ರಾಜಸ್ಥಾನವೆಂದರೆ ಮರಳಿನ ದಿಬ್ಬಗಳು, ಒಂಟೆಗಳು, ರಜಪೂತ ರಾಜರು ಹಾಗೂ ಅವರ ದೊಡ್ಡ ದೊಡ್ಡ ಕೋಟೆ ಕೊತ್ತಲಗಳು, ವಿಶೇಷ ವೇಷಭೂಷಣ, ಸಂಸ್ಕೃತಿ... ಆದರೆ, ಇಷ್ಟೆಲ್ಲ ವಿಶೇಷವಾಗಿರುವ ರಾಜಸ್ಥಾನದ ಹೊಳಪು ಮಳೆಗಾಲದಲ್ಲಿ ಫೇಡ್ ಆಗುತ್ತದೆ ಎಂಬ ಸುಳ್ಳು ನಂಬಿಕೆಯೊಂದು ಅದು ಹೇಗೋ ಹರಡಿಬಿಟ್ಟಿದೆ. ನಿಜವೆಂದರೆ, ಮಳೆಗಾಲದಲ್ಲಿ ರಾಜಸ್ಥಾನದ ಸೌಂದರ್ಯವನ್ನು ನೋಡಿಯೇ ಸವಿಯಬೇಕು. 

ಸವಿದು ನೋಡಿ ರಾಜಸ್ಥಾನಿ ಖಾದ್ಯಗಳ ರಸಗವಳ!

ಮೋಡವು ಇದ್ದಕ್ಕಿದ್ದಂತೆ ಬ್ಲ್ಯಾಸ್ಟ್ ಆಗಿ ಇಲ್ಲಿನ ಬೋಳು ನೆಲಕ್ಕೆ ಸರ್ಪ್ರೈಸ್ ನೀಡುತ್ತದೆ, ಹಳ್ಳಿಗಾಡುಗಳು ಆಯಿಲ್ ಪೇಂಟಿಂಗ್‌ನಂತೆ ಕಂಡರೆ, ಜೈಪುರ, ಜೈಸಲ್ಮೇರ್, ಉದಯ್‌ಪುರ ಹಾಗೂ ಮೌಂಟ್ ಅಬು ಮಳೆಯಲ್ಲಿ ಮಿಂದು ತಾಜಾತನದದಿಂದ ಮಂತ್ರಮುಗ್ಧಗೊಳಿಸುತ್ತವೆ. ಮಳೆಗಾಲದಲ್ಲಿ ರಾಜಸ್ಥಾನ ಪ್ರಯಾಣದ ಬಗ್ಗೆ ನಿಮಗಿನ್ನೂ ನಂಬಿಕೆ ಬಂದಿಲ್ಲವೆಂದರೆ, ಇಲ್ಲಿಗೆ ರೋಡ್ ಟ್ರಿಪ್ ಮಾಡಲು ಮತ್ತಷ್ಟು ಕಾರಣಗಳು ಇಲ್ಲಿವೆ,

ತೀಜ್ ಫೆಸ್ಟಿವಲ್

ಜುಲೈ ಹಾಗೂ ಆಗಸ್ಟ್ ಸಮಯದಲ್ಲಿ ರಾಜಸ್ಥಾನಕ್ಕೆ ಭೇಟಿ ನೀಡಿದರೆ ಜೈಪುರದ ತೀಜ್ ಫೆಸ್ಟಿವಲ್ ನೋಡಲು ಸಿಗಬಹುದು. ದೇವಿ ಪಾರ್ವತಿಯನ್ನು ಪೂಜಿಸಲು ಮಹಿಳೆಯರು ಪೂರ್ತಿ ಕಲರ್‌ಫುಲ್ ಆಗಿ ಬಟ್ಟೆ ಧರಿಸಿ, ದೊಡ್ಡ ದೊಡ್ಡ ಆಭರಣಗಳನ್ನು ಹಾಕಿಕೊಂಡು ರೆಡಿಯಾಗಿ, ಕೈತುಂಬಾ ಮೆಹಂದಿ ಹಾಕಿಕೊಂಡು ಉತ್ಸಾಹದಿಂದ ಓಡಾಡುತ್ತಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ದೊಡ್ಡ ದೊಡ್ಡ ಮರದ ಕೊಂಬೆಗಳಿಗೆ ಜೋಕಾಲಿ ಕಟ್ಟಿ ತೀಜ್ ಹಾಡುಗಳನ್ನು ಹೇಳುತ್ತಾ ಮಹಿಳೆಯರು ಜೀಕುವುದು ನೋಡುತ್ತಿದ್ದರೆ, ಕೃಷ್ಣಾವತಾರದ ಗೋಕುಲ ಹೀಗೇ ಇದ್ದಿರಬಹುದೇ ಎನಿಸೀತು. ಇದು ಮಳೆಗಾಲದಲ್ಲಿ ನೋಡಲು ಸಿಗುವ ರಾಜಸ್ಥಾನದ ಸಾಂಸ್ಕೃತಿಕ ಮುಖ. 

ಬೃಹತ್ ಕೋಟೆಕೊತ್ತಲಗಳು

ರಾಜಸ್ಥಾನದ ಕೋಟೆಗಳು ಬಹಳ ವೈಭವೋಪೇತವಾಗಿ ಕಣ್ಮನ ಸೆಳೆಯುತ್ತವೆ. ಅದರಲ್ಲೂ ಮಳೆಗಾಲದಲ್ಲಿ ತೊಳೆದಿಟ್ಟಂತೆ ಹೊಸದಾಗಿ ಕಾಣುವ ಈ ಕೋಟೆಗಳ ಸೌಂದರ್ಯ ಇಮ್ಮಡಿಯಾಗುತ್ತದೆ. ಬಹುತೇಕ ಕೋಟೆಗಳು ಬೆಟ್ಟದ ಮೇಲಿರುವುದರಿಂದ ಹಸಿರಿನಿಂದ ಸುತ್ತುವರೆದು ನಗರಕ್ಕೂ ಹೊಸ ಕಳೆ ಬಂದಿರುತ್ತದೆ. ಪ್ರವಾಸಿಗರೂ ಕಡಿಮೆ ಇರುವುದರಿಂದ ಮನಸೋಇಚ್ಚೆ ನಿಧಾನವಾಗಿ ನೋಡಿಕೊಳ್ಳಬಹುದು. 

ಕಗ್ಗತ್ತಲ ರಾತ್ರಿಯಲ್ಲಿ ನಕ್ಷತ್ರ ಪುಂಜ ನೋಡಲಿಲ್ಲಿ ಹೋಗಿ...

ಕೆರೆಕಟ್ಟೆಗಳು

ರಾಜಸ್ಥಾನವೆಂದರೆ ಬರಡು ಮರಳುಭೂಮಿ ಎಂಬ ನಿಮ್ಮ ಕಲ್ಪನೆ ಹೋಗಬೇಕೆಂದರೆ ಮಳೆಗಾಲದಲ್ಲಿ ಭೇಟಿ ನೀಡಬೇಕು. ಇಲ್ಲಿನ ಕೆರೆಕಟ್ಟೆಗಳ ಸೌಂದರ್ಯಕ್ಕೆ ನಿಮ್ಮ ಮೂಡ್ ಬದಲಿಸುವ ಸಾಮರ್ಥ್ಯವಿದೆ. ಪಿಚೋಲಾ ಲೇಕ್‌ಗೆ ಭೇಟಿ ನೀಡಲು ಕೆಲ ರಾತ್ರಿಗಳನ್ನು ಮೀಸಲಿಡಿ. ಕನಸಿಗಿಂತ ಕಡಿಮೆಯೇನಿಲ್ಲ ರಾತ್ರಿಯ ಪಿಚೋಲಾ ಸೊಬಗು. 

ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್

ವರ್ಷದ ಯಾವುದೇ ಕಾಲ, ಯಾವುದೇ ದಿನವಾಗಲಿ, ರಾಜಸ್ಥಾನದ ಸ್ಥಳೀಯ ಮಾರುಕಟ್ಟೆಗಳಲ್ಲಿ ಶಾಪಿಂಗ್ ಮಾಡುವ ಮಜವೇ ಬೇರೆ. ಚರ್ಮದ ವಸ್ತುಗಳು, ರಾಯಲ್ ಆಭರಣಗಳು, ಮಸಾಲೆ ಪದಾರ್ಥಗಲು, ಕಲರ್‌ಫುಲ್ ಟ್ರಿಂಕೆಟ್ಸ್... ಈ ರಾಜ್ಯದ ಕಲಾಕುಸುರಿ ಜಗತ್ತಿನ ಕಣ್ಮನವನ್ನೇ ಸೆಳೆದಿರುವುದು ಗೊತ್ತಿರುವ ವಿಷಯವೇ. ಇಲ್ಲಿಗೆ ಪ್ರಪಂಚದಾದ್ಯಂತ ಎಲ್ಲಿಂದಲೇ ಪ್ರವಾಸಿಗರು ಬರಲಿ, ವಾಪಸ್ ಹೋಗುವಾಗ ಎರಡರಷ್ಟು ಬ್ಯಾಗ್ ತುಂಬಿಸಿಕೊಂಡು ಹೋಗುವುದು ಮಾಮೂಲು. 

ಡಿಸ್ಕೌಂಟ್

ಕಡಿಮೆ ಬಜೆಟ್‌ನಲ್ಲಿ ರಾಜಸ್ಥಾನ ಪ್ರವಾಸ ಮಾಡಬೇಕೆನ್ನುವವರಿಗೂ ಮಳೆಗಾಲ ಬೆಸ್ಟ್. ಹೋಟೆಲ್‌ಗಳಿಂದ ಹಿಡಿದು ವಾಹನಗಳ ತನಕ ಶೇ.30-ಶೇ.40ರಷ್ಟು ಡಿಸ್ಕೌಂಟ್ ಅನಾಯಾಸವಾಗಿ ಸಿಗುತ್ತದೆ. 

ಪಾತಾಳದಲ್ಲಿ ವಾಸಿಸೋ ಮಂದಿ, ಇದೇನು ಅಜ್ಜಿ ಕಥೆಯಲ್ಲ ಬಿಡಿ!

ಸ್ಥಳೀಯ ಅನುಭವ

ರಾಜಸ್ಥಾನದ ಲೋಕಲ್ ಅನುಭವಕ್ಕಾಗಿ ನೀವು ಆಸಕ್ತರಾಗಿದ್ದರೆ ಅಲ್ಲಿ ಸಾಕುಬೇಕೆನಿಸುವಷ್ಟು ಅನುಭವಗಳು ನಿಮ್ಮದಾಗುತ್ತವೆ. ಇಲ್ಲಿನ ಮಾರುಕಟ್ಟೆಗಳು ಹಬ್ಬದ ವಾತಾವರಣದಲ್ಲಿ ಸಜ್ಜಾಗಿ ಕರೆಯುತ್ತಿರುತ್ತವೆ, ಮಳೆಗಾಲ ರಾಜ್ಯದಲ್ಲಿ ಶಾಪಿಂಗ್ ಹಾಗೂ ಹಬ್ಬಾಚರಣೆಗಳ ಸಮಯ. ಅದೃಷ್ಟವಿದ್ದರೆ ನೀವು ಕೂಡಾ ಅಲ್ಲಿನ ರಾಯಲ್ ಫೀಸ್ಟ್‌ಗೆ ಆಹ್ವಾನಿತರಾಗಬಹುದು. ಜೀವಿತಾವಧಿ ಅನುಭವ ಬೇಕೆಂದರೆ ಹೆಚ್ಚು ತಿಳಿದಿಲ್ಲದ ಹಳ್ಳಿಯ ಸ್ಥಳಗಳಿಗೆ ಭೇಟಿ ನೀಡಿ. 

ಪ್ರವಾಸಿಗರ ಕಿರಿಕಿರಿ ಇಲ್ಲ

ಇಲ್ಲಿನ ಸುಂದರ ಕೆರೆಯ ಬಳಿ ಕುಳಿತು ಪುಸ್ತಕ ಓದಬೇಕೆಂದರೆ, ಕೋಟೆಗಳನ್ನು ರಿಲ್ಯಾಕ್ಸ್ಡ್ ಆಗಿ ವೀಕ್ಷಿಸಬೇಕೆಂದರೆ, ಅಲ್ಪಸ್ವಲ್ಪ ಮಳೆಗೆ ಒಡ್ಡಿಕೊಳ್ಳುತ್ತಾ ಖಾರ ಖಾರದ ರಾಜಸ್ಥಾನಿ ಸ್ಪೈಸಿ ಫುಡ್ ಸವಿಯಬೇಕೆಂದರೆ, ಪುರುಸೊತ್ತಲ್ಲಿ ಶಾಪಿಂಗ್ ಮಾಡಬೇಕೆಂದರೆ, ಇದು ಸರಿಯಾದ ಸಮಯ. ಪ್ರವಾಸಿಗರ ಕಿರಿಕಿರಿ ಕಡಿಮೆ ಇರುವುದರಿಂದ ಇಡೀ ರಾಜಸ್ಥಾನವೇ ನಿಮ್ಮದೆಂದು ತಿಳಿದು ರಾಜರಂತೆ ಸುತ್ತಬಹುದು.