ಎಲ್ಲ ಗೆಳೆಯರ ಗುಂಪಿನಲ್ಲೂ ಒಬ್ಬ ಗೋವಿಂದ ಇರುತ್ತಾನೆ. ಎಲ್ಲರಿಗೂ ಮದುವೆಯಾದರೂ, ಕೆಲ ಗೆಳೆಯರಿಗೆ ಮಕ್ಕಳಾದ್ರೂ ಈತ ಮಾತ್ರ ಇನ್ನೂ ಸಿಂಗಲ್. 25ಕ್ಕೇ ಮ್ಯಾಚ್ ಹುಡುಕಾಟ ಆರಂಭಿಸಿದ್ರೂ ಮೂವತ್ತರ ಮೇಲೆ ಮೂರಾದ್ರೂ ಮುಗಿಯದ ಗೋವಿಂದನ ಹುಡುಕಾಟ. ಆಗಲೇ ಗೆಳೆಯರ ಮಕ್ಕಳು ಈತನಿಗೆ ಅಂಕಲ್ ಎನ್ನಲು ಪ್ರಾರಂಭಿಸಿವೆ. ಕೂದಲು ಉದುರಲಾರಂಭಿಸಿ, ಅರ್ಧ ತಲೆ ಈಗಾಗಲೇ ಜಾರುಬಂಡೆಯಾಗಿ ಇನ್ನುಳಿದ ಕೂದಲಿಗೂ ಜಾರಿ ಕೆಳಗೆ ಬೀಳಲು ಸುಲಭ ಮಾಡಿಕೊಟ್ಟಿದೆ.

ಈತನ ತಲೆ ನೋಡಿದ ಕೆಲ ಅಪರಿಚಿತರು ಕೂಡಾ ಹೆಸರನ್ನು ಗೆಸ್ ಮಾಡಿ 'ಗೋವಿಂದಾ ಗೋವಿಂದ' ಎಂದುಕೊಂಡು ಹೋದ ಕಹಿನೆನಪು ಕನ್ನಡಿ ನೋಡಿದಾಗಲೆಲ್ಲ ಕಾಡುತ್ತದೆ. ಆದರೆ, ಗೋವಿಂದ ಗುಣದಲ್ಲಿ ಅಪರಂಜಿ. ಈ ಹುಡುಗಿಯರಿಗದೇಕೆ ಮುಖದಲ್ಲಿ ಗುಣ ಕಾಣಿಸದೋ?! ಇಂಥ ಹಲವು ಗೋವಿಂದರ ಜೀವನದ ಕಾಮನ್ ಎಕ್ಸ್‌ಪೀರಿಯನ್ಸ್‌ಗಳೇನು ಗೊತ್ತಾ? 

ಗುದ್ದಾಟಕ್ಕಿಂತ ಹೆಚ್ಚು ಮುದ್ದಾಟವಿದ್ದರೆ ಸಂಬಂಧ ಚೆಂದ!

ಮದುವೆ ಕೆಲಸ ಪಾರಂಗತ

ಗೆಳೆಯರಿಗೆ, ಕಸಿನ್ಸ್‌ಗೆ ವಿವಾಹ  ಫಿಕ್ಸ್ ಆದಾಗಲೆಲ್ಲ ಮೊದಲು ಕಾಲ್ ಹೋಗುವುದೇ ಗೋವಿಂದನಿಗೆ. ಬಂದು ಅಡಿಯಿಂದ ಮುಡಿವರೆಗೆ ವಿವಾಹ ಕಾರ್ಯ ಸಾಂಗವಾಗಿ ನೆರವೇರಿಸಿಕೊಡಬೇಕಪ್ಪಾ ಎಂಬ ರಿಕ್ವೆಸ್ಟ್‌ನಲ್ಲಿ 'ನಿನಗೇನು ಮದುವೆಯೇ ಮಕ್ಕಳೇ' ಎಂಬ ಗೂಢಾರ್ಥ ಇರುವಂತೆ ಆತನಿಗೆ ತೋರುತ್ತದೆ. ಆದರೂ ಎಲ್ಲ ಕೆಲಸವನ್ನು ಹೆಗಲ ಮೇಲೆ ಹೊತ್ತುಕೊಂಡು ಆತ ಮಾಡುತ್ತಾನೆ.

ಫ್ಲವರ್ ಡೆಕೋರೇಶನ್‌ಗೆ ಹೇಳುವುದರಿಂದ ಹಿಡಿದು ಕಾರ್ ಡೆಕೋರೇಶನ್ ಮಾಡುವತನಕ, ಬಂದ ಗೆಸ್ಟ್‌ಗಳನ್ನು ಉಳಿವ ಕೋಣೆಗೆ ಕರೆದುಕೊಂಡು ಹೋಗುವುದರಿಂದ ಹಿಡಿದು ವಿವಾಹ ಮುಗಿದ ಮೇಲೆ ಅವರನ್ನು ಮನೆಯ ಬಸ್ ಹತ್ತಿಸುವ ತನಕ, ಮನೆಗೂ ಚೌಲ್ಟ್ರಿಗೂ ಹತ್ತಿಪ್ಪತ್ತು ರೌಂಡ್ ಕಾರ್ ಓಡಿಸಿ ವಿವಾಹಕ್ಕೆ ಸಂಬಂಧಿಸಿದ ಸರಕುಸರಂಜಾಮುಗಳನ್ನೆಲ್ಲ ಸಾಗಿಸುವವರೆಗೂ ಗೋವಿಂದ ನೋಡಿಕೊಳ್ಳುತ್ತಾನೆ. ಅಷ್ಟೇ ಏಕೆ, ಮದುವೆಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ, ಕಿಚಾಯಿಸುತ್ತಾ ಕೊನೆ ಕ್ಷಣದ ಕೆಲಸಗಳನ್ನೂ ಪಟಾಪಟ್ ಮಾಡಿಬಿಡುತ್ತಾನೆ. 11ನೇ ಮದುವೆ ಮುಗಿಸುವ ಹೊತ್ತಿಗೆ ಮದುವೆಯ ಎಬಿಸಿಡಿ... ಝೆಡ್ ವರೆಗೂ ಗೋವಿಂದನಿಗೆ  ತಿಳಿದುಹೋಗಿತ್ತು.

ಪ್ರಿಯ ಮಗನೇ, ವೈವಾಹಿಕ ಜೀವನದಲ್ಲಿ ನಾನು ಮಾಡಿದ ತಪ್ಪನ್ನು ನೀನು ಪುನರಾವರ್ತಿಸಬೇಡ...

ಡೆಕೋರೇಟರ್ ಕಂಪನಿ ಈತನನ್ನು ಗೆಳೆಯನಂತೆ ನೋಡುತ್ತಿತ್ತು. ನಗರದಲ್ಲಿ ಎಲ್ಲಿ ಕಾರ್ಡ್ ಪ್ರಿಂಟ್ ಮಾಡಿಸಿದರೆ ಚೀಪ್ ಆಗುತ್ತದೆ, ಯಾವ ಚೌಲ್ಟ್ರಿ ಒಳ್ಳೆಯದು, ವಿವಾಹಕ್ಕೆ ತರಕಾರಿ ಯಾವ ಮಾರ್ಕೆಟ್‌ನಲ್ಲಿ ಕೊಳ್ಳಬೇಕು, ನಗರದ ಅತ್ಯುತ್ತಮ ಕ್ಯಾಟೆರರ್ ಯಾರು ಎಲ್ಲವೂ ಗೊತ್ತಾಗಿತ್ತು. ಮದುವೆಯ ಕೆಲಸಗಳಲ್ಲಿ ಬಹುತೇಕವನ್ನು ಫೋನ್‌ಕಾಲಲ್ಲೇ ಮುಗಿಸಬಲ್ಲಷ್ಟು ಪರಿಣತನಾಗಿದ್ದ. ಆತನೇನಾದರೂ ಈ ಸಂಬಂಧ ಉದ್ಯಮ ಆರಂಭಿಸುವ ಯೋಚನೆ ಮಾಡಿದ್ದರೆ ಖಂಡಿತಾ ಕ್ರೋರ್‌ಪತಿಯಾಗುತ್ತಿದ್ದ. 

ಕೌನ್ಸೆಲರ್

ಹೀಗೆ ಸಿಂಗಲ್ ಆಗಿದ್ದಕ್ಕೇ ಮದುವೆಯಲ್ಲಿ ಮುಖ್ಯ ವ್ಯಕ್ತಿಯಂತೆ ಓಡಾಡಿ ವಿವಾಹವಾದ ಗೆಳೆಯನಿಗೂ, ಆತನ ಮನೆಯವರಿಗೂ, ಹುಡುಗಿಗೂ ಹತ್ತಿರದವನೆನಿಸಿಬಿಡುತ್ತಿದ್ದ ಗೋವಿಂದ. ಜೊತೆಗೆ, ಸಿಂಗಲ್ ಅಲ್ಲವೇ, ತಮ್ಮ ಗೋಳು ಕೇಳಲು ಈತನಲ್ಲಿ ಬೇಕಾದಷ್ಟು ಸಮಯವಿದೆ ಎಂದು ಬಗೆಯುತ್ತಿದ್ದ ಆತನ ವಿವಾಹಿತ ಗೆಳೆಯರೆಲ್ಲ ತಮ್ಮ ಸಂಸಾರದ ಗುಟ್ಟುಗಳನ್ನು ಈತನ ಬಳಿ ಮುಜುಗರವಿಲ್ಲದೆ ಹೇಳಿಕೊಳ್ಳುತ್ತಿದ್ದರು.

ಅಬ್ಬಬ್ಬಾ! ಮಗು ಹೆರಬೇಕಂದ್ರೆ ದೇಹ ಇಷ್ಟೆಲ್ಲ ಬದಲಾಗಬೇಕು

ಗೆಳೆಯರ ಪತ್ನಿಯರೂ ಪತಿಯ ಮೇಲೆ ದೂರು ಹೇಳಲು ಈತನಿಗೇ ಕಾಲ್ ಮಾಡುತ್ತಿದ್ದರು. ಈ ಅನುಭವಕ್ಕೆ ಖುಷಿ ಪಡಬೇಕೋ, ದುಃಖ ಪಡಬೇಕೋ ಗೋವಿಂದನಿಗೆ ಗೊಂದಲ. ಆದರೆ, ಅವರೆಲ್ಲರ ಸಂಸಾರದ ಸಮಸ್ಯೆಗಳಿಗೆಲ್ಲ ಪರಿಹಾರ ಹೇಳುವುದು ಈತನಿಗೆ ಕರತಲಾಮಲಕವಾಗಿಹೋಯ್ತು.

ನಿಂದ್ಯಾವಾಗ ಮದುವೆ?

ಗೆೋವಿಂದ ಯಾವುದೇ ಮದುವೆಮನೆಗೆ ಹೋಗಲಿ ಈ ಪ್ರಶ್ನೆ ಒಂದಲ್ಲ ಹತ್ತಿಪ್ಪತ್ತು ಬಾರಿ ಕೇಳಿಬರುತ್ತಿತ್ತು. ಫಂಕ್ಷನ್ ಹಾಲ್ ಮೊಳಗುತ್ತಿದೆಯೇನೋ ಎಂಬಷ್ಟು ಬೇಸತ್ತು ಹೋಗಿದ್ದ ಗೋವಿಂದ ಆರಂಭದಲ್ಲಿ ಭಯಾನಕವಾಗಿ ಕಾಡುತ್ತಿದ್ದ ಈ ಪ್ರಶ್ನೆಗೆ ನಿಧಾನವಾಗಿ ತಮಾಷೆಯಾಗಿ ಉತ್ತರಿಸಲು ಕಲಿತ. 

ಗೋವಿಂದನಿಗೆ ಹುಡುಗಿ ಹುಡುಕುವುದೇ ಎಲ್ಲರ ಗುರಿ

ಆರಂಭದಲ್ಲಿ ಗೆಳೆಯರಿಗೆಲ್ಲರಿಗೂ ತಮ್ಮ ಜೀವನಸಂಗಾತಿ ಹುಡುಕಿಕೊಳ್ಳುವ ಧಾವಂತ. ಹೆಂಡತಿ ಹಳಬಳಾದ ಮೇಲೆ ಅವರಿಗೆಲ್ಲ ಕಣ್ಣಿಗೆ ಬಿದ್ದದ್ದೇ ಸಿಂಗಲ್ ಸಿಸ್ಯ ಗೋವಿಂದ. ಇದೀಗ ಗೋವಿಂದನ ಗೆಳೆಯರು, ಕುಟುಂಬ, ನೆಂಟರಿಷ್ಟರು ಎಲ್ಲರೂ ಗೋವಿಂದ ಸಿಕ್ಕಾಗಲೆಲ್ಲ ಹುಡುಗಿ ಹುಡುಕಿ ಕೊಡುವ ಮಾತನಾಡುತ್ತಿದ್ದರು. ಇವರೆಲ್ಲರ ಬದುಕಲ್ಲೂ ತನ್ನ ವಿವಾಹವೇ ಗುರಿಯಾಗಿ ಹೋದದ್ದು ಗೋವಿಂದನಿಗೆ ಖುಷಿಯನ್ನು ನೀಡಿತಾದರೂ, ಬಾಯಿಮಾತಿನಲ್ಲಿ ಹೇಳಿದವರೆಲ್ಲ ಪ್ರಯತ್ನ ಹಾಕುವುದಿಲ್ಲ ಎಂಬುದು ನಿಧಾನವಾಗಿ ಅರಿವಾಯಿತು. 

ಟಾಯ್ಲೆಟ್ ಸೀಟ್ ಮುಖಾಂತರ ಲೈಂಗಿಕ ಕಾಯಿಲೆಗಳು ಹರಡುತ್ತಾ?

ಬದುಕು ಸುಲಭವಲ್ಲ

ಹೌದು, ಈ ಎಲ್ಲ ಅಟೆನ್ಷನ್ನನ್ನು ಗೋವಿಂದ ಎಂಜಾಯ್ ಮಾಡಿರಬಹುದು. ಆದರೆ, ಅದೆಷ್ಟು ಹಗಲು ರಾತ್ರಿಗಳನ್ನು ಆತ ಒಂಟಿತನದಲ್ಲಿ ಕಳೆದಿದ್ದಾನೆಂಬುದು ಆತನಿಗೆ ಮಾತ್ರ ಗೊತ್ತು. ಗೆಳೆಯರಿಗೆಲ್ಲ ಮದುವೆಯಾಗುವವರೆಗೆ ಮಜವಾಗಿದ್ದ ಜೀವನ. ಆಗ ಲೇಟ್ ನೈಟ್ ಪಾರ್ಟಿಗಳಿದ್ದಲ್ಲಿ ಈಗ ಗೆಳೆಯರ ಮಕ್ಕಳ ಬರ್ತ್‌ಡೇ ಪಾರ್ಟಿ ಬಂದಿತ್ತು. ಆಗ ಮಾತಿಗೆ ಸುಲಭವಾಗಿ ಸಿಗುತ್ತಿದ್ದ ಗೆಳೆಯರೆಲ್ಲ ಈಗ ಪತ್ನಿಯ ಜೊತೆ ಸುತ್ತುವುದರಲ್ಲಿ, ಮಕ್ಕಳ ಡೈಪರ್ ಬದಲಿಸುವುದರಲ್ಲಿ ಬ್ಯುಸಿಯಾಗಿದ್ದರು.

ಸಡನ್ ಆಗಿ ವೀಕೆಂಡ್ ಟ್ರಿಪ್ ಹೊರಡುತ್ತಿದ್ದ ಗೆಳೆಯರ ಗುಂಪು  ಚದುರಿತ್ತು. ಎಲ್ಲರೂ ಅವರವರ ಬದುಕಿನಲ್ಲಿ ಮುಳುಗಿ ಹೋಗಿದ್ದರು. ಗೋವಿಂದನ ಗೋಳು ಅವನೊಳಗಿನ ಆರ್ತನಾದವಾಗಿ ಅವನಲ್ಲೇ ಉಳಿಯಿತು. ಹಾಗಂತ ಗೋವಿಂದ ಆಶಾಭಾವ ಕಳೆದುಕೊಂಡಿಲ್ಲ. ತನ್ನ ಹುಡುಗಿ(ಆಂಟಿ?!) ಸಿಕ್ಕಾಗ ಲೇಟಾಗಿ ಸಿಕ್ಕಿದ್ದಕ್ಕೆ ದಬಾಯಿಸಿಯೇ ತೀರುವೆನೆಂದು ಕನಸು ಕಾಣುತ್ತಾ ದಿನದೂಡುತ್ತಿದ್ದಾನೆ.

ನಿಮ್ಮ ಗರ್ಲ್‌ಫ್ರೆಂಡ್ ನಿಮ್ಮಿಂದ ಬಯಸುವುದೇನು ಗೊತ್ತಾ ?