ತಮಿಳುನಾಡಿನ ಪಳನಿಯಲ್ಲಿರುವ ದಂಡಾಯುತಪಾಣಿ ಸ್ವಾಮಿಗೆ ಪಂಚಮಿರ್ಥಂ ಎಂದರೆ ಮಹಾಪ್ರಾಣ. ಅದೇ ಆತನ ನೈವೇದ್ಯ. ಬಾಳೆಹಣ್ಣು, ಬೆಲ್ಲ, ಹಸುವಿನ ತುಪ್ಪ, ಜೇನುತುಪ್ಪ ಹಾಗೂ ಏಲಕ್ಕಿ- ಪಂಚ ಅಮೃತಗಳನ್ನು ನಿರ್ದಿಷ್ಟ ಮಟ್ಟದಲ್ಲಿ ಸೇರಿಸಿ ತಯಾರಿಸುವ ಈ ಪಂಚಮಿರ್ಥಂನ ರುಚಿ ಇನ್ನೊಂಚೂರು ಹೆಚ್ಚಿಸಲು ಕರ್ಜೂರ ಅಥವಾ ಸಕ್ಕರೆ ಸೇರಿಸಲಾಗುತ್ತದೆ.

ಕೆಮಿಕಲ್ ರಹಿತವಾಗಿ, ಯಾವುದೇ ಆರ್ಟಿಫಿಶಿಯಲ್ ಆಹಾರ ಪದಾರ್ಥಗಳನ್ನು, ಬಣ್ಣಗಳನ್ನು ಸೇರಿಸದೆ ತಯಾರಿಸುವ ಈ ಪಂಚಮಿರ್ಥಂನ ರುಚಿ ಪಳನಿಯವರ ಕೈಯ್ಯಲ್ಲಿ ಪಳಗಿದಾಗಷ್ಟೇ ಅದ್ಭುತವಾಗಲು ಸಾಧ್ಯ. ಈ ಪಂಚಮಿರ್ಥಂನ್ನು ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲ, ಇಡೀ ಪಳನಿಯಲ್ಲಿ ತಯಾರಿಸಲಾಗುತ್ತದೆ. 

ದೇಗುಲಗಳಿಗೆ ಮಾದರಿಯಾದ ಗುರುದ್ವಾರಗಳು; ಇಲ್ಲಿ ಈಗ ಸಸಿಗಳೇ ಪ್ರಸಾದ!

ಇದನ್ನು ಗಮನಿಸಿರುವ ಭೌಗೋಳಿಕ ಸೂಚ್ಯಂಕ ಮಾನ್ಯತಾ ಸಂಸ್ಥೆ ಇದೀಗ ಪಳನಿ ಪಂಚಮಿರ್ಥಂಗೆ ಜಿಐ(ಜಾಗತಿಕ ಮಾನ್ಯತೆ) ನೀಡಿದೆ. 

ಈ ದೇವಸ್ಥಾನಕ್ಕೆ ಕೇವಲ ತಮಿಳುನಾಡಿನವರಲ್ಲ, ಸಿಂಗಾಪುರ, ಮಲೇಶಿಯಾ ಹಾಗೂ ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳು ಸಮದಾಯ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತದೆ. ಹಾಗಾಗಿ, ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಪಂಚಮಿರ್ಥಂ ತಯಾರಿಸುವ ಸಂಪೂರ್ಣ ವಿಧಾನವನ್ನು ಆಟೋಮೇಟ್ ಮಾಡಲಾಗಿದೆ. ಇಲ್ಲಿನ ಕುರಿಂಜಿ ಗ್ರಾಮಸ್ಥರು ಶತಮಾನಗಳ ಹಿಂದೆ ದೇವರಿಗೆ ಭಕ್ತಿ ತೋರ್ಪಡಿಸಲು ಎಲ್ಲೆಡೆಯಂತೆ ಬಾಳೆಹಣ್ಣು, ಹಾಲು ಹಾಗೂ ಹಾಲಿನ ಪದಾರ್ಥಗಳು, ಜೇನುತುಪ್ಪ, ಏಲಕ್ಕಿಯನ್ನು ನೀಡುತ್ತಿದ್ದರು. ನಂತರದಲ್ಲಿ ಇದನ್ನೇ ಒಂದು ಕಾಂಬಿನೇಶನ್‌ನಲ್ಲಿ ಸೇರಿಸಿ ಪಂಚಮಿರ್ಥಂ ತಯಾರಿಸುವ ಅಭ್ಯಾಸ ಬೆಳೆದುಬಂತು. ಹಾಗಾಗಿ, ಈ ಪಂಚಮಿರ್ಥಂ ತಯಾರಿಕೆ ಈ ಭಾಗಕ್ಕೆ ಸೀಮಿತವಾಗಿದೆ. ಅದೇ ಇದಕ್ಕೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಸಿಗಲು ಕಾರಣವಾಗಿದೆ. 

ಜಿಐ ಟ್ಯಾಗ್

ಪ್ರಾಂತ್ಯವೊಂದಕ್ಕೆ ಸೇರಿದ ಉತ್ಪನ್ನವು ಆಯಾ ಪ್ರಾಂತ್ಯದ ನಿರ್ದಿಷ್ಟ ಗುಣಮಟ್ಟ, ಪರಿಮಳ, ವಿಶಿಷ್ಠ ರುಚಿ ಹೊಂದಿದ್ದರೆ ಅಥವಾ ಅದರ ರೂಪುರೇಷೆ ಆ ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿದ್ದರೆ ಅದಕ್ಕೆ ಭೌಗೋಳಿಕ ಸೂಚ್ಯಂಕ ಮಾನ್ಯತೆ ಪಡೆಯಬಹುದು. ಮತ್ತದು ಸುಲಭವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಬಹುದಲ್ಲದೆ, ಬೇರೆಯವರು ತಮ್ಮನ್ನು ಕಾಪಿ ಮಾಡದಂತೆ ಕಾನೂನು ಸಹಾಯ ಪಡೆಯಬಹುದು. 

ನಂಬಿದವರನೆಂದೂ ಬಿಡದ ಶೃಂಗೇರಿ ಶಾರದಾಂಬೆ; ತಿಳಿಯಬನ್ನಿ ಮಹಾತ್ಮೆಯ!

ಆಯಾ ಭಾಗದ ಸಂಸ್ಕೃತಿಯ, ಪರಂಪರೆಯ, ಬದುಕಿನ ರೀತಿಯ ಭಾಗವಾಗಿ ಈ ವಸ್ತುವನ್ನು ಗುರುತಿಸಲಾಗುತ್ತದೆ. ಇದು ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗಿಗೆ ಮಾತ್ರವಲ್ಲ, ಈ ಉತ್ಪನ್ನಗಳ ಡೂಪ್ಲಿಕೇಟ್ ಮಾಡುವುದನ್ನು ಕೂಡಾ ಕಾನೂನಾತ್ಮಕವಾಗಿ ತಡೆಯಲು ಸಹಾಯಕವಾಗುತ್ತದೆ. ಈ ಬಳಿಕ ವಸ್ತು ಅಥವಾ ಕಲೆಯನ್ನು ಸ್ಥಳದ ಹೆಸರಿನೊಂದಿಗೇ ಗುರುತಿಸಲಾಗುತ್ತದೆ. ಇದು ಜನರ ಮನಸ್ಸಿನಲ್ಲಿ ಆ ಪ್ರದೇಶಕ್ಕೆ ಸೇರಿದ್ದು ಎಂಬುದನ್ನು ಉಳಿಸುವುದಲ್ಲದೆ, ಉತ್ಕೃಷ್ಟವಾದುದು ಎಂಬುದನ್ನೂ ಸೂಚಿಸುತ್ತದೆ. 

ಜಿಐ ಟ್ಯಾಗ್ ಪಡೆಯೋದು ಹೇಗೆ? 

ವಸ್ತುವೊಂದಕ್ಕೆ ಭೌಗೋಳಿಕ ಮಾನ್ಯತೆ ಪಡೆಯುವುದು ಅಷ್ಟು ಸುಲಭದ ವಿಷಯವಲ್ಲ. ಇದಕ್ಕಾಗಿ ಚೆನ್ನೈನಲ್ಲಿರುವ ಜಿಯೋಗ್ರಾಫಿಕಲ್ ಇಂಡಿಕೇಶನ್ ರಿಜಿಸ್ಟ್ರಿ ಆಫೀಸ್‌ಗೆ ಅರ್ಜಿ ಸಲ್ಲಿಸುವಾಗ ಸಾಕಷ್ಟು ಪ್ರೂಫ್‌ಗಳನ್ನು ನೀಡಬೇಕು. ಪಳನಿ ಪಂಚಮಿರ್ಥಂಗೆ 2016ರಲ್ಲಿಯೇ ಅರ್ಜಿ ಸಲ್ಲಿಸಲಾಗಿತ್ತು. 

ತಮಿಳು ನಾಡು ಮತ್ತು ಜಿಐ ಟ್ಯಾಗ್

ಈ ಪಂಚಮಿರ್ಥಂನ ತಮಿಳುನಾಡಿನಲ್ಲಿ ಜಿಐ ಪಡೆದ 29ನೇ ಉತ್ಪನ್ನವಾಗಿದೆ. ಮಧುರೈ ಮಲ್ಲಿಗೆ, ನೀಲಗಿರಿ ಟೀ, ತಂಜಾವೂರ್ ಪೇಂಟಿಂಗ್ಸ್, ಅರಾನಿ ಸಿಲ್ಕ್, ತೋಡಾ ಎಂಬ್ರಾಯ್ಡರಿ, ಈರೋಡ್ ಅರಿಶಿನ, ಕೊಯಂಬತ್ತೂರ್ ವೆಚ್ ಗ್ರೈಂಡರ್, ಈಸ್ಟ್ ಇಂಡಿಯಾ ಲೆದರ್ ಮುಂತಾದವು ಈಗಾಗಲೇ ತಮಿಳರ ರಾಜ್ಯದಲ್ಲಿ ಭೌಗೋಳಿಕ ಮಾನ್ಯತೆ ಪಡೆದ ಪ್ರಮುಖ ಉತ್ಪನ್ನಗಳಾಗಿವೆ. ಆದರೆ, ಆಹಾರದ ವಿಷಯಕ್ಕೆ ಬಂದರೆ, ಪಳನಿ ಪಂಚತೀರ್ಥಂ ತಮಿಳುನಾಡಿನಿಂದ ಜಿಐ ಟ್ಯಾಗ್ ಪಡೆದ ಮೊದಲ ಆಹಾರ. ಹಾಗೂ ದೇಶಾದ್ಯಂತ ಲೆಕ್ಕ ಹಾಕಿದರೆ 17 ಆಹಾರ ವಸ್ತು.  

ಪಳನಿಗೇನು ಲಾಭ?

ಜಿಐ ಟ್ಯಾಗ್ ಪಡೆದಿರುವುದರಿಂದ ಇನ್ನು ಪಳನಿ ಊರಿನವರು ಅಂದರೆ, 10.44 ಡಿಗ್ರಿ ಲ್ಯಾಟಿಟ್ಯೂಡ್ ಹಾಗೂ 77.52 ಡಿಗ್ರಿ ಲಾಂಗಿಟ್ಯೂಡ್‌ನೊಳಗಿರುವವರು ಮಾತ್ರ ಈ ಪ್ರಸಾದ ತಯಾರಿಸಿ ಮಾರಾಟ ಮಾಡಬಹುದು. ಇದರಿಂದ ಈ ಊರಿನ ಮಾರಾಟಗಾರರಿಗೆ ಹೆಚ್ಚು ಲಾಭವಾಗಲಿದೆ.