಅತ್ಯಂತ ಸ್ಟೈಲಿಶ್ ಆಗಿ ಮೂಡಿಬಂದಿದೆ. ಹಸಿರಿನ ಆಹ್ಲಾದ, ದೊಂದಿ ಬೆಳಕಿನ ತಂಪು ಖುಷಿಕೊಡುತ್ತದೆ. ಅಲ್ಲಲ್ಲಿ ಭಾವುಕತೆ, ಇನ್ನೊಂಚೂರು ಕ್ರೋಧ, ಕಂಬಳದ ಸೊಗಸು ಕೈಹಿಡಿದು ನಡೆಸುತ್ತದೆ. ಕ್ಲೈಮ್ಯಾಕ್ಸಿನಲ್ಲಿ ಕೋಣವನ್ನೂ ನಾಯಕನನ್ನೂ ನೋಡುವಾಗ ಮಾತ್ರ ಮನ ಮರುಗುತ್ತದೆ.