ವಿಚಿತ್ರವಾದರೂ ಇವು ವಿಶ್ವದಾಖಲೆಗಳಿವು!
ನಮ್ಮ ಮಿತಿಯನ್ನು ಸಾಧ್ಯವಾದಷ್ಟು ಹಿಗ್ಗಿಸುವುದು ಮನುಷ್ಯನ ಸಹಜ ಗುಣ. ಒಲಿಂಪಿಕ್ಸ್ ಅಂಗಳದಲ್ಲೇ ಆಗಲಿ, ಮನೆಯ ಹಿತ್ತಲಿನಲ್ಲಿ ದೂರಕೆ ಕಲ್ಲು ಬೀಸುವ ಆಟವೇ ಆಗಲಿ, ಮುಂಚಿಗಿಂತ ಹೆಚ್ಚಿನ ಪ್ರದರ್ಶನ ನೀಡಿದರೆ ಅದರಲ್ಲಿರೋ ಖುಷಿಯೋ ಬೇರೆ. ಹೀಗೆ ಅನಿರೀಕ್ಷಿತವಾಗಿ ಏನೋ ಮಾಡಿದ್ದು ದಾಖಲೆಯಾಗಿ, ಗಿನ್ನಿಸ್ ಬುಕ್ ಸೇರಿದ ಉದಾಹರಣೆಗಳು ಹಲವು. ಅವುಗಳಲ್ಲಿ ಚಿತ್ರವಿಚಿತ್ರವಾದ ಕೆಲವನ್ನು ಓದಿ ಮಜಾ ತೆಗೆದುಕೊಳ್ಳಿ.
ಅತಿ ದೂರದ, ಅತಿ ದೊಡ್ಡದಾದ, ಅತ್ಯಂತ ಚಿಕ್ಕದಾದ, ಅತ್ಯಂತ ಕುಳ್ಳಗಿನ ಹೀಗೆ ಜಗತ್ತಿನಲ್ಲಿ ಎಲ್ಲ ವಿಷಯದ 'ಅತಿ'ಗಳೂ ದಾಖಲೆಗಳೇ. ಆದರೆ ಇನ್ನು ಕೆಲವು ದಾಖಲೆಗಳಿವೆ. ಹುಚ್ಚಾಟಗಳು ಹೆಚ್ಚಾಗಿ ದಾಖಲೆ ಪುಸ್ತಕ ಸೇರಿದಂತವು. ದಾಖಲೆ ಮಾಡಲೆಂದೇ ಮಾಡಿದ ಹುಚ್ಚಾಟಗಳೆಂದರೂ ಸರಿ. ಜನ ಹೆಸರಿಗಾಗಿ ಏನೇನೆಲ್ಲ ಮಾಡುತ್ತಾರಪ್ಪಾ?!
1. ಪ್ರಾಮ್ ತಳ್ಳಿಕೊಂಡು ಓಡುವ ಹಾಫ್ ಮ್ಯಾರಥಾನ್
ಪೇರೆಂಟ್‌ಹುಡ್ ನಿಮ್ಮನ್ನು ಹಿಂದೆಳೆಯದೆ ಮತ್ತಷ್ಟು ಚುರುಕಾಗಿಸಬೇಕೆನ್ನುವವರಿಗಾಗಿ ಈ ಓಟ. ಮಗುವನ್ನು ಪ್ರಾಮ್‌ನಲ್ಲಿ ಕೂರಿಸಿಕೊಂಡು ಓಡುವ ಓಟ. ಅಮೆರಿಕದ ನ್ಯಾನ್ಸಿ ಸ್ಕೂಬ್ರಿಂಗ್ ಒಂದೂವರೆ ಗಂಟೆ 51 ಸೆಕೆಂಡ್‌ಗಳಲ್ಲಿ ಹಾಫ್ ಮ್ಯಾರಥಾನ್ ಪೂರೈಸಿ ಗಿನ್ನಿಸ್ ಪುಸ್ತಕ ಸೇರಿದ್ದರೆ, ಪುರುಷರ ವಿಭಾಗದಲ್ಲಿ ಬ್ರಿಟನ್‌ನ ನೀಲ್ ಡೆವಿಸನ್ ಒಂದೂಕಾಲು ಗಂಟೆ 8 ಸೆಕೆಂಡ್‌ಗಳಲ್ಲಿ ಹಾಫ್ ಮ್ಯಾರಥಾನ್ ಪೂರೈಸಿ ರೆಕಾರ್ಡ್ ಮಾಡಿದ್ದಾರೆ. ನೀವು ಇನ್ನೂ ಮಗುವಿನ ಪೋಷಕರಲ್ಲದೆಯೂ ಓಡಿ ದಾಖಲೆ ಮಾಡುವ ಆಸೆಯಿದ್ದರೆ ಸೂಟ್ ಹಾಕಿಕೊಂಡು, ಸ್ಕೂಬಾ ಡೈವಿಂಗ್ ಫ್ಲಿಪ್ಪರ್ಸ್ ಹಾಕಿಕೊಂಡು ಅಥವಾ ಇತರೆ ಯಾವುದೇ ಚಿತ್ರವಿಚಿತ್ರ ವೇಷಭೂಷಣ ಧರಿಸಿ ಓಡಿ ದಾಖಲೆ ಮಾಡುವ ಪ್ರಯತ್ನಕ್ಕೆ ಕೈ ಹಾಕಬಹುದು.
ಜಗತ್ತಿನ ಅತಿ ಎತ್ತರದ ಕಟ್ಟಡಗಳ ಬಗ್ಗೆ ನಿಮಗೆ ಮಾಹಿತಿ ಇದೆಯೇ?
2. ನಿಮಿಷದಲ್ಲಿ 46 ಟಾಯ್ಲೆಟ್ ಸೀಟನ್ನು ತಲೆಯಲ್ಲೇ ಒಡೆದ ಭೂಪ!
ಅಲ್ಲಾ, ತಲೆ ಚಚ್ಚಿಕೊಳ್ಳಲು ಬೇರೆ ಏನು ಸಿಗಲಿಲ್ಲವೇ ಎಂದು ನಿಮಗೆನಿಸಬಹುದು. ಏಕೆಂದರೆ ಟಾಯ್ಲೆಟ್ ಸೀಟ್‌ಗೆ ತಲೆಗಿಂತ ದೇಹದ ಬೇರೆ ಭಾಗವೇ ಹೆಚ್ಚು ಆಪ್ತ! ಆದರೆ, ಗೋಡೆಗೆ ತಲೆ ಚಚ್ಚಿಕೊಂಡಿದ್ದರೆ ಗೋರಿ ಸೇರಬೇಕಾಗುತ್ತದೆ ಎಂದೋ ಏನೋ ಅಮೆರಿಕದ ಕೆವಿನ್ ಶೆಲ್ಲಿ ಒಂದೇ ನಿಮಿಷದಲ್ಲಿ 46 ಮರದ ಟಾಯ್ಲೆಟ್ ಸೀಟ್‌ಗಳನ್ನು ತಲೆಯಲ್ಲಿ ಒಡೆದು ಗಿನ್ನಿಸ್ ದಾಖಲೆ ಮಾಡಿದ್ದಾರೆ.
3. ಕಣ್ಣಿನ ಕೆಳಭಾಗ ಎಳೆದ ತೂಕ ಕೇಳಿದ್ರೆ ಕಣ್ಕಣ್ಣು ಬಿಡ್ತೀರಿ...
ತೋಳುಗಳು ತೂಕ ಎತ್ತಿದ್ರೆ ಸಾಲದು, ದೇಹದ ಬೇರೆ ಬೇರೆ ಭಾಗಗಳು, ಅಂಗಗಳು ಎತ್ತಿದ ತೂಕವೂ ಗಿನ್ನಿಸ್ ಬುಕ್ ಸೇರಿವೆ. ಅದರಲ್ಲೂ ತಲೆಯ ಈ ಡೆಲಿಕೇಟ್ ಭಾಗಗಳು ಎಳೆದ ತೂಕ ನಂಬಲಸಾಧ್ಯವೇ ಸೈ. ಬ್ರಿಟನ್‌ನ ಥಾಮಸ್ ಬ್ಲಾಕ್‌ಥೋರ್ನ್ ಮಹಾಶಯನ ನಾಲಿಗೆ ಬರೋಬ್ಬರಿ 12.5 ಕೆಜಿ ತೂಕ ಎತ್ತಿ ದಾಖಲೆ ಸೇರಿ ಜಗತ್ತಿನ ಇತರ ನಾಲಿಗೆಗಳು ತನ್ನ ಬಗ್ಗೆ ಮಾತನಾಡುವಂತೆ ಮಾಡಿದೆ. ಇನ್ನು ನಾಲಿಗೆಗಿಂತ ಎಷ್ಟೋ ಪಟ್ಟು ಪುಟಾಣಿಯಾಗಿರುವ ಕಣ್ಣಿನ ಕೆಳಭಾಗ 14 ಕೆಜಿ ತೂಕ ಎತ್ತಿ ಕಣ್ಣು ಮಿಟುಕಿಸಿದೆ. ಅಂದ ಹಾಗೆ ಈ ಬಲಭೀಮ ಕಣ್ಣುಗಳು ಮಂಜಿತ್ ಸಿಂಗ್‌ರದ್ದು. ಚೀನಾದ ಯಾಂಗ್ ಗ್ವಾಂಗ್ ತನ್ನೆರಡೂ ಕಣ್ಣುಗಳ ಕೆಳಭಾಗದಿಂದ 23.5 ಕೆಜಿ ತೂಕವನ್ನೆತ್ತಿ ತಾಕತ್ತು ಪ್ರದರ್ಶಿಸಿದ್ದಾನೆ. ಭಾರತದ ರಾಕೇಶ್ ಕುಮಾರ್ ತಮ್ಮ ಒಂದೇ ಕಿವಿಯಿಂದ 80.78 ಕೆಜಿ ತೂಕವೆತ್ತಿ ಗಿನ್ನಿಸ್ ದಾಖಲೆ ಸೇರಿದ್ದಾರೆ.
ಇದು ಜಗತ್ತಿನ ದುಬಾರಿ ರೆಸಾರ್ಟ್... ಇದರ ಬಾಡಿಗೆ ಕೇಳಿಯೊಮ್ಮೆ!
4. ಐಸ್‌ನೊಳಗೆ ಕುಳಿತ ಬಾಸ್
ಹಿಮಪ್ರದೇಶದಲ್ಲಿ ಒಂದು ದಿನವಾದರೂ ಕಳೆದವರಿಗೆ ಈ ಐಡಿಯಾ ಕೇಳಿಯೇ ಮೈನಡುಕ ಬಂದೀತು. ನೆದರ್‌ಲೆಂಡ್‌ನ ವಿಮ್ ಹಾಫ್ ಎಂಬಾತ ಫುಲ್ ಬಾಡಿಯನ್ನು 1 ಗಂಟೆ 52 ನಿಮಿಷ 42 ಸೆಕೆಂಡ್‌ಗಳ ಕಾಲ ಐಸ್‌ನೊಳಗೆ ಅದ್ದಿ ಕುಳಿತ್ತಿದ್ದ. ಡಿಸ್ಕವರಿ ಚಾನೆಲ್‌ನ ಎಕ್ಸ್ಟ್ರಾರ್ಡಿನರಿ ಪೀಪಲ್ ಸೀರೀಸ್‌ನಲ್ಲೂ ಈತ ಕಾಣಿಸಿಕೊಂಡಿದ್ದ.
5. ಬ್ಯಾಕ್‌ನಲ್ಲಿ ಬಲೂನ್ ಒಡೆದ ಭೂಪೆ
ಅಯ್ಯೋ ಇದೇನು ದೊಡ್ಡ ಕೆಲಸ, ನಾವಿದನ್ನು ಆಗಾಗ ಪಾರ್ಟಿಗಳಲ್ಲಿ ಆಡುತ್ತೇವೆ ಎಂದು ನಿಮಗನಿಸಬಹುದು. ಹಾಗಿದ್ದರೆ ಜರ್ಮನಿಯ ಜೂಲಿಯಾ ಗುಂಥೆಲ್ ಮಾಡಿದ ದಾಖಲೆ ಮುರಿದು ನಿಮ್ಮ ಹೆಸರನ್ನು ಗಿನ್ನಿಸ್‌ಗೆ ಸೇರಿಸಿಕೊಳ್ಳಲು ಪ್ರಾಕ್ಟೀಸ್ ಆರಂಭಿಸಿ. ಜೂಲಿಯಾ 12 ಸೆಕೆಂಡ್‌ನಲ್ಲಿ 3 ಬಲೂನ್‌ಗಳನ್ನು ತನ್ನ ಬ್ಯಾಕ್‌ನಿಂದಲೇ ಬ್ಲ್ಯಾಸ್ಟ್ ಮಾಡಿ ಟ್ಯಾಲೆಂಟ್ ಮೆರೆದಿದ್ದಾಳೆ.
ವಾಟರ್ ಪಾರ್ಕ್‌ಗೆ ಹೋಗಿದ್ರಾ? ಎಂಥಾ ನೀರಿನಲ್ಲಿ ಆಡಿಬಂದಿರಿ ಗೊತ್ತಾ?
6. ಕಲ್ಲಂಗಡಿ ಕಟ್ ಮಾಡೋಕೆ ಹೊಟ್ಟೆಯೇ ಚಾಪಿಂಗ್ ಬೋರ್ಡ್!
ಆಸ್ಟ್ರೇಲಿಯಾದ ಸೆಲಿಯಾ ಕರ್ಟಿಸ್ ತನ್ನ ಹೊಟ್ಟೆಯನ್ನೇ ಚಾಪಿಂಗ್ ಬೋರ್ಡ್ ಆಗಿ ನೀಡಿದರೆ, ಜಿಮ್ ಹಂಟರ್ ಅದರ ಮೇಲೆ ಒಂದೇ ನಿಮಿಷದಲ್ಲಿ 25 ಕಲ್ಲಂಗಡಿ ಹಣ್ಣುಗಳನ್ನು ಚಕಚಕನೆ ಕಟ್ ಮಾಡಿ ಮುಗಿಸಿ ದಾಖಲೆ ಮೆರೆದ. ಇಷ್ಟಕ್ಕೂ ಕಲ್ಲಂಗಡಿ ಕಟ್ ಮಾಡಲು ಅವರು ಬಳಸಿದ ಆಯುಧ ಕೇಳಿದರೆ ಇನ್ನಷ್ಟು ಭಯವಾಗುತ್ತದೆ. ಅದೇ ಮಚ್ಚು.
7. ನೀರು ತರುವೆನೆಂದು ನಾರಿ.... ಅಲ್ಲಲ್ಲ, ನಾಯಿ...
ನಿಮ್ಮ ಹೆಸರು ದಾಖಲೆ ಸೇರದಿದ್ದರೇನು, ನಿಮ್ಮ ನಾಯಿಯ ಹೆಸರು ಸೇರಿದರೂ ಸೇರಬಹುದು. ಆಸ್ಟ್ರೇಲಿಯಾದ ನಾಯಿ ಸ್ವೀಟ್ ಪೀ ಒಂದೇ ಸಮಯದಲ್ಲಿ ಎರಡು ದಾಖಲೆ ಬರೆದಿದೆ. ಒಂದು ಲೋಟ ನೀರನ್ನು ಹೊತ್ತು ಹತ್ತು ಹೆಜ್ಜೆ ಮುಂದಕ್ಕೂ, ಹತ್ತು ಹೆಜ್ಜೆ ಹಿಂದಕ್ಕೂ ಹೋಗಿ ಸ್ವೀಟಿ ದಾಖಲೆ ಪುಸ್ತಕ ಸೇರಿದೆ.