ಓದಬೇಕು ಎಂಬ ಹಂಬಲವಿದ್ದರೆ ಎಂತಹ ಕಷ್ಟವನ್ನಾದರೂ ಎದುರಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ 7 ವರ್ಷದ ಬಾಲಕಿ ರಾಗಿಣಿ ಸಾಕ್ಷಿಯಾಗಿದ್ದಾಳೆ. ಒಂದು ಕಾಲು ಕಳೆದುಕೊಂಡಿದ್ದರೂ ಶಿಕ್ಷಣದ ಮೇಲಿನ ಆಸೆಯನ್ನು ಕೈಬಿಡಲಿಲ್ಲ.
ಓದಬೇಕು ಎಂಬ ಹಂಬಲವಿದ್ದರೆ ಎಂತಹ ಕಷ್ಟವನ್ನಾದರೂ ಎದುರಿಸಬಹುದು ಎಂಬುದಕ್ಕೆ ಉತ್ತರ ಪ್ರದೇಶದ 7 ವರ್ಷದ ಬಾಲಕಿ ರಾಗಿಣಿ ಸಾಕ್ಷಿಯಾಗಿದ್ದಾಳೆ. ಒಂದು ಕಾಲು ಕಳೆದುಕೊಂಡಿದ್ದರೂ ಶಿಕ್ಷಣದ ಮೇಲಿನ ಆಸೆಯನ್ನು ಕೈಬಿಡದ ಈ ಪುಟ್ಟ ಬಾಲಕಿ ಪ್ರತಿದಿನ ಸುಮಾರು 400 ಮೀಟರ್ ದೂರವನ್ನು ಒಂದೇ ಕಾಲಿನಲ್ಲಿ ಜಿಗಿಯುತ್ತಾ ಶಾಲೆಗೆ ತೆರಳುತ್ತಿದ್ದಳು. ಇದೀಗ ಆಕೆಯ ಮನಕಲಕುವ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ಗಮನವನ್ನೂ ಸೆಳೆದಿದೆ.
6 ತಿಂಗಳ ಮಗುವಾಗಿದ್ದಾಗಲೇ ಕಾಲಿಗೆ ಗಂಭೀರ ಗಾಯ
ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ರಾಗಿಣಿ ಕೇವಲ ಆರು ತಿಂಗಳ ಮಗುವಾಗಿದ್ದಾಗ ಅಪಘಾತವೊಂದರಲ್ಲಿ ಒಂದು ಕಾಲಿಗೆ ತೀವ್ರವಾಗಿ ಗಾಯವಾಗಿತ್ತು. ಅಪಘಾತದ ಬಳಿಕ ಔಷಧಿ ಹಾಗೂ ಚಿಕಿತ್ಸೆಗಾಗಿ ರಾಗಿಣಿಯನ್ನು ತಾಯಿ ಬಬಿತಾ ದೇವಿ ಹಲವು ಸ್ಥಳಗಳಿಗೆ ಕರೆದೊಯ್ದಿದ್ದರು. ಆದರೆ ಎಷ್ಟೇ ಚಿಕಿತ್ಸೆ ನೀಡಿದರೂ ಆಕೆಯ ಕಾಲನ್ನು ಉಳಿಸಲು ಸಾಧ್ಯವಾಗಲಿಲ್ಲ. “ನಾವು ಅವಳಿಗೆ ಹಲವು ಸ್ಥಳಗಳಲ್ಲಿ ಚಿಕಿತ್ಸೆ ನೀಡಿದ್ದೇವೆ. ಆದರೆ ಕಾಲನ್ನು ಸರಿ ಮಾಡಲು ಸಾಧ್ಯವಾಗಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ನಮ್ಮ ಬಳಿ ಸಾಕಷ್ಟು ಹಣವಿರಲಿಲ್ಲ” ಎಂದು ರಾಗಿಣಿಯ ತಾಯಿ ಬಬಿತಾ ದೇವಿ ನೋವು ಹಂಚಿಕೊಂಡಿದ್ದಾರೆ.
‘ನನಗೂ ಓದಬೇಕು’ ಎಂದು ಹಠ ಹಿಡಿದ ಬಾಲಕಿ
ಕಾಲು ಕಳೆದುಕೊಂಡರೂ ರಾಗಿಣಿಯ ಓದುವ ಆಸೆ ಮಾತ್ರ ಕಡಿಮೆಯಾಗಲಿಲ್ಲ. ತನ್ನ ಮನೆಯ ಮುಂದೆ ಅಕ್ಕ-ಪಕ್ಕದ ಮನೆಗಳ ಮಕ್ಕಳು ಸ್ಕೂಲ್ ಬ್ಯಾಗ್ ಹಿಡಿದು ಶಾಲೆಗೆ ಹೋಗುವುದನ್ನು ನೋಡುತ್ತಿದ್ದ ರಾಗಿಣಿಗೆ ಅವರೊಂದಿಗೆ ಸೇರಬೇಕೆಂಬ ಆಸೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಮಕ್ಕಳು ಬ್ಯಾಗ್ ಹಿಡಿದು ಮನೆಯ ಮುಂದೆ ಶಾಲೆಗೆ ಹೋಗುವುದನ್ನು ನೋಡಿದಾಗ ರಾಗಿಣಿ ಅಳಲು ಪ್ರಾರಂಭಿಸುತ್ತಾಳಂತೆ. “ನನಗೂ ಓದಬೇಕು” ಎಂದು ಹೇಳುತ್ತಾಳೆ ಎಂದು ತಾಯಿ ಬಬಿತಾ ತಿಳಿಸಿದ್ದಾರೆ. ಕೊನೆಗೂ ರಾಗಿಣಿ ಶಾಲೆಗೆ ಹೋಗಲು ಆರಂಭಿಸಿದಳು. ಆದರೆ ಶಾಲೆ ಮನೆಯ ಬಳಿಯೇ ಇದ್ದರೂ, ಆಕೆಗೆ ಶಾಲೆಗೆ ಹೋಗುವುದೆ ದೊಡ್ಡ ಸವಾಲಾಗಿತ್ತು.
ಒಂದೇ ಕಾಲಿನಲ್ಲಿ 400 ಮೀಟರ್ ಜಿಗಿದು ಶಾಲೆಗೆ
ಪ್ರತಿದಿನ ಸುಮಾರು 400 ಮೀಟರ್ ದೂರವನ್ನು ಒಂದೇ ಕಾಲಿನಲ್ಲಿ ಜಿಗಿಯುತ್ತಾ ರಾಗಿಣಿ ಶಾಲೆ ತಲುಪುತ್ತಿದ್ದಳು. ಕೆಲವು ದಿನಗಳಲ್ಲಿ ಕುಟುಂಬದ ಸದಸ್ಯರು ಆಕೆಯೊಂದಿಗೆ ಶಾಲೆಗೆ ತೆರಳುತ್ತಿದ್ದರು. ಆದರೆ ಕೆಲವು ದಿನಗಳಲ್ಲಿ ರಾಗಿಣಿ ಒಬ್ಬಳೇ ಶಾಲೆಗೆ ಹೋಗುತ್ತಿದ್ದಳು. ದಾರಿ ಮಧ್ಯೆ ಆಯಾಸವಾದಾಗ ನಿಂತು ವಿಶ್ರಾಂತಿ ಪಡೆಯುತ್ತಿದ್ದಳು. ಆದರೂ ಶಾಲೆಗೆ ಹೋಗುವುದನ್ನು ಮಾತ್ರ ನಿಲ್ಲಿಸಲಿಲ್ಲ. ಒಂದು ಕಾಲು ಇಲ್ಲದಿದ್ದರೂ ಓದುವ ಕನಸನ್ನು ಮಾತ್ರ ಕೈಬಿಡಲಿಲ್ಲ.
ಡಿಎಂ ಅಂಕಲ್, ನನಗೆ ಟ್ರೈಸಿಕಲ್ ಕೊಡಿಸಿ
ರಾಗಿಣಿಯ ಕುಟುಂಬದ ಪ್ರಕಾರ, ಆಕೆ ಶಾಲೆಗೆ ಹೋಗುವುದು ಸುಲಭಗೊಳಿಸಲು ಕೃತಕ ಕಾಲು ಅಥವಾ ಟ್ರೈಸಿಕಲ್ ಅಗತ್ಯವಿತ್ತು. ಆದರೆ ರಾಗಿಣಿಯ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ಕುಟುಂಬದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಇಂತಹ ಸೌಲಭ್ಯವನ್ನು ಸ್ವಂತ ಹಣದಲ್ಲಿ ಪಡೆಯುವುದು ಕುಟುಂಬಕ್ಕೆ ಕಷ್ಟವಾಗಿತ್ತು. ಇದರಿಂದಾಗಿ ಪುಟ್ಟ ರಾಗಿಣಿ ಅಧಿಕಾರಿಗಳ ಬಳಿ ಸರಳವಾದ ಮನವಿಯೊಂದನ್ನು ಮಾಡಿದ್ದಾಳೆ. “ಡಿಎಂ ಅಂಕಲ್, ನನಗೆ ಒಂದು ಟ್ರೈಸಿಕಲ್ ಕೊಡಿಸಿ. ಅದರಲ್ಲಿ ನಾನು ಶಾಲೆಗೆ ಹೋಗುತ್ತೇನೆ” ಎಂಬ ಆಕೆಯ ಮನವಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಲಾ ಪ್ರಾಂಶುಪಾಲರೂ ಹೇಳಿದ್ದೇನು?
ರಾಗಿಣಿ ಶಾಲೆಗೆ ಬರುವಾಗ ಸಾಕಷ್ಟು ದೈಹಿಕ ತೊಂದರೆ ಅನುಭವಿಸುತ್ತಿದ್ದಾಳೆ ಎಂದು ಶಾಲೆಯ ಪ್ರಾಂಶುಪಾಲ ಅಜಿತ್ ಪಾಲ್ ತಿಳಿಸಿದ್ದಾರೆ. ಸರ್ಕಾರಿ ಯೋಜನೆಯಡಿ ರಾಗಿಣಿಯ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ, ಆಕೆಯ ಪ್ರವೇಶ ತಡವಾಗಿ ನಡೆದ ಕಾರಣ ಕೆಲವು ಯೋಜನೆಗಳ ಪ್ರಯೋಜನ ಆಕೆಗೆ ಸಿಗದೆ ಹೋಗಿದೆ ಎಂದು ಅವರು ಹೇಳಿದ್ದಾರೆ.
ವೈರಲ್ ಆದ ಕಥೆ… ನೆರವಿಗೆ ಬಂದ ಸಂಜಯ್ ಸಿಂಗ್
ರಾಗಿಣಿಯ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಆಕೆಯ ನೆರವಿಗೆ ಹಲವು ಮಂದಿ ಮುಂದೆ ಬಂದಿದ್ದಾರೆ. ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಕೂಡ ರಾಗಿಣಿಯ ಕುಟುಂಬಕ್ಕೆ ನೆರವು ನೀಡಲು ಮುಂದಾಗಿದ್ದಾರೆ. ಕುಟುಂಬಕ್ಕೆ ₹26,500 ಆರ್ಥಿಕ ನೆರವು ದೊರೆತಿದೆ. ಇದಲ್ಲದೆ, ಪಕ್ಷದ ಸ್ಥಳೀಯ ತಂಡ ರಾಗಿಣಿಯ ಗ್ರಾಮಕ್ಕೆ ತೆರಳಿ ಆಕೆಗೆ ಟ್ರೈಸಿಕಲ್ ಹಸ್ತಾಂತರಿಸಿದೆ. ಸಂಜಯ್ ಸಿಂಗ್ ಅವರು ರಾಗಿಣಿ ಮತ್ತು ಆಕೆಯ ಕುಟುಂಬದೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದು, ಮುಂದಿನ ದಿನಗಳಲ್ಲಿಯೂ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.
ಒಂದು ಟ್ರೈಸಿಕಲ್‌ಗಾಗಿ ಕೇಳಿದ ಮನವಿ… ಸಾವಿರಾರು ಹೃದಯ ಮುಟ್ಟಿತು
ರಾಗಿಣಿಯ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಗಮನ ಸೆಳೆಯುತ್ತಿದೆ. ಶಾಲೆಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಓದಬೇಕು ಎಂಬ ಹಠ ಬಿಡದ ಆಕೆಯ ಆತ್ಮವಿಶ್ವಾಸಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಂದು ಕಾಲು ಕಳೆದುಕೊಂಡಳು… ಆದರೆ ಓದುವ ಕನಸು ಕಳೆದುಕೊಳ್ಳಲಿಲ್ಲ. 400 ಮೀಟರ್ ದೂರವನ್ನು ಒಂದೇ ಕಾಲಿನಲ್ಲಿ ಜಿಗಿದಳು… ಆದರೆ ಶಾಲೆಗೆ ಹೋಗುವುದನ್ನು ನಿಲ್ಲಿಸಲಿಲ್ಲ.
ಕೊನೆಗೆ ‘ಡಿಎಂ ಅಂಕಲ್, ಟ್ರೈಸಿಕಲ್ ಕೊಡಿಸಿ’ ಎಂದು ಮನವಿ ಮಾಡಿದಳು… ಆ ಮನವಿಗೆ ಸ್ಪಂದನೆಯೂ ಸಿಕ್ಕಿತು.
