ವಿಶ್ವದ ಕಾಸ್ಟ್ಲಿ ಕಾಫಿ ಮಾಡೋದು ಹೇಗೆ, ರೇಟ್ ಎಷ್ಟು?
ಕಾಡುಪ್ರಾಣಿಯ ಮಲದಿಂದ ತಯಾರಿಸುತ್ತಾರೆ ಪ್ರಪಂಚದ ಅತೀ ದುಬಾರಿ ಕಾಫಿ!? ಈ ಕಾಫಿ ಆರೋಗ್ಯವರ್ಧಕ ಮತ್ತು ಸೌಂದರ್ಯವರ್ಧಕವೆಂದು ಜನರು ಸವಿಯುತ್ತಾರೆ. ಏನಿದು ಲುವಾಕ್ ಕಾಫಿ?... ಒಂದು ಕಪ್ ಕಾಫಿ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ ...
- ಆಗುಂಬೆ ವಿದ್ಯಾ
ನಮ್ಮದು ‘ಕಾಫಿ ನಾಡು’. ದೇಶದ ಶೇ. 70ರಷ್ಟು ಕಾಫಿಯನ್ನು ಕರುನಾಡಲ್ಲೇ ಬೆಳೆಯುತ್ತಾರೆ. ಕನ್ನಡಿಗರು ಅದರಲ್ಲಿಯೂ ಮಲೆನಾಡಿಗರು ಕಾಫಿ ಪ್ರಿಯರು. ಬೈಟು ಕಾಫಿ, ಫಿಲ್ಟರ್ ಕಾಫಿ, ಮಲೆನಾಡ ಬೆಲ್ಲದ ಕಾಫಿ, ಕಾಫಿ ಡೇ ಕಾಫಿ, ಪಂಚತಾರಾ ಹೋಟೆಲ್ ಕಾಫಿ ಎಲ್ಲವೂ ಚಿರಪರಿಚಿತ.
ಕಾಫಿ ಬೆಳೆಯನ್ನು ಮೊದಲು ಬೆಳೆದಿದ್ದು ಆಫ್ರಿಕಾದ ಇಥಿಯೋಪಿಯಾದಲ್ಲಿ. ನಂತರದ ದಿನಗಳಲ್ಲಿ ಅರೇಬಿಯನ್ನರು ಈ ಪಾನೀಯವನ್ನು ಇಷ್ಟಪಟ್ಟು, ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾರಂಭಿಸಿದರು. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕಾಫಿ ಬೆಳೆದ ಸ್ಥಳ ನಮ್ಮ ಮಲೆನಾಡಿನ ಚಿಕ್ಕಮಗಳೂರಿನ ಬಾಬಾಬುಡನ್ ಗಿರಿ!
ಚರಿತ್ರೆಯ ಪುಟಗಳು ಈ ಬಗ್ಗೆ ಒಂದು ಕಥೆಯನ್ನೇ ಹೇಳುತ್ತವೆ. ಸಂತ ಬಾಬಾಬುಡನ್ ಅವರು ತಮ್ಮ ಪವಿತ್ರ ಮಕ್ಕಾ ಯಾತ್ರೆ ಮುಗಿಸಿಕೊಂಡು ಬರುವಾಗ 7 ಕಾಫಿ ಬೀಜಗಳನ್ನು ತಮ್ಮ ಗಡ್ಡದಲ್ಲಿ ಇಟ್ಟುಕೊಂಡು ಮೈಸೂರಿಗೆ ತಂದರಂತೆ. ಅಲ್ಲಿಂದ ಚಿಕ್ಕಮಗಳೂರಿಗೆ ಹೋಗಿ ಅಲ್ಲಿನ ಬೆಟ್ಟದಲ್ಲಿ ಈ ಬೀಜಗಳನ್ನು ಬಿತ್ತಿದರಂತೆ. ಆಗಿನಿಂದಲೇ ಕನ್ನಡಿಗರಿಗೆ ಕಾಫಿಯೊಂದಿಗೆ ಶುರುವಾಯಿತು ನಂಟು.
ಜಗತ್ತಿನ ಅತೀ ದುಬಾರಿ ಕಾಫಿ-ಲುವಾಕ್ !
ಆದರೆ ಪ್ರಪಂಚದಲ್ಲೇ ದುಬಾರಿ ಕಾಫಿ ಎನ್ನಿಸಿಕೊಂಡಿರುವ ಲುವಾಕ್ (Luwak) ಕಾಫಿಯನ್ನು ನಮ್ಮಲ್ಲಿ ತಯಾರಿಸುವುದು ಕಷ್ಟ ಬಿಡಿ. ಅಕಸ್ಮಾತ್ ತಯಾರಿಸಿದರೂ ಕುಡಿಯೋದು....ಡೌಟ್! ದುಡ್ಡು ಹೆಚ್ಚು ಎನ್ನುವ ಕಾರಣ ಒಂದಾದರೆ, ಅದನ್ನು ತಯಾರಿಸುವ ರೀತಿಯೂ ಏಕೋ ನಮಗೆ ಒಗ್ಗುವುದು ಸುಳ್ಳು.
ವಿಶ್ವದಲ್ಲಿಯೇ ದುಬಾರಿ ಕಾಫಿ ಎನ್ನುವ ಈ ಒಂದು ಕಪ್ ಶುದ್ಧ ಲುವಾಕ್ ಕಾಫಿ ಬೆಲೆ ಬರೋಬ್ಬರಿ 6,000 ರೂ! ನಂಬಲಿಕ್ಕೆ ಕಷ್ಟವಾದರೂ ಇದು ಸತ್ಯ. ಕೇವಲ 100 ಗ್ರಾಂ ಲುವಾಕ್ ಕಾಫಿ ಪುಡಿಯ ಬೆಲೆ ಸುಮಾರು 8,000 ರೂ. ಇರುತ್ತದೆ.
ಈ ಕಾಫಿಯನ್ನು ಕುಡಿಯಲು ಜೇಬು ಭರ್ತಿಯಾಗಿದ್ದರಷ್ಟೇ ಸಾಲದು, ಗುಂಡಿಗೆ ಗಟ್ಟಿ ಇರಬೇಕು. ಆಶ್ಚರ್ಯದೊಂದಿಗೆ ಅಸಹ್ಯ ಹುಟ್ಟಿಸೋ ವಿಷಯವಿದು...
ಲುವಾಕ್ ಕಾಫಿ ತಯಾರಿಸೋದು ಹೇಗೆ ಗೊತ್ತಾ?
ಸಿವೆಟ್ (Civet) ಅಥವಾ ಲುವಾಕ್ಎನ್ನುವ ಒಂದು ಪ್ರಾಣಿಯ ಸಹಾಯದಿಂದ ಈ ಕಾಫಿ ತಯಾರಿಸುತ್ತಾರೆ. ಬೆಕ್ಕನ್ನು ಹೋಲುವ ಈ ಕಾಡು ಪ್ರಾಣಿಯನ್ನು ಕಾಫಿ ತೋಟದಲ್ಲಿಯೇ ಸಾಕುತ್ತಾರೆ.
ಈ ಪ್ರಾಣಿಗೆ ರೊಬಸ್ಟಾ ಅಥವಾ ಅರೇಬಿಕಾ ಕಾಫಿ ಬೀಜಗಳನ್ನೇ ತಿನ್ನಿಸುತ್ತಾರೆ. ಅರ್ಧ ಜೀರ್ಣವಾಗಿ ಮಲದ ರೂಪದಲ್ಲಿ ಹೊರಬರುವ ಕಾಫಿ ಬೀಜಗಳು ಉತ್ತಮ ಗುಣಮಟ್ಟದ್ದಾಗಿದ್ದು ಬಹಳ ರುಚಿಯಾಗಿರುತ್ತದೆ! ಲುವಾಕ್ ಪ್ರಾಣಿಯ ಮಲದಿಂದ ತಯಾರಿಸಿದ ಈ ಕಾಫಿ, ಔಷಧಿಯ ಗುಣಗಳನ್ನೂ ಹೊಂದಿದ್ದು ಮನುಷ್ಯನ ಸೌಂದರ್ಯ ಹೆಚ್ಚಿಸೋ ಜತೆ, ಆರೋಗ್ಯಕಾರಿಯೂ ಹೌದು.
ತಯಾರಿಸೋದು ಹೇಗೆ?
ಲುವಾಕ್ ಕಾಫಿಯನ್ನು ಇಂಡೋನೇಶಿಯಾದ ಬಾಲಿ, ಸುಮಾತ್ರಾ, ಜಾವಾ ದ್ವೀಪಗಳಲ್ಲಿ ತಯಾರಿಸುತ್ತಾರೆ. ಹಾಗೆಯೇ ಫಿಲಿಫೈನ್ಸ್ ನ ಕೆಲವು ದ್ವೀಪಗಳಲ್ಲೂ ಕಾಣಬಹುದು. ಬಹಳ ಬೇಡಿಕೆಯಿರುವುದರಿಂದ, ಇನ್ನಿತರ ದೇಶಗಳಲ್ಲಿಯೂ ಲುವಾಕ್ ಕಾಫಿಯನ್ನು ತಯಾರಿಸಲಾರಂಭಿಸಿದ್ದಾರೆ.
ಹೇಗೆ ತಯಾರಿಸುತ್ತಾರೆ?
ಅರೆ ಜೀರ್ಣವಾದ ಈ ಕಾಫಿ ಬೀಜಗಳನ್ನು ತೊಳೆದು, ಒಣಗಿಸಿ, ಹುರಿದು, ಕುಟ್ಟಿ ಪುಡಿಮಾಡಿ ನಂತರ ಮಾರಲಾಗುತ್ತದೆ.
ಯಾಕಿಷ್ಟು ದುಬಾರಿ?
ಲುವಾಕ್ ಅಪರೂಪದ ಚಿಕ್ಕ ಪ್ರಾಣಿಯಾಗಿದ್ದು, ಅದರ ಮಲದಿಂದ ಕಾಫಿ ತಯಾರಿಸಲು ಸಮಯ ಬೇಕು. ಈ ಕಾಫಿ ಕುಡಿಯುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಹೊಟ್ಟೆ ಹುಣ್ಣಿನ ಸಮಸ್ಯೆ ನಿವಾರಣೆಯಾಗುತ್ತದೆ. ಕ್ಯಾನ್ಸರ್, ಸಕ್ಕರೆ ಖಾಯಿಲೆ, ಸ್ನಾಯು ಸೆಳೆತ, ನರ ದೌರ್ಬಲ್ಯ ಮುಂತಾದ ವ್ಯಾದಿಗಳನ್ನು ತಡೆಗಟ್ಟುವ ಶಕ್ತಿ ಈ ಕಾಫಿಗಿದೆ. ಲುವಾಕ್ ಕಾಫಿ ಪುಡಿಯನ್ನು ಚರ್ಮದ ನೈಸರ್ಗಿಕ ಹೊಳಪಿಗೆ ಮತ್ತು ಕೂದಲಿನ ಪೋಷಣೆಗೆ ಬಳಸುತ್ತಾರೆ. ಇದೊಂದು ಸೌಂದರ್ಯ ಇಮ್ಮಡಿಗೊಳಿಸುವ ಬಹು ಬೇಡಿಕೆಯ ಉತ್ಪನ್ನ. ಅದಕ್ಕೇ ಇಷ್ಟು ದುಬಾರಿ.
ವಿದೇಶಿಯರು ಲುವಾಕ್ ಕಾಫಿ ಕುಡಿಯಲೆಂದೇ ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್ ಪ್ರವಾಸ ಕೈಗೊಳ್ಳುತ್ತಾರೆ. ಲುವಾಕ್ ಕಾಫಿ ಕುಡಿಯುವುದು ಶ್ರೀಮಂತಿಕೆ ಹಾಗೂ ಪ್ರತಿಷ್ಠೆಯ ಸಂಕೇತವೂ ಹೌದು.
ಈ ಕಾಫಿಯ ಅನುಕೂಲ ಅನಾನುಕೂಲಗಳ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಲೇ ಇವೆ.
ಪ್ರಾಣಿ ಹಿಂಸೆ ಬೇಕಾ?
ಈ ಕಾಫಿ ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ಆ ಮೂಕ ಪ್ರಾಣಿಗೆ ಮಾತ್ರ ಹಿಂಸೆ ಕಟ್ಟಿಟ್ಟ ಬುತ್ತಿ. ಕಾಫಿ ಬೀಜ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳ ಮುಖ್ಯ ಆಹಾರವಲ್ಲ. ಲುವಾಕ್ ಒಂದು ಕ್ರೂರ ಪ್ರಾಣಿ, ಆದರೆ ಮನುಷ್ಯರಷ್ಟಲ್ಲ ಬಿಡಿ! ಅದರ ವಿಶಿಷ್ಟ ಜಠರವೇ ಅದಕ್ಕೆ ಶಾಪ. ಮಾನವನ ದುರಾಸೆಗೆ ಎಲ್ಲಿದೆ ಕೊನೆ?
ಲುವಾಕ್ ಕಾಫಿ ತಯಾರಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಕಣ್ಣಾರೆ ಕಂಡ ನನ್ನ ಮೂರು ವರ್ಷದ ಮಗಳು, 'ಅಮ್ಮ ಅಮ್ಮ! ಅಂಕಲ್ ಯಾಕೆ ಲುವಾಕ್ ಅನ್ನು ಬೋನಿನಲ್ಲಿ ಕೂಡಿ ಹಾಕಿದ್ದಾರೆ? ಅದು ಪಾಪ ಅಲ್ವಾ?' ಈ ಪುಟ್ಟು ಮಗುವಿಗೆ ಅರ್ಥವಾಗುವಷ್ಟು ತಿಳುವಳಿಕೆ ದೊಡ್ಡವರಿಗೆಲ್ಲಿದೆ?
ವೀಕೆಂಡ್ ಪ್ರವಾಸಕ್ಕಿದು ಬೆಸ್ಟ್ ಪ್ಲೇಸ್
ಮರೆಯಲಾರದ ಮಾಸ್ಕೋ ನೆನಪು
ಆಗುಂಬೆ ವಿದ್ಯಾರ ರಷ್ಯಾ ಪ್ರವಾಸುನುಭವ