ಮಮತೆ, ಮಮಕಾರ ತುಂಬಿರುವ ಹೆಣ್ಣು ಸ್ಮಾರ್ಟ್, ಬ್ರಿಲಿಯಂಟ್  ಅ್ಯಂಡ್ ಸ್ಟ್ರಾಂಗ್ ಆಗಿಬಿಟ್ಟರೆ ಗಟ್ಟಿ ವ್ಯಕ್ತಿತ್ವದವಳಾಗಿಬಿಡುತ್ತಾಳೆ. ಹಾಗಂಥ ಭಾವನೆಗಳಿಗೂ ಇರುತ್ತೆ ಅವಳ ಹೃದಯಲ್ಲಿ ಜಾಗ. ಆದರೆ, ತನ್ನ ಜೀವನ ಸಂಗಾತಿಯನ್ನು ಆರಿಸಿಕೊಳ್ಳುವಾಗ ತುಂಬಾ ಹುಷಾರಾಗಿ ಹೆಜ್ಜೆ ಇಡುತ್ತಾಳೆ. ದುಡ್ಡು, ಸೌಂದರ್ಯದೊಂದಿಗೆ ಗಟ್ಟಿ ವ್ಯಕ್ತಿತ್ವವೂ ತನ್ನ  ಪತಿದೇವನಲ್ಲಿ ಇರಬೇಕೆಂದುಕೊಳ್ಳುತ್ತಾಳೆ. ಇಂಥ ಹೆಣ್ಣು ಮಕ್ಕಳು ಎಂಥವನನ್ನು ಆರಿಸಿಕೊಳ್ಳುತ್ತಾಳೆ....? ಅಂಥ ದಿಟ್ಟೆಯೊಂದಿಗೆ ಬದುಕ ಕಟ್ಟಿ ಕೊಳ್ಳುವುದು ಹೇಗೆ?

  • ತುಂಬಾ ಸ್ವತಂತ್ರ ಅಭಿರುಚಿ, ವ್ಯಕ್ತಿತ್ವ ಇರುವ ಹೆಣ್ಣಿನ ಮನಸ್ಸು ಗೆಲ್ಲುವುದು ಕಷ್ಟ ಎನ್ನುವುದು ಎಲ್ಲರ ಅಭಿಪ್ರಾಯ. ಆದರೆ, ಅವರಿಗೂ ಭಾವನೆಗಳಿರುತ್ತವೆ. ಆದರೆ, ಆಯ್ಕೆ ಮಾಡುವಾಗ ಮಾತ್ರ ತುಂಬಾ ಸ್ಪೆಸಿಫಿಕ್ ಆಗಿರುತ್ತಾರೆ. 
  • ಯಾರ ಸಹಾಯವೂ ಇಲ್ಲದೇ ಗಟ್ಟಿ ವ್ಯಕ್ತಿತ್ವದ ಹೆಣ್ಣೊಬ್ಬಳು ಜೀವನವನ್ನು ಪರಿಪೂರ್ಣವಾಗಿಸಿಕೊಳ್ಳುತ್ತಾಳೆ. ಆರ್ಥಿಕ ಸ್ವಾತಂತ್ರ್ಯವಿದ್ದರಂತೂ ಎಂಥದ್ದೇ ಸಂದರ್ಭದಲ್ಲಿಯೂ ಇನ್ನೊಬ್ಬರಿಗೆ ತಲೆ ಬಾಗುವುದಿಲ್ಲ. ಸಂಗಾತಿ ಇಲ್ಲದೆಯೂ ಜೀವನದಲ್ಲಿ ಸಾರ್ಥಕತೆ ಕಾಣುತ್ತಾಳೆ. ಆದರೆ, ಕೆಲವೊಂದು ಕ್ಷಣಗಳನ್ನು ಮತ್ತಷ್ಟು ಅದ್ಭುತವಾಗಿಸಿಕೊಳ್ಳಲು ಜತೆಗಾರನಿರಬೇಕೆಂದು ಬಯಸುತ್ತಾಳೆ.
  • ಇಂಥ ಹೆಣ್ಣನ್ನು ಎಂಥದ್ದೇ ಸಂದರ್ಭದಲ್ಲಿಯೂ ಟೇಕನ್ ಫಾರ್ ಗ್ರ್ಯಾಂಟೆಡ್ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ತನ್ನೆಲ್ಲಾ ಕೆಲಸವನ್ನೂ ಸ್ವತಂತ್ರವಾಗಿ ನಿಭಾಯಿಸುವ ಸಾಮರ್ಥ್ಯ ಬೆಳೆಯಿಸಿಕೊಳ್ಳುವುದರಿಂದ, ಗಂಡನ ಅಹಂಗೆ ಧಕ್ಕೆಯಾಗುವುದು ಸಹಜ.
  • ಹಾಗಂತ ಇಂಥ ಹೆಣ್ಣು ಮಕ್ಕಳ ಜೀವನ ಅದ್ಭುತವಾಗಿರಲು ಕೈ ತುಂಬಾ ದುಡ್ಡಿರಬೇಕೆಂದೇನೂ ಇಲ್ಲ. ಅದಿಲ್ಲದಿದ್ದರೂ ಬಾಂಧವ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂಬ ಅರಿವು ಈಕೆಗಿರುತ್ತದೆ. ಮಕ್ಕಳನ್ನು ಪ್ರೀತಿಯಿಂದ, ಸ್ವತಂತ್ರ ಅಭಿರುಚಿಯುಳ್ಳವರನ್ನಾಗಿ ಬೆಳೆಸುವುದೂ ಗೊತ್ತಿರುತ್ತೆ. ಅಕಸ್ಮಾತ್ ಅವಳ ಇಂಡಿವಿಜಿಯಾಲಿಟಿಗೆ ಧಕ್ಕೆ ಬಂದರೆ ಗಂಡನನ್ನೂ ಬಿಟ್ಟು ಮುಂದೆ ಸಾಗುವ ಗಟ್ಟಿಗಿತ್ತಿ ಇವಳು. 
  • ಪ್ರಾಮಾಣಿಕ, ಹೃದಯವಂತ ಹಾಗೂ ದೃಢ ವ್ಯಕ್ತಿತ್ವವುಳ್ಳ ಗಂಡೆಂದರೆ ಈಕೆಗೆ ಅಚ್ಚುಮೆಚ್ಚು. ಕೈ ಹಿಡಿಯುವನಿಗೆ ವಿವೇಕ, ವಿವೇಚನಾಶಕ್ತಿ ಇದ್ದರೆ ಸಾಕು ಎಂದು ಭಾವಿಸುತ್ತಾಳೆ. ಅಷ್ಟಿದ್ದರೆ ಜೀವನದಲ್ಲಿ ಎಲ್ಲವೂ ಇದೆ ಎಂದೇ ಭಾವಿಸಿ, ಮುನ್ನಡೆಯುತ್ತಾಳೆ. ಐಷಾರಾಮಿ ಜೀವನವಲ್ಲದಿದ್ದರೂ, ನೆಮ್ಮದಿ-ಶಾಂತಿಯ ಜೀವನವನ್ನು ಬಯಸುತ್ತಾಳೆ.
  • ನೇರ ಹಾಗೂ ದಿಟ್ಟ ಸ್ವಭಾವವಾಗಿದ್ದು, ಇನ್ನೊಬ್ಬರನ್ನು ಖುಷಿ ಪಡುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಇನ್ನೊಬ್ಬರನ್ನು ಸಂತೋಷ ಪಡಿಸಲು ಸುಳ್ಳು ಹೇಳುವುದಿಲ್ಲ. ತಪ್ಪು ಎಂದೆನಿಸಿದ್ದನ್ನು ಹೇಳಿಯೇ ಬಿಡುತ್ತಾಳೆ. ಮನಸ್ಸು ಹಾಗು ಮಾತಿನ ಮೇಲೆ ಸದಾ ಹಿಡಿತ ಸಾಧಿಸಿರುತ್ತಾಳೆ.

ಮನುಷ್ಯ ಎಂದ ಮೇಲೆ ಪ್ರೀತಿ, ಪ್ರೇಮ ಹುಟ್ಟುವುದು ಸಹಜ. ಗಟ್ಟಿ ವ್ಯಕ್ತಿತ್ವದ, ಸ್ವತಂತ್ರ ಅಭಿರುಚಿಯುಳ್ಳ ಹೆಣ್ಣನ್ನು ಒಲಿಸಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ. ಮನೋಸ್ಥೈರ್ಯ ಇರೋ ಹೆಣ್ಣಿನ  ವಾಂಛೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ದುಡ್ಡು, ಸೌಂದರ್ಯ, ವಿದ್ಯೆ ಇದ್ದರೆ ಮಾತ್ರ ಇವರನ್ನು ಒಲಿಸಿಕೊಳ್ಳಬಹುದು ಎಂದು ಕೊಂಡರೆ ತಪ್ಪು. ಮಾನಸಿಕವಾಗಿ ಸ್ಟ್ರಾಂಗ್ ಇದ್ದರೆ ಮಾತ್ರ ಗಟ್ಟಿ ಮನಸ್ಸಿನ ಹೆಣ್ಣನ್ನು ಒಲಿಸಿಕೊಳ್ಳಬಹುದು ಎಂಬುವುದು ಮಾತ್ರ ಕಟು ಸತ್ಯ.