ವೀಕೆಂಡ್ ಪ್ರವಾಸಕ್ಕಿದು ಬೆಸ್ಟ್ ಪ್ಲೇಸ್ ಬೇಲಂ ಗುಹೆ
ರಿಲ್ಯಾಕ್ಸ್ ಆಗ್ಲಿಕ್ಕೆ ಎಲ್ಲಿಗಾದರೂ ಹೋಗಬೇಕೆಂದು ಹಾತೊರೆಯುತ್ತದೆ ಮನಸ್ಸು. ಆದರೆ, ದೂರದೂರಿಗೆ ಹೋಗಲು ಟೈಮ್ ಬೇಕು, ಪ್ಲ್ಯಾನ್ ಇರಬೇಕು. ವೀಕೆಂಡ್ ಟ್ರಿಪ್‌ಗೆ ಹೇಳಿ ಮಾಡಿಸಿದಂಥ ಆಂಧ್ರ ಪ್ರದೇಶದ ಬೇಲಮ್ ಗುಹೆ ಬಗ್ಗೆ ಇಲ್ಲಿದೆ ಮಾಹಿತಿ. ಪ್ಲ್ಯಾನ್ ಇಲ್ಲದೆಯೂ ವಿಸಿಟ್ ಮಾಡುವಂತ ಜಾಗವಿದು...
- ಆಗುಂಬೆ ವಿದ್ಯಾ
ಜಾತ್ರೆ ಜಾನುವಾರುಗಳನ್ನು ನೋಡಿ ಬೆಳೆದ ನನಗೆ ನೌಕರಿಗಾಗಿ ಬೆಂಗಳೂರಿಗೆ ಬಂದಾಗ ಉಸಿರುಗಟ್ಟಿದಂತೆ ಅನಿಸಿದ್ದು ಸುಳ್ಳಲ್ಲ. ಕೆಲಸದ ಒತ್ತಡ, ಟ್ರಾಫಿಕ್ ಜಾಮ್‌ನ ಕಿರಿಕಿರಿ, ಮಾಲ್ ಸಂಸ್ಕೃತಿ ನನಗೆ ಒಗ್ಗಲೇ ಇಲ್ಲ. ಆಗ ಶುರುವಾಗಿದ್ದೇ ಬೆಂಗಳೂರಿನ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡೋ ಹೊಸ ಹವ್ಯಾಸ.
'ಎಲ್ಲಿಗೆ ಹೋಗೋಣ?' ಎಂದು ಹಾಗೆ ಸುಮ್ಮನೆ ಗೂಗಲಿಸುತ್ತಿದ್ದಾಗ ನನಗೆ ಕಂಡಿದ್ದು ಆಂಧ್ರ ಪ್ರದೇಶದ ಬೇಲಂ ಗುಹೆ.
ಹೆಚ್ಚಿನ ಪೂರ್ವ ತಯಾರಿಯ ಅಗತ್ಯವಿಲ್ಲದೆ ವೀಕೆಂಡ್‌ಗೆ ಹೋಗಿಬರಬಹುದಾದ ಅತೀ ಸುಂದರ ಜಾಗವಿದು. ಬೆಳಗ್ಗಿನ ಜಾವ 4:30 ಕ್ಕೆ ನಾವು ಬೇಲಮ್ ಕಡೆಗೆ ಗೂಗಲ್ ಮ್ಯಾಪ್ ನೋಡಿಕೊಂಡು ಹೊರಟೆವು. ದಾರಿ ಮಧ್ಯ ಚಿಕ್ಕಪುಟ್ಟ ಹೋಟೆಲ್ಗಳಿದ್ದರೂ ಶುಚಿತ್ವದ ಕೊರತೆ ಎದ್ದು ಕಾಣುತ್ತಿತ್ತು. ಹಾಗಾಗಿ ಬೆಂಗಳೂರು ಹಿಂದೂಪುರದ ರಸ್ತೆಯಲ್ಲಿ ಎಲ್ಲಾದರೂ ಸ್ವಲ್ಪ ನೀರು ಸ್ನ್ಯಾಕ್ಸ್ ತೆಗೆದುಕೊಂಡು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನ್ನಿಸಿದಂತೂ ನಿಜ. ಬೆಳಿಗ್ಗೆ 10:30 ಕ್ಕೆ ನಾವು ತಲುಪಿದ್ದೆವು.
ಹೇಗೆ ಹೋಗುವುದು?
ಬೆಂಗಳೂರಿನಿಂದ ಸುಮಾರು 300 ಕಿ. ಮೀ. ದೂರದಲ್ಲಿರುವ ಈ ಗುಹೆ ತಲುಪಲು ಡೈರೆಕ್ಟ್ ಬಸ್ಸುಗಳಿಲ್ಲ. ಬಸ್ಸಲ್ಲಿ ಹೋಗಬೇಕಾದರೆ ಥಡಿಪತ್ರಿಗೆ ಹೋಗಿ ಅಲ್ಲಿಂದ ಹೋಗಬೇಕು. ಅಥವಾ ಬೆಂಗಳೂರಿನಿಂದ ಅನಂತಪುರದವರೆಗೆ ರೈಲಿನಲ್ಲಿ ಹೋಗಿ ಅಲ್ಲಿಂದಲೂ ಬಸ್ಸಲ್ಲಿ ಹೋಗಬಹುದು. ಕಾರಿನಲ್ಲಿ ಹೋಗುವುದಾದರೆ ಕೇವಲ 5 ರಿಂದ 6 ಗಂಟೆ ಪ್ರಯಾಣ. ಹೈದರಾಬಾದ್ ರಾಷ್ಟೀಯ ಹೆದ್ದಾರಿ ಬಳಸಿಕೊಂಡು ಹೋಗುವುದರಿಂದ ಗುಂಡಿಗಳಿಲ್ಲದ ರೋಡ್ ಸಿಗುತ್ತೆ.
ಬರಡು ಭೂಮಿಯಾದರೂ, ಪ್ರಶಾಂತವಾಗಿದೆ ಈ ಬೇಲಮ್. ಮುಖ್ಯದ್ವಾರದಲ್ಲಿ ನಮ್ಮನ್ನು ಆಶೀರ್ವದಸಲೆಂದೇ ಇರುವ ಧ್ಯಾನ ಮಗ್ನ ಭಗವಾನ್ ಬುದ್ಧನ ವಿಗ್ರಹವನ್ನು ನೋಡಿದರೆ ನಮ್ಮ ಮನಸ್ಸೂ ಶಾಂತಾವಾಗೋದು ಸುಳ್ಳಲ್ಲ.
ಸ್ಥಳದ ವಿಶೇಷತೆ
ಇತಿಹಾಸ ತಜ್ಞರ ಪ್ರಕಾರ 4500 ವರ್ಷಗಳ ಹಿಂದೆ ಇಲ್ಲಿ ಜೈನ ಹಾಗೂ ಬೌದ್ಧ ಸನ್ಯಾಸಿಗಳು ಧ್ಯಾನಿಸುತ್ತಿದ್ದರಂತೆ. 1988ರವರೆಗೂ ಈ ಸ್ಥಳವನ್ನು ಸುತ್ತಮುತ್ತಲಿನ ಜನರು ಕಸ ಎಸೆಯಲು ಬಳಸುತ್ತಿದ್ದರು, ಎಂಬುದನ್ನು ನಂಬಲು ಕಷ್ಟವಾದರೂ ನಂಬಲೇ ಬೇಕು.
ಭೂವಿಜ್ಞಾನಿಗಳು ಕಂಡುಹಿಡಿದಂತೆ ಇದು ನಮ್ಮ ದೇಶದ ಎರಡನೇ ಅತೀ ದೊಡ್ಡ ಹಾಗೂ ಅತೀ ಉದ್ದನೆಯ ನೈಸರ್ಗಿಕವಾಗಿ ನಿರ್ಮಿತವಾದ ಗುಹೆ. (ಮೊದಲನೇಯದು ಮೇಘಾಲಯದಲ್ಲಿದೆ). ಆಂಧ್ರಪ್ರದೇಶ ಪ್ರವಾಸೋದ್ಯಮ ಇಲಾಖೆ ಜರ್ಮನ್ ತಜ್ಞರ ಸಹಾಯದಿಂದ ಆಧುನಿಕ ತಂತ್ರಗಾರಿಕೆ ಅಳವಡಿಸಿ ಈ ಗುಹೆಯನ್ನು ನವೀಕರಿಸಿದ್ದಾರೆ.
ನೀವೂ ಒಂದು ಸುತ್ತಿ ಹಾಕಿ ಬನ್ನಿ....
ಗುಹೆಯ ಮುಖ್ಯದ್ವಾರವಿದು. ಸಾಮಾನ್ಯವಾಗಿ ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 5:30ರವರೆಗೆ ಪ್ರವಾಸಿಗರಿಗಾಗಿ ತೆರೆದಿರುತ್ತದೆ. ಪ್ರವೇಶ ಶುಲ್ಕ ತಲಾ 50 ರೂ. (ಈಗ ಸ್ವಲ್ಪ ಹೆಚ್ಚಾಗಿರಬಹುದು). ಮಕ್ಕಳಿಗೆ ರಿಯಾಯಿತಿ ಇದೆ.
ಗುಹೆ ತಲುಪಿದಾಗ ಮೊದಲು ಕಾಣ ಸಿಗುವುದೇ ಈ ದೃಶ್ಯ. ಒಳಗೆ ಹೋಗುವಾಗ ಸ್ಥಳೀಯ ಗೈಡನ್ನು ಕರೆದುಕೊಂಡು ಹೋದರೆ ಉತ್ತಮ. ಒಳಗೆ ಕತ್ತಲೆ, ಆಮ್ಲಜನಕದ ತೊಂದರೆ ಮತ್ತು ಕಲ್ಲಿನ ದಾರಿ ಇರುವುದರಿಂದ ಗೈಡ್ ನೆರವು ಬೇಕಾಗಬಹುದು. ಆಮ್ಲಜನಕದ ಪೂರೈಕೆಗೆ ವ್ಯವಸ್ಥೆ ಇರುತ್ತದೆ.
ಗುಹೆಯ ಒಳಗೆ 2 ರಿಂದ 3 ಕಿ. ಮೀ. ನಡೆಯಲು ಸಿದ್ಧರಾಗಿ. ಗುಹೆಯಲ್ಲಿ ಸೆಖೆ ಹೆಚ್ಚಾಗಿರುವುದರಿಂದ ಹಗುರವಾದ ಉಡುಪು ತೊಟ್ಟು ಹೋಗಬೇಕು. ಸ್ಪೋರ್ಟ್ಸ್ ಶೂಸ್ ಧರಿಸುವುದನ್ನು ಮರೆಯಬೇಡಿ. ಗುಹೆಯನ್ನು ಕೋಟಿಲಿಂಗ, ಪಾತಾಳಗಂಗಾ, ಸಪ್ತಸ್ವರ ಹೀಗೇ ಅನೇಕ ತರಹದ ಚೇಂಬರ್‌ಗಳನ್ನಾಗಿ ವಿಂಗಡಿಸಿದ್ದಾರೆ.
ಬೇಲಮ್ ಗುಹೆಯ ಅಪ್ರತಿಮ ನೈಸರ್ಗಿಕ ಸೌಂದರ್ಯಕ್ಕೆ ಕೆಳಗಿನ ಫೋಟೋಗಳೇ ಸಾಕ್ಷಿ.
ಗುಹೆಯಿಂದ ಹೊರಬಂದಾಗ ಅಲ್ಲಿ ಪ್ರವಾಸಿಗರ ಊಟ ತಿಂಡಿಗಾಗಿ ಕ್ಯಾಂಟೀನ್ ಇದೆ. ಬೇಲಮ್ ಸುತ್ತಮುತ್ತ APTDCಯ ಒಂದು ಹೊಟೇಲ್ (ಮುಂಗಡ ಬುಕ್ಕಿಂಗ್ ಇರಬೇಕು) ಬಿಟ್ಟರೆ ಉಳಿದುಕೊಳ್ಳಲು ಅಷ್ಟು ಒಳ್ಳೆಯ ವ್ಯವಸ್ಥೆ ಇಲ್ಲ.
ನೀವು selfie ಪ್ರಿಯರಾಗಿದ್ದರೆ Belum Cavesನಿಂದ ಕೇವಲ ಒಂದು ಗಂಟೆ ದೂರದಲ್ಲಿರುವ ಭಾರತದ ಗ್ರ್ಯಾನ್ಡ್ ಕ್ಯಾನ್ಯನ್ (The Grand Canyon) ಎಂದು ಪ್ರಸಿದ್ಧಿಯಾಗಿರುವ ಗಂಡಿಕೋಟಗೆ (Gandikota Fort) ಹೋಗಿ ಫೋಟೋ ತೆಗೆಸಿಕೊಳ್ಳಿ.
ಪ್ರಯಾಣ ಸ್ವಲ್ಪ ಆಯಾಸಕರ ಅನಿಸಿದರೂ ಬೇಲಂ ನೋಡಲೇ ಬೇಕಾದ ಸ್ಥಳ. ಕಲ್ಲು ಬಂಡೆಗಳಲ್ಲಿ ಅಡಗಿದ ಸೌಂದರ್ಯ ನಿಮ್ಮನ್ನು ಖಂಡಿತವಾಗಿಯೂ ಮಂತ್ರ ಮುಗ್ಧನನ್ನಾಗಿಸುತ್ತದೆ. ಮತ್ತೆ ಇನ್ನೇನು ಯೋಚನೆ ಮಾಡ್ತಾ ಇದ್ದೀರಾ ? ಯಾವ ವೀಕೆಂಡ್‌ಗೆ ಹೋಗೋದು ಅಂತಾನಾ?
ಉಪನ್ಯಾಸಕಿ ಆಗುಂಬೆ ವಿದ್ಯಾರ ರಷ್ಯಾ ಪ್ರವಾಸ ಕಥನ