ಪ್ರಿಯಾ ಕೆರ್ವಾಶೆ

ಕಾಜೊಲ್ ಅಭಿನಯದ ‘ಹೆಲಿಕಾಪ್ಟರ್ ಎಲಾ’ ಎಂಬ ಸಿನಿಮಾವಿಡೀ ಹೆಲಿಕಾಪ್ಟರ್ ಪೇರೆಂಟಿಂಗ್‌ನ ವಿವಿಧ ಮುಖಗಳನ್ನು ತೆರೆದಿಡುತ್ತೆ. ಇದನ್ನೆಲ್ಲ ನೋಡುತ್ತಾ ಯಾಕೋ ನಮ್ಮ ಮನಸ್ಥಿತಿಗೆ ಹತ್ತಿರವಾಗ್ತಿದೆಯಲ್ಲಾ, ಎಲ್ಲೋ ಒಂದು ಕಡೆ ನಮ್ಮೆಲ್ಲರದೂ ಹೆಲಿಕಾಪ್ಟರ್ ಪೇರೆಂಟಿಂಗ್ ಆಗ್ತಿದೆಯಾ ಅನ್ನೋಗೊಂದಲ ಶುರು. 

ಹೆಲಿಕಾಪ್ಟರ್‌ನಂತೆ ಸುತ್ತುವ ಹೆತ್ತವರು:

ಒಮ್ಮೆ ನಮ್ಮ ಬಾಲ್ಯವನ್ನು ನೆನಪಿಸಿಕೊಳ್ಳೋಣ. ದಿನವಿಡೀ ಕೆಲಸದಲ್ಲಿ ಮಗ್ನರಾಗಿರುತ್ತಿದ್ದ ಹೆತ್ತವರು. ಮಕ್ಕಳಿಗೆ ಮಕ್ಕಳದ್ದೇ ಲೋಕ. ಅತಿಯಾದ ಓದು, ಹೋಂವರ್ಕ್ ಕಾಟ ಇಲ್ಲ. ಹೆಚ್ಚಿನ ಸಲ ಆಡಿದ್ದೇ ಆಟ. ಹೊಟ್ಟೆ ಹಸಿದಾಗ ಊಟ, ಚೆನ್ನಾಗಿ ಆಟವಾಡುತ್ತಿದ್ದ ಕಾರಣ ಮೈ ಚಾಚಿದ ಕೂಡಲೇ ನಿದ್ದೆ.

ಅದೇ ಈಗ ಹೇಗಿದೆ, ಹೆತ್ತವರಿಗೆ ಕೆಲಸದ ಒತ್ತಡ ಇದ್ದೇ ಇದೆ. ಆದರೆ ಅವರು ಮಕ್ಕಳ ಕಡೆಗೆ ಕೊಡುವ ಗಮನವೂ ಹೆಚ್ಚಿದೆ. ಮನೆಯಲ್ಲಿದ್ದಷ್ಟು ಹೊತ್ತೂ ಮಗುವಿನ ಜೊತೆ ಜೊತೆಗೇ ಹೆಚ್ಚಿನ ಸಮಯ. ಅದು ಆಡುವ ಆಟವೂ ಹೆತ್ತವರ ನಿರ್ದೇಶನದಂತೇ ಅಮ್ಮ, ಅಪ್ಪನ ಜೊತೆಗೇ. ಹೊಟ್ಟೆ ಹಸಿಯೋದು ಅಂದ್ರೇನು ಅಂತ ಇವತ್ತಿನ ಪಾಪುವಿಗೆ ಗೊತ್ತಿಲ್ಲ. ಹಸಿವಿರಲಿ ಇಲ್ಲದಿರಲಿ ಅಮ್ಮನ ಬಲವಂತಕ್ಕೆ ಬ್ರೇಕ್‌ಫಾಸ್ಟ್ ಮಾಡಲೇಬೇಕು. ಮಧ್ಯೆ ಚಿಪ್ಸ್, ಕೇಕ್. ಊಟದ ವಿಷಯದಲ್ಲೂ ಹಾಗೇ. ಹಸಿವಿಲ್ಲ, ಬೇಡ ಅಂದರೆ ಕೇಳೋರ‌್ಯಾರು, ದಿನಕ್ಕೊಂದು ಬಗೆಯ ಊಟವನ್ನು ಅಪ್ಪನೋ ಅಮ್ಮನೋ ರೆಡಿ ಮಾಡ್ತಾರೆ, ‘ನಿನ್ ಫೇವರೆಟ್ ಡಾಲ್ ಥರನೇ ವೆಜಿಟೇಬಲ್ ಕಟ್ ಮಾಡಿದ್ದೀನಿ, ನೋಡು. ಬೇಡ ಅನ್ನಂಗಿಲ್ಲ ಕಂದಾ..’ ಅಂತ ಪ್ರೀತಿಯ ಬಲವಂತ. ಬಡಪಾಯಿ ಪಾಪು ಬಾಯಿ ಕಳೆಯುತ್ತೆ, ಪುಟ್ಟ ಬಾಯೊಳಗೆ ಹಿಡಿಯಲಾರದಷ್ಟು ತುರುಕಿ ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಹೆತ್ತವರು. ಇದೆಲ್ಲಕ್ಕಿಂತ ಹೆಚ್ಚಾಗಿ ಪ್ರತಿಯೊಂದರಲ್ಲೂ ತನ್ನ ಮಗುವೇ ಮುಂದಿರಬೇಕೆಂಬ ಹಪಹಪಿ. ಅದಕ್ಕಾಗಿ ಗರ್ಭಾವಸ್ಥೆಯಲ್ಲೇ ಮಗುವಿನ ಯಶಸ್ವಿಯಾಗಿಸು ವುದರ ಬಗ್ಗೆ ನಿರ್ಧಾರ ಮಾಡುತ್ತಾರೆ.

ಹೀಗೆ ಸಣ್ಣ ಸಣ್ಣ ವಿಷಯಗಳಲ್ಲೂ ಕಾಳಜಿ ತೋರಿಸುತ್ತಾ, ಮಗುವಿನ ಎಲ್ಲ ನಿರ್ಧಾರಗಳನ್ನೂ ನಾವೇ ಕೈಗೊಳ್ಳುತ್ತಾ ಮಕ್ಕಳ ತಲೆ ಮೇಲೆ ಹೆಲಿಕಾಪ್ಟರ್ ಥರ ನಾವು ಹಾರಾಡ್ತಾ ಇರ‌್ತೀವಲ್ಲಾ, ಇದನ್ನೇ ‘ಹೆಲಿಕಾಪ್ಟರ್ ಪೇರೆಂಟಿಂಗ್’ ಅನ್ನೋದು. ‘ಹೆಲಿಕಾಪ್ಟರ್ ಪೇರೆಂಟಿಂಗ್’ ಎಂಬ ಶಬ್ದವನ್ನು ಮೊದಲು ಕಾಯಿನ್ ಮಾಡಿದ್ದು ಡಾ.ಹೈಮ್ ಗಿನೋಟ್ ಎಂಬ ಲೇಖಕ.

ಅವರ ಹೆಲಿಕಾಪ್ಟರ್ ಪೇರೆಂಟಿಂಗ್ ‘ಪೇರೆಂಟ್ಸ್ ಆ್ಯಂಡ್ ಟೀನೇಜರ್ಸ್’ ಪುಸ್ತಕದಲ್ಲಿ ಪೋಷಕರು ತಮ್ಮ ಸುತ್ತ ‘ಹೆಲಿಕಾಪ್ಟರ್’ನ ಹಾಗೆ ಸದಾ ಸುತ್ತುತ್ತಾ ಇರ‌್ತಾರೆ ಅಂತ ದೂರುವ ಟೀನ್ ಹುಡುಗರ ಮಾತಿನಲ್ಲಿ ಈ ಶಬ್ದ ಬಂದಿದೆ. ಸ್ಕೂಲ್‌ನಲ್ಲೂ ಬಿಡಲ್ಲ!: ಪೇರೆಂಟ್ಸ್ ಮೀಟಿಂಗ್ ಇದ್ದಾಗ ಕೆಲವೊಂದು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ. ಹಿಂದೆ ದೊಡ್ಡ ಕ್ಯೂ ಇರುತ್ತೆ. ಕ್ಲಾಸ್ ಟೀಚರ್ ಮುಂದೆ ಕೂತ ಕೆಲವು ಪೋಷಕರಿಗೆ ತಮ್ಮ ಮಗುವಿನ ಬಗ್ಗೆ ಎಷ್ಟು ಕೇಳಿದರೂ, ಹೇಳಿದರೂ ಮುಗಿಯಲ್ಲ. ‘ಅವ್ನ ಟಿಫನ್ನೇ ತಿನ್ನಲ್ಲ, ನೀವು ಸ್ವಲ್ಪ ಹೇಳಿ ಮೇಡಂ’, ‘ಸಾನ್ವಿಗೆ ನೀವೇ ಪುಶ್ ಮಾಡಿ, ಅವಳು ಚೆನ್ನಾಗಿ ಓದಲ್ಲ.’,‘ ಮಾನ್ಯಾಗೆ ಕ್ಲಾಸ್‌ನಲ್ಲಿ ಅವನಿ ತೊಂದ್ರೆ ಮಾಡ್ತಾಳಂತೆ, ನೋಡಿ ಮೇಡಂ’,‘ ಲಂಚ್‌ಬಾಕ್ಸ್‌ಗೆ ಏನು ಹಾಕ್ಬಹುದು..’..ಹೀಗೆ ಅತಿ ಕಾಳಜಿ ಮುಂದುವರಿಯುತ್ತದೆ. ತನಗೂ ಇದಕ್ಕೂ ಸಂಬಂಧವೇ ಇಲ್ಲ ಅನ್ನುವಂತೆ ಪಕ್ಕ ಕುಳಿತ ಕ್ಲಾಸ್‌ಮೇಟ್ ಕಡೆಗೂ ನೋಡದೇ ದಿವ್ಯ ನಿರ್ಲಿಪ್ತತೆಯಲ್ಲಿ ಮಗು ಕುಳಿತಿರುತ್ತೆ. 

ನೀವೂ ಹೆಲಿಕಾಪ್ಟರ್ ಪೇರೆಂಟಿಂಗ್ ಮಾಡ್ತೀರಾ?

  • ಇಲ್ಲಿ ಕೆಲವು ಪಾಯಿಂಟ್‌ಗಳಿವೆ. ಅವುಗಳನ್ನು ನಿಮಗೆ ಅಪ್ಲೈ ಮಾಡಿ ನೋಡಿ. ನಿಜಕ್ಕೂ ನೀವು ಹೆಲಿಕಾಪ್ಟರ್ ಪೇರೆಂಟಿಂಗ್ ಮಾಡ್ತಿದ್ದೀರ, ಇಲ್ವಾ ಅನ್ನೋದು ತಿಳಿಯುತ್ತೆ. ನೀವೂ ಹೆಲಿಕಾಪ್ಟರ್ ಪೇರೆಂಟಿಂಗ್ ಮಾಡ್ತೀರಾ?
  • ಸದಾ ಮಗುವಿನ ಮೇಲೇ ಕಣ್ಣಿಟ್ಟಿರೋದು. ಆಟ, ಊಟ, ಪಾಠದಲ್ಲಿ ಅತಿಯಾದ ಇನ್‌ವಾಲ್ವ್‌ಮೆಂಟ್.
  • ಮಗುವಿಗೆ ಸಂಬಂಧಿಸಿದ ಸಣ್ಣಪುಟ್ಟ ವಿಚಾರಗಳನ್ನೇ ದೊಡ್ಡ ಇಶ್ಯೂ ಮಾಡೋದು. ಉದಾಹರಣೆಗೆ ನಿಮ್ಮ ಮಗುವಿನ ಜೊತೆಗೆ ಅದರ ಕ್ಲಾಸ್‌ನ ಇನ್ನೊಂದು ಮಗು ಜಗಳ ಮಾಡಿದರೆ ಬಂದು ಸ್ಕೂಲ್‌ನಲ್ಲಿ ಕಂಪ್ಲೇಂಟ್ ಮಾಡುವುದು.
  • ಮಕ್ಕಳು ಒಂಟಿಯಾಗಿರಲು ಅವಕಾಶ ಕೊಡದೇ ಇರುವುದು. ಫ್ರೆಂಡ್ಸ್ ಜೊತೆಗೆ ಆಟವಾಡುತ್ತಿರುವಾಗಲೂ ಅನಗತ್ಯ ಮೂಗು ತೂರಿಸಿ ಸಲಹೆ ಕೊಡೋದು.
  • ಅತಿಯಾದ ಕಾಳಜಿ. ಸಣ್ಣ ಪುಟ್ಟ ಸಮಸ್ಯೆಗೂ ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದು.
  • ಮಕ್ಕಳು ಸೋಲುವುದಕ್ಕೇ ಬಿಡುವುದಿಲ್ಲ. ಸೋತರೆ ದೊಡ್ಡ ಆಘಾತವಾದಂತೆ ಆಡುವುದು.
  • ಮಗು ಮಾಡಿದ ಹೋಂವರ್ಕ್‌ಅನ್ನು ತಿದ್ದಿ ಬರೆಯೋದು. ಅಕ್ಷರವನ್ನು ಇನ್ನಷ್ಟು ಚೆಂದಗೊಳಿಸೋದು.

ಮಕ್ಕಳೊಂದಿಗೆ ಅಪ್ಪ-ಅಮ್ಮ ಮಲಗಬೇಕೋ, ಬೇಡ್ವೋ?

ಮಕ್ಕಳಿಗಿದು ಒಳ್ಳೆಯದಲ್ಲ

ಹೆಲಿಕಾಪ್ಟರ್ ಪೇರೆಂಟ್ಸ್‌ಗಳಿದ್ದರೆ ಮಕ್ಕಳಲ್ಲಿ ಸ್ವತಂತ್ರ ಮನಸ್ಥಿತಿ ಬೆಳೆಯಲ್ಲ. ಕೀಳರಿಮೆ ಹೆಚ್ಚುತ್ತೆ. ಸಣ್ಣಪುಟ್ಟ ಸೋಲಿಗೂ ಹೌಹಾರುತ್ತಾರೆ. ಚಾಲೆಂಜ್‌ಗಳನ್ನು ಸ್ವೀಕರಿಸಿ ಮುಂದೆ ಹೋಗುವ ಗುಣ ಬೆಳೆಯಲ್ಲ. ಸಹಪಾಠಿಗಳಿಂದ ನಗೆಪಾಟಲಿಗೆ ಗುರಿಯಾಗಬೇಕಾಗುತ್ತದೆ. ವರ್ತನೆಗೆ ಸಂಬಂಧಿಸಿದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತದೆ.

ಅತಿ ಕಾಳಜಿಯಿಂದ ಹೊರಬರೋದು ಹೇಗೆ?

ಅಂದುಕೊಂಡಷ್ಟು ಸುಲಭವಲ್ಲ. ಮೊದಲು ಮಗುವಿನ ಬಗ್ಗೆ ತನ್ನ ಕಾಳಜಿ ಎಷ್ಟಿರಬೇಕು ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಅದಿನ್ನೂ ಮಗು, ಕಲಿಯುವ ವಯಸ್ಸು. ಈಗಲೇ ಎಲ್ಲದರಲ್ಲೂ ಪರ್ಫೆಕ್ಟ್ ಆಗಿರಬೇಕು ಅಂದುಕೊಳ್ಳುವುದು ಅತಿರೇಕ. ಮಕ್ಕಳನ್ನು ಅವರಷ್ಟಕ್ಕೇ ಸ್ವತಂತ್ರವಾಗಿ ಬೆಳೆಯಲು ಬಿಡಬೇಕು. ಪರಿಸ್ಥಿತಿಯನ್ನು ಅವರೇ ಫೇಸ್ ಮಾಡಲು ಪ್ರೇರೇಪಿಸಬೇಕು. ಎಲ್ಲಿ ನಮ್ಮ ಅವಶ್ಯಕತೆ ನಿಜಕ್ಕೂ ಇದೆಯೋ ಅಲ್ಲಿ ಮಾತ್ರ ಹಸ್ತಕ್ಷೇಪ ಮಾಡಬೇಕು. 

ಮಗುವಿಗೆ ನೋ ಹೇಳಲು ಕಲಿಸಿ