Suchendra Prasad agriculture: "ಕೈ ಕೆಸರಾಗದೆ ಜಗತ್ತು ಹಸಿರಾಗಲು ಸಾಧ್ಯವಿಲ್ಲ, ಭೂಕೃಷಿ ಮಾಡದೆ ಅನ್ನ ಉಣ್ಣುವ ಹಕ್ಕು ನಮಗಿಲ್ಲ!" — ಬಣ್ಣದ ಲೋಕದ ಗ್ಲಾಮರ್ ಪಕ್ಕಕ್ಕಿಟ್ಟು ಮಣ್ಣಿನ ಮಕ್ಕಳಂತೆ ಮಾತನಾಡಿರುವ ನಟ ಸುಚೇಂದ್ರ ಪ್ರಸಾದ್, ಬೆಂಗಳೂರಿನ ಸನಿಹದಲ್ಲೇ ಸಾಂಪ್ರದಾಯಿಕ ಕೃಷಿಯ ಮಹತ್ವವನ್ನು ಸಾರಿದ್ದಾರೆ.
"ಅನ್ನ ಎಲ್ಲಿಂದ ಬರುತ್ತೆ ಅಂದರೆ ಝೊಮ್ಯಾಟೋ, ಸ್ವಿಗ್ಗಿ ಅಂಕಲ್ ತಂದುಕೊಡ್ತಾರೆ, ಹಾಲು ನಂದಿನಿ ಬೂತ್ನಲ್ಲಿ ಬರುತ್ತೆ ಎನ್ನುವ ಇಂದಿನ ತಲೆಮಾರಿಗೆ ಮಣ್ಣಿನ ನಿಜವಾದ ವಾಸನೆ ಮತ್ತು ಕೃಷಿಯ ಶ್ರಮವನ್ನು ಕಲಿಸಲೇಬೇಕು!" — ಹೀಗೆಂದು ಸಂಕಲ್ಪ ತೊಟ್ಟು, ಬೆಂಗಳೂರಿನ ಗದ್ದಲದಿಂದ ಕೊಂಚ ದೂರದಲ್ಲಿರುವ ರಾಮೋಹಳ್ಳಿಯ ದೊಡ್ಡಾಲದ ಮರದ ಬಳಿ 7-8 ಎಕರೆ ಜಾಗದಲ್ಲಿ ಸಮಾನಮನಸ್ಕರ ಜೊತೆಗೂಡಿ 'ಸ್ವಯಂ ಕೃಷಿ' ಎಂಬ ವಿನೂತನ ನೈಸರ್ಗಿಕ ಕೃಷಿ ಕಲಿಕಾ ಕೇಂದ್ರವನ್ನು ತೆರೆದಿಟ್ಟಿದ್ದಾರೆ ಖ್ಯಾತ ನಟ ಸುಚೇಂದ್ರ ಪ್ರಸಾದ್ ಮತ್ತು ಕೆ.ಎಸ್. ರವಿ ತಂಡ. ಕಲಾಮಾಧ್ಯಮಕ್ಕೆ ನೀಡಿದ ಸಂದರ್ಶನನದಲ್ಲಿ ಅವರು ಈ ಕುರಿತು ವಿವರಿಸಿದ್ದು, ಏನಿದು 'ಸ್ವಯಂ ಕೃಷಿ'? ಇದರ ವಿಶೇಷತೆಗಳೇನು? ಎಂದು ನೋಡೋಣ ಬನ್ನಿ..
ಕೇವಲ ಪ್ರವಾಸ ಬಂದು, ಫೋಟೋ ತೆಗೆಸಿಕೊಂಡು ಹೋಗುವ ರೆಸಾರ್ಟ್ ಸಂಸ್ಕೃತಿ ಇದಲ್ಲ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ಮಣ್ಣಿಗೆ ಇಳಿದು ತಾವೇ ನೇಗಿಲು ಹಿಡಿದು ಉಳುಮೆ ಮಾಡಬೇಕು, ಬಿತ್ತಬೇಕು, ಕಳೆ ಕೀಳಬೇಕು ಹಾಗೂ ಇಲ್ಲಿ ಬೆಳೆದ ಸಿರಿಧಾನ್ಯ-ತರಕಾರಿಗಳನ್ನು ತಾವೇ ಅಡುಗೆ ಮಾಡಿ ಉಣ್ಣಬೇಕು. "ಕೈ ಕೆಸರಾದರೆ ಮಾತ್ರ ಬಾಯಿ ಮೊಸರು, ಜಗ ಹಸಿರು" ಎಂಬುದನ್ನು ಪ್ರಾಯೋಗಿಕವಾಗಿ ಕಲಿಸುವುದು ಇದರ ಮೂಲ ಉದ್ದೇಶ.
ಕೃಷಿ ಪಿತಾಮಹ 'ಪರಾಶರ ಮುನಿ'ಗಳ ನೆನಪು
ನಮಗೆ ವೇದವ್ಯಾಸರು ಗೊತ್ತು, ಆದರೆ ಅವರ ತಂದೆಯಾದ ಪರಾಶರ ಮಹರ್ಷಿಗಳು ಸಾವಿರಾರು ವರ್ಷಗಳ ಹಿಂದೆಯೇ 'ಕೃಷಿ ಪರಾಶರ' ಎಂಬ ಅಮೂಲ್ಯ ಕೃಷಿ ಗ್ರಂಥವನ್ನು ಬರೆದು ಭಾರತಕ್ಕೆ ಕೃಷಿ ವಿಜ್ಞಾನವನ್ನು ಕೊಟ್ಟವರು ಎಂಬುದು ಬಹುತೇಕರಿಗೆ ತಿಳಿದಿಲ್ಲ. "ರೈತ ಸ್ವತಃ ನಿಂತು ಆರೈಕೆ ಮಾಡಿದರೆ ಭೂಮಿ ಚಿನ್ನದ ಬೆಳೆ ಕೊಡುತ್ತದೆ, ನಿರ್ಲಕ್ಷಿಸಿದರೆ ಬಡತನ ಕಟ್ಟಿಟ್ಟ ಬುತ್ತಿ" ಎಂದು ಸಾರಿದ ಪರಾಶರ ಮುನಿಗಳ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿ, ಅವರ ಕೃಷಿ ತತ್ವಗಳನ್ನು ಪುನರುಜ್ಜೀವನಗೊಳಿಸಲಾಗುತ್ತಿದೆ.
ಕಣ್ಣೆದುರೇ ಜೀವಂತವಾದ 30 ವರ್ಷ ಹಳೆಯ 'ಏತ ನೀರಾವರಿ'
ಶಾಲಾ ಪಠ್ಯಪುಸ್ತಕಗಳಲ್ಲಿ ಓದಿ ಮರೆತುಹೋಗಿದ್ದ, ಯಾವುದೇ ವಿದ್ಯುತ್ ಅಥವಾ ಯಂತ್ರಗಳಿಲ್ಲದೆ ಕೇವಲ ತೂಕ ಮತ್ತು ಸಮತೋಲನದ ಮೂಲಕ ಬಾವಿಯಿಂದ ನೀರು ಸೇದಿ ಕಾಲುವೆಗೆ ಹರಿಸುವ ಸಾಂಪ್ರದಾಯಿಕ 'ಏತ ನೀರಾವರಿ' (Lever Lift Irrigation) ಘಟಕವನ್ನು ಇಲ್ಲಿ ಪುನಃ ಜೀವಂತಗೊಳಿಸಲಾಗಿದೆ. ಪ್ರತಿಯೊಬ್ಬರೂ ತಾವೇ ಸ್ವತಃ ಬಾವಿಯಿಂದ ನೀರು ಸೇದುವ ಅಪರೂಪದ ಅನುಭವ ಇಲ್ಲಿ ಲಭ್ಯ.
ಪವಿತ್ರ ಪಂಚವಟಿ ವನ
ದೇವಸ್ಥಾನ ಮತ್ತು ಆಶ್ರಮಗಳ ಪಕ್ಕದಲ್ಲಿ ಪ್ರಾಚೀನ ಕಾಲದಿಂದಲೂ ಬೆಳೆಸುತ್ತಿದ್ದ 5 ಪವಿತ್ರ ವೃಕ್ಷಗಳಾದ ಆಲ, ಅರಳಿ (ಅಶ್ವತ್ಥ), ಬಿಲ್ವಪತ್ರೆ, ಅಶೋಕ ಹಾಗೂ ಔದುಂಬರ (ನೆಲ್ಲಿ) ಮರಗಳ 'ಪಂಚವಟಿ'ಯನ್ನು ಇಲ್ಲಿ ಬೆಳೆಸಲಾಗಿದೆ. ಈ ಮರಗಳು ನೀಡುವ ಹೇರಳ ಆಮ್ಲಜನಕ ಮತ್ತು ಪರಿಸರ ಸಮತೋಲನದ ಮಹತ್ವವನ್ನು ಜನರಿಗೆ ತಿಳಿಸಿಕೊಡಲಾಗುತ್ತಿದೆ.
ಸಾಂಪ್ರದಾಯಿಕ 'ತೊಟ್ಟಿ ಮನೆ' & ಹಳ್ಳಿ ಬದುಕು
ಮೊಗಸಾಲೆ, ಪಡಸಾಲೆ, ಜಗಲಿ, ಹಂಡೆ ಒಲೆ, ರುಬ್ಬುಗುಂಡು, ಹಿತ್ತಾಳೆ-ತಾಮ್ರದ ಪಾತ್ರೆಗಳುಳ್ಳ ಸುಂದರ ಹೆಂಚಿನ ತೊಟ್ಟಿ ಮನೆಯನ್ನು ನಿರ್ಮಿಸಲಾಗಿದೆ. ರಾಸಾಯನಿಕ ಮುಕ್ತ ಸಾವಯವ ಗೊಬ್ಬರ, ಜೇನು ಸಾಕಾಣಿಕೆ, ಹೈನುಗಾರಿಕೆ, ಎತ್ತಿನ ಬಂಡಿ ಸವಾರಿ, ಬುಗರಿ, ಚಿನ್ನಿದಾಂಡು ಮುಂತಾದ ದೇಶಿ ಆಟಗಳ ಸೌಲಭ್ಯವೂ ಇಲ್ಲಿದೆ.
ಮೊಬೈಲ್ ಮತ್ತು ಪ್ಲಾಸ್ಟಿಕ್ ಮುಕ್ತ ವಲಯ
"ಕೂಗುಮಾರಿಗಳಂತಿರುವ ಸ್ಮಾರ್ಟ್ಫೋನ್ಗಳ ದಾಸ್ಯದಿಂದ ಮುಕ್ತಿ ಪಡೆಯಿರಿ" ಎನ್ನುವ ಸುಚೇಂದ್ರ ಪ್ರಸಾದ್, ಇಲ್ಲಿ ಮೊಬೈಲ್ ಬಳಕೆಯನ್ನು ಪಕ್ಕಕ್ಕಿಟ್ಟು ಮಣ್ಣಿನೊಂದಿಗೆ ಬೆರೆಯಲು ಕರೆ ನೀಡಿದ್ದಾರೆ. ಇದು ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿತ ವಲಯವಾಗಿದೆ.
ಸುಚೇಂದ್ರ ಪ್ರಸಾದ್ ಮಾತು
"ನಾನು ಸಾಹಿತ್ಯ, ಸಿನಿಮಾ, ರಂಗಭೂಮಿಯಲ್ಲಿದ್ದರೂ ಮೂಲತಃ ಹಳ್ಳಿಯಿಂದ ಬಂದ ಕೃಷಿಕನ ಮಗ. ನಮ್ಮ ಜೀವಿತದ ಶೇಷಾಯುಷ್ಯವನ್ನು ಪ್ರಕೃತಿಯ ಒಡನಾಟದಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಭೂಕೃಷಿ ಮಾಡದೆ ಅನ್ನ ಉಣ್ಣುವ ಹಕ್ಕು ನಮಗಿಲ್ಲ. ಯುವ ಪೀಳಿಗೆ ಹಾಗೂ ಮಕ್ಕಳು ಸ್ವಿಗ್ಗಿ-ಝೊಮ್ಯಾಟೋ ಭ್ರಮೆಯಿಂದ ಹೊರಬಂದು ಮಣ್ಣಿನ ಮಹತ್ವ ತಿಳಿಯಲು ಸ್ವಯಂ ಕೃಷಿಗೆ ಮರಳಿ ಬರಬೇಕು."

