- ಆಗುಂಬೆ ವಿದ್ಯಾ

ವಿದೇಶಿ ಪ್ರವಾಸಿಗರ ಪಾಲಿನ ಮಾಯಾನಗರಿ ಮಾಸ್ಕೋ. ಇತರೆ ದೇಶಗಳಿಗೆ ಹೋಲಿಸಿದರೆ ಮಾಸ್ಕೋ ಪ್ರವಾಸ ಕೈಗೊಳ್ಳುವ ಭಾರತೀಯರು ಸ್ವಲ್ಪ ಕಡಿಮೆಯೇ. ಇಲ್ಲಿಯ  ಜನರ ಅನಗತ್ಯ ಗಂಭೀರತೆ, ತುಸು ಮುನಿಸು ಹಾಗೂ ಒರಟು ಸ್ವಭಾವ ನಮಗೆ ವಿಚಿತ್ರ ಅನ್ನಿಸಿತು. ನನಗೂ ಕಾಡಿತ್ತು ಭಯ. ನಗಲಾರದ ಮಂದಿ ಇವರು! ಏನು ಕಾರಣವಿರಬಹುದು? ಯಾಕೆ ಈ ರೀತಿಯ ವರ್ತನೆ ? 

ನನ್ನ ಮನಸಲ್ಲಿ ಹುಟ್ಟಿದ ಅನೇಕ ಪ್ರಶ್ನೆಗಳನ್ನು ಸದ್ಯದ ಮಟ್ಟಿಗೆ ಬದಿಗಿಟ್ಟು ಮಾಸ್ಕೋ ಸುತ್ತಾಡಲು ಹೊರಟ ನನಗೆ ಕಂಡಿದ್ದೇ ಅವರ ನಾಡಿನ ಸೌಂದರ್ಯ, ರಕ್ತಲೇಪಿತ ಇತಿಹಾಸ ಮತ್ತು ರಷ್ಯಾ ಕ್ರಾಂತಿಯ ಕರಿನೆರಳು. 

ಇದೋ ಇಲ್ಲಿದೆ ನಾ ಕಂಡ ಮಾಸ್ಕೋ !

ಮೊಸ್ಕೊವ ನದಿ ದಡದಲ್ಲಿರುವ ಮಾಸ್ಕೋ USSRನ ಕಾಲದಿಂದಲೂ ರಷ್ಯಾದ ರಾಜಧಾನಿ. ಈ ನಗರ ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. 16 ನೇ ಶತಮಾನದಲ್ಲಿ ನಿರ್ಮಿತವಾದ ಸೈನ್ಟ್ ಬೇಸಿಲ್ ಕ್ಯಾಥೆಡ್ರೆಲ್ ಇದಕ್ಕೆ ಸಾಕ್ಷಿ. ಒಂಭತ್ತು ಪ್ರಾರ್ಥನಾ ಮಂದಿರಗಳಿರುವ ಈ ಕ್ಯಾಥೆಡ್ರೆಲ್ ರಷ್ಯಾ  ದೇಶದ ಒಂದು ರಮಣೀಯ ಚಿನ್ಹೆ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ. 

ಎರಡನೇ ಮಹಾಯುದ್ಧದ ನಂತರ ಸೊವಿಯಟ್ ರಷ್ಯಾದ ಕ್ರಾಂತಿಕಾರಿ ನಾಯಕ ಸ್ಟಾಲಿನ್, ಮಾಸ್ಕೋ ನಗರಿಯ ರೂಪು ಹೆಚ್ಚಿಸುವ ಸಲುವಾಗಿ ‘ಏಳು ಸೋದರಿಯರು’ ಎಂದು ಪ್ರಸಿದ್ದಿಯಾದ ಏಳು ಭವ್ಯ ಭವನಗಳನ್ನು ಕಟ್ಟಿಸಿದ.  ಶೀತಲ ಸಮರದ ದಿನಗಳಲ್ಲಿ, ಕಮ್ಯುನಿಸ್ಟ್ ನಾಯಕರು ಅಡಗಿಕೊಳ್ಳುತ್ತಿದ್ದ ಭೂಗತ ಕೋಣೆಗಳೂ ಇಲ್ಲಿವೆ. ಕೆಳಗಿರುವುದು ಒಂದು ಭವನದ ಚಿತ್ರ.

ಇಲ್ಲಿನ ರೆಡ್ ಸ್ಕ್ವೇರ್ ನಲ್ಲಿ 1924ರಲ್ಲಿ ನಿಧನರಾದ ರಷ್ಯಾದ ಕ್ರಾಂತಿಯ ಪಿತಾಮಹ ಎಂದು ಕರೆಸಿಯಿಕೊಳ್ಳುವ  ಲೆನಿನ್‌ನ ಮೃತಶರೀರವನ್ನು ಇಡಲಾಗಿದೆ . ಇದನ್ನು ‘ಆಧುನಿಕ ಮಮ್ಮಿ’ ಎಂದು ಕರೆಯುತ್ತಾರೆ. ಅದೆಂಥ ದ್ವೇಷ!  ಅನೇಕ ಬಾರಿ ಲೆನಿನ್‌ನ ಶರೀರವನ್ನು ನಾಶ ಮಾಡುವ ಯತ್ನವೂ ನಡೆದಿದೆ. ಹಾಗಾಗಿ ಇಲ್ಲಿ ಭದ್ರತೆ ಹೆಚ್ಚು. ಸ್ಟಾಲಿನ್ ಸೇರಿದಂತೆ ಹಲವಾರು ಜನಪ್ರಿಯ ನಾಯಕರ ಸಮಾಧಿಗಳನ್ನು ಇಲ್ಲಿ ನೋಡಬಹುದು. 

ಕ್ಯಾಥೆಡ್ರೆಲ್ ಆಫ್ ಕ್ರೈಸ್ಟ್ ದಿ ಸೇವಿಯರ್ ಜಗತ್ತಿನ ಅತೀ ಉದ್ದನೆಯ ಸಾಂಪ್ರದಾಯಿಕ ಚರ್ಚ್.  ಇದು ಸ್ಟಾಲಿನ್ ನ ಕನಸಿನ ಕಟ್ಟಡವಾಗಿದ್ದು, ನಿರ್ಮಿಸಲು 40 ವರ್ಷಗಳೇ ಬೇಕಾಯಿತು.
 

ಕ್ರೆಮ್ಲಿನ್, ಮಾಸ್ಕೋ ನಗರದ ಒಳಗಿನ ಒಂದು ಕಟ್ಟಡಗಳ ಸಂಕೀರ್ಣ. ಇಲ್ಲಿ ಕ್ಯಾಥೆಡ್ರೆಲ್ ಗಳು, ಅರಮನೆಗಳು, ರಾಷ್ಟ್ರಪತಿ ಪುಟಿನ್‌ನ ಆಡಳಿತ ಕಚೇರಿ ಇತ್ಯಾದಿ ಸುಪ್ರಸಿದ್ದ ಕಟ್ಟಡಗಳಿವೆ. 

ಇದು ಪ್ರಪಂಚದ ಎರಡನೇ ಪ್ರಭಾವಿ ನಾಯಕನೆಂದು ಕರೆಸಿಕೊಳ್ಳುವ ರಾಷ್ಟ್ರಪತಿ ವ್ಲಾಡಿಮಿರ್ ಪುಟಿನ್ ಕಾರ್ಯ ನಿರ್ವಹಿಸುವ ಕಟ್ಟಡ. 

ಕ್ರೆಮ್ಲಿನ್‌ನಲ್ಲಿ ವಿಶ್ವದಲ್ಲಿಯೇ ಅತೀ ದೊಡ್ಡದೆಂದು ಕರೆಸಿಕೊಳ್ಳುವ ಸುಮಾರು 2 ಲಕ್ಷ ಕಿ. ಗ್ರಾಂ. ತೂಕದ ಚರ್ಚ್ ಘಂಟೆಯನ್ನು ಇರಿಸಲಾಗಿದೆ.  ಕ್ರೆಮ್ಲಿನ್‌ನ ಇನ್ನೊಂದು ವಿಶೇಷತೆ, ಇಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇರಿಸಲಾಗಿರುವ ಸರಾಸರಿ 35,000 ಕಿ. ಗ್ರಾಂ ತೂಕದ ದೈತ್ಯ ಗಾತ್ರದ ಫಿರಂಗಿ. 

ಪ್ರವಾಸಿಗರು ನೋಡಲೇ ಬೇಕಾದ ಇನ್ನೊಂದು ಸ್ಥಳ ಮಾಸ್ಕೋ ಮೆಟ್ರೋ. ಮೆಟ್ರೋ ಸುರಂಗ ಮಾರ್ಗವನ್ನು ಅದ್ಭುತವಾಗಿ  ಸಿಂಗರಿಸಿದ್ದಾರೆ.  ಅಷ್ಟೇ ಸ್ವಚ್ಛವಾಗಿಯೂ ಇರಿಸಿದ್ದಾರೆ. ಮಹಾಯುದ್ಧದ ಸಮಯದಲ್ಲಿ ಸಾವಿರಾರು ರಷ್ಯನ್ನರನ್ನು ಬಾಂಬ್ ದಾಳಿಯಿಂದ ಕಾಪಾಡಿದ್ದು ಇದೇ ಸುರಂಗ ಮಾರ್ಗ. 

ಮೆಟ್ರೊದಲ್ಲಿರುವ ಲೋಹದ ನಾಯಿಯ ಮೂಗನ್ನು ಸವರಿದರೆ ನಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ ಎಂಬುದು ಇಲ್ಲಿಯ ಜನರ  ನಂಬಿಕೆ.

ರಷ್ಯಾ ಪ್ರವಾಸದ ನೆನಪಿಗಾಗಿ, ಇಲ್ಲಿನ ಸಾಂಪ್ರದಾಯಿಕ ಗೊಂಬೆ ಮತ್ರ್ಯೋಷ್ಕವನ್ನು ನನ್ನ ಮಕ್ಕಳಿಗಾಗಿ ಖರೀದಿಸಿದೆ. ಒಂದರ ಒಳಗೊಂದು ಇರಿಸಿದ ಮರದ ಗೊಂಬೆಗಳು, ಈ ದೇಶದ ಪ್ರಾಚೀನ ಕತೆಗಳನ್ನು ಚಿತ್ರ ರೂಪದಲ್ಲಿ ವರ್ಣಿಸುತ್ತವೆ. 

ಸ್ಪಾರೋ ಬೆಟ್ಟ, ಕಾನ್ವೆಂಟ್, ಗಮ್ ಮಾಲ್, ಹಡಗಿನ ಪ್ರಯಾಣ, ಬ್ಯಾಲೆ, ಸಂಗ್ರಹಾಲಯಗಳು, ಅರಮನೆಗಳು, ವಿಕ್ಟರಿ ಪಾರ್ಕ್ ಇತ್ಯಾದಿ ಪ್ರವಾಸಿ ತಾಣಗಳ ಸವಿನೆನಪಿನ ಮರೆಯಲಾರದ ಅನುಭವಗಳ ಬುತ್ತಿಯನ್ನು ಕಟ್ಟಿಕೊಂಡು ನಾವು ಊರ ಕಡೆಗೆ ಹೊರಟೆವು. 

ಪ್ರವಾಸಿಗರು ಗಮನಿಸಬೇಕಾದ ಅಂಶಗಳು:
- ವೀಸಾ ಪಡೆಯಲು, ರಷ್ಯಾದ ಟ್ರಾವೆಲ್ ಕಂಪನಿಯ ಒಪ್ಪಿಗೆ ಪತ್ರದ ಅವಶ್ಯಕತೆ ಇದೆ. 
- ಬೆಂಗಳೂರಿನಿಂದ ಕನಿಷ್ಠ 10 ರಿಂದ 12 ಗಂಟೆಗಳ ವಿಮಾನ ಪ್ರಯಾಣವಿರುತ್ತದೆ. 
- ಜೈ ಹಿಂದ್, ಗಂಗಾ, ಪಂಜಾಬಿ ಢಾಬಾ ಮುಂತಾದ ಭಾರತೀಯ ಮೂಲದ ಹೋಟೆಲ್‌ಗಳಿವೆ. 
- ರಷ್ಯನ್ನರಿಗೆ ಇಂಗ್ಲಿಷ್ ಭಾಷೆ ಸರಿಯಾಗಿ ಬಾರದ ಕಾರಣ ಪ್ರವಾಸಿಗರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆ.
- ಅಪರಿಚಿತರಿಚಿತರನ್ನು ಔಪಚಾರಿಕ ನಗುವಿನಿಂದ ಮಾತನಾಡಿಸುವುದು ಇವರ ಪದ್ದತಿಯಲ್ಲ. 
- ರಸ್ತೆ ಬದಿಯ ಮಾರುಕಟ್ಟೆಗಳು ಇಲ್ಲದ ಕಾರಣ ಶಾಪಿಂಗ್ ದುಬಾರಿ.   
- ಇವರ ಪ್ರಾಮಾಣಿಕತೆ ಹಾಗೂ ಸಮಯಪ್ರಜ್ಞೆಯಿಂದ ನಿಮ್ಮ ಪ್ರವಾಸ ಆರಾಮದಾಯಕವಾಗಿರುತ್ತದೆ.  

ರಷ್ಯಾ ಭೇಟಿಯ ಅದ್ಭುತ ಅನುಭವ
ವೀವೀಕೆಡ್ ಪ್ರವಾಸಕ್ಕಿದು ಬೆಸ್ಟ್ ಪ್ಲೇಸ್