ಮದುವೆ ಸಮಾರಂಭಗಳಲ್ಲಿ, ಹುಟ್ಟುಹಬ್ಬಗಳಲ್ಲಿ, ಕಚೇರಿಯ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ಉಡುಗೊರೆಯಾಗಿ ನೀಡಿರುವುದನ್ನು ನಾವು ನೋಡಿದ್ದೇವೆ. ಆದರೆ, ದೇವಾಲಯಗಳಲ್ಲಿ ಪ್ರಸಾದವಾಗಿ ನೀಡುವುದನ್ನು ಎಲ್ಲಾದರೂ ನೋಡಿದ್ದೀರಾ?

ದೇವರಿಗೆ ತೆಂಗಿನಕಾಯಿ ಒಡೆಯುವುದೇಕೆ?

ಇದೀಗ ದೆಹಲಿಯ ಗುರುದ್ವಾರಗಳು ಇಂಥದೊಂದು ಅನುಕರಣೀಯ ಕಾರ್ಯಕ್ಕೆ ಕೈ ಹಾಕಿವೆ. 550ನೇ ಗುರುನಾನಕ್ ಜಯಂತಿ ಪ್ರಯುಕ್ತ ಈ ಗ್ರಹ ಉಳಿಸಲು ಕೈಜೋಡಿಸಿರುವ ದೆಹಲಿಯ ಅಷ್ಟೂ ಗುರುದ್ವಾರಗಳು ಈ ಹೊಸ ಆರಂಭದತ್ತ ಮುಖ ಮಾಡಿವೆ. ಹವಾಮಾನ ಬದಲಾವಣೆ, ಏರುತ್ತಿರುವ ತಾಪಮಾನ ಮುಂತಾದ ಪರಿಸರ ವಿಕೋಪಗಳ ವಿರುದ್ಧ ಎಚ್ಚೆತ್ತು, ಜನರು ಪರಿಸರಪ್ರಜ್ಞೆ ಬೆಳೆಸಿಕೊಳ್ಳುವಂತೆ ಮಾಡಲು ಈ ಯೋಜನೆ ಕೈಗೆತ್ತಿಕೊಂಡಿವೆ. 

ಭಕ್ತರಿಗೆ ಸಸಿಗಳನ್ನೇ ಪ್ರಸಾದವಾಗಿ ನೀಡುವ ಮೂಲಕ ಎಲ್ಲ ಗುರುದ್ವಾರ ಹಾಗೂ ಸಿಖ್ ಶಿಕ್ಷಣ ಸಂಸ್ಥೆಗಳ ಸುತ್ತಮುತ್ತ ಸುಮಾರು 1 ಲಕ್ಷ ಗಿಡಗಳನ್ನು ನೆಡುವ ಯೋಜನೆ ಇದಾಗಿದೆ. ಗುರ್ಬಾನಿಯಲ್ಲಿ ಹೇಳಿರುವ ಬೇವು, ತೇಗ, ಮಾವು, ನೇರಳೆ, ನೆಲ್ಲಿ, ಗುಲ್‌ಮೊಹರ್ ಮುಂತಾದ ದೊಡ್ಡ ಮರಗಳನ್ನು ಬೆಳೆಸುವುದಕ್ಕೆ ನಿರ್ಧರಿಸಲಾಗಿದೆ. ಒಟ್ಟಾರೆ 2 ಲಕ್ಷ ಗಿಡಗಳನ್ನು ಉಚಿತವಾಗಿ ಪ್ರಸಾದವಾಗಿ ಭಕ್ತರಿಗೆ ಹಂಚಲಾಗುತ್ತದೆ. 

ವಿದೇಶಕ್ಕೆ ತೆರಳಲು ವೀಸಾ ಸಿಕ್ತಾ ಇಲ್ವಾ? ಇಲ್ಲಿ ಹರಕೆ ತೀರಿಸಿ...

ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಸಿಖ್ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕೂಡಾ ಗಿಡ ನೆಡುವ ಟಾಸ್ಕ್ ನೀಡಲು ಸಮಿತಿ ನಿರ್ಧರಿಸಿದೆ. ದೆಹಲಿ ಯೂನಿವರ್ಸಿಟಿಯ ಸಹಯೋಗದಲ್ಲಿ, ಸಮಿತಿಯ ಕೆಳಗಿರುವ 9 ಸಿಖ್ ಶಿಕ್ಷಣ ಸಂಸ್ಥೆಗಳಲ್ಲಿ ಗಿಡ ನೆಡುವ ಪ್ರಾಜೆಕ್ಟ್ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಕಾಲೇಜಿಗೆ ಸೇರುತ್ತಿದ್ದಂತೆಯೇ ಪ್ರತಿ ವಿದ್ಯಾರ್ಥಿ 10 ಗಿಡಗಳನ್ನು ನೆಟ್ಟು ಅಲ್ಲಿ ಓದುವಷ್ಟು ವರ್ಷವೂ ಅದರ ಪಾಲನೆ ಪೋಷಣೆ ಮಾಡಬೇಕು. ಈ ಗಿಡಗಳು ಸೊಂಪಾಗಿ ಬೆಳೆದರೆ ಅದರಿಂದ ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಸಿಗುತ್ತದೆ. ಅಂದರೆ, ಅದನ್ನು ಅವರ ವಾರ್ಷಿಕ ಫಲಿತಾಂಶದ ಮಾರ್ಕ್ಸ್‌ಗೆ ಪರಿಗಣಿಸಲಾಗುತ್ತದೆ. ಗಿಡಗಳ ಪೋಷಣೆ ಎಷ್ಟು ಚೆನ್ನಾಗಿ ಮಾಡಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಫೋಟೋ ಸಮೇತ ತೋರಿಸಬೇಕು. ಗುರು ನಾನಕ್ ದೇವ್ ಅವರ ಪರಿಸರ ಪ್ರೀತಿಯನ್ನು ವಿದ್ಯಾರ್ಥಿಗಳು ಈ ರೀತಿ ಆಚರಣೆಯಿಂದ ಮೆರೆಸಬಹುದಾಗಿದೆ ಎಂಬುದು ಗುರುದ್ವಾರ ಸಮಿತಿಯ ಮಾತು.

ಕಾರಣ ಏನು?

ಸಿಖ್ ಸಮುದಾಯದಲ್ಲಿ ಪರಿಸರ ಪ್ರಜ್ಞೆ ಬೆಳೆಸುವುದು, ವಿದ್ಯಾರ್ಥಿಗಳಿರುವಾಗಲೇ ಪರಿಸರ ಸಂಬಂಧಿ ಜವಾಬ್ದಾರಿ ಬೆಳೆಸುವುದು ಯೋಜನೆಯ ಉದ್ದೇಶ. ಅದರಲ್ಲೂ ದೆಹಲಿಯ ವಾಯುಮಾಲಿನ್ಯ ಅಪಾಯದ ಮಟ್ಟ ಮುಟ್ಟಿರುವ ಸಂದರ್ಭದಲ್ಲಿ ಇಂಥ ಯೋಜನೆಗಳ ಅಗತ್ಯ ಇದೆ ಎಂಬುದನ್ನು ಅದು ಮನಗಂಡಿದೆ. ಪ್ಲಾಸ್ಟಿಕ್ ವೇಸ್ಟ್ ಕೊಟ್ಟರೆ ಉಚಿತ ಊಟ ಕೊಡುವ ಯೋಜನೆಯನ್ನು ಈಗಾಗಲೇ ಗುರುದ್ವಾರಗಳ ಅಳವಡಿಸಿಕೊಂಡಿದ್ದವು. ಇದೀಗ ಪರಿಸರ ಸ್ನೇಹಿಯಾದ ಮತ್ತೊಂದು ಯೋಜನೆಗೆ ಕೈ ಹಾಕಿವೆ. ಈ ಮೂಲಕ ಈ ವರ್ಷ 55,000 ಸಸಿಗಳ ಮರವಾಗುವ ಕನಸು ಸಾಕಾರವಾಗಲಿದೆ. 

ದೇಗುಲದ ವಿಶೇಷ ಪ್ರಸಾದ..ದೇವಲೋಕದ ದೈವೀ ಅನುಬಂಧ..

ದೂರದಲ್ಲೆಲ್ಲೋ ಕೇಳುತ್ತಿದ್ದ ಪ್ರವಾಹ, ಭೂಕಂಪ, ಬರ ಇತ್ಯಾದಿಗಳು ಈಗೀಗ ಪ್ರತಿ ವರ್ಷ , ಇಲ್ಲೇ ನಮ್ಮ ಅಕ್ಕಪಕ್ಕದಲ್ಲೇ ಸಂಭವಿಸುತ್ತಾ, ನಮ್ಮ ನೆರೆಹೊರೆಯವರನ್ನು, ಅವರ ಬದುಕನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಇಂಥ ಯೋಜನೆಗಳು ಎಲ್ಲೆಡೆ ಬರಬೇಕಾದುದು ಅಗತ್ಯವೂ, ಅನಿವಾರ್ಯವೂ ಕೂಡಾ. ದೇಶದ ಎಲ್ಲ ದೇವಾಲಯಗಳು, ಚರ್ಚ್, ಮಸೀದಿಗಳು, ಶಿಕ್ಷಣ ಸಂಸ್ಥೆಗಳೂ ಇದನ್ನೇ ಅನುಕರಿಸಿದರೆ, ಗೊತ್ತೇ ಆಗದೆ ಹಸಿರು ದೇಶದ ಉದ್ದಗಲ ಹಾಸಿಕೊಳ್ಳುತ್ತದೆ. ಪ್ರಕೃತಿಯ ಮುನಿಸು ಮರೆಯುತ್ತದೆ ಅಲ್ಲವೇ?