ಮಲ್ಲಿಗೆ ಹೂವುಗಳು ತಮ್ಮ ಬಣ್ಣ, ಸುವಾಸನೆ ಮತ್ತು ಸೌಂದರ್ಯದಿಂದ ಯಾರನ್ನಾದರೂ ಸುಲಭವಾಗಿ ಸೆಳೆಯುತ್ತವೆ. ಹಬ್ಬ, ಪೂಜೆಗಳಿಗಷ್ಟೇ ಅಲ್ಲ, ಸಾಮಾನ್ಯ ದಿನಗಳಲ್ಲೂ ಮಹಿಳೆಯರು ಮಲ್ಲಿಗೆಯನ್ನು ಇಷ್ಟಪಟ್ಟು ಮುಡಿಯುತ್ತಾರೆ.

ಮಲ್ಲಿಗೆ ಹೂವು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಅದರ ಸುವಾಸನೆ ಅಂತಹದ್ದು. ಮಹಿಳೆಯರು ಪ್ರತಿದಿನ ಮುಡಿದರೂ ಇದರ ಮೇಲಿನ ಆಸೆ ಕಡಿಮೆಯಾಗಲ್ಲ. ಆದರೆ, ಈ ಹೂವುಗಳು ಎಷ್ಟು ಸುಂದರವೋ, ಅಷ್ಟೇ ಬೇಗ ಬಾಡಿ ಹೋಗುತ್ತವೆ. ಹಾಗಾದ್ರೆ ಮಲ್ಲಿಗೆ ಹೂವನ್ನು ಹೆಚ್ಚು ದಿನಗಳ ಕಾಲ ತಾಜಾವಾಗಿ ಇಡುವುದು ಹೇಗೆ? ಇಲ್ಲಿ ನೋಡೋಣ.

ಮಲ್ಲಿಗೆ ಹೂವುಗಳು ತಮ್ಮ ಬಣ್ಣ, ಸುವಾಸನೆ ಮತ್ತು ಸೌಂದರ್ಯದಿಂದ ಯಾರನ್ನಾದರೂ ಸುಲಭವಾಗಿ ಸೆಳೆಯುತ್ತವೆ. ಹಬ್ಬ, ಪೂಜೆಗಳಿಗಷ್ಟೇ ಅಲ್ಲ, ಸಾಮಾನ್ಯ ದಿನಗಳಲ್ಲೂ ಮಹಿಳೆಯರು ಮಲ್ಲಿಗೆಯನ್ನು ಇಷ್ಟಪಟ್ಟು ಮುಡಿಯುತ್ತಾರೆ. ಆದರೆ ಈ ಹೂವುಗಳು ಬೇಗನೆ ಬಾಡಿ ಹೋಗುತ್ತವೆ. ಕೆಲವು ಸರಳ ಟಿಪ್ಸ್ ಬಳಸಿ ಇವುಗಳನ್ನು ಹೆಚ್ಚು ಕಾಲ ತಾಜಾವಾಗಿ ಇಡಬಹುದು. ಅದು ಹೇಗೆಂದು ಇಲ್ಲಿ ವಿವರವಾಗಿ ತಿಳಿಯೋಣ.

ಸಾಮಾನ್ಯವಾಗಿ, ಹೆಚ್ಚಿನ ಜನರು ಮಾರುಕಟ್ಟೆಯಿಂದ ಮಲ್ಲಿಗೆ ಹೂವುಗಳನ್ನು ಖರೀದಿಸುತ್ತಾರೆ. ಆದರೆ, ಖರೀದಿಸುವಾಗ ಅವುಗಳ ಗುಣಮಟ್ಟವನ್ನು ಗಮನಿಸುವುದು ಬಹಳ ಮುಖ್ಯ. ಆಗ ತಾನೇ ಕಿತ್ತ ಹೂವುಗಳು ತಾಜಾವಾಗಿ, ಬಿಳಿ ಬಣ್ಣದಲ್ಲಿ ಮತ್ತು ಕಾಂತಿಯುತವಾಗಿರುತ್ತವೆ. ಸ್ವಲ್ಪ ಬಾಡಿದಂತೆ ಕಾಣುವ ಹೂವುಗಳನ್ನು ತೆಗೆದುಕೊಳ್ಳದಿರುವುದು ಉತ್ತಮ.

ಹೂವುಗಳನ್ನು ಮನೆಗೆ ತಂದ ತಕ್ಷಣ, ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಗಟ್ಟಿಯಾಗಿ ಕಟ್ಟಬಾರದು. ಯಾಕೆಂದರೆ, ಗಾಳಿಯಾಡದೆ ಹೂವುಗಳು ಬೇಗನೆ ಬಾಡುತ್ತವೆ. ಬದಲಾಗಿ, ಹೂವುಗಳನ್ನು ತೆಳುವಾದ ಬಟ್ಟೆ ಅಥವಾ ಕಾಗದದಲ್ಲಿ ಸುತ್ತಿಡುವುದು ಒಳ್ಳೆಯದು. ಮಲ್ಲಿಗೆ ಹೂವು ಹೆಚ್ಚು ಕಾಲ ತಾಜಾವಾಗಿರಲು ತೇವಾಂಶ ಬಹಳ ಮುಖ್ಯ. ಹಾಗಾಗಿ, ಒಂದು ಸಣ್ಣ ಬಟ್ಟಲಿನಲ್ಲಿ ನೀರು ತೆಗೆದುಕೊಂಡು, ಅದರ ಮೇಲೆ ತೆಳುವಾದ ಬಟ್ಟೆಯನ್ನು ಹಾಕಿ, ಆ ಬಟ್ಟೆಯ ಮೇಲೆ ಹೂವುಗಳನ್ನು ಇಟ್ಟರೆ, ಅವು ತೇವಾಂಶವನ್ನು ಹೀರಿಕೊಂಡು ಹೆಚ್ಚು ಹೊತ್ತು ತಾಜಾವಾಗಿರುತ್ತವೆ.

ಮಲ್ಲಿಗೆ ಹೂವುಗಳನ್ನು ಫ್ರಿಜ್‌ನಲ್ಲಿಡುವುದು ಕೂಡ ಒಂದು ಉತ್ತಮ ವಿಧಾನ. ಆದರೆ, ಫ್ರಿಜ್‌ನಲ್ಲಿ ಇಡುವಾಗ ಹೂವುಗಳನ್ನು ಗಾಳಿಯಾಡದ ಡಬ್ಬಿಯ ಬದಲು, ಸ್ವಲ್ಪ ಗಾಳಿ ಹೋಗುವಂತಹ ಡಬ್ಬಿಯಲ್ಲಿ ಇಡಬೇಕು. ಫ್ರಿಜ್‌ನ ತಂಪು ಹೂವುಗಳು ಬಾಡದಂತೆ ಕಾಪಾಡುತ್ತದೆ. ಹೂವುಗಳನ್ನು ನೇರವಾಗಿ ನೀರಿನಲ್ಲಿ ಮುಳುಗಿಸಬೇಡಿ, ಇದರಿಂದ ಅವು ಬೇಗನೆ ಹಾಳಾಗುತ್ತವೆ. ಆದರೆ, ಸ್ವಲ್ಪ ನೀರನ್ನು ಚಿಮುಕಿಸುವುದು ಒಳ್ಳೆಯದು. ಹೂವುಗಳನ್ನು ಬಿಸಿಲಿನಲ್ಲಿ ಅಥವಾ ಶಾಖವಿರುವ ಜಾಗದಲ್ಲಿ ಇಡಬಾರದು. ಅಧಿಕ ತಾಪಮಾನವು ಹೂವುಗಳಲ್ಲಿನ ತೇವಾಂಶವನ್ನು ಕಡಿಮೆ ಮಾಡಿ, ಅವು ಬೇಗನೆ ಬಾಡಲು ಕಾರಣವಾಗುತ್ತದೆ. ಹೂವುಗಳನ್ನು ಯಾವಾಗಲೂ ತಂಪಾದ ಸ್ಥಳದಲ್ಲಿ ಇಡುವುದು ಉತ್ತಮ.

ರಾತ್ರಿ ಹೊತ್ತು ಮಲ್ಲಿಗೆ ಮುಡಿಯಬೇಕೆಂದಿದ್ದರೆ, ಸಂಜೆಯವರೆಗೂ ಅವುಗಳನ್ನು ಫ್ರಿಜ್‌ನಲ್ಲಿಟ್ಟು, ಬೇಕಾದಾಗ ಹೊರತೆಗೆದರೆ ತಾಜಾವಾಗಿ ಕಾಣಿಸುತ್ತವೆ. ಕೆಲವರು ಹೂವುಗಳ ಮೇಲೆ ಸ್ವಲ್ಪ ಸಕ್ಕರೆ ನೀರು ಅಥವಾ ತಿಳಿ ಉಪ್ಪುನೀರನ್ನು ಚಿಮುಕಿಸುತ್ತಾರೆ. ಈ ವಿಧಾನವು ಹೂವುಗಳಿಗೆ ತಾಜಾತನವನ್ನು ನೀಡುತ್ತದೆ. ಹಾಗೆಯೇ, ಹೂವುಗಳನ್ನು ಆಗಾಗ ಪರಿಶೀಲಿಸಿ, ಬಾಡಿದ ಹೂವುಗಳನ್ನು ತೆಗೆದುಹಾಕುವುದು ಅವಶ್ಯಕ. ಯಾಕೆಂದರೆ ಒಂದು ಹೂವು ಹಾಳಾದರೆ, ಉಳಿದವೂ ಬೇಗನೆ ಹಾಳಾಗುತ್ತವೆ.

ಮೃದುವಾಗಿ ಹಿಡಿಯಬೇಕು

ಹೂವುಗಳನ್ನು ಬಳಸುವ ಮೊದಲು, ಅವುಗಳನ್ನು ಮೃದುವಾಗಿ ಹಿಡಿಯಬೇಕು. ಗಟ್ಟಿಯಾಗಿ ಹಿಡಿದರೆ ಅವು ಬಾಡಿ ಹೋಗುತ್ತವೆ. ಇಂತಹ ಸಣ್ಣ ಸಣ್ಣ ಟಿಪ್ಸ್‌ ಪಾಲಿಸಿದರೆ, ಮಲ್ಲಿಗೆ ಹೂವುಗಳನ್ನು ಹೆಚ್ಚು ಕಾಲ ತಾಜಾವಾಗಿ ಇಟ್ಟುಕೊಳ್ಳಬಹುದು. ಸುಂದರ ಸುವಾಸನೆಯೊಂದಿಗೆ ನಮ್ಮ ದಿನವನ್ನು ಇನ್ನಷ್ಟು ಆನಂದಮಯವಾಗಿಸಬಹುದು.