Oscar the cat death prediction: ಆಸ್ಪತ್ರೆಯೊಂದರಲ್ಲಿ ವಾಸಿಸುವ ಈ ಬೆಕ್ಕು ಸಾವಿನ ಬಗ್ಗೆ ಅತ್ಯಂತ ನಿಖರವಾದ ಭವಿಷ್ಯ ನುಡಿಯುತ್ತದೆ. ಬೆಕ್ಕಿನ ಈ ವರ್ತನೆಯಿಂದ ನರ್ಸಿಂಗ್ ಹೋಮ್‌ನವರಿಗೆ ಒಂದು ಕಡೆ ಅನುಕೂಲವಾಗುತ್ತಿದ್ದರೆ, ಇನ್ನೊಂದೆಡೆ ಜನರು ಗಾಬರಿಗೊಳ್ಳುತ್ತಿದ್ದಾರೆ. ಬೆಕ್ಕು ಯಾವ ರೋಗಿ ಸಾವನ್ನಪ್ಪಲಿದ್ದಾರೋ...

ಬೆಕ್ಕುಗಳ ಓಡಾಟ ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇರುತ್ತದೆ. ಅದರಲ್ಲೂ ಬೆಕ್ಕುಗಳಿಗೆ ಸಂಬಂಧಿಸಿದಂತೆ ಅನೇಕ ಗಾದೆಗಳು ಕೂಡ ಪ್ರಚಲಿತದಲ್ಲಿವೆ. ಹಲವು ಪ್ರಾಣಿಗಳಿಗೆ ಭವಿಷ್ಯದಲ್ಲಿ ಬರಲಿರುವ ಅಪಾಯವನ್ನು ಗುರುತಿಸುವ ಶಕ್ತಿ ಇರುತ್ತದೆ ಎಂಬ ಮಾತನ್ನು ಅಲ್ಲಗಳೆಯುವಂತಿಲ್ಲ. ಇವುಗಳಲ್ಲಿ ಬೆಕ್ಕು ಕೂಡ ಸೇರಿದೆ. ಅಮೇರಿಕಾದ ರೋಡ್ ಐಲ್ಯಾಂಡ್‌ನಲ್ಲಿ ಅಂತಹದ್ದೇ ಒಂದು ಬೆಕ್ಕಿದೆ, ಇದು ಜನರ ಮರಣದ ಬಗ್ಗೆ ನಿಖರವಾದ ಭವಿಷ್ಯ ಹೇಳುತ್ತದೆ. ಒಂದು ನರ್ಸಿಂಗ್ ಹೋಮ್‌ನಲ್ಲಿ ವಾಸಿಸುವ ಈ ಬೆಕ್ಕು, ಯಾವ ರೋಗಿಯ ಸಾವು ಹತ್ತಿರವಾಗಿದೆಯೋ ಅವರ ಬಳಿಯೇ ಹೋಗಿ ಕುಳಿತುಕೊಳ್ಳುತ್ತದೆ. ಬೆಕ್ಕಿನ ಈ ವರ್ತನೆಯಿಂದ ನರ್ಸಿಂಗ್ ಹೋಮ್‌ನವರಿಗೆ ಒಂದು ಕಡೆ ಅನುಕೂಲವಾಗುತ್ತಿದ್ದರೆ, ಇನ್ನೊಂದೆಡೆ ಜನರು ಗಾಬರಿಗೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

100ಕ್ಕೂ ಹೆಚ್ಚು ಜನರ ನಿಖರ ಭವಿಷ್ಯ

ಅಮೆರಿಕದ ಈಶಾನ್ಯದಲ್ಲಿರುವ ರೋಡ್ ಐಲ್ಯಾಂಡ್‌ನ 'ಸ್ಟಿಯರ್ ಹೌಸ್ ನರ್ಸಿಂಗ್ ಅಂಡ್ ರಿಹ್ಯಾಬಿಲಿಟೇಶನ್ ಸೆಂಟರ್'ನ ಡಿಮೆನ್ಶಿಯಾ ಯುನಿಟ್‌ನಲ್ಲಿ ಈ ಬೆಕ್ಕು ಬೆಳೆದಿದೆ. ಬ್ರೌನ್ ಯೂನಿವರ್ಸಿಟಿಯ ವಯೋವಿಜ್ಞಾನಿ (Gerontologist) ಡಾ. ಡೇವಿಡ್ ಡೋಸಾ ಅವರು ತಮ್ಮ 'ಮೇಕಿಂಗ್ ರೌಂಡ್ಸ್ ವಿತ್ ಆಸ್ಕರ್' ಎಂಬ ಪುಸ್ತಕದಲ್ಲಿ ಈ ಬೆಕ್ಕಿನ ಬಗ್ಗೆ ವಿವರವಾಗಿ ಬರೆದಿದ್ದಾರೆ. ಆಸ್ಕರ್ ಎಂಬ ಹೆಸರಿನ ಈ ಬೆಕ್ಕು ಅಲ್ಝೈಮರ್ಸ್ ಮತ್ತು ಪಾರ್ಕಿನ್ಸನ್ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಲ್ಲೇ ವಾಸಿಸುತ್ತದೆ. ಬಿಳಿ ಬಣ್ಣದ ಈ ಬೆಕ್ಕು ಆಸ್ಪತ್ರೆಯ ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಸುತ್ತುತ್ತಿರುತ್ತದೆ.

2000ನೇ ಇಸವಿಯಲ್ಲಿ ಈ ಬೆಕ್ಕನ್ನು ಥೆರಪಿಗಾಗಿ ಆಸ್ಪತ್ರೆಗೆ ತರಲಾಗಿತ್ತು. ಡಾ. ಡೋಸಾ ಹೇಳುವಂತೆ, ಈ ಬೆಕ್ಕು ಜನರ ಬೆಡ್‌ಗಳ ಮೇಲೆ ಹಾರುತ್ತಾ ಆಟವಾಡುತ್ತಿರುತ್ತದೆ. ಆದರೆ ಯಾವ ರೋಗಿ ಸಾವನ್ನಪ್ಪಲಿದ್ದಾರೋ ಅವರ ಹಾಸಿಗೆಯ ಬಳಿಯೇ ಇದು ಮೊಕ್ಕಾಂ ಹೂಡುತ್ತದೆ. ಹಲವಾರು ಬಾರಿ ಇದು ಯಾವ ರೋಗಿ ಸಾಯಲಿದ್ದಾರೋ ಅವರ ಕೋಣೆಗೇ ಹೋಗುತ್ತದೆ. ನರ್ಸಿಂಗ್ ಹೋಮ್ ಸಿಬ್ಬಂದಿ ಹಲವಾರು ಬಾರಿ ಬೆಕ್ಕನ್ನು ಬೇರೆ ಕೋಣೆಗೆ ಕಳುಹಿಸಲು ಪ್ರಯತ್ನಿಸಿದರೂ, ಅದು ಸಾವು ಸಮೀಪಿಸಿದ ರೋಗಿಯ ಕೋಣೆಯ ಬಾಗಿಲನ್ನೇ ಬಡಿಯುತ್ತಾ ಕಿರುಚುತ್ತಿರುತ್ತದೆ. ಬಾಗಿಲು ತೆರೆದ ತಕ್ಷಣ ಗಂಭೀರ ಸ್ಥಿತಿಯಲ್ಲಿರುವ ರೋಗಿಯ ಬಳಿಯೇ ಹೋಗಿ ಕುಳಿತುಕೊಳ್ಳುತ್ತದೆ.

ಬೆಕ್ಕಿನ ಈ ಭವಿಷ್ಯವಾಣಿಯನ್ನು ನಂಬುವ ಆಸ್ಪತ್ರೆಯ ಸಿಬ್ಬಂದಿ, ಯಾವ ರೋಗಿ ಸಾಯಲಿದ್ದಾರೋ ಅವರ ಸಂಬಂಧಿಕರಿಗೆ ಮೊದಲೇ ಮಾಹಿತಿಯನ್ನು ನೀಡುತ್ತಾರೆ. ಡಾ. ಡೋಸಾ ತಮ್ಮ ಪುಸ್ತಕದಲ್ಲಿ ಬರೆದಿರುವಂತೆ, ಹಲವು ಬಾರಿ ಬೆಕ್ಕನ್ನು ಬೇರೆ ರೋಗಿಯ ಬಳಿ ಕೂರಿಸಿದರೂ, ಅದು ಅಲ್ಲಿಂದ ಹಾರಿ ಸಾವು ಹತ್ತಿರವಿದ್ದ ರೋಗಿಯ ಬಳಿಯೇ ತಲುಪುತ್ತಿತ್ತು. ಅಂದು ರಾತ್ರಿಯೇ ಆ ರೋಗಿ ಸಾವನ್ನಪ್ಪುತ್ತಿದ್ದರು. ಒಂದು ಬಾರಿಯಂತೂ ಬೆಕ್ಕು ಅಂತಹ ರೋಗಿಯ ಬಳಿ ಹೋಗಿ ಕುಳಿತುಕೊಂಡಿತ್ತು. ಆದರೆ ವೈದ್ಯರಿಗೆ ಮಾತ್ರ ಆ ರೋಗಿ ಸಾಯುತ್ತಾರೆ ಎಂಬ ಸಂಶಯವೇ ಇರಲಿಲ್ಲ. ಆದರೆ ಆ ರೋಗಿ ಕೂಡ ಸಾವನ್ನಪ್ಪಿದರು. ಹೀಗೆ ಈ ಬೆಕ್ಕಿನ ಭವಿಷ್ಯದ ಮುಂದೆ ವೈದ್ಯರ ಪ್ರೆಡಿಕ್ಷನ್ ಕೂಡ ಫೇಲ್ ಆಯಿತು.

ವಿಜ್ಞಾನಿಗಳು ಏನು ಹೇಳುತ್ತಾರೆ?

ವಿಜ್ಞಾನಿಗಳ ಪ್ರಕಾರ, ಪ್ರಾಣಿಗಳಿಗೆ ರಾಸಾಯನಿಕ ಬದಲಾವಣೆ (Chemical Change) ಮತ್ತು ವರ್ತನೆಯ ಬದಲಾವಣೆಯನ್ನು ಗುರುತಿಸುವ ಸಾಮರ್ಥ್ಯವಿರುತ್ತದೆ. ಸಾಯುವ ವ್ಯಕ್ತಿಯ ದೇಹದಲ್ಲಿ ಆಗುವ ಮೆಟಬಾಲಿಸಂ ಮತ್ತು ಉಷ್ಣಾಂಶದ ಬದಲಾವಣೆಯನ್ನು ಅವು ಗ್ರಹಿಸಿಕೊಳ್ಳುತ್ತವೆ. ಇದಲ್ಲದೆ ಅವುಗಳ ವಾಸನೆ ಹಿಡಿಯುವ ಸಾಮರ್ಥ್ಯ ಕೂಡ ಅದ್ಭುತವಾಗಿರುತ್ತದೆ. ಹೀಗಾಗಿ ದೇಹದಲ್ಲಿ ಆಗುವ ಬದಲಾವಣೆಗಳು ಮತ್ತು ಜೈವಿಕ ಪ್ರಕ್ರಿಯೆಗಳ (Biological Processes) ಬಗ್ಗೆ ಅವುಗಳಿಗೆ ಮಾಹಿತಿ ಸಿಗುತ್ತದೆ. ಇದೇ ಕಾರಣದಿಂದ ಅವು ಸಾವಿನ ಬಗ್ಗೆ ನಿಖರವಾದ ಭವಿಷ್ಯ ನುಡಿಯುತ್ತವೆ.