ಭಾರತದಲ್ಲಿ ಐಫೋನ್‌ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಜನರು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಐಫೋನ್‌ ಖರೀದಿಗೆ ಖರ್ಚು ಮಾಡ್ತಾರೆ. ಈಗ ಬಿಡುಗಡೆಯಾಗಿರುವ ಹೊಸ ಫೋನ್‌ ಖರೀದಿಗೆ ದುಬೈಗೆ ಹೋಗ್ತಿದ್ದಾರೆ ಜನ.

ಭಾರತೀಯರಿಗೆ ಐಫೋನ್ ಕ್ರೇಜ್ ಹೊಸತಲ್ಲ. ಹೊಸ ಮಾಡೆಲ್ ಬಿಡುಗಡೆಯಾದ್ರೆ ಸಾಕು, ಅದನ್ನು ಖರೀದಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿರುತ್ವೆ. ಕೆಲವರು ಭಾರತದಲ್ಲೇ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಫೋನ್ ಖರೀದಿಸಿದ್ರೆ ಮತ್ತೆ ಕೆಲವರು ದುಬೈಗೇ ಹಾರ್ತಿದ್ದಾರೆ. ಹಾಗಾದ್ರೆ ಭಾರತಕ್ಕಿಂತ ದುಬೈನಲ್ಲಿ ಐಫೋನ್ ಎಷ್ಟು ಅಗ್ಗ? ಎಷ್ಟು ಉಳಿಸ್ಬಹುದು ಎಂಬ ಮಾಹಿತಿ ಇಲ್ಲಿದೆ.

ದುಬೈನಲ್ಲಿ iPhone 18 Pro ಬೆಲೆ ಎಷ್ಟು?

ಐಫೋನ್ 18 ಪ್ರೊ (iPhone 18 Pro) ಮತ್ತು ಐಫೋನ್ 18 ಪ್ರೊ ಮ್ಯಾಕ್ಸ್ (iPhone 18 Pro Max) ಮಾರಾಟ ಸೆಪ್ಟೆಂಬರ್ 18ರಿಂದ ಶುರುವಾಗಿದೆ. ದುಬೈನಲ್ಲಿ ಐಫೋನ್‌ 18 ಪ್ರೋ ಬೆಲೆ 5,099 ದಿರ್ಹಮ್ನಿಂದ ಆರಂಭವಾಗುತ್ತದೆ. ಭಾರತೀಯ ರೂಪಾಯಿಯಲ್ಲಿ ಇದು ಸುಮಾರು 1.33 ಲಕ್ಷ ರೂಪಾಯಿ. ಇನ್ನು ಐಫೋನ್‌ 18 ಪ್ರೋ ಮ್ಯಾಕ್ಸ್ ಬೆಲೆ 5,499 ದಿರ್ಹಮ್, ಅಂದರೆ ಸುಮಾರು 1.43 ಲಕ್ಷ ರೂಪಾಯಿ. ಎರಡೂ ಫೋನ್ಗಳು 256ಜಿಬಿ, 512ಜಿಬಿ, 1ಟಿಬಿ ಮತ್ತು 2ಟಿಬಿ ಸ್ಟೋರೇಜ್ ಆಯ್ಕೆಗಳಲ್ಲಿ ಸಿಗುತ್ತವೆ.

ಭಾರತದಲ್ಲಿ ಎಷ್ಟು ಬೆಲೆ?

ಐಫೋನ್‌ 18 ಪ್ರೋನ 256 ಜಿಬಿ ಮಾಡೆಲ್ ಆರಂಭಿಕ ಬೆಲೆ ಭಾರತದಲ್ಲಿ 1,64,900 ರೂಪಾಯಿ. ಐಫೋನ್ 18 ಪ್ರೋ ಮ್ಯಾಕ್ಸ್ ಬೆಲೆ 1,79,900 ರೂಪಾಯಿಯಿಂದ ಶುರುವಾಗುತ್ತದೆ. ಅಂದರೆ ಆರಂಭಿಕ ಬೆಲೆಯನ್ನೇ ಹೋಲಿಕೆ ಮಾಡಿದರೆ, ಐಫೋನ್‌ 18 ಪ್ರೋ ದುಬೈನಲ್ಲಿ ಸುಮಾರು 33 ಸಾವಿರ ರೂಪಾಯಿ ಅಗ್ಗ. ಐಫೋನ್‌ 18 ಪ್ರೋ ಮ್ಯಾಕ್ಸ್ ನಲ್ಲಿ ಸುಮಾರು 36 ರಿಂದ 38 ಸಾವಿರ ರೂಪಾಯಿವರೆಗೆ ವ್ಯತ್ಯಾಸ ಕಾಣಿಸುತ್ತದೆ.

ದುಬೈಗೆ ಹೋಗಿ ಖರೀದಿಸಿದರೆ ನಿಜವಾಗಿಯೂ ಲಾಭವೇ?

ಭಾರತದಿಂದ ದುಬೈಗೆ ಹೋಗಬೇಕೆಂದರೆ ವಿಮಾನ ಟಿಕೆಟ್, ವೀಸಾ, ಅಲ್ಲಿನ ವಾಸ್ತವ್ಯ ಮತ್ತು ಊಟ ಸೇರಿದಂತೆ ಹೆಚ್ಚುವರಿ ಖರ್ಚು ಬರುತ್ತೆ. ಹಾಗಿದ್ದರೂ ಕೆಲವು ಭಾರತೀಯ ಖರೀದಿದಾರರು ದುಬೈಯಿಂದಲೇ ಐಫೋನ್ ಖರೀದಿಸುವುದು ತಮಗೆ ಲಾಭದಾಯಕವಾಗಿದೆ ಎಂದು ಹೇಳಿದ್ದಾರೆ. ಮುಂಬೈನ ಅಮನ್ ಸೊಲಂಕಿ ಎಂಬ ಖರೀದಿದಾರರು ವಿಮಾನ ಟಿಕೆಟ್ ಮತ್ತು ವೀಸಾ ಖರ್ಚನ್ನೂ ಸೇರಿಸಿದ ನಂತರವೂ ದುಬೈಯಿಂದ ಫೋನ್ ಖರೀದಿಸುವುದು ಭಾರತಕ್ಕಿಂತ ಅಗ್ಗವಾಗಿದೆ ಎಂದಿದ್ದಾರೆ. ಅವರು ತಮ್ಮ ಕುಟುಂಬಕ್ಕಾಗಿ ಒಟ್ಟು ಮೂರು ಐಫೋನ್‌ 18 ಪ್ರೋ ಮ್ಯಾಕ್ಸ್ ಫೋನ್ಗಳನ್ನು ಖರೀದಿಸುತ್ತಿರುವುದರಿಂದ ಬೆಲೆ ವ್ಯತ್ಯಾಸದಿಂದ ಆಗುವ ಉಳಿತಾಯ ಇನ್ನಷ್ಟು ಹೆಚ್ಚಾಗುತ್ತದೆ ಎಂದಿದ್ದಾರೆ.

ಇನ್ನು ಕೇರಳದ ಮೊಹಮ್ಮದ್ ಸಯ್ಯದ್ ಅವರು ಕುಟುಂಬವನ್ನು ಭೇಟಿಯಾಗಲು ಮೊದಲೇ ದುಬೈಗೆ ಹೋಗಿದ್ದರು. ಭಾರತ ಮತ್ತು ದುಬೈ ಬೆಲೆಗಳನ್ನು ಹೋಲಿಕೆ ಮಾಡಿದ ಬಳಿಕ ಅಲ್ಲಿಂದಲೇ ಹೊಸ ಐಫೋನ್ ಖರೀದಿಸಲು ನಿರ್ಧರಿಸಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ ಸುಮಾರು 20 ರಿಂದ 30 ಸಾವಿರ ರೂಪಾಯಿ ಅವರಿಗೆ ಉಳಿತಾಯವಾಗುತ್ತಿದೆ.

ಹೀಗಾಗಿ ಒಂದು ಫೋನ್ ಖರೀದಿಸಲು ಮಾತ್ರ ಭಾರತದಿಂದ ದುಬೈಗೆ ಹೋಗುವುದಾದರೆ, ವಿಮಾನ, ವೀಸಾ ಮತ್ತು ವಾಸ್ತವ್ಯದ ಖರ್ಚುಗಳನ್ನು ಮೊದಲು ಲೆಕ್ಕ ಹಾಕಬೇಕು. ಆದರೆ ಒಂದಕ್ಕಿಂತ ಹೆಚ್ಚು ಫೋನ್ ಖರೀದಿಸುತ್ತಿದ್ದರೆ ಅಥವಾ ಈಗಾಗಲೇ ದುಬೈಗೆ ಹೋಗುವ ಪ್ಲಾನ್ ಇದ್ದರೆ, ಬೆಲೆ ವ್ಯತ್ಯಾಸದಿಂದ ಉಳಿತಾಯವಾಗುವ ಸಾಧ್ಯತೆ ಹೆಚ್ಚು.