ಯಾರು ಕೆಟ್ಟ ಕೆಲಸ ಮಾಡುತ್ತಿರುತ್ತಾರೋ ಇದ್ದಕ್ಕಿದ್ದಂತೆ ಅವರ ಸಾವು ಸಂಭವಿಸುತ್ತಿರುತ್ತದೆ. ಯಾರು ಕೊಲೆ ಮಾಡುತ್ತಿರುವವರು ಎಂದು ಕುತೂಹಲದಿಂದ ಕಾಯುವಷ್ಟರಲ್ಲಿಯೇ ಒಬ್ಬ ವ್ಯಕ್ತಿ ಆ ಕೊಲೆ ಮಾಡುತ್ತಿರುವುದು ತಾನೇ ಎಂದು ಸರೆಂಡರ್‌ ಆಗಿ ಬಿಡುತ್ತಾನೆ.

ರಾಜೇಶ್

ಯಾರು ಕೆಟ್ಟ ಕೆಲಸ ಮಾಡುತ್ತಿರುತ್ತಾರೋ ಇದ್ದಕ್ಕಿದ್ದಂತೆ ಅವರ ಸಾವು ಸಂಭವಿಸುತ್ತಿರುತ್ತದೆ. ಯಾರು ಕೊಲೆ ಮಾಡುತ್ತಿರುವವರು ಎಂದು ಕುತೂಹಲದಿಂದ ಕಾಯುವಷ್ಟರಲ್ಲಿಯೇ ಒಬ್ಬ ವ್ಯಕ್ತಿ ಆ ಕೊಲೆ ಮಾಡುತ್ತಿರುವುದು ತಾನೇ ಎಂದು ಸರೆಂಡರ್‌ ಆಗಿ ಬಿಡುತ್ತಾನೆ. ಅಲ್ಲಿಂದ ಮುಂದೆ ಕತೆಯ ಒಂದೊಂದೇ ಪದರಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಒಂದೊಂದು ಹಂತದಲ್ಲಿ ಒಂದೊಂದೇ ಸತ್ಯಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಕೊನೆಗೊಂದು ದೊಡ್ಡ ಸತ್ಯ ಅನಾವರಣವಾಗುವಷ್ಟರಲ್ಲಿ ಹಿಂದೆ ಆಗಿದ್ದನ್ನು ಜನ ನೋಡುವ ರೀತಿಯೇ ಬದಲಾಗುತ್ತದೆ.

ಅಷ್ಟರಮಟ್ಟಿಗೆ ನಿರ್ದೇಶಕರು ಬಹಳ ಜಾಣ್ಮೆಯಿಂದ ಚಿತ್ರಕಥೆ ಬರೆದಿದ್ದಾರೆ. ಈರುಳ್ಳಿ ಸಿಪ್ಪೆ ಸುಳಿದಂತೆ ಒಂದೊಂದು ಪದರ ತೆರೆಯುತ್ತಾರೆ. ಪ್ರತೀ ತಿರುವಲ್ಲೂ ಅಚ್ಚರಿಯನ್ನಿಟ್ಟಿದ್ದಾರೆ. ಜೊತೆಗೆ ಒಂಚೂರು ನವಿರು ಪ್ರೇಮ, ಅಲ್ಲಲ್ಲಿ ತಾಯಿ ಪ್ರೇಮವನ್ನು, ಕೊಂಚ ತಂಗಿ ಸೆಂಟಿಮೆಂಟನ್ನು ರುಚಿಗೆ ತಕ್ಕಷ್ಟು ತಂದಿದ್ದಾರೆ. ಎಲ್ಲವನ್ನೂ ಹದವಾಗಿ ಬೆರೆಸಿ ಈ ಚಿತ್ರಕಥೆ ಪ್ರಧಾನ ಸಿನಿಮಾ ರೂಪಿಸಿದ್ದಾರೆ. ಬಾಲ್ಯದ ಸಂಕಷ್ಟಗಳು ಮನುಷ್ಯನನ್ನು ಮೃಗವಾಗಿಸುವ ರೀತಿ, ಪ್ರೀತಿ ಸಿಕ್ಕಾಗ ಕೋಪ ಕರಗುವ ರೀತಿ, ತ್ಯಾಗ ಕಡೆಗೂ ಅಮರವಾಗುವ ರೀತಿ ಎಲ್ಲವನ್ನೂ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಚಿತ್ರ: ರಾಧೇಯ

ನಿರ್ದೇಶನ: ವೇದ್‌ ಗುರು
ತಾರಾಗಣ: ಅಜೇಯ್‌ ರಾವ್‌, ಸೋನಲ್ ಮೊಂತೆರೋ, ಧನ್ಯಾ ಬಾಲಕೃಷ್ಣ, ಗಿರಿ ಶಿವಣ್ಣ
ರೇಟಿಂಗ್: 3

ಅಜೇಯ್‌ ರಾವ್‌ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಮಿಯಾಗಿಯೂ ಕ್ರೌರ್ಯ ಧರಿಸಿರುವವನಾಗಿಯೂ ಸೊಗಸಾಗಿ ನಟಿಸಿದ್ದಾರೆ. ಧನ್ಯಾ ಬಾಲಕೃಷ್ಣ, ಸೋನಲ್‌ ಮೊಂತೆರೋ, ಗಿರಿ ಶಿ‍ವಣ್ಣ ಕತೆಯನ್ನು ಮುಂದಕ್ಕೆ ತೆಗೆದುಕೊಂಡುಹೋಗುವಲ್ಲಿ ನೆರವಾಗಿದ್ದಾರೆ. ರಾಧೇಯ ಎಂಬುದು ಕರ್ಣನ ಮತ್ತೊಂದು ಹೆಸರು. ತ್ಯಾಗಕ್ಕೆ ರೂಪಕವಾಗಿ ನಿರ್ದೇಶಕರು ಯೋಚಿಸಿ ಈ ಹೆಸರಿಟ್ಟಿದ್ದಾರೆ. ತ್ಯಾಗ ದೊಡ್ಡದು, ಸಂಬಂಧವೇ ದೊಡ್ಡದು ಎಂದು ಸಾರುತ್ತಾ ಕತೆ ಮುಗಿದುಹೋಗುತ್ತದೆ. ಒಳ್ಳೆಯತನಕ್ಕೆ ಜಯವಾಗುತ್ತದೆ. ನಿಟ್ಟುಸಿರೊಂದು ಉಳಿದುಬಿಡುತ್ತದೆ.