ಕೆಲವೊಮ್ಮೆ ಔಷಧಗಳು ಮಾಡದ ಚಮತ್ಕಾರವನ್ನು ನಿಸರ್ಗ ಮಾಡಿ ತೋರಿಸುತ್ತದೆ. ಬಹಳಷ್ಟು ಸಮಸ್ಯೆಗಳನ್ನು ಲೀಲಾಜಾಲವಾಗಿ ಮಣ್ಣು ಮುಕ್ಕಿಸುತ್ತದೆ. ಅದರಲ್ಲೇ ಒಂದು ಈ ಮಡ್ ಥೆರಪಿ. ಭೂಮಿಯು ಪೋಷಕಾಂಶಗಳು ಹಾಗೂ ಮಿನರಲ್‌ಗಳ ಕಣಜವೆಂಬುದು ಎಲ್ಲರಿಗೂ ಗೊತ್ತು.

ಇದನ್ನೇ ಬಳಸಿಕೊಂಡು ದೇಹದ ಆರೋಗ್ಯ ಕಾಪಾಡುವ ತಂತ್ರ ಬಹಳ ಹಿಂದಿನಿಂದಲೇ ನಡೆದು ಬಂದಿದೆ. ಆಯುರ್ವೇದದಲ್ಲಿ ಆರಂಭವಾದ ಮಣ್ಣಿನ ಚಿಕಿತ್ಸೆ ಈಗ ಜಾಗತಿಕವಾಗಿ ಜನಪ್ರಿಯವಾಗುತ್ತಿದೆ. ಮಣ್ಣೆಂದು ಮೂಗು ಮುರಿಯುತ್ತಿದ್ದವರೇ ಮಣ್ಣಿನಲ್ಲೇ ಚಿನ್ನವಿದೆ ಎಂಬುದನ್ನು ಅರಿಯುತ್ತಿದ್ದಾರೆ. 

ಹೆಬ್ಬಾವಿನ ಮಸಾಜ್ ಮಾಡಿಸಿಕೊಳ್ಳೊ ಧೈರ್ಯ ನಿಮಗಿದ್ಯಾ?

ಹೇಗೆ ಕೆಲಸ ಮಾಡುತ್ತದೆ?

ಆಯುರ್ವೇದದ ಪ್ರಕಾರ, ನಮ್ಮ ದೇಹವು ಪಂಚಭೂತಗಳಾದ ಭೂಮಿ, ನೀರು, ವಾಯು, ಆಕಾಶ ಹಾಗೂ ಅಗ್ನಿಯಿಂದ ಸೃಷ್ಟಿಯಾಗಿದೆ. ಮಣ್ಣು ಅಂದರೆ ಭೂಮಿಯು ದೇಹವನ್ನು ಒಳಗಿನಿಂದ ಸ್ವಚ್ಛಗೊಳಿಸಿ, ಯಾವುದೇ ಅಸಮತೋಲನವನ್ನು ಸರಿಪಡಿಸಬಲ್ಲ ಗುಣ ಹೊಂದಿದೆ. ಮಣ್ಣಿನಲ್ಲಿ ಹಲವಾರು ಪ್ರಮುಖ ಮಿನರಲ್‌ಗಳಿದ್ದು, ಇವು ದೇಹದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತವೆ. ಇದು ಹಲವಾರು ಆರೋಗ್ಯ ಲಾಭಗಳನ್ನು ತರಬಲ್ಲದಾಗಿದ್ದು, ದೊಡ್ಡ ದೊಡ್ಡ ಕಾಯಿಲೆಗಳನ್ನು ಕೂಡಾ ಮಡ್ ಥೆರಪಿಯಿಂದ ಗುಣಪಡಿಸಬಹುದು ಎನ್ನಲಾಗುತ್ತದೆ. ಅಂಥ ಕೆಲವು ಲಾಭಗಳನ್ನು ಇಲ್ಲಿ ಕೊಡಲಾಗಿದೆ.

ಜೀರ್ಣಕ್ರಿಯೆ ಸರಾಗ

ನಿಮ್ಮನ್ನು ಕಾಯಿಲೆ ಬೀಳಿಸಬಲ್ಲಂಥ ಕೆಟ್ಟ ಟಾಕ್ಸಿನ್‌ಗಳನ್ನು ಮಣ್ಣು ಹೀರಿಕೊಳ್ಳುತ್ತದೆ. ಇಂಥ ಮಣ್ಣನ್ನು ನಿಮ್ಮ ಹೊಟ್ಟೆಯ ಸುತ್ತ ದಪ್ಪನಾಗಿ ಹಚ್ಚಿಕೊಳ್ಳುವುದರಿಂದ ಅದು ನಿಮ್ಮನ್ನು ಡಿಟಾಕ್ಸ್ ಮಾಡಿ, ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ. ಜೊತೆಗೆ, ಚಯಾಪಚಯ ಕ್ರಿಯೆಯನ್ನೂ ವೇಗಗೊಳಿಸುತ್ತದೆ.

ಯಾವ ಎಣ್ಣೆಯಿಂದ ಮಸಾಜ್ ಮಾಡಿದರೆ, ಯಾವುದಕ್ಕೆ ಒಳಿತು?

ತಲೆನೋವು ಅಥವಾ ಜ್ವರದ ವಿರುದ್ಧ ಹೋರಾಟ

ತಲೆನೋವು ಅಥವಾ ಜ್ವರದಿಂದಾಗಿ ಕೆಲಸದಲ್ಲಿ ಏಕಾಗ್ರತೆ ಬರುತ್ತಿಲ್ಲವೇ? ಹಾಗಿದ್ದರೆ ಮಡ್ ಥೆರಪಿ ಟ್ರೈ ಮಾಡಿ. ಹೊಟ್ಟೆಯ ಸುತ್ತಮುತ್ತ ಹಾಗೂ ಹಣೆಯಲ್ಲಿ ಮಣ್ಣನ್ನು ಹಚ್ಚುವುದರಿಂದ ಅದು ದೇಹವನ್ನು ಒಳಗಿನಿಂದ ತಂಪಾಗಿಸುತ್ತದೆ. ಮಾತ್ರವಲ್ಲ ಹೀಟ್ ಸ್ಟ್ರೋಕ್‌ನಿಂದಲೂ ತಕ್ಷಣ ರಿಲೀಫ್ ಕೊಡಿಸುತ್ತದೆ. ಮೆಡಿಕೇಶನ್‌ನಂತೆ ಈ ಮಡ್ ಥೆರಪಿಯಲ್ಲಿ ಯಾವ ಅಡ್ಡ ಪರಿಣಾಮಗಳೂ ಇಲ್ಲ. ಹೀಗಾಗಿ, ಪ್ರಯತ್ನಿಸಿ ನೋಡಲು ಯಾವ ಅಡ್ಡಿಯೂ ಇಲ್ಲವಲ್ಲ...

ಚರ್ಮಾರೋಗ್ಯ

ಮಡ್ ಥೆರಪಿಯ ಅತಿ ದೊಡ್ಡ ಲಾಭ ಪಡೆದುಕೊಳ್ಳುವುದು ನಿಮ್ಮ ಚರ್ಮ. ಆಯುರ್ವೇದದ ಪ್ರಕಾರ ಮಣ್ಣು ದೇಹದಿಂದ ಟಾಕ್ಸಿನ್ಸ್ ಹೊರ ಹಾಕಿ ಪಿತ್ತದ ದೋಷಗಳನ್ನು ತೊಡೆದು ಹಾಕುತ್ತದೆ. ಅದೇ ಸಮಯದಲ್ಲಿ ನಿಮ್ಮ ಚರ್ಮದ ಅಶುದ್ಧತೆಯನ್ನು ತೊಡೆದು ಹಾಕಿ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸುತ್ತದೆ. 

ಒತ್ತಡ ನಿವಾರಣೆ

ಮಣ್ಣಿಗೆ ತಂಪಾಗಿಸುವ ಗುಣವಿರುವುದರಿಂದ ನ್ಯಾಚುರೋಪತಿ ಹಾಗೂ ಇತರೆ ಹೀಲರ್‌ಗಳು ನರಸಂಬಂಧಿ ತೊಂದರೆಗಳಾದ ಒತ್ತಡ, ನಿದ್ರಾ ಸಮಸ್ಯೆ, ಆತಂಕ, ಪೋಸ್ಟ್ ಟ್ರೊಮ್ಯಾಟಿಕ್ ಡಿಸಾರ್ಡರ್ಸ್ ಇರುವವರಿಗೆ ಮಡ್ ಥೆರಪಿ ಸಲಹೆ ಮಾಡುತ್ತಾರೆ. ಇದು ಮೆದುಳಿನ ಸುತ್ತಮುತ್ತ ಬ್ಲಾಕ್ ಆಗಿರುವ ಹಾದಿಗಳನ್ನು ಸುಗಮಗೊಳಿಸಿ, ಮೇಲೆ ಕುಳಿತ ಟಾಕ್ಸಿನ್ಸ್ ಗುಡಿಸಿ ಹಾಕುತ್ತದೆ. 

ಕಣ್ಣಿಗೆ ತಂಪು

ನಾವು ದಿನದ ಬಹುತೇಕ ಸಮಯ ಸ್ಕ್ರೀನ್ ನೋಡುತ್ತಲೇ ಕಳೆಯುವುದರಿಂದ ಕಣ್ಣುಗಳಿಗೆ ಅಗತ್ಯ ವಿಸ್ರಾಂತಿ ಸಿಗುವುದೇ ಇಲ್ಲ. ಸುಮ್ಮನೇ ಕೆಸರಿನಲ್ಲಿ ನಡೆಯುವುದು ಅಥವಾ ಕಣ್ಣಿನ ಸುತ್ತ ಮಣ್ಣನ್ನು ಪೇಸ್ಟ್‌ನಂತೆ ಹಚ್ಚಿಕೊಳ್ಳುವುದರಿಂದ (ಮುಲ್ತಾನಿ ಮಿಟ್ಟಿ) ಕಣ್ಣುಗಳು ತಂಪಾಗಿ ಆರೋಗ್ಯ ಕಂಡುಕೊಳ್ಳುತ್ತವೆ ಎಂದು ಬಹು ಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಮಡ್ ಬಾತ್ ವಯಸ್ಸಾದಂತೆಲ್ಲಗ್ಲುಕೋಮಾ ಬರುವುದನ್ನು ಕೂಡಾ ತಡೆಯುತ್ತದೆ ಎಂದು ಅಧ್ಯಯನಗಳು ಕಂಡುಕೊಂಡಿವೆ.