ಇತ್ತೀಚೆಗೆ ಕರೆನ್ ಕಾರ್ಟೆಲ್ ರೈಸ್‌ಮ್ಯಾನ್ ಜೆರುಸಲೇಂನ ಹೀಬ್ರೂ ಯುನಿವರ್ಸಿಟಿಗೆ ಪ್ರವಾಸ ಹೋದಾಗ, ಜನರು ಆಕೆಯೊಂದಿಗೆ ಸೆಲ್ಫೀಗಾಗಿ ಮುಗಿಬಿದ್ದರು. ಯಾರು ಈ ಕರೆನ್? ಹಾಲಿವುಡ್ ಆ್ಯಕ್ಟ್ರೆಸ್ಸಾ ಎಂದು ಊಹಿಸುತ್ತಿದ್ದೀರಾ? ಖಂಡಿತಾ ಅಲ್ಲ, ಈಕೆ ಜಗತ್ಪ್ರಸಿದ್ಧ ವಿಜ್ಞಾನಿ ಆಲ್ಪರ್ಟ್ ಐನ್‌ಸ್ಟೀನ್‌ನ ಸೋದರ ಸಂಬಂಧಿ. ಇದರಲ್ಲಿ ತನ್ನ ಸಾಧನೆ ಏನೂ ಇಲ್ಲವೆಂಬುದನ್ನು ಅರಿತಿರುವ ಕರೆನ್, "ಐನ್‌ಸ್ಟೀನ್‌ನಿಂದ ನಾನು ಪಡೆದದ್ದೇನಾದರೂ ಇದ್ದರೆ ಅದು ಆ ಗುಂಗುರು ಕೂದಲು ಮಾತ್ರ. ನಿಮ್ಮ ಕುಟುಂಬದಲ್ಲಿ ಎಂಥವರು ಹುಟ್ಟುತ್ತಾರೆನ್ನುವುದು ಅದೃಷ್ಟ ಮಾತ್ರ. ನಾನು ಅಂಥ ಬಹು ಶ್ರೀಮಂತವಾದ ಅದೃಷ್ಟವನ್ನು ಹೊಂದಿದ್ದೇನೆ," ಎನ್ನುತ್ತಾರೆ ಆಕೆ. 

ಮಕ್ಕಳನ್ನು ಅತಿಯಾಗಿ ಮುದ್ದು ಮಾಡ್ತೀರಾ? ಚೆಕ್ ಮಾಡಿ ನೋಡಿ

'ಸ್ಪೀಕ್ ಫಾರ್ ಯುವರ್‌ಸೆಲ್ಫ್' ಎಂಬ ಸಂಸ್ಥೆಯ ಅಧ್ಯಕ್ಷೆ ಆಗಿರುವ ಕರೆನ್, ಪ್ರೊಫೆಷನಲ್ ಸ್ಪೀಕರ್ ಕೂಡಾ ಹೌದು. ಥಿಯರಿ ಆಫ್ ರಿಲೇಟಿವಿಟಿಯನ್ನು ವಿವರಿಸಲಾರೆ, ಆದರೆ, ನಾನು ಅವರಿಗೆ ರಿಲೇಟಿವ್ ಆಗಿರುವುದರಿಂದ ರಿಲೇಟಿವ್ಸ್ ಥಿಯರಿ ಆನ್ ಐನ್‌ಸ್ಟೀನ್ಸ್ ಹೇಳಬಲ್ಲೆ ಎನ್ನುವ  ಕರೆನ್‌ಗೆ ತನ್ನ ಅಜ್ಜಿ ಲೀನಾಗೆ ಐನ್‌ಸ್ಟೀನ್ ಬರೆದ ಪತ್ರಗಳು ಹಲವನ್ನು ಕಲಿಸಿವೆಯಂತೆ. ಈ ಪತ್ರಗಳಲ್ಲಿನ ಕೆಲ ವಿಷಯಗಳು ಬದುಕನ್ನು ಬದುಕುವ ಬಗೆ ತಿಳಿಸಿವೆಯಂತೆ. ಪತ್ರಗಳ ಮೂಲಕ  ಐನ್‌ಸ್ಟೀನ್‌  ಅವರಿಂದ ಕರೆನ್ ಕಲಿತ ಮೂರು ಮುಖ್ಯ ಪಾಠಗಳನ್ನು ಅವರು ಹಂಚಿಕೊಂಡಿದ್ದಾರೆ. 

ದೃಷ್ಟಿಕೋನ 

ಪತ್ರವೊಂದರಲ್ಲಿ ಐನ್‌ಸ್ಟೀನ್, 'ರಾಜಕೀಯದ ಕುರಿತು ಹೇಳಬೇಕೆಂದರೆ ನನಗೆ ನಿಜವಾಗಿ ಕೋಪ ಬರುತ್ತದೆ. ಆದರೆ ನಾನು ಇನ್ನು ಮುಂದೆ ಎಂದಿಗೂ ರೆಕ್ಕೆಯಾಡಿಸುವುದಿಲ್ಲ, ಸುಮ್ಮನೆ ಪುಕ್ಕಗಳನ್ನು ಆಡಿಸಿ ಕೂರುತ್ತೇನೆ' ಎಂದು ಬರೆದಿದ್ದಾರೆ. ಇದು ನನಗೆ ದೃಷ್ಟಿಕೋನದ ಕುರಿತ ಪಾಠ ಹೇಳುತ್ತದೆ. ನಮ್ಮ ವಿಚಿತ್ರ, ಒತ್ತಡದ ಜೀವನದಲ್ಲಿ ಯಾವಾಗ ರೆಕ್ಕೆಯಾಡಿಸುತ್ತಾ ಪೂರ್ತಿ ಹಾರಾಡಬೇಕು, ಯಾವಾಗ ಸುಮ್ಮನೆ ಪುಕ್ಕವಾಡಿಸುತ್ತಾ ಕೂರಬೇಕು ಎಂದು ತಿಳಿಯುವುದು ಅಗತ್ಯ. ಕೆಲವೊಮ್ಮೆ ಪೂರ್ತಿ ವೇಗದಲ್ಲಿ ಮುಂದೆ ಹೋಗಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಸುಮ್ಮನೆ ಗಮನಿಸುತ್ತಾ ಕುಳಿತು, ಯೋಚಿಸಿ, ನೀವೇನು ಮಾಡಬೇಕೆಂದು ಯೋಜಿಸಬೇಕಾಗುತ್ತದೆ. ಜೀವನದ  ಹುಚ್ಚುತನವನ್ನು ಹೇಗೆ ನಿಭಾಯಿಸಬೇಕೆನ್ನುವುದನ್ನು ಇದು ಹೇಳುತ್ತದೆ ಎಂದು ವಿವರಿಸುತ್ತಾರೆ ಕರೆನ್.

ಬ್ಯುಟಿ ವಿಥ್ ಬ್ರೈನಿ ಹೆಣ್ಣಿನ ಮಿ.ರೈಟ್ ಹೇಗಿರಬೇಕು?

ಹಾಸ್ಯಪ್ರಜ್ಞೆ 

ಐನ್‌ಸ್ಟೀನ್ ಅವರ ಹಾಸ್ಯಪ್ರಜ್ಞೆ ಬಹಳ ಚೆನ್ನಾಗಿತ್ತು ಎಂಬುದನ್ನು ನಾವು ಓದಿಯೇ ಇರುತ್ತೀವಿ. ಅದರಲ್ಲೂ ತಮ್ಮ ಬಗ್ಗೆ ತಾವೇ ಜೋಕ್ ಮಾಡಿಕೊಳ್ಳುವ ನಿಸ್ಸೀಮತೆ ಅವರಲ್ಲಿತ್ತು. ಕರೆನ್ ಹೇಳುತ್ತಾರೆ, ನಾನು ಹುಟ್ಟುವ ಹೊತ್ತಿಗಾಗಲೇ ಐನ್‌ಸ್ಟೀನ್ ಬಹು ಖ್ಯಾತನಾಮಿ. ಆದರೆ, ಆ ಸಂದರ್ಭದಲ್ಲೂ ಅವರು ನನ್ನ ಅಜ್ಜಿ ಬದುಕುವ ಊರು ಬದಲಾಯಿಸುವ ವಿಷಯ ತಿಳಿದು ಪತ್ರ ಬರೆದಿದ್ದರು. ಅದರಲ್ಲಿ 'ನಿನ್ನ ಇರುವಿಕೆಯ ಗುರುತ್ವಾಕರ್ಷಣ ಕೇಂದ್ರವನ್ನು ನಮ್ಮ ಹತ್ತಿರಕ್ಕೆ ತರುತ್ತಿರುವ ಬಗ್ಗೆ ಕೇಳಿದೆ,' ಎಂದಿದ್ದಾರೆ. ಅವರು ಎಲ್ಲದರಲ್ಲೂ ಹಾಸ್ಯವನ್ನು ಕಾಣುತ್ತಿದ್ದರಷ್ಟೇ ಅಲ್ಲ, ತಮ್ಮ ಬಗ್ಗೆಯೂ ಮುಲಾಜಿಲ್ಲದೆ ಹಾಸ್ಯ ಮಾಡಿಕೊಳ್ಳುತ್ತಿದ್ದರು, ನಮ್ಮನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂಬುದು ಅವರ ನಿಲುವಾಗಿತ್ತು ಎನ್ನುತ್ತಾರೆ. 

ಶ್ಲಾಘನೆ

ಐನ್‌ಸ್ಟೀನ್ ಕೆಲ ಪತ್ರದಲ್ಲಿ ನನ್ನ ಅಜ್ಜಿಯ ಸದ್ಗುಣಗಳನ್ನು ಶ್ಲಾಘಿಸಿದ್ದಾರೆ. ಇನ್ನೊಬ್ಬರ ಪಾಸಿಟಿವ್ಸ್, ಮೆರಿಟ್ಸ್‌ಗಳನ್ನು ಹುಡುಕಿ ಮಾತನಾಡುವುದು ಬಹಳ ಉತ್ತಮ ಗುಣ. ಇದು ನಮಗೂ ಖುಷಿ ನೀಡುತ್ತದಲ್ಲದೆ, ಹೊಗಳಿಸಿಕೊಂಡವರಿಗೆ ಇಡೀ ದಿನ ಮತ್ತಷ್ಟು ಎನರ್ಜಿ ನೀಡುತ್ತದೆ. ಮಾನಸಿಕವಾಗಿಯೂ ಶ್ಲಾಘನೆಯು ಮತ್ತೊಬ್ಬರನ್ನು ಸಬಲಗೊಳಿಸುವಂಥದು. ಇದನ್ನು ನಾನು ನನ್ನ ಉದ್ಯಮದಲ್ಲೂ ಅಳವಡಿಸಿಕೊಂಡಿದ್ದೇನೆ ಎಂಬುದು ಕರೆನ್ ವಿವರಣೆ.