ಬಹುತೇಕ ಬೆಂಗಳೂರು, ಮಂಗಳೂರು, ಮೈಸೂರಿಗರು ಹಾಗೂ ಇಲ್ಲಿಗೆ ಬೇಸಿಗೆ ಪ್ರವಾಸಕ್ಕೆ ಬರುವವರು ವಾಟರ್ ಪಾರ್ಕ್‌ಗಳಿಗೆ ಹೋಗುವುದು ಸಾಮಾನ್ಯ. ಆದರೆ ಆ ಬಣ್ಣಬಣ್ಣದ ಸ್ಲೈಡ್‌ಗಳು, ಸ್ವಚ್ಛ ಸುಂದರ ನೀಲಿ ಕಾಣುವ ನೀರು ನಿಮ್ಮ ಕಣ್ಣಿಗೆ ಮೋಸ ಮಾಡುತ್ತಿರಬಹುದು. ವಾಟರ್ ಪಾರ್ಕ್‌ಗಳ ಕುರಿತ ಈ ಸಂಗತಿಗಳು ನಿಮಗೆ ತಿಳಿದಿರಲಿ.

1. ಬ್ಯಾಕ್ಟೀರಿಯಾಗಳಿಗಿಲ್ಲ ಬ್ಯಾರಿಕೇಡ್
ವಾಟರ್ ಪಾರ್ಕ್‌ನ ನೀರಿನಲ್ಲಿ ನೀವು ಈಜುವಾಗ, ಹಾರಿ ಹಾರಿ ಕುಣಿಯುವಾಗ ನಿಮ್ಮೊಂದಿಗೆ ಲಕ್ಷಾಂತರ ಬ್ಯಾಕ್ಟೀರಿಯಾಗಳು ಸಹ ಕೇಕೆ ಹಾಕಿಕೊಂಡು ಈಜುತ್ತಿರುತ್ತವೆ! ನಿಮ್ಮ ಮೈಕೈ ಮುಖದ ಮೇಲೆ ಕುಳಿತು, ಅವೂ ಹಾರಾಟದ ಮಜವನ್ನು ಅನುಭವಿಸುತ್ತಿರುತ್ತದೆ. ವಾಟರ್‌ಪಾರ್ಕ್ ಮ್ಯಾನೇಜ್‌ಮೆಂಟ್‌ಗಳೇನೋ ಪ್ರವಾಸಿಗರನ್ನು ಸುರಕ್ಷಿತವಾಗಿಡಲು ಸಾಕಷ್ಟು ಕ್ರಮ ವಹಿಸುತ್ತವೆ. ಆದರೆ, ಜನ ಜಾಸ್ತಿ ಇದ್ದಾಗ ಸಂಪೂರ್ಣ ಸ್ವಚ್ಛವಾಗಿಡುವುದು ದೂರದ ಮಾತು. ಶೇ.58ರಷ್ಟು ಸಾರ್ವಜನಿಕ ಪೂಲ್‌ಗಳಲ್ಲಿ ಇ ಕೊಲಿ ಬ್ಯಾಕ್ಟೀರಿಯಾ ಇದ್ದೇ ಇರುತ್ತದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಹಾಗೂ ಪ್ರಿವೆನ್ಷನ್(ಸಿಡಿಸಿ) ಸಂಸ್ಥೆ ಹೇಳಿದೆ. ಇನ್ನು ಎಲ್ಲರ ಕಾಲಿನಿಂದ ಇಳಿವ ಫೂಟ್ ಫಂಗಸ್ ಕೂಡಾ ನೀರಿನ ತುಂಬಾ ಹರಡಿರುತ್ತವೆ. 

2. ಕ್ಲೋರಿನ್ ಗ್ಯಾಸ್ ಸಮಸ್ಯೆ ತರಬಹುದು.
ಸಾರ್ವಜನಿಕ ನೀರಿನ ಪೂಲ್‌ಗಳನ್ನು ಇನ್ಫೆಕ್ಷನ್‌ರಹಿತವಾಗಿಸಲು ಕ್ಲೋರಿನ್ ಬಳಸಲಾಗುತ್ತದೆ. ಆದರೆ, ಕೆಲವೊಮ್ಮೆ ನೀರಿನೊಳಗೆ ಈ ಕೆಮಿಕಲ್ಸ್ ಕ್ಲೋರಿನ್ ಗ್ಯಾಸ್ ಕ್ಲೌಡ್ ಸೃಷ್ಟಿಸಬಹುದು. ಹೀಗೆ ಕ್ಲೋರಿನ್ ಗ್ಯಾಸ್ ಉತ್ಪಾದನೆಯಾದರೆ ವಾಟರ್ ಪಾರ್ಕ್ ಬಳಸುತ್ತಿರುವವರಲ್ಲಿ ಉಸಿರಾಟ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಇಲ್ಲವೇ ಕ್ಲೋರಿನ್ ನೀರು ಈಜುವಾಗ ಹೊಟ್ಟೆ ಸೇರಿದರೂ, ಅಸ್ತಮಾ, ಕಣ್ಣಿನ ಉರಿ, ತುರಿಕೆ, ಶ್ವಾಸಕೋಶದ ಸಮಸ್ಯೆಗಳು ಕಾಣಿಸಬಹುದು. ಇನ್ನು ಜನರು ಹಚ್ಚಿರುವ ಸನ್‌ಸ್ಕ್ರೀನ್ ಲೋಶನ್ಸ್, ಆಯಿಂಟ್‌ಮೆಂಟ್, ಪೌಡರ್ ಇತ್ಯಾದಿ ಕೆಮಿಕಲ್ಸ್‌ಗಳು ಕೂಡಾ ನೀರಿಗಿಳಿದಿರುತ್ತವೆ.

ನೀರಿಗೆ ಬಿದ್ದ ಮಗುವನ್ನು ರಕ್ಷಿಸಿದ ಶ್ವಾನ 

3. ಸ್ವಿಮ್ ಡೈಪರ್‌ಗಳು ಅಷ್ಟೇನು ಪರಿಣಾಮಕಾರಿಯಲ್ಲ
ಇನ್ನೂ ಟಾಯ್ಲೆಟ್ ಟ್ರೇನಿಂಗ್ ಆಗದ ಮಕ್ಕಳನ್ನು ಸಾರ್ವಜನಿಕ ಪೂಲ್‌ನಲ್ಲಿ ಆಡಿಸುವಾಗ ಸ್ವಿಮ್ ಡೈಪರ್ಸ್ ಹಾಕಬಹುದು. ಅವು ಮಲವನ್ನು ಹಿಡಿದಿಟ್ಟುಕೊಳ್ಳಬಹುದು. ಆದರೆ, ಅದೇನು ಲೀಕ್‌ಪ್ರೂಫ್ ಅಲ್ಲ. ಹೀಗಾಗಿ ಅದರಿಂದ ಕೀಟಾಣುಗಳು ಜೊತೆಗೆ ಸ್ವಲ್ಪ ಮಲ ನೀರಿಗಿಳಿಯುವುದು ಕಷ್ಟದ ಮಾತೇನಲ್ಲ. 

4. ವಾಟರ್‌ಪಾರ್ಕ್‌ಗಳ ಕೊಳಚೆಯಲ್ಲಿ ಏನೇನು ಕಸವಿರುತ್ತದೆ ಗೊತ್ತಾ?
ವಾಟರ್ ಪಾರ್ಕ್‌ಗಳ ಕೊಳಚೆ ನೀರಿನಲ್ಲಿ ಕೂದಲು, ಸತ್ತ ಜಿರಲೆಗಳು, ಇಲಿ, ಹಕ್ಕಿಗಳು, ಬ್ಯಾಂಡ್ ಏಡ್ಸ್, ಗಲೀಜಾದ ಸ್ವಿಮ್ ಡೈಪರ್ಸ್, ಗ್ಲಾಸ್, ಕೊಳೆತ ಆಹಾರ ಪದಾರ್ಥಗಳು, ಬಹಳ ದಿನದಿಂದ ಒದ್ದೆಮುದ್ದೆಯಾದ ಬಟ್ಟೆಯ ಚೂರುಗಳು, ಕನ್ನಡಕದ ಕವರ್ ಸೇರಿದಂತೆ ಎಲ್ಲ ರೀತಿಯ ಕಸವೂ ಮಿಳಿತವಾಗಿರುತ್ತದೆ. ಜನರೆಷ್ಟು ಕೊಳಕು ಎಂಬುದು ಇಲ್ಲಿನ ಡ್ರೈನೇಜ್ ನೋಡಿದರೆ ತಿಳಿದೀತು. 

ನಾನು ಕುಡಿಯೋ ನೀರು ಆರೋಗ್ಯಕ್ಕೆ ಮಾರಕ

5. ನೀರಿನ ಪಾತ್ರವೂ, ಅದರ ತುಂಬ ತುಂಬಿದ ಮೂತ್ರವೂ!
ಹೌದು, ವಾಟರ್ ಪಾರ್ಕ್‌ ಪೂಲ್‌ಗಳಲ್ಲಿ ಜನ ಆಡುವಾಗ, ಈಜುವಾಗ ಬಹುತೇಕರು ಮೂತ್ರ ಮಾಡುತ್ತಾರೆ. ಇನ್ನು ನಮ್ಮ ಭಾರತದಲ್ಲಿ ಬಹುತೇಕರಿಗೆ ಎಂಜಲು ಉಗುಳುವ ಚಟ. ಅಲ್ಲೇ ಉಗಿಯುವುದು, ಅಲ್ಲೇ ಸುಸೂ ಮಾಡುವುದು, ಅಲ್ಲೇ ಆಡುವುದು, ಜೊತೆಗೆ ನೀರು ಸೇರುವ ಬೆವರು... ಯಪ್ಪಾ! ಸಾವಿರಾರು ಜನರ ಮೂತ್ರದ ನಡುವೆ ಆಡುವ ಕಲ್ಪನೆ ಬಂದರೆ ಅಲ್ಲೇ ವಾಂತಿಯೂ ಆದೀತು. ಈ ಪೂಲ್ ನೀರಿನಿಂದ ಮೂತ್ರವನ್ನು ಬೇರ್ಪಡಿಸಬೇಕೆಂದರೆ ಇರುವ ಒಂದೇ ದಾರಿ ಅಷ್ಟೂ ನೀರನ್ನು ಖಾಲಿ ಮಾಡಿ ಹೊಸ ನೀರು ತುಂಬುವುದು. ಅಷ್ಟೆಲ್ಲ ಪ್ರತಿದಿನ ಮಾಡಲಾದೀತೇ?

ವಾಟರ್‌ಪಾರ್ಕ್‌ಗೆ ಹೋಗುವಾಗ ಈ ಟಿಪ್ಸ್‌ಗಳನ್ನು ಗಮನದಲ್ಲಿಡಿ.
- ನಿಮ್ಮ ಮಕ್ಕಳು ನಿಮ್ಮದೇ ಜವಾಬ್ದಾರಿ. ಯಾವುದೇ ಸುರಕ್ಷತಾ ದೋಷಕ್ಕೆ ಮ್ಯಾನೇಜ್‌ಮೆಂಟನ್ನು ದೂರುವುದರಲ್ಲಿ ಅರ್ಧವಿಲ್ಲ.
- ವಾಟರ್‌ಪಾರ್ಕ್‌ಗೆ ಹೋಗುವ ಮುನ್ನ ಸ್ನಾನ ಮಾಡಿ. ಸಾಧ್ಯವಾದಷ್ಟು ನಿಮ್ಮ ಸ್ವಚ್ಛತೆ ಕಾಪಾಡಿಕೊಳ್ಳಿ. 
- ಆಗಾಗ ನಿಮ್ಮ ಮಗುವಿನ ಡೈಪರ್ ಬದಲಾಯಿಸಿ. 
- ಸ್ಕಿನ್ ಇನ್ಫೆಕ್ಷನ್ ಹಾಗೂ ಅಥ್ಲೀಟ್ಸ್ ಫೂಟ್ ಸಮಸ್ಯೆಯಿಂದ ದೂರ ಉಳಿಯಲು ವಾಟರ್ ಶೂಸ್ ತೆಗೆದುಕೊಂಡು ಹೋಗಿ. 
- ವಾಟರ್ ಪಾರ್ಕ್‌ನಿಂದ ಹೊರ ಬರುತ್ತಿದ್ದಂತೆಯೇ ಮತ್ತೆ ಸ್ನಾನ ಮಾಡಿ. 
- ನೀರಿನಲ್ಲಿ ಗ್ಲಾಸ್ ಚೂರು, ಬಳೆಯೋಡು, ಪ್ಲಾಸ್ಟಿಕ್ ಮುಂತಾದ ಕಸ, ಕೊಳೆ ಕಾಣಿಸಿದರೆ ಅಲ್ಲಿನ ಸಿಬ್ಬಂದಿ ಗಮನಕ್ಕೆ ತನ್ನಿ.