ಕೆಲವು ಕೇಳಿಸಿಕೊಂಡ ಕತೆಗಳು, ಇನ್ನೂ ಕೆಲವು ಓದಿದ ಕತೆಗಳು, ಇವುಗಳ ನಡುವೆ ತಿಳಿದ ಕತೆಗಳೂ ಇರುತ್ತವೆ. ಆದರೆ, ‘ಗ್ರಾಮಾಯಣ’ ನಮ್ಮತನವನ್ನು ಹೊತ್ತ ಅನುಭವದ ಕತೆಯಾಗಿ ಎಚ್ಚರಿಸುತ್ತದೆ, ಅಪ್ಪಿಕೊಳ್ಳುತ್ತದೆ.

ಆರ್‌.ಕೇಶವಮೂರ್ತಿ

ಕೆಲವು ಕೇಳಿಸಿಕೊಂಡ ಕತೆಗಳು, ಇನ್ನೂ ಕೆಲವು ಓದಿದ ಕತೆಗಳು, ಇವುಗಳ ನಡುವೆ ತಿಳಿದ ಕತೆಗಳೂ ಇರುತ್ತವೆ. ಆದರೆ, ‘ಗ್ರಾಮಾಯಣ’ ನಮ್ಮತನವನ್ನು ಹೊತ್ತ ಅನುಭವದ ಕತೆಯಾಗಿ ಎಚ್ಚರಿಸುತ್ತದೆ, ಅಪ್ಪಿಕೊಳ್ಳುತ್ತದೆ, ದೂರ ತಳ್ಳುತ್ತದೆ, ದ್ವೇಷಿಸುತ್ತದೆ, ಪ್ರೀತಿಸುತ್ತದೆ, ಸ್ವಾಭಿಮಾನದ ಕಿಡಿಯಾಗಿಯೂ ಬದಲಾಯಿಸುತ್ತದೆ. ಕೊನೆಗೆ ಮನುಷ್ಯ- ಮನುಷ್ಯನಾಗಿರಬೇಕೆಂದು ಕಿವಿ ಹಿಂಡುತ್ತದೆ. ಈ ಕತೆಯನ್ನು ಹೆಕ್ಕಿ ತೆಗೆದಿರುವ ನಿರ್ದೇಶಕ ದೇವನೂರು ಚಂದ್ರು ಅವರು ಊರು-ಕೇರಿಯಲ್ಲಿ ಗಾಢವಾಗಿಯೇ ಸಂಚರಿಸಿದ್ದಾರೆಂಬುದು ಚಿತ್ರದ ಪ್ರತಿ ದೃಶ್ಯವೂ ಹೇಳುತ್ತದೆ. ಸಿಕ್ಸ್‌ ಸೆನ್ಸ್‌ ಸೀನ, ಕುಸುಮ, ಕರಿಬೆಕ್ಕು, ಸ್ವಾಮಿ, ಐದು ರೂಪಾಯಿ ಡಾಕ್ಟ್ರು, ನೀಟ್‌ ನವೀನ... ಹೀಗೆ ಯಾವ ಪಾತ್ರಧಾರಿಯೂ ನೋಡುವಾಗ ಅಪರಿತವೆನಿಸಲ್ಲ. ನಮ್ಮ ನಡುವಿನ ವ್ಯಕ್ತಿ-ವ್ಯಕ್ತಿತ್ವಗಳೇ ತೆರೆ ಮೇಲೆ ಮೂಡಿದಂತೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಾತಿ, ಹಳ್ಳಿ ರಾಜಕೀಯದ ಮೇಲಾಟಗಳು, ಕುಡಿಯಲು ನೀರಿಲ್ಲದ ಊರಲ್ಲಿ ಎತ್ತರದ ದೇವಸ್ಥಾನ, ಪ್ರತಿಭೆ, ಜಾತಿ ಸಂಘಗಳ ನಿರ್ಮಾಣ, ರೈತರ ಜಮೀನು ಕಿತ್ತುಕೊಳ್ಳುವ ಅಭಿವೃದ್ಧಿಯ, ಒಬ್ಬ ದಲ್ಲಾಳಿ, ಅವನ ಮೇಲೊಬ್ಬ ಶಾಸಕ, ಈತನ ಮೇಲೊಬ್ಬ ಹೈಕಮ್ಯಾಂಡ್‌, ಇವರೆಲ್ಲರ ಕೆಳಗೆ ಬದುಕುತ್ತಿರುವ ಹಳ್ಳಿಯಲ್ಲಿ ಮನಸ್ಸಿಗೆ ಮುಟ್ಟೋ ಪ್ರೇಮ ಕತೆಯೂ ಇದೆ. ಮೈ ನರಿವೇಳಿಸೋ ದೇವರ ಆಟ, ಹಬ್ಬದ ಸಂಭ್ರಮವೂ ಇದೆ. ಹೀಗಾಗಿ ಕಾಲುದಾರಿಗಳಿಗೆ ಅಂಟಿಕೊಂಡಿರುವ ದೇವಪುರದ ಕೇರಿಯಲ್ಲಿ ಸಂಭ್ರಮ, ಸಂಘರ್ಷ, ಸಂಕಷ್ಟಗಳಿಗೆ ಕನ್ನಡಿ ಹಿಡಿಯುತ್ತಾ ಹೋಗುವ ‘ಗ್ರಾಮಾಯಣ’ ನೆಲಮೂಲದ ಕಲ್ಚರಲ್‌ ಕತೆಯಾಗುತ್ತದೆ.

ದೇವರನ್ನು ಶಪಿಸುತ್ತಾ ಊರಾಚೆ ಕಳಿಸೋ ಹಬ್ಬ, ಚಿತೆ ಬಳಿ ನಿಂತು ‘ಬರೋದಾದ್ರೆ ಒಳ್ಳೆಯದಕ್ಕೆ ಬಾ’ ಎಂದೇಳುವ ದೃಶ್ಯ, ಜಮೀನು ಉಳಿಸಿಕೊಳ್ಳುವ ವೃದ್ಧನ ತಾಪತ್ರೆಗಳನ್ನು ಭಾವುಕ ನೆಲೆಯಲ್ಲಿ ಹೇಳುವ ನಿರ್ದೇಶಕರು, ನಾಯಕಿ ಪಾತ್ರವನ್ನು ಮರ ಸುತ್ತೋ ಬಳ್ಳಿಯನ್ನಾಗಿಸಿದೆ ಆಕೆಯನ್ನು ಕೃಷಿಕಳನ್ನಾಗಿಸಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುತ್ತಾ, ನಡು ರಾತ್ರಿ ತೋಟಕ್ಕೆ ನೀರು ಹರಿಸುತ್ತಾ, ಹಸುಗಳನ್ನು ಮೇಯಿಸುತ್ತಾ ನೆಲದೊಡತಿಯಾಗುವ ಕುಸುಮ ಪಾತ್ರಧಾರಿ ಮೇಘಾ ಶೆಟ್ಟಿ, ನಿರ್ದೇಶಕ ಪಾ. ರಂಜಿತ್‌ ಅವರ ಚಿತ್ರಗಳಲ್ಲಿನ ‘ಗಟ್ಟಿ’ಗಿತ್ತಿಯಂತೆ ಕಾಣುತ್ತಾಳೆ. ಸ್ವಾಮಿಯಾಗಿ ಗೋಪಾಲಕೃಷ್ಣ ದೇಶಪಾಂಡೆ ಅವರ ಪಾತ್ರಾಭಿನಯ, ಡೈಲಾಗ್‌ ಡೆಲವರಿ, ಅವರ ಮ್ಯಾನರಿಸಂ ಚಿತ್ರಕ್ಕೆ ಅಗ್ರಸ್ಥಾನ ಕಲ್ಪಿಸಿದೆ. ವಿನಯ್‌ ರಾಜ್‌ಕುಮಾರ್‌ ಕಲಾವಿದನಾಗಿ ಮತ್ತಷ್ಟು ಮಾಗಿದ್ದು, ಪಾತ್ರಕ್ಕೆ ಜೀವ ತುಂಬುವಲ್ಲಿ ಅವರು ‘ರಾಜಕುಮಾರ’ನೇ ಸರಿ. ತಾಯಿ ಪಾತ್ರದಲ್ಲಿ ಅಪರ್ಣಾ ವಸ್ತಾರೆ ಅವರ ಒಡಲ ಧ್ವನಿ ಬಣ್ಣಿಸಲು ಪದಗಳ ಅಗತ್ಯವಿಲ್ಲ. ಕರಿಬೆಕ್ಕು ಆಗಿ ಲೂಸ್‌ಮಾದ ಯೋಗೀಶ್ ಅವರದ್ದು ಸಪರೇಟ್‌ ದುನಿಯಾ. ರಮಣಿ ಪಾತ್ರಧಾರಿ ಜಹಂಗೀರ್‌ ಅವರನ್ನೂ ಮರೆಯುವಂತಿಲ್ಲ.

ಚಿತ್ರ: ಗ್ರಾಮಾಯಣ

ತಾರಾಗಣ: ವಿನಯ್‌ ರಾಜ್‌ಕುಮಾರ್‌, ಮೇಘಾ ಶೆಟ್ಟಿ, ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್‌ ಕುಮಾರ್‌, ಲೂಸ್‌ಮಾದ ಯೋಗಿ, ಅಪರ್ಣಾ ವಸ್ತಾರೆ, ಅರುಣ್‌ ಸಾಗರ್‌, ಜಹಂಗೀರ್‌

ನಿರ್ದೇಶನ: ದೇವನೂರು ಚಂದ್ರು

ರೇಟಿಂಗ್‌ : 3

ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ, ಸಂತೋಷ್‌ ರೈ ಪಾತಾಜೆ ಕ್ಯಾಮೆರಾ ಕಣ್ಣು, ಡಿಫರೆಂಟ್‌ ಡ್ಯಾನಿ, ಚೇತನ್‌ ಡಿಸೋಜಾ, ಅರ್ಜುನ್‌ ರಾಜ್‌ ಸಾಹಸ, ಮುರಳಿ- ಧನಂಜಯ್ ಕೊರಿಯೋಗ್ರಫಿ ‘ಗ್ರಾಮಾಯಣ’ ಕತೆ ನಡೆಸೋ ಸಾರಥಿಗಳು. ಮೊದಲಾರ್ಧದಲ್ಲಿರುವ ಪೋರ್ಸ್‌, ವಿರಾಮದ ನಂತರವೂ ಮುಂದುವರಿಯಬೇಕಿತ್ತು ಅನಿಸೋದು ಬಿಟ್ಟರೆ ಒಂದೊಳ್ಳೆ ಚಿತ್ರ ನೋಡಿದ ಸಮಾಧಾನವಂತೂ ‘ಗ್ರಾಮಾಯಣ’ದಿಂದ ಲಭ್ಯವಾಗುತ್ತದೆ.