ಶೃಂಗೇರಿ ಶಾರದಾಂಬೆಯ ದೇಗುಲದ ಬಗ್ಗೆ ಕೇಳಿರದವರಾರು? ಚೆಂದದ ಕಲ್ಲಿನ ದೇವಾಲಯದಲ್ಲಿ ವಿದ್ಯಾಧಿಪತಿಯಾದ ಶಾರದಾಂಬೆ ಭಕ್ತಗಣಕ್ಕೆ ಹರಸುತ್ತಾ ಹೊಳೆಯುವ ಮೂಗುತಿಯಲ್ಲಿ ಮಂದಹಾಸ ಬೀರುತ್ತಾ ಕುಳಿತಿರುವುದನ್ನು ನೋಡುವುದೇ ಪರಮಾನಂದ. ಪಕ್ಕದ ತುಂಗಾ ನದಿಯ ಮೀನುಗಳ ಸಾಮ್ರಾಜ್ಯ, ಕಪ್ಪೆ ಶಂಕರ ಗುಡಿ, ಸುತ್ತಲ ಹಸಿರು, ಹತ್ತಿರದಲ್ಲೇ ಇರುವ ಸಿರಿಮನೆ ಫಾಲ್ಸ್ ಎಲ್ಲವೂ ಸೇರಿ ಶೃಂಗೇರಿಯ ಸೊಬಗಿಗೆ ಮತ್ತಷ್ಟು ಬಣ್ಣ ತುಂಬಿವೆ. ಈ ಶೃಂಗೇರಿಯ ಕುರಿತ ಕೆಲ ಆಸಕ್ತಿಕರ ವಿಷಯಗಳು ಇಲ್ಲಿವೆ. 

1. ಶೃಂಗ ಗಿರಿ

ಈ ಪ್ರಸಿದ್ಧ ಶಾರದಾಂಬಾ ದೇಗುಲ ತುಂಗಾ ನದಿಯ ತಟದಲ್ಲಿದ್ದು, 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಸಂಸ್ಕೃತದ 'ಶೃಂಗ ಗಿರಿ' ಎಂಬ ಪದದಿಂದ ಶೃಂಗೇರಿ ಹೆಸರು ಹುಟ್ಟಿದೆ. ಶೃಂಗಗಿರಿ ಎಂದರೆ ಬೆಟ್ಟದ ತುದಿ ಎಂದರ್ಥ. 

ರೂಪ ಬದಲಿಸಿದ ಆಂಜನೇಯ, ವಿಸ್ಮಯಕಾರಿ ಮಂದಿರದ ಹಿಂದಿದೆ ರೋಚಕ ಕತೆ

2. ಶಂಕರಾಚಾರ್ಯ ನಿರ್ಮಿತ

ಶ್ರೀ ಆದಿ ಶಂಕರಾಚಾರ್ಯರು ದೇಶಾದ್ಯಂತ ಧರ್ಮಸಂಚಾರದಲ್ಲಿ ತೊಡಗಿದ್ದಾಗ, ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಮಠ ದೇವಾಲಯಗಳನ್ನು ಕಟ್ಟಿಸಿದರು. ಈ ನಾಲ್ಕು ಮಠಗಳೆಂದರೆ ಉತ್ತರದಲ್ಲಿ ಬದ್ರಿಕಾಶಮ್ ಜ್ಯೋತಿರ್ಪೀಠ, ಪಶ್ಚಿಮದಲ್ಲಿ ದ್ವಾರಕೆಯ ಶಾರದಾ ಪೀಠ, ಪೂರ್ವದಲ್ಲಿ ಪುರಿಯ ಗೋವರ್ಧನ ಪೀಠ ಹಾಗೂ ದಕ್ಷಿಣದಲ್ಲಿ ಶೃಂಗೇರಿಯ ಶಾರದಾ ಪೀಠ. 

3. ಗಂಧದ ಶಾರದಾಂಬೆ

ಆದಿ ಶಂಕರಾಚಾರ್ಯರು ಶೃಂಗೇರಿಯಲ್ಲಿ ಪ್ರತಿಷ್ಠಾಪಿಸಿದ್ದು ಗಂಧದ ಶಾರಾದಾ ದೇವಿಯ ವಿಗ್ರಹವನ್ನು. ಆಗ ತಾಯಿ ಶಾರದೆ ನಿಂತಿದ್ದಳು. 14ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಆಡಳಿತದ ಸಂದರ್ಭದಲ್ಲಿ ವಿದ್ಯಾರಣ್ಯರು ಇಲ್ಲಿ ಶಾರದಾಂಬೆಯು ಕುಳಿತುಕೊಂಡ ರೂಪದ ಹೊನ್ನಿನ ವಿಗ್ರಹ ಮಾಡಿಸಿ ಪ್ರತಿಷ್ಠಾಪಿಸಿದರು.

ವಿದೇಶಕ್ಕೆ ತೆರಳಲು ವೀಸಾ ಸಿಕ್ತಾ ಇಲ್ವಾ? ಇಲ್ಲಿ ಹರಕೆ ತೀರಿಸಿ...

4. ಹಾವು ಮತ್ತು ಕಪ್ಪೆ

ಶಂಕರಾಚಾರ್ಯರು ಇಲ್ಲಿ ಬಂದಾಗ, ಹಾವೊಂದು ಸುಡುವ ಬಿಸಿಲಿನಿಂದ ಗರ್ಭಿಣಿ ಕಪ್ಪೆಯನ್ನು ರಕ್ಷಿಸಲು ತನ್ನ ಹೆಡೆಯನ್ನೇ ಅಡ್ಡವಾಗಿ ಹಿಡಿದುದನ್ನು ನೋಡಿ ಆಶ್ಚರ್ಯಚಕಿತರಾದರು. ಸಾಮಾನ್ಯವಾಗಿ ಹಾವುಗಳು ಕಪ್ಪೆಯನ್ನು ತಿನ್ನುತ್ತವೆ. ಆದರೆ, ಶೃಂಗೇರಿಯಲ್ಲಿ ಈ ವೈಚಿತ್ರ್ಯಕ್ಕೆ ಬೆರಗಾಗಿ ಇಲ್ಲಿಯೇ ದೇವಸ್ಥಾನ ಕಟ್ಟಿಸಲು ತೀರ್ಮಾನಿಸಿದರು. ಈಗಲೂ ಕೂಡಾ ಇಲ್ಲಿ ಹಾವು ಕಪ್ಪೆಗೆ ರಕ್ಷಣೆ ನೀಡುತ್ತಿರುವ ಕಲ್ಲಿನ ಆಕೃತಿಗಳಿವೆ. ಇದನ್ನು ಕಪ್ಪೆ ಶಂಕರ ಗುಡಿ ಎನ್ನಲಾಗುತ್ತದೆ.

5. ಚಂದ್ರಮೌಳೇಶ್ವರ ಲಿಂಗ

ಶಿವನು ಶಂಕರಾಚಾರ್ಯರಿಗೆ ಪ್ರತ್ಯಕ್ಷನಾದಾಗ ಆಶೀರ್ವಾದ ರೂಪದಲ್ಲಿ ತನ್ನ ಸ್ಪಟಿಕದ ಲಿಂಗವನ್ನು ನೀಡಿದ್ದ ಎಂಬ ನಂಬಿಕೆ ಇದೆ. ಈ ವಿಗ್ರಹವನ್ನು ಶೃಂಗೇರಿಯಲ್ಲಿಟ್ಟು ಶಂಕರರು ಪೂಜಿಸುತ್ತಿದ್ದರು. ಇಂದಿಗೂ ಕೂಡಾ ಈ ಚಂದ್ರಮೌಳೇಶ್ವರ ಲಿಂಗಕ್ಕೆ ಪ್ರತಿ ರಾತ್ರಿ 8.30ಕ್ಕೆ ತಪ್ಪದೇ ಪೂಜೆ ನಡೆಯುತ್ತದೆ.

6. ಉಭಯ ಭಾರತಿ
ಇಲ್ಲಿನ ಮುಖ್ಯ ದೇವಾಲಯವು ತಾಯಿ ಶಾರದಾಂಬಿಕೆಗೆ ಮೀಸಲಾಗಿದೆ. ಈಕೆ ಸರಸ್ವತಿಯ ಪ್ರತಿರೂಪವಾಗಿದ್ದು, ಉಭಯ ಭಾರತಿ ಎಂದೇ ಪ್ರಸಿದ್ಧಳು. ಉಭಯ ಭಾರತಿಯನ್ನು ಪೂಜಿಸುವ ಮೂಲಕ ಜನರು ಬ್ರಹ್ಮ, ವಿಷ್ಣು, ಶಿವ ಮೂವರ ಆಶೀರ್ವಾದಕ್ಕೂ ಪಾತ್ರವಾಗಬಹುದೆಂಬ ನಂಬಿಕೆ ಇದೆ.

ಮದ್ಯ ನೇವೇದ್ಯದೊಂದಿಗೆ ಸತ್ತವರ ಬೂದಿಯಿಂದಲೇ ಜ್ಯೋತಿರ್ಲಿಂಗಕ್ಕೆ ಅಭಿಷೇಕ...

7. ಅಕ್ಷರಾಭ್ಯಾಸ

ಇದು ವಿದ್ಯಾಧಿದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನವಾಗಿರುವುದರಿಂದ, ಅಕ್ಷರಾಭ್ಯಾಸಕ್ಕೆ ಹೆಸರುವಾಸಿಯಾಗಿದೆ. 2ರಿಂದ 5 ವರ್ಷದೊಳಗಿನ ಮಕ್ಕಳನ್ನು ಇಲ್ಲಿ ಕರೆದುಕೊಂಡು ಬಂದು ಓನಾಮ ಬರೆಸಿ ವಿದ್ಯಾಭ್ಯಾಸ ಆರಂಭಿಸಿದರೆ ವಿದ್ಯೆ ಚೆನ್ನಾಗಿ ನಡೆಯುತ್ತದೆ ಎಂಬ ನಂಬಿಕೆಯಿಂದ ಪೋಷಕರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ಅಕ್ಷರಾಭ್ಯಾಸಕ್ಕೆ ಮಕ್ಕಳನ್ನು ಕರೆದುಕೊಂಡು ಬರುತ್ತಾರೆ. 

8. ಮಠ

ಶೃಂಗೇರಿ ದೇವಾಲಯದ ಮತ್ತೊಂದು ಬಹುದೊಡ್ಡ ಆಕರ್ಷಣೆ ಎಂದರೆ ಅದು ಮಠ. ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಂ ಎಂದು ಕರೆಯಲಾಗುವ ಈ ಮಠವು ಸ್ಮಾರ್ತ ಸಂಪ್ರದಾಯವನ್ನು, ಅದ್ವಾಾತ ತತ್ವವನ್ನು ಅನುಸರಿಸುತ್ತದೆ. ಇಲ್ಲಿನ ಮಠಾಧೀಶರನ್ನು ಜಗದ್ಗುರುಗಳು, ಶಂಕರಾಚಾರ್ಯ ಮುಂತಾದ ಗೌರವಗಳಿಂದ ಕರೆಯಲಾಗುತ್ತದೆ. 

9. ವಿದ್ಯಾಶಂಕರ ದೇವಾಲಯ

ವಿಜಯನಗರ ಸಾಮ್ರಾಜ್ಯದ ಆಢಳಿತದ ಸಂದರ್ಭದಲ್ಲಿ ನಿರ್ಮಿಸಿದ ವಿದ್ಯಾಶಂಕರ ದೇವಾಲಯ ಬಹಳ ವಿಶಿಷ್ಠವಾದುದು. ಇಲ್ಲಿ 12 ಕಂಬಗಳಿದ್ದು, ಒಂದೊಂದು ಕಂಬ ಒಂದೊಂದು ರಾಶಿಯನ್ನು ಪ್ರತಿನಿಧಿಸುತ್ತದೆ. ಇಲ್ಲಿನ ಕಿಟಕಿ ಹಾಗೂ ಬಾಗಿಲುಗಳ ನಿರ್ಮಾಣ ವೈಶಿಷ್ಟ್ಯ ಹೇಗಿದೆ ಎಂದರೆ ಸೂರ್ಯನ ಕಿರಣಗಳು ನೇರವಾಗಿ ಶಿವಲಿಂಗದ ಮೇಲೆ ಬೀಳುವಂತೆ ರಚನೆಯಾಗಿದೆ. ವರ್ಷದ 12 ತಿಂಗಳನ್ನು ಪ್ರತಿನಿಧಿಸುವಂತೆ, ಸೂರ್ಯ ಕಿರಣಗಳು ಪ್ರತಿ ಕಂಬದ ಮೇಲೆಯೂ ಬೀಳುತ್ತವೆ.