ಮದ್ವೆಯಾದ ಕೂಡಲೇ ಲೈಫೇ ಮುಗೀತು ಅಂತಿರೋ ಹೆಣ್ಮಕ್ಕಳಿಗೆ ಮಾತ್ರ!
ಮದ್ವೆಗೂ ಮೊದಲು ಬಿಂದಾಸ್ ಆಗಿರೋ ಹೆಣ್ಮಕ್ಕಳು ಕೊರಳಿಗೆ ಮೂರು ಗಂಟು ಬಿದ್ದ ಕೂಡಲೇ ತಲೆಮೇಲೆ ಬಂಡೆ ಹೊತ್ತಂತಿರೋದು ಸಾಮಾನ್ಯ. ಹೊತ್ತ ಬಂಡೆ ಕೆಳಗಿಳಿಸದೇ ಖುಷಿಯಾಗಿರುವುದು ಸಾಧ್ಯವಿಲ್ಲ. ಬಂಡೆ ಇಳಿಸೋ ಆರಂಭಿಕ ಹಂತದ ಪ್ರಯತ್ನ ಇಲ್ಲಿದೆ.
ಮೇಘ ಎಂ.ಎಸ್
ಮನೆಯಲ್ಲಿ ಮಕ್ಕಳು, ಗಂಡ, ಅತ್ತೆ-ಮಾವ ಮತ್ತು ನಾನು. ನಿತ್ಯ ಬೆಳಗ್ಗೆ ಬೇಗ ಎದ್ದು ಅಂಗಳ ಸ್ವಚ್ಛಗೊಳಿಸಿ, ತಿಂಡಿ, ಅಡುಗೆ ಎಲ್ಲವೂ ಮಾಡಿ ಕೊನೆಗೆ ಮಧ್ಯಾಹ್ನ ಒಂದೆರಡು ಗಂಟೆಯಷ್ಟುಬಿಡುವು ಸಿಗುವುದು. ಈ ಬಿಡುವಿನಲ್ಲಿ ನೆರೆ ಮನೆಯವರೊಂದಿಗೆ ಹರಟುವುದು, ಧಾರಾವಾಹಿ ನೋಡುವುದು, ದೂರದ ಸಂಬಂಧಿಕರ ಜೊತೆ ಮಾತನಾಡುವುದು ಇಲ್ಲವೇ ಮಲಗುವುದು. ಮತ್ತೆ ಸಂಜೆಯಿಂದ ರಾತ್ರಿ ಮಲಗುವವರೆಗೂ ಅದೇ ಕೆಲಸ, ಮನೆಯವರ ಚಾಕರಿ ಮಾಡುವುದು ಇದೇ.
ಮದುವೆಯಾಗಿ ಗೃಹಿಣಿ ಆದಕೂಡಲೇ ಈ ಆಲೋಚನೆ ಬೆಳೆದು ಚೌಕಟ್ಟಿನಲ್ಲಿ ಬಂಧಿಯಾಗುವ ಮಹಿಳೆಯರಿವರು. ಇವರು ಮೊದಲಿನಿಂದಲೂ ಹೀಗೆ ಬೆಳೆದು ಬಂದವರೇ ಅಥವಾ ಮದುವೆಯಾದ ಮೇಲೆ ಹೀಗೆ ಇರಬೇಕು ಎಂದು ಯಾರಾದರೂ ಹೇಳಿಕೊಟ್ಟರೇ.. ಖಂಡಿತ ಇಲ್ಲ. ಕೊರಳಿಗೆ ಮೂರು ಗಂಟು ಬೀಳುವ ಮೊದಲು ತಮ್ಮಿಷ್ಟದ ಲೈಫ್ ಲೀಡ್ ಮಾಡುತ್ತಾ, ಬಿಂದಾಸ್ ಆಗಿ ಬದುಕುತ್ತಿದ್ದ ಹೆಂಗಳೆಯರು. ಅಷ್ಟಕ್ಕು ಈ ರೀತಿ ಚೇಂಜ್ ಆಗಲು ಕಾರಣ ಅತಿಯಾಗಿ ಹೊತ್ತುಕೊಂಡ ಇವರೇ ಕಟ್ಟಿಕೊಂಡ ಜವಾಬ್ದಾರಿಗಳು. ನಾನು ಇಷ್ಟಕ್ಕೇ ಸೀಮಿತ ಎಂದು ಅಂದುಕೊಂಡರೆ ಇಷ್ಟದ ಆಸೆಗಳನ್ನು ಗಂಟಿಟ್ಟು ಮೂಲೆಗುಂಪು ಮಾಡಿ ಬೇರೆಯವರಿಗೋಸ್ಕರ ಬದುಕು ನಡೆಸಬೇಕಾದ ಜೀವನ ಇದು.
ಮಗುವಿನ ದಯದಿ ತಾಯಿಯ ಪದವಿ: ಶ್ವೇತಾ ಶ್ರೀವಾಸ್ತವ್'ಗೆ ತಾಯ್ತನದ ಅನುಭೂತಿ!
ಅಷ್ಟಕ್ಕೂ ಮದುವೆಗೂ ಮೊದಲು ನೀವು ಹೇಗಿದ್ರಿ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಲೇಟ್ ಆಗಿ ಏಳುವುದು, ಬೇಕಾದ್ದನ್ನು ಮಾಡಿಕೊಂಡು ಹೊಟ್ಟೆತುಂಬಿಸಿಕೊಳ್ಳುವುದು, ಮನಸ್ಸು ಬಂದಾಗ ಮನೆ ಕ್ಲೀನ್ ಮಾಡುತ್ತಾ, ಫ್ಯಾಷನೇಬಲ್ ಲೈಫ್ ಲೀಡ್ ಮಾಡುವುದು, ಒಬ್ಬೊಬ್ಬರೇ ಇಲ್ಲವೇ ಫ್ರೆಂಡ್ಸ್ ಜೊತೆ ಹೊರಗೆ ಹೋಗಿ ಜಾಲಿಯಾಗಿ ಟೈಂ ಸ್ಪೆಂಡ್ ಮಾಡುವುದು ಹೀಗೆ. ಕಾಮನಬಿಲ್ಲಿನ ಬಣ್ಣಗಳಿಂದ ಕೂಡಿದ್ದ ಸುಂದರ ಬಣ್ಣಗಳ ಬದುಕು ಅದು. ಈಗ ನಡೆಸುತ್ತಿರುವುದು, ಹಳೇ ಕಾಲದ ಸಿನಿಮಾ ಕಪ್ಪು ಬಿಳುಪಿನ ಬದುಕು.
ಇಷ್ಟೇ ನಾ ಲೈಫ್ ಅಂದ್ರೆ? ಒಮ್ಮೆ ನಿಮಗಾಗಿ ಟೈಂ ಕೊಟ್ಟುಕೊಳ್ಳಬೇಕು ಅಂತ ನಿಮಗೆ ಅನಿಸುವುದಿಲ್ಲವೆ. ಇರುವುದು ಒಂದೇ ಬದುಕಾದರೂ ನಮ್ಮಿಷ್ಟದ ಬದುಕು ನಡೆಸುವುದರಲ್ಲಿ ಹೆಚ್ಚೆಚ್ಚು ಖುಷಿ ಇರುತ್ತೆ. ದಿನದಲ್ಲೊಮ್ಮೆ ನಿಮಗಾಗಿ ಟೈಂ ಕೊಟ್ಟುಕೊಂಡು ಬಿಂದಾಸ್ ಆಗಿರಿ. ನಾನು ಇತರರಂತೆ ಸುಂದರವಾಗಿ ಕಾಣಬೇಕು ಎಂಬ ಆಸೆ ಇದ್ದರೂ ಮನೆ ಕೆಲಸದಲ್ಲಿ ಟೈಂ ಇರುವುದಿಲ್ಲ. ಅಂತಹ ತಾಯಂದಿಗೆ ಮನೆಯಲ್ಲೇ ಮಾಡಬಹುದಾದ ಸರಳ ಬ್ಯೂಟಿ ಟಿಫ್ಸ್‌ಗಳು ಇಲ್ಲಿ ಹೇಳಲಾಗಿದೆ.
ಇನ್ನಾದರೂ ಮನೆಯಲ್ಲೇ ಇರುವ 24*7 ದುಡಿಮೆಯಲ್ಲಿ ಒಂದೆರಡು ಗಂಟೆ ಇವುಗಳನ್ನೂ ಮಾಡಿ ನೋಡಿ. ನಿಮಗೂ ಖುಷಿ, ಬದುಕುವ ಆಸೆ ಇಮ್ಮಡಿಗೊಳ್ಳುವುದು. ಇನ್ನು ನಿಮ್ಮ ಲೈಫ್ ನಿಮ್ಮ ಕೈನಲ್ಲಿದೆ.
* ತಲೆಗೂದಲಿಗೆ ಹಚ್ಚಿಕೊಳ್ಳುವ ಕೊಬ್ಬರಿ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಾಗೂ ಕೂದಲಿಗೆ ಹಚ್ಚಿ. ಇಡೀ ಸತತ ಕೆಲಸದಿಂದ ಒತ್ತಡಕ್ಕೆ ಒಳಗಾಗಿರುತ್ತೀರಿ, ಇದರಿಂದ ರಿಲಾಕ್ಸ್ ಮೂಡ್ ಸಿಗುತ್ತದೆ. ದೇಹವನ್ನು ತಂಪಾಗಿಸುತ್ತದೆ. ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿಯೂ ಹೆಚ್ಚುತ್ತದೆ. ರಾತ್ರಿ ಹಚ್ಚಿ ಬೆಳಗ್ಗೆ ಏಳುವುದರೊಳಗೆ ಮುಖದ ಚರ್ಮವೂ ಮೃದು ಎನಿಸುತ್ತದೆ.
* ಹುಬ್ಬಿಗೆ ಒಂದು ಶೇಪ್ ಕೊಡ್ಬೇಕು. ಅದಕ್ಕೆ ಪಾರ್ಲರ್‌ಗೆ ಹೋಗ್ಬೇಕು. ಆದ್ರೆ ಟೈಂ ಇಲ್ಲ. ಹಾಗಾದರೆ ಹುಬ್ಬಿನಲ್ಲಿ ಬೆಳೆದ ಎಕ್ಸಟ್ರಾ ಕೂದಲನ್ನು ಕಿತ್ತು ಹಾಕಿ. ಇಲ್ಲವೇ ಐಬ್ರೋ ರೇಝರ್ ನಿಂದ ನೀವೇ ಕೂದಲು ತೆಗೆಯುತ್ತಾ ಶೇಪ್ ನೀಡಬಹುದು.
* ಮನೆಯಲ್ಲಿರುವ ಹೇರ್ ಕಂಡೀಷನರ್ ಬಳಸಿ ರೇಝರ್ ಮೂಲಕ ಬೇಡದ ಕೂದಲನ್ನು ಶೇವ್ ಮಾಡಿಕೊಳ್ಳಬಹುದು. ಮನೆಯಲ್ಲೇ ವ್ಯಾಕ್ಸಿಂಗ್ ಸಹ ಮಾಡಿಕೊಳ್ಳಬಹುದು. ಇದಕ್ಕೆ ಹೆಚ್ಚು ಸಮಯದ ಅಗತ್ಯವಿಲ್ಲ.
ಗುರುವಾಗಿ ಬದುಕಲು ಕಲಿಸಿದ ಮಹಾ ತಾಯಿ!
* ಒಣಚರ್ಮ ಇರುವವರು ಶೀಟ್ ಮಾಸ್ಕ್‌ಅನ್ನು ಹಾಕಿಕೊಳ್ಳಬಹುದು. ಈ ಮಾಸ್ಕ್ ಹಾಕಿ ಸ್ವಲ್ಪ ಸಮಯ ಆರಾಮವಾಗಿರಿ. ನಿಮ್ಮ ತ್ವಚೆ ಶುಷ್ಕತೆಯನ್ನು ಕಳೆದು ಮೃದುವಾಗುತ್ತದೆ.
* ಕೆಲಸ ಮಾಡಿ ತುಂಬಾ ಸುಸ್ತಾದಾಗ ಚರ್ಮ ಡಲ್ ಆಗಿ ಕಾಣುತ್ತದೆ. ಆಯಾಸ ಎದ್ದು ಕಾಣುತ್ತಿರುತ್ತದೆ. ಈ ಸಂದರ್ಭದಲ್ಲಿ ಎಲ್ಲಾದರೂ ಹೊರಗೆ ಹೋಗಬೇಕಾದಲ್ಲಿ ಸನ್‌ಸ್ಕ್ರೀನ್ ಬಳಸಿ. ಇದು ಮುಖದಲ್ಲಿ ಕಾಣುವ ಸುಸ್ತನ್ನು ತಡೆದು ಮಾಯಿಶ್ಚರೈಸ್ ಕಾಯ್ದುಕೊಳ್ಳುತ್ತೆ.
* ಗೃಹಿಣಿಯಾದ ಕೂಡಲೇ ಸೌಂದರ್ಯವರ್ಧಕ ಬಳಸಬಾರದು ಅಂತೇನಿಲ್ಲವಲ್ಲ. ದಿನವಿಡೀ ಲವಲವಿಕೆಯಿಂದಿರುವಂತೆ ಕಾಣಲು ಮುಖಕ್ಕೆ ಕೋಲ್ಡ್ ಕ್ರೀಮ್, ತುಟಿಗೆ ಲಿಪ್ ಗ್ಲಾಸ್ ಹಚ್ಚಿ. ಅದಕ್ಕೆ ತಕ್ಕಂತೆ ಲೈಟ್ ಆಗಿಯಾದರೂ ಲಿಪ್‌ಸ್ಟಿಕ್ ಹಚ್ಚಿ. ನಿಮಗೆ ನೀವು ಅಂದ ಕಾಣಿಸುವಂತೆ ತಯಾರಾಗಿ.
* ದಿನವಿಡೀ ಕೆಲಸದ ಪರಿಣಾಮ ಕೂದಲಿನ ಆರೈಕೆ ಮಾಡಲು ಮರೆಯುವುದು ಸಾಮಾನ್ಯ. ಅದಕ್ಕೆ ಕೂದಲಿಗೆ ರಾತ್ರಿ ಮಲಗುವಾಗ ಕೊಬ್ಬರಿ ಎಣ್ಣೆ ಹಚ್ಚಬೇಕು. ಕೂದಲು ಒಣಗಿದಂತಾಗುವುದು, ಸಿಕ್ಕಾಗುವುದು, ಹಾಳಾಗಿ ಉದುರುವುದು, ಸ್ಪಿಟ್ ಆಗುವ ಸಮಸ್ಯೆಗೆಲ್ಲ ಇದು ಸಿಂಪಲ್ ಪರಿಹಾರ. ಜೊತೆಗೆ ಇದು ಕೂದಲು ಬೆಳೆಯಲೂ ಸಹಕಾರಿ.
* ಟೈಂ ಮಾಡಿಕೊಂಡು ವ್ಯಾಯಾಮ ಮಾಡಿ. ಇದರಿಂದ ನಿಮ್ಮ ಮನಸ್ಸು ಶಾಂತಿ ಹಾಗೂ ಉಲ್ಲಾಸದಿಂದ ಕೂಡಿರುತ್ತದೆ. ಇದಕ್ಕೇನು ಹೆಚ್ಚು ಸಮಯ ಬೇಡ. ಧ್ಯಾನ, ಪ್ರಾಣಾಯಾಮ, ಸೂರ್ಯ ನಮಸ್ಕಾರ, ಭುಜಂಗಾಸನ, ಸೇತುಬಂಧ ಸರ್ವಂಗಾಸನ, ಫಲ್ಕಾಸನ ಅಂದ್ರೆ ಮಲ್ಕೊಂಡು ಬಸ್ಕಿ ಹೊಡೆಯೋದು ಹೀಗೆ ವ್ಯಾಯಾಮ ಮಾಡಿದರೆ ಆರೋಗ್ಯಕ್ಕೂ ಉತ್ತಮ.