ಯಾವುದೇ ವಿಷಯಕ್ಕೇ ಆಗಲಿ, ಆರಂಭದಲ್ಲಿರುವಷ್ಟು ಸಾಧಿಸಲೇಬೇಕೆಂಬ ಛಲ ನಂತರದ ದಿನಗಳಲ್ಲಿ ಉಳಿಯುವುದು ಕೆಲವೇ ಕೆಲವರಲ್ಲಿ ಮಾತ್ರ. ನಾವು ಭರವಸೆ ಕಳೆದುಕೊಳ್ಳುವಷ್ಟು ಸುಲಭವಾಗಿ ಮೋಟಿವೇಟ್ ಆಗುವುದಿಲ್ಲ. ನಮಗೆಲ್ಲರಿಗೂ ಫಲಿತಾಂಶ ಬೇಕು, ಆದರೆ ಅದಕ್ಕಾಗಿ ಕಷ್ಟಪಡಲು ತಯಾರಿರುವುದಿಲ್ಲ. ಆರಂಭಶೂರರಾಗದೇ ನಿರಂತರ ಮೋಟಿವೇಟ್ ಮಾಡಿಕೊಳ್ಳುತ್ತಲೇ ಪ್ರಯತ್ನ ಹಾಕಿದರೆ ಯಾವುದನ್ನಾದರೂ ಸಾಧಿಸುವುದು ಕಷ್ಟವಲ್ಲ. ತೂಕ ಇಳಿಸುವ ಗುರಿಗೂ ಹಾಗೆಯೇ. ನಿರಂತರ ಮೋಟಿವೇಶನ್ ಅಗತ್ಯ. ಜೀವನಶೈಲಿ ಬದಲಾವಣೆ ಅನಿವಾರ್ಯ. ಅಯ್ಯೋ ಟೈಮಿಲ್ಲ, ಮನೆಯವರ ಸಪೋರ್ಟ್ ಇಲ್ಲ, ಅಷ್ಟೊಂದು ನಿಧಾನ ಫಲಿತಾಂಶಕ್ಕೆ ಕಾಯಲು ತಾಳ್ಮೆಯಿಲ್ಲ, ಪೆಟ್ಟಾಗುತ್ತದೆ, ನೋವಾಗುತ್ತದೆ, ತಿನ್ನೋ ಚಟ ಬಿಡಕ್ಕಾಗ್ತಿಲ್ಲ ಎಂಬೆಲ್ಲ ಕಾರಣಗಳು ನಿಮ್ಮನ್ನು ತಡೆಯುತ್ತಿದ್ದರೆ ಹೊಟ್ಟೆಯ ಎರಡೂ ಬದಿಯಲ್ಲಿ ಬೊಜ್ಜನ್ನು ನೇತಾಡಿಸಿಕೊಂಡು ದೊಗಲೆ ದೊಗಲೆ ಬಟ್ಟೆ ಹಾಕಿಕೊಂಡು ಡಬಲ್ ಸೀಟ್ ಬೈಕಿನ ತುಂಬಾ ಒಬ್ಬರೇ ಕುಳಿತು 25ಕ್ಕೇ 50 ವರ್ಷದ ಅಂಕಲ್/  ಆಂಟಿಯ ಲುಕ್‌ ಹೊಂದಿ ಕಾಯಿಲೆಗಳಿಗೆ ಆಹ್ವಾನ ಪತ್ರಿಕೆ ಬರೆಯುತ್ತಾ ಕುಳಿತುಕೊಳ್ಳುವುದನ್ನು ಕಲ್ಪಿಸಿಕೊಳ್ಳಿ. ಗುರಿ ಸಾಧಿಸಲೇಬೇಕೆನ್ನುವವರಿಗೆ ಯಾವ ಕಾರಣಗಳೂ ಅಡ್ಡಿಯಾಗುವುದಿಲ್ಲ. ಹಾಗಿದ್ದರೆ, ತೂಕ ಇಳಿಸಲೇಬೇಕೆನ್ನುವವರು ಮೋಟಿವೇಶನ್‌ಗಾಗಿ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ. 

1. ಪ್ರೀತಿ ಮತ್ತು ಪ್ರೋತ್ಸಾಹ
ನಿಮ್ಮನ್ನು ನೀವು ಪ್ರೀತಿಸುತ್ತೀರಾದರೆ, ದೇಹವನ್ನು ಪ್ಯಾಂಪರ್ ಮಾಡಿ ಹಾಳು ಮಾಡುವ ಬದಲು ಸ್ವಲ್ಪ ಕಷ್ಟಪಟ್ಟರೂ ಒಳ್ಳೆಯದಾಗಲಿ ಎಂದೇ ಮಾಡುತ್ತೀರಾ. ಸೆಲ್ಫ್ ಲವ್ ಮೋಟಿವೇಶನ್ ನೀಡುತ್ತದೆ. ನಿಮಗೆ ನೀವೇ ಪ್ರತಿದಿನ ಪ್ರೋತ್ಸಾಹಿಸಿಕೊಂಡು ತೂಕ ಇಳಿಸುವ ಹಟದೊಂದಿಗೇ ಕಣ್ಣು ಬಿಡಿ.

2. ಬದ್ಧತೆ
ತೂಕ ಇಳಿಸಬೇಕೆಂದುಕೊಂಡ ಬಳಿಕ ಅದನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಅಥವಾ ಮನೆಯವರ ಎದುರು, ಗೆಳೆಯರ ಬಳಿ ಘೋಷಿಸಿಕೊಳ್ಳಿ. ಆಗ ಮಾತಿಗೆ ತಪ್ಪುವ ಸಂಭವ ಕಡಿಮೆ. ಅವರು ಆಡಿಕೊಳ್ಳುವ ಭಯವೇ ನೀವು ನಿಮ್ಮ ಗುರಿಯತ್ತ ಹೆಚ್ಚು ಕಮಿಟ್ ಆಗಿರುವಂತೆ ನೋಡಿಕೊಳ್ಳುತ್ತದೆ. ಕನಿಷ್ಠ ಪಕ್ಷ 3 ತಿಂಗಳು ತಪ್ಪಿಸದೆ ತೂಕ ಇಳಿಕೆಗೆ ವರ್ಕೌಟ್ ಹಾಗೂ ಡಯಟ್ ಮಾಡುವ ಬಗ್ಗೆ ಪೂರ್ಣ ಬದ್ಧತೆ ನೀಡಿ. ಆ ನಂತರದಲ್ಲಿ ನೀವು ಬಿಡಬೇಕೆಂದರೂ ಗುರಿ ನಿಮ್ಮನ್ನು ಬಿಡಲಾರದು. 

3. ಟ್ರೇನರ್ ಇರಲಿ
ಮನೆಯಲ್ಲೇ ಒಬ್ಬರೇ ತೂಕ ಇಳಿಸುವ ಬದಲು ಜಿಮ್, ಯೋಗ ಕ್ಲಾಸ್ ಅಥವಾ ಯಾವುದೇ ಗ್ರೂಪ್ ಕ್ಲಾಸ್‌ಗೆ ಸೇರಿಕೊಳ್ಳಿ. ಮೆಂಟರ್ ಅಥವಾ ಟ್ರೇನರ್ ಇದ್ದರೆ ನೀವು ಶಿಸ್ತುಬದ್ಧವಾಗಿ ವರ್ಕೌಟ್ ಮಾಡುತ್ತೀರಿ. ಅಲ್ಲದೇ, ಎಲ್ಲರೊಂದಿಗೆ ಬೆರೆಯುವ ಅವಕಾಶವೂ ನಿಮಗೆ ಬೇಗ ಏಳಲು ಮೋಟಿವೇಟ್ ಮಾಡುತ್ತದೆ.

4. ನಾಯಿ ಸಾಕಿ
ಮನೆಯಲ್ಲಿ ನಾಯಿಯೊಂದಿದ್ದರೆ ನಿಮ್ಮ ಚಟುವಟಿಕೆಗಳು ಹೆಚ್ಚಿರುತ್ತವೆ. ನಾಯಿಯನ್ನು ಹೊರಗೆ ವಾಕ್ ಕರೆದುಕೊಂಡು ಹೋಗುವುದು, ಅದರೊಂದಿಗೆ ಆಡುವುದರಿಂದ ಕ್ಯಾಲೋರಿ ಬರ್ನ್ ಆಗುವ ಜೊತೆಗೆ ಮೂಡ್ ಕೂಡಾ ಬದಲಾಗಿ ಖುಷಿಯಾಗುತ್ತದೆ. ಒಂಟಿತನವನ್ನು ಹೋಗಿಸುವ ತಾಕತ್ತು ಕೂಡಾ ನಾಯಿಯ ಸಹಚರ್ಯಕ್ಕಿದೆ.

5. ಗುರಿ ಬರೆದಿಟ್ಟುಕೊಳ್ಳಿ
ತಿಂಗಳಿಗೆ ಇಷ್ಟು ಕೆಜಿ, ಆರು ತಿಂಗಳಿಗಿಷ್ಟು, ವರ್ಷಕ್ಕಿಷ್ಟು ತೂಕ ಇಳಿಸಬೇಕೆಂದು ಗುರಿ ಸೆಟ್ ಮಾಡಿಕೊಳ್ಳಿ. ಇದನ್ನು ಬೆಡ್ ರೂಂನ ಕೋಣೆಗೆ ಬರೆದು ಅಂಟಿಸಿಕೊಳ್ಳಿ. ಗುರಿ ರಿಯಲಿಸ್ಟಿಕ್ ಆಗಿರಲಿ. ತಿಂಗಳಿಗೆ ಒಂದು ಕೆಜಿ ಇಳಿಸುತ್ತೇನೆ ಎಂದುಕೊಂಡರೆ ಅದು ವರ್ಕೌಟ್ ಹಾಗೂ ಡಯಟ್‌ಗೆ ಮೋಟಿವೇಶನ್ ಆಗುತ್ತದೆ. ತಿಂಗಳಿಗೆ 5 ಕೆಜಿ ಎಂದುಕೊಂಡರೆ ಅದು ಸಾಧಿಸಲು ಅಸಾಧ್ಯವಾದುದು ಎಂಬುದು ನಿಮ್ಮ ಒಳಮನಸ್ಸಿಗೆ ಗೊತ್ತಿರುವುದರಿಂದಲೇ ಮನಸ್ಸು ಸೋಮಾರಿಯಾಗಬಹುದು. ಒಂದೊಂದೇ ಗುರಿ ಸಾಧಿಸಿದಂತೆಯೂ ದೂರದ ಗುರಿ ಹತ್ತಿರವೆನಿಸಲಾರಂಭಿಸುತ್ತದೆ. ನೀವು ಹೆಚ್ಚು ಪಾಸಿಟಿವ್ ಆಗಿರುತ್ತೀರಿ.

6. ಪರ್ಫೆಕ್ಷನ್ ಎಂಬುದು ಸುಳ್ಳು
ಪರ್ಫೆಕ್ಷನ್ ಎಂಬುದು ಅಸ್ತಿತ್ವದಲ್ಲೇ ಇಲ್ಲ. ಆಗಾಗ, ನಿಮ್ಮ ಶ್ರಮಕ್ಕೆ ತಕ್ಕ ಫ್ರತಿಫಲ ಸಿಗುತ್ತಿಲ್ಲ ಎನಿಸಬಹುದು. ಬಾಯಿ ಕಟ್ಟಿಕೊಳ್ಳುವುದು ಕಷ್ಟವೆನಿಸಬಹುದು. ಆದರೆ, ಭರವಸೆ ಕಳೆದುಕೊಳ್ಳಬೇಡಿ. ಆಮೆ ವೇಗದಲ್ಲಿ ಹೋದರೂ ಗುರಿ ಸಾಧಿಸಬಹುದು. ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವುದನ್ನು ನಿಲ್ಲಿಸಬೇಡಿ. ಆಹಾರಕ್ರಮ, ವ್ಯಾಯಾಮ ಇವೆಲ್ಲವೂ ಒಂದಿಷ್ಟು ದಿನ ಬದಲಾದರೆ ಸಾಲದು, ಅದು ಜೀವನಶೈಲಿಯಾಗಬೇಕು. ಒಳ್ಳೆಯ ಜೀವನಶೈಲಿ ನಿರಂತರವಾಗಿರಬೇಕು. ಹೀಗಾಗಿ, ನೀವು ಒಂದು ಗುರಿಯ ಬೆನ್ನು ಹತ್ತಿದ್ದೀರೆಂದುಕೊಳ್ಳುವುದಕ್ಕಿಂತ ಜೀವನವನ್ನೇ ಸಕಾರಾತ್ಮಕವಾಗಿ ಬದಲಿಸಿಕೊಳ್ಳುತ್ತಿದ್ದೀರೆಂಬ ವಿಷಯ ಅರಿತಿರಿ. 

7. ಯಶಸ್ಸನ್ನು ಸಂಭ್ರಮಿಸಿ
ತೂಕ ಇಳಿಸುವ ಹಾದಿಯಲ್ಲಿ ಸಿಕ್ಕ ಚಿಕ್ಕ ಚಿಕ್ಕ ಯಶಸ್ಸನ್ನು ಸಂಭ್ರಮಿಸಿ. ಗೆಳೆಯರೊಂದಿಗ, ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳಿ. ಇದು ನಿಮ್ಮ ಬಗ್ಗೆ ನಿಮಗೇ ಹೆಮ್ಮೆ ತರುವುದಲ್ಲದೆ ಗೆಳೆಯರ ಬೆಂಬಲದ ಮಾತುಗಳು ಇನ್ನಷ್ಟು ಸಾಧಿಸಲು ಪ್ರೇರೇಪಿಸುತ್ತವೆ. ಇನ್ನು ತಿಂಗಳಲ್ಲಿ ನಿರಂತರ ವಾರಕ್ಕೆ ಐದು ದಿನ ತಪ್ಪಿಸದೆ ವರ್ಕೌಟ್ ಮಾಡಿದ್ದು ನಿಮ್ಮ ಸಾಧನೆಯೆನಿಸಿದರೆ, ಅದನ್ನೂ ಸೆಲೆಬ್ರೇಟ್ ಮಾಡಿ. ಹಾಗಂತ ತಿಂದು ಸೆಲೆಬ್ರೇಟ್ ಮಾಡುವ ಬದಲು, ಮೂವಿಗೆ ಹೋಗಿ, ಬಬಲ್ ಬಾತ್ ಮಾಡಿ, ಹೊಸ ವರ್ಕೌಟ್ ಶರ್ಟ್ ಖರೀದಿಸಿ... ಒಟ್ಟಿನಲ್ಲಿ ನಿಮಗೆ ನೀವೇ ಟ್ರೀಟ್ ಕೊಟ್ಟುಕೊಳ್ಳಿ.