ಇತ್ತೀಚಿನ ದಿನಗಳಲ್ಲಿ ಯುವಜನರಿಗೆ ವರ್ಕ್‌ ಫ್ರಂ ಹೋಮ್ ಅಂದರೆ ಸ್ವರ್ಗವೆಂದೇ ಭಾವಿಸುತ್ತಾರೆ. ಬೆಂಗಳೂರಿನಂತಹ ಟ್ರಾಫಿಕ್ ಜಾಮ್ ಇರುವ ನಗರದಲ್ಲಿ ಟ್ರಾಫಿಕ್‌ನಲ್ಲಿ ಅರ್ಧ ಸಮಯ ಕಳೆಯುವುದು ಬೇಡವೆಂದುಕೊಳ್ಳುತ್ತಾರೆ. ಆದರೆ, ವರ್ಕ್ ಫ್ರಂ ಹೋಮ್ ಮಾಡುತ್ತಾ ನರಕಯಾತನೆ ಅನುಭವಿಸಿರುವುದನ್ನು ಆತನ ಬಾಯಲ್ಲೇ ಕೇಳಿ.

ಕೊರೊನಾ ನಂತರದ ದಿನಗಳಲ್ಲಿ 'ವರ್ಕ್ ಫ್ರಂ ಹೋಮ್' (WFH) ಎಂಬುದು ಬಹುತೇಕ ಐಟಿ ಮತ್ತು ಕಾರ್ಪೊರೇಟ್ ಉದ್ಯೋಗಿಗಳ ಜೀವನದ ಭಾಗವಾಗಿಬಿಟ್ಟಿದೆ. ಆಫೀಸ್‌ಗೆ ಹೋಗುವ ಕಿರಿಕಿರಿ ಇಲ್ಲ, ಟ್ರಾಫಿಕ್ ಸಮಸ್ಯೆ ಇಲ್ಲ ಎಂದು ಸಂಭ್ರಮಿಸುವವರ ನಡುವೆ, ಮನೆಯಲ್ಲೇ ಕುಳಿತು ಕೆಲಸ ಮಾಡುವುದು ಒಂಟಿತನಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬ ಸತ್ಯವನ್ನೂ ಅನೇಕರು ಒಪ್ಪಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ 'ನಮಾನ್' ಎಂಬ ಯುವಕ ಹಂಚಿಕೊಂಡ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉಳಿದ ಸಮಯ ಯಾವುದಕ್ಕೆ ಬಂತು?

ನಮಾನ್ ತನ್ನ ವಿಡಿಯೋದಲ್ಲಿ ವರ್ಕ್ ಫ್ರಂ ಹೋಮ್‌ನಿಂದ ತಾನು ಅನುಭವಿಸುತ್ತಿರುವ ಬೇಸರ ಮತ್ತು ಒಂಟಿತನದ ಬಗ್ಗೆ ಬಹಳ ಮಾರ್ಮಿಕವಾಗಿ ಮಾತನಾಡಿದ್ದಾನೆ. "ಒಂದು ಕಾಲದಲ್ಲಿ ಮನೆಯಿಂದಲೇ ಕೆಲಸ ಮಾಡುವುದು ನನ್ನ ಪಾಲಿನ ದೊಡ್ಡ ಕನಸಾಗಿತ್ತು. ಆಫೀಸ್‌ಗೆ ಹೋಗಿ ಬರುವ ಸಮಯ ಉಳಿಯುತ್ತದೆ ಎಂದು ಖುಷಿ ಪಟ್ಟಿದ್ದೆ. ಆದರೆ, ಈಗ ಒಂದು ತಿಂಗಳಿನಿಂದ ಯಾರೊಂದಿಗೂ ನೇರವಾಗಿ ಮಾತನಾಡಿಲ್ಲ. ಆಫೀಸ್‌ನ ಸಣ್ಣಪುಟ್ಟ ಹರಟೆ, ಸಹೋದ್ಯೋಗಿಗಳ ಜೊತೆಗಿನ ಒಡನಾಟ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಸಮಯ ಉಳಿದಿರಬಹುದು, ಆದರೆ ಜೀವನದಲ್ಲಿ ಒಂದು ರೀತಿಯ ವಿಚಿತ್ರವಾದ ಶೂನ್ಯ ಕಾಡುತ್ತಿದೆ" ಎಂದು ಆತ ಹೇಳಿಕೊಂಡಿದ್ದಾನೆ.

ಅತೃಪ್ತಿಯ ಸುಳಿಯಲ್ಲಿ ಮನುಷ್ಯ:

ನಮಾನ್ ಮನುಷ್ಯನ ಮನಸ್ಥಿತಿಯ ಬಗ್ಗೆಯೂ ಬೆಳಕು ಚೆಲ್ಲಿದ್ದಾನೆ. 'ನಮಗೆ ಕೆಲಸ ಇಲ್ಲದಿದ್ದಾಗ ಒಂದು ಕೆಲಸ ಸಿಕ್ಕರೆ ಸಾಕು ಎನ್ನಿಸುತ್ತದೆ. ಕೆಲಸ ಸಿಕ್ಕ ಮೇಲೆ ಸ್ವಾತಂತ್ರ್ಯ ಬೇಕು ಎಂದು ಹಂಬಲಿಸುತ್ತೇವೆ. ಪ್ರತಿಯೊಂದಕ್ಕೂ ಮೇಲಾಧಿಕಾರಿಗಳ ಅನುಮತಿ ಪಡೆಯಬೇಕಾದಾಗ ನಮಗೆ ಬೇಸರವಾಗುತ್ತದೆ. ನಾವು ಇರುವ ಸ್ಥಿತಿಯಲ್ಲಿ ನಾವೆಂದು ತೃಪ್ತರಾಗಿರುವುದಿಲ್ಲ' ಎಂದು ಆತ ವಿಶ್ಲೇಷಿಸಿದ್ದಾನೆ. ಗುರಿಗಳ ಬೆನ್ನತ್ತಿ ಓಡುವ ಈ ಹಾದಿಯಲ್ಲಿ ನಾವು ಪ್ರಕ್ರಿಯೆಯನ್ನೇ ಮರೆತುಬಿಡುತ್ತಿದ್ದೇವೆ ಎಂಬುದು ಆತನ ಅಭಿಪ್ರಾಯ.

ಪಯಣವನ್ನು ಆನಂದಿಸಿ:

ವಿಡಿಯೋದ ಅಂತ್ಯದಲ್ಲಿ ನಮಾನ್ ಒಂದು ಉತ್ತಮ ಸಂದೇಶವನ್ನೂ ನೀಡಿದ್ದಾನೆ. "ನಾವು ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸುತ್ತೇವೆ. ಆದರೆ, ನಾವು ತಲುಪುವ ಗುರಿಯಷ್ಟೇ ನಾವು ಕ್ರಮಿಸುವ ಹಾದಿಯೂ ಮುಖ್ಯ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲಿದ್ದರೂ ಆ ಕ್ಷಣವನ್ನು ಅನುಭವಿಸಲು ಕಲಿಯಿರಿ" ಎಂದು ಸಲಹೆ ನೀಡಿದ್ದಾನೆ.

ನೆಟ್ಟಿಗರ ಪ್ರತಿಕ್ರಿಯೆ:

ಈ ವಿಡಿಯೋಗೆ ಸಾವಿರಾರು ಜನರು ಸಹಮತ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, "ಆಫೀಸ್‌ಗೆ ಹೋಗುವುದು ಕೇವಲ ಕೆಲಸಕ್ಕಾಗಿ ಅಲ್ಲ, ಅದು ಸಾಮಾಜಿಕ ಬದುಕಿನ ಭಾಗವೂ ಹೌದು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ತಮಾಷೆಯಾಗಿ, "ಮ್ಯಾನೇಜರ್‌ಗಳು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡಲು ಶುರು ಮಾಡಿದಾಗ ಇಂತಹ ಜ್ಞಾನೋದಯವಾಗುತ್ತದೆ' ಎಂದು ಕಾಮೆಂಟ್ ಮಾಡುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಟ್ಟಿನಲ್ಲಿ, ಆಧುನಿಕ ಕೆಲಸದ ಸಂಸ್ಕೃತಿಯು ಮನುಷ್ಯನನ್ನು ಹೇಗೆ ಮಾನಸಿಕವಾಗಿ ಪ್ರತ್ಯೇಕಿಸುತ್ತಿದೆ ಎಂಬುದಕ್ಕೆ ಈ ವಿಡಿಯೋ ಕನ್ನಡಿ ಹಿಡಿದಿದೆ.

View post on Instagram