ಸಾಮಾನ್ಯವಾಗಿ ನಾವು ನಮ್ಮ ವಯಸ್ಸಿಗಿಂತ ಒಂದೆರಡು ವರ್ಷಗಳು, ಹೆಚ್ಚೆಂದರೆ ಆರೇಳು ವರ್ಷ ವ್ಯತ್ಯಾಸವಿರುವವರೊಂದಿಗೆ ಡೇಟ್ ಮಾಡುತ್ತೇವೆ. ಸಣ್ಣ ಏಜ್ ಗ್ಯಾಪ್ ಇರುವುದು ಇಬ್ಬರ ನಡುವಿನ ಗೆಳೆತನಕ್ಕೆ ಒಳ್ಳೆಯದು ಎಂಬುದು ಬಹುತೇಕರ ಅಭಿಪ್ರಾಯ. ಆದರೆ, ಬಹಳ ವಯಸ್ಸಿನ ಅಂತರವಿರುವವರ ನಡುವೆ ಸಂಬಂಧ ಬೆಳೆದಾಗ ಅದರದ್ದೇ ಆದ ಪ್ಲಸ್ಸು, ಮೈನಸ್ಸುಗಳು ಜೊತೆಯಾಗುತ್ತವೆ. ನಿಮ್ಮ ಪಾರ್ಟ್ನರ್ ಜೊತೆ ಹೆಚ್ಚಿನ ಏಜ್ ಗ್ಯಾಪ್ ಇದ್ದರೆ ಏನಾಗಬಹುದೆಂಬ ಕೆಲ ವಿಷಯಗಳು ಇಲ್ಲಿವೆ.

ರಾಧಿಕಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಯಸ್ಸಿನ ಅಂತರವೆಷ್ಟು?

ಪಕ್ವತೆ ಮಟ್ಟ
ಇಬ್ಬರೂ ಪಾರ್ಟ್ನರ್‌ಗಳು ಜೀವನದ ಯಾವ ಹಂತವನ್ನೂ ಒಟ್ಟಿಗೇ ಪ್ರವೇಶಿಸುವುದಿಲ್ಲ. ಒಬ್ಬರು ಯೌವನದಲ್ಲಿರುವಾಗ ಮತ್ತೊಬ್ಬರು ಮಧ್ಯವಯಸ್ಕರಾಗಿರುತ್ತಾರೆ, ಮತ್ತೊಬ್ಬರು ಮಧ್ಯವಯಸ್ಸಿಗೆ ಬರುವಾಗ ಇನ್ನೊಬ್ಬರು ವೃದ್ಧರಾಗಿರುತ್ತಾರೆ.  ಹೀಗಾಗಿ, ಪ್ರತಿ ಹಂತದಲ್ಲೂ ಇಬ್ಬರೂ ಜೀವನವನ್ನು ನೋಡುವ ರೀತಿ, ಎಂಜಾಯ್ ಮಾಡುವ ರೀತಿ, ಅರ್ಥೈಸಿಕೊಳ್ಳುವ ರೀತಿ ಬೇರೆಯಿರುತ್ತದೆ. ಇಬ್ಬರ ಪಕ್ವತೆ ಮಟ್ಟವೂ ಬೇರೆ ಇರುವುದರಿಂದ ಬಹುತೇಕ ವಿಷಯಗಳಲ್ಲಿ ಅಭಿಪ್ರಾಯಗಳು ಹಾಗೂ ಯೋಚನೆಗಳು ಬೇರೆ ಇರುತ್ತವೆ. ಈ ಅಭಿಪ್ರಾಯಬೇಧವನ್ನು ಜಗಳವಾಗಿಸಿಕೊಳ್ಳದೇ ಉಳಿಸಿಕೊಳ್ಳುವುದರಲ್ಲೇ ಬಹುತೇಕ ಸಮಯ ಕಳೆಯಬಹುದು.

ಹಸೆಮಣೆ ಏರ್ತಾರೆ ಸಲಿಂಗಿ ತೀರ್ಪಿನ ವಕೀಲೆಯರು!

ಲೈಂಗಿಕ ಜೀವನ
ಲೈಂಗಿಕ ಜೀವನದ ವಿಷಯಕ್ಕೆ ಬಂದರೆ ವಯಸ್ಸು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ, ಏಜ್ ಗ್ಯಾಪ್ ಹೆಚ್ಚಿದ್ದಾಗ ಇಬ್ಬರ ಸೆಕ್ಷುಯಲ್ ರೆಡಿನೆಸ್ ಮ್ಯಾಚ್  ಆಗದೆ ಹೋಗುವ ಸಂಭವಗಳು ಜಾಸ್ತಿ. ಆದ್ದರಿಂದ ಇಬ್ಬರ ನಡುವೆ ಈ ಬಗ್ಗೆ ಮಾತುಕತೆ ಓಪನ್ ಆಗಿರಲಿ. 

ಭವಿಷ್ಯದ  ಕನಸು
ಎಲ್ಲಿಯವರೆಗೆ ಇಬ್ಬರೂ ಭವಿಷ್ಯದ ಕುರಿತು ಒಂದೇ ಕನಸುಗಳನ್ನು ಹಂಚಿಕೊಳ್ಳುತ್ತೀರೋ , ಒಂದೇ ರೀತಿಯ ಆದರ್ಶ ಹೊಂದಿ, ಸಂಬಂಧಗಳಿಂದ ಒಂದೇ ವಿಷಯವನ್ನು ಬಯಸುತ್ತೀರೋ ಅಲ್ಲಿಯವರೆಗೂ ವಯಸ್ಸಿನ ಅಂತರ ಸಮಸ್ಯೆಯಾಗುವುದಿಲ್ಲ. ಆದರೆ, ವಯಸ್ಸು ಒಬ್ಬೊಬ್ಬರಲ್ಲಿ ಒಂದೊಂದು ಕನಸುಗಳನ್ನು ಹುಟ್ಟುಹಾಕುತ್ತದೆ. ಚಿಕ್ಕವರ ಕನಸು ಬೇರೆ, ದೊಡ್ಡವರ ಕನಸು ಬೇರೆ. ಅವೆರಡೂ ಅಪರೂಪಕ್ಕೆ ಒಂದಾಗಬಹುದು. ಹಾಗಾದಾಗ ಆ ಜೋಡಿಗೆ ವಯಸ್ಸು ಅಡ್ಡಿಯಾಗುವುದಿಲ್ಲ.

ಜಂಟಿ ತಿರುಗಾಡೋರ ಲೈಂಗಿಕ ಬದುಕೂ ಬಿಂದಾಸ್

ಪ್ರಾಬಲ್ಯತೆ
ಸಾಮಾನ್ಯವಾಗಿ ದೊಡ್ಡವರು ಸಣ್ಣವರ ಮೇಲೆ ಅಧಿಕಾರ ಚಲಾಯಿಸುವುದಿದೆ. ಇದು ಜಗಳಕ್ಕೆ ಕಾರಣವಾಗಬಹುದು. ಆದರೆ ದಾಂಪತ್ಯದಲ್ಲಿ ಸತಿಪತಿಗಳಿಬ್ಬರೂ ಎಲ್ಲದರಲ್ಲೂ ಸಮಾನತೆ  ಸಾಧಿಸಿದಷ್ಟೂ ಗೆಳೆಯರಂತೆ ಸಂತೋಷದಿಂದ ಇರಬಹುದು. ವಯಸ್ಸಿನ ಕಾರಣದಿಂದ ಒಬ್ಬರು ಇನ್ನೊಬ್ಬರ ಮೇಲೆ ಅಧಿಕಾರ ಚಲಾಯಿಸುವುದನ್ನು ಯಾರೂ ಒಪ್ಪಲಾರರು. ಹಾಗಂತ ಬಹಳ ಚಿಕ್ಕ ವಯಸ್ಸಿನ ಪತ್ನಿ ಆರ್ಡರ್ ಮಾಡಿದರೆ ಅದನ್ನು ಕೇಳಿಕೊಂಡಿರಲು ಆ ಪತಿಗೂ ಕಷ್ಟ. ವಯಸ್ಸಿಗೂ ಮರ್ಯಾದೆ ಇಲ್ಲವಲ್ಲ ಎನಿಸಬಹುದು. 

ಗೆಳೆಯರ ಬಳಗ
ಸಂಗಾತಿಗಳಿಬ್ಬರ ನಡುವೆ ವಯಸ್ಸಿನ ಅಂತರವಿದ್ದಾಗ ಅವರ ಗೆಳೆಯಗೆಳತಿಯರೊಂದಿಗೂ ಏಜ್  ಗ್ಯಾಪ್ ಇರುತ್ತದೆ. ಇದರಿಂದ ಪತಿಯ ಸ್ನೇಹಿತರೊಡನೆ ಪತ್ನಿ ಬೆರೆಯಲಾರಳು, ಪತ್ನಿಯ ಗೆಳೆಯರೊಡನೆ ಪತಿ ಬೆರೆಯಲಾರ. ಚಿಕ್ಕ ವಯಸ್ಸಿನ ಗೆಳೆಯರ ಆಸಕ್ತಿ, ಮಾತುಕತೆ ವಿಷಯಗಳೇ ಬೇರೆ. ದೊಡ್ಡ ವಯಸ್ಸಿನವರ ಆಸಕ್ತಿ, ಮಾತುಕತೆಗಳೇ ಬೇರೆ. ಆದರೆ, ಪ್ರಯತ್ನಿಸಿದರೆ ಆರೋಗ್ಯಕರ ಮಾತುಕತೆ ನಡೆಸಿ ಅಂತರದಲ್ಲೇ ಆಪ್ತತೆ ಕಾದುಕೊಳ್ಳಬಹುದು.


  
ಎಲ್ಲಕ್ಕೂ  ವಯಸ್ಸನ್ನು ದೂರುವುದು
ಏಜ್ ಗ್ಯಾಪ್ ಹೆಚ್ಚಿದ್ದಾಗ ಏನೇ ಜಗಳವಾಗಲಿ,  ಅವೆಲ್ಲಕ್ಕೂ ವಯಸ್ಸನ್ನು ಮಧ್ಯೆ ತಂದು ಅದರ ಮೇಲೆ ಗೂಬೆ ಕೂರಿಸಲು ಶುರುವಾಗಬಹುದು. ಇವೆಲ್ಲ ಏನೇ ಇರಲಿ, ಏಜ್  ಗ್ಯಾಪ್ ಹೆಚ್ಚಿದ್ದೊಡನೆ ಸುಖಸಂತೋಷದಿಂದ, ಹೊಂದಾಣಿಕೆಯಿಂದ ಇರಲೇಬಾರದೆಂಬ ಯಾವ ನಿಯಮವೂ ಇಲ್ಲ. ಪಾರ್ಟ್ನರ್‌ನ ವಯಸ್ಸಿನ ಹೊರತಾಗಿಯೂ ಪ್ರತಿ ಸಂಬಂಧಗಳಲ್ಲೂ ಏರಿಳಿತಗಳಿದ್ದೇ ಇರುತ್ತವೆ. ಪ್ರಾಮಾಣಿಕತೆ ಹಾಗೂ ಸರಿಯಾದ ಆ್ಯಟಿಟ್ಯೂಡ್ ಇದ್ದರೆ ಯಾವ ಸಂಬಂಧವೂ ಹಳಿ ತಪ್ಪದು. 

ಪತಿ-ಪತ್ನಿ ನಡುವೆ ಎಷ್ಟಿರಬೇಕು ಅಂತರ