ನಮ್ಮ ದೇಶದಲ್ಲಿ ಮದುವೆ ಎಂದರೆ ಅದ್ಧೂರಿತನದ ಮೆರವಣಿಗೆ. ಮದುವೆಯ ವೈಭವದ ಮೇಲೆ ವಧುವರರ ಪೋಷಕರ ಆದಾಯ ಲೆಕ್ಕ ಹಾಕುವ ಕಳಪೆ ಮನಸುಗಳು... ಮಗು ಹುಟ್ಟಿದಾಗಿನಿಂದ ಮದುವೆಗಾಗಿಯೇ ಕೂಡಿಟ್ಟದ್ದನ್ನೆಲ್ಲ ಕಳೆಯುವ ವಿಚಿತ್ರ ಕಾತರ ತಂದೆಗೆ...ಇಂಥ ಹಲವಾರು ವೈಚಿತ್ರ್ಯಗಳನ್ನೊಳಗೊಂಡ ಮದುವೆಯಲ್ಲಿ ಇಲ್ಲಿ ಹೇಳಿದುದೂ ಸೇರಿದಂತೆ ಹಲವಾರು ಅತಿರೇಕಗಳು ನಡೆಯುತ್ತವೆ. ಅವಕ್ಕೆಲ್ಲ ಈಗಲೇ ಫುಲ್‌ಸ್ಟಾಪ್ ಹಾಕಬೇಕಿದೆ. 

ಕಂಕಣ ಭಾಗ್ಯಕ್ಕೆ ಈ ವಾಸ್ತು ಟಿಪ್ಸ್ ಫಾಲೋ ಮಾಡಿ...

ಬಂಗಾರ ಬಂಗಾರ

ಮದುವೆ ಎಂದರೆ ಬಂಗಾರದ ಸುಗ್ಗಿ. ಮದುವೆಗೆ ಬಂದವರೆಲ್ಲರೂ ತಮ್ಮ ಬಳಿ ಇರುವ ಬಂಗಾರವನ್ನೆಲ್ಲ ಪ್ರದರ್ಶಿಸಲು ಹಾಕಿ ತಿರುಗಾಡುತ್ತಿದ್ದರೆ, ಮಧುಮಗಳ ಒಡವೆಗಳನ್ನಂತೂ ಕೇಳುವುದೇ ಬೇಡ. ಅವಳು ಅವತ್ತು ತಂದೆತಾಯಿಗೆ ಮಾತ್ರವಲ್ಲದೆ, ಎಲ್ಲರ ಕಣ್ಣಿಗೂ ಅಕ್ಷರಶಃ 'ಬಂಗಾರಿ'ಯೇ ಆಗಿರುತ್ತಾಳೆ. ಅತಿಥಿಗಳೂ ವಧುವಿಗೆ ಏನು ಬಂಗಾರ ಹಾಕಿದ್ದೀರಿ ನೋಡೋಣ ಎಂದು ಅವಳ ಒಡವೆಗಳನ್ನೆಲ್ಲ ಮುಟ್ಟಿ ನೋಡಿ ಅಧಿಕಪ್ರಸಂಗಿತನ ಮೆರೆಯುತ್ತಿರುತ್ತಾರೆ. ಕಳೆದ ವರ್ಷ ವಧುವೊಬ್ಬಳು 50 ಕೆಜಿಗೂ ಹೆಚ್ಚು ಚಿನ್ನ ಹೇರಿಕೊಂಡು ದಸರಾ ಆನೆಯ ಅಂಬಾರಿಯಂತೆಯೇ ಕಾಣಿಸುತ್ತಿದ್ದ ಫೋಟೋವನ್ನು ನೀವು ನೋಡಿರಬಹುದು. ಆದರೆ ಮದುವೆಯ ಬಳಿಕ ಈ ಚಿನ್ನವೆಲ್ಲ ಏನಾಗುತ್ತದೆ ಎಂದು ಯೋಚಿಸಿದ್ದೀರಾ? ಲಾಕರ್‌ ಎಂಬ ಕತ್ತಲ ಕೋಣೆಯಲ್ಲಿ ವರ್ಷಗಟ್ಟಲೆ ಬಂಧಿಯಾಗುತ್ತವೆ! ಇದು ವೇಸ್ಟ್ ಅಲ್ಲವೇ? ಕಷ್ಟಕಾಲಕ್ಕಾಗುತ್ತದೆ ಎಂದು ಎಲ್ಲರೂ ಯೋಚಿಸುತ್ತಾರೆ. ಆದರೆ ಯಾರೂ ಕಷ್ಟಕಾಲಕ್ಕೆ ಅದನ್ನು ಮಾರಲು ತಯಾರಿರುವುದಿಲ್ಲ. ಮೇಲಾಗಿ, ಅದೇ ಹಣದಲ್ಲಿ ಹೂಡಿಕೆ ಮಾಡಿ ಅದಕ್ಕಿಂತ ಹೆಚ್ಚು ಸಂಪಾದಿಸುವ ಹಲವಾರು ಮಾರ್ಗಗಳಿವೆ. ಮದುವೆಗಾಗಿ ಚೀಲಗಟ್ಟಲೆ ಚಿನ್ನ ಖಂಡಿತಾ ಅಗತ್ಯವಿಲ್ಲ. 

ಆಹಾರ; ಬಗೆಬಗೆಯ ಭಕ್ಷ್ಯಗಳು

ಯಾವುದಾದರೂ ವಿವಾಹದ ಭೋಜನ ಕೋಣೆಗೆ ಹೋಗಿ ನೋಡಿದರೆ ದೇಶದಲ್ಲಿ ಲಕ್ಷಾಂತರ ಜನ ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆಂಬುದನ್ನು ಯಾರೂ ನಂಬಲಾರರು. ಊಟ ರುಚಿಯಾಗಿದ್ದು ಹೊಟ್ಟೆ ತುಂಬಿಸಿದರಷ್ಟೇ ಸಾಲುವುದಿಲ್ಲ,  ಅಲ್ಲಿ ಚೈನೀಸ್, ಇಂಡಿಯನ್, ಇಟಾಲಿಯನ್, ಥಾಯ್ ಫುಡ್ ಎಂದು ಹತ್ತು ಹಲವು ಕ್ಯುಸಿನ್ಸ್ ಇರಬೇಕು. ಅದರಲ್ಲಿ ಮತ್ತೆ ಒಂದೊಂದು ಬಗೆಯಲ್ಲೂ ಕನಿಷ್ಠ 20 ವೆರೈಟಿ ಫುಡ್ ಇರಬೇಕು. ಜೊತೆಗೆ ಚಾಟ್ಸ್, ಐಸ್ಕ್ರೀಮ್... ಅಲ್ಲೊಂದು ಉಚಿತ ಹೋಟೆಲ್ ತೆರೆದಂತಾಗಿರುತ್ತದೆ. ಆದರೆ, ಯಾವೊಬ್ಬ ವ್ಯಕ್ತಿಗೂ ಒಂದು ಹೊತ್ತಿನ ಊಟದಲ್ಲಿ ಅಲ್ಲಿರುವುದನ್ನೆಲ್ಲ ಸ್ವಲ್ಪ ರುಚಿ ನೋಡಲೂ ಸಾಧ್ಯವಿಲ್ಲ. ವಿವಾಹ ಸಮಾರಂಭಗಳಲ್ಲಿ ಉಳಿದು ವ್ಯರ್ಥವಾಗಿ ಮಣ್ಣು ಸೇರುವ ಆಹಾರಕ್ಕೆ ನಮ್ಮ ದೇಶದಲ್ಲಿ ಲೆಕ್ಕವೇ ಇಲ್ಲ. ಈಗೀಗ ಕೆಲವರು ಉಳಿದ ಆಹಾರವನ್ನು ಅನಾಥಾಲಯಗಳಿಗೆ ಹಂಚುತ್ತಾರೆ. ಆದರೆ, ಹಾಗೆ ಆಹಾರ ವ್ಯರ್ಥವಾಗದಂಥ ಮೆನು ತಯಾರಿಸುವುದು ಎಲ್ಲಕ್ಕಿಂತ ಉತ್ತಮವಲ್ಲವೇ?

ಪ್ರೀತಿ ಒಲಿಯಲು ಇಷ್ಟಾರ್ಥ ದೇವರ ಮೊರೆ ಹೋಗಿ...

ಕಾಸ್ಟ್ಲಿ ಉಡುಗೊರೆಗಳು

ವರದಕ್ಷಿಣೆ ಕಾನೂನುಬಾಹಿರ ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ. ಆದರೆ ಉಡುಗೊರೆಗಳ ವಿಷಯದಲ್ಲಿ ನಮ್ಮ ತಕರಾರಿಲ್ಲ. ಇದನ್ನೇ ಬಳಸಿಕೊಂಡು ವಧುವರರ ಕುಟುಂಬಗಳು ಕಾರು, ಮನೆ, ಹನಿಮೂನ್ ಟಿಕೆಟ್ಸ್, ಆಭರಣಗಳು ಎಂದು ಉಡುಗೊರೆಗಳ ಸುರಿಮಳೆಯನ್ನೇ ಸುರಿಸುತ್ತವೆ. ಕೆಲವರು ಇದಕ್ಕೆ ಶಕ್ತರಿರಬಹುದು. ಆದರೆ, ಉಡುಗೊರೆಯೂ ಕೇಳಿ ಪಡೆಯುವಂಥಾಗಿರುವಾಗ ವಧುವಿನ ತಂದೆ ಹೈರಾಣಾಗುವುದು ಖಚಿತ. ಆದ್ದರಿಂದ ತಪ್ಪು ಉದಾಹರಣೆಯಾಗುವುದು ಬಿಡಿ. ಆಶೀರ್ವಾದವೇ ಉಡುಗೊರೆ ಎಂಬ ವಾಕ್ಯಕ್ಕೆ ಮಣೆ ಹಾಕಿ. 

ಎರಡು ಮೂರು ರಿಸೆಪ್ಶನ್ಸ್

ಕೇವಲ ಸೆಲೆಬ್ರಿಟಿಗಳಲ್ಲ, ಈಗೀಗ ಸಾಮಾನ್ಯ ಜನರೂ ಮದುವೆ ಸಮಾರಂಭಗಳಲ್ಲಿ ಮಲ್ಟಿಪಲ್ ರಿಸೆಪ್ಶನ್ಸ್ ಇಟ್ಟುಕೊಳ್ಳಲಾರಂಭಿಸಿದ್ದಾರೆ. ಮದುವೆಯ ಹೊರತಾಗಿ ವಧುವಿನ ಕಡೆಯಿಂದ ಒಂದು ರಿಸೆಪ್ಶನ್, ವರನ ಕಡೆಯಿಂದ ಮತ್ತೊಂದು ಎಂದು ಎಂದು ಮೂರು ನಾಲ್ಕು ದಿನ ಹಣವನ್ನು ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತೆ ಪೋಲು ಮಾಡಲಾಗುತ್ತದೆ. ಇದು ನವದಂಪತಿಯನ್ನೂ ನುಜ್ಜುಗುಜ್ಜು ಮಾಡುವುದಲ್ಲದೆ, ವೃಥಾ ಹಣ ಪೋಲು ಮಾಡುವ ಅಗತ್ಯವಾದರೂ ಏನಿದೆ?

ಮದ್ವೆಯಾದ ಕೂಡಲೇ ಲೈಫೇ ಮುಗೀತು ಅಂತಿರೋ ಹೆಣ್ಮಕ್ಕಳಿಗೆ ಮಾತ್ರ!

ವಿವಾಹ ವೇದಿಕೆ

ಮದುವೆಯನ್ನು ಈ ಟಿಪಿಕಲ್ ಆಂಟಿ ಅಂಕಲ್‌ಗಳು ತಮ್ಮ ಮಕ್ಕಳಿಗೆ ವಧು ಇಲ್ಲವೇ ವರ ಹುಡುಕುವ, ತಮ್ಮ ಮಕ್ಕಳನ್ನು ಪ್ರದರ್ಶನಕ್ಕಿಡುವ ವೇದಿಕೆಯಾಗಿ ಬಳಸಿಕೊಳ್ಳುವುದು ಎಲ್ಲೆಡೆ ಕಾಮನ್. ಹುಡುಗಿಯೋ, ಹುಡುಗನೋ ವಿವಾಹ ವಯಸ್ಸಿಗೆ ಬಂದರೆ ಸಾಕು, ಫ್ರೆಂಡ್ ಅಥವಾ ಕಸಿನ್ಸ್ ಮದುವೆ ಅಟೆಂಡ್ ಮಾಡಲು ಅವರನ್ನು ಒತ್ತಾಯಿಸಲಾಗುತ್ತದೆ. ಇದು ಹೆಚ್ಚಿನ ಬಾರಿ ಯುವತಿಯ ಅಥವಾ ಯುವಕನ ಗೆಳೆಯರ ಗುಂಪಿನಲ್ಲಿ ನಗೆಪಾಟಲಿಗೆ ಕಾರಣವಾಗುತ್ತದೆ. ಆದರೆ, ಮ್ಯಾಟ್ರಿಮೋನಿಯಲ್ ವೇದಿಕೆಗಳು ಅದೇ ಉದ್ದೇಶಕ್ಕೆಂದು ಸಾಕಷ್ಟಿರುವಾಗ ಇನ್ನೊಬ್ಬರ ಮದುವೆಯಲ್ಲಿ ಆಂಟಿ ಅಂಕಲ್‍‌ಗಳು ಯುವಕ ಯುವತಿಯರನ್ನು ನೋಡುತ್ತಾ ಲೆಕ್ಕಾಚಾರ ಹಾಕುವುದು ಅಷ್ಟೇನು ಚೆನ್ನಾಗಿರುವುದಿಲ್ಲ ಅಲ್ಲವೇ?