ಆರೇಂಜ್ಡ್ ಮ್ಯಾರೇಜ್? ಮೊದಲ ಭೇಟಿಯಲ್ಲಿ ಏನೇನು ಪ್ರಶ್ನೆ ಕೇಳ್ಬೇಕು!

ಆರೆಂಜ್ಡ್ ಮ್ಯಾರೇಜ್ ಎಂದರೆ ಹುಡುಗ ಹುಡುಗಿ ಇಬ್ಬರಿಗೂ ಸ್ವಲ್ಪ ತಳಮಳವೇ. ಎಲ್ಲ ಓಕೆಯಾಗಿ ಮೊದಲ ಭೇಟಿಯಾಗುವ ಆ ದಿನ ಅದೆಷ್ಟು ಟೆನ್ಷನ್? ಎಂದೂ ನೋಡಿರದ, ಮಾತನಾಡಿರದ ವ್ಯಕ್ತಿಯೊಂದಿಗೆ ಏನು ಮಾತನಾಡುವುದು, ಅವನ ಮನದಾಳ ಹೇಗೆ ತಿಳಿಯುವುದು? ಜೀವನಪೂರ್ತಿ ಜೊತೆಗಿರಬಹುದೋ ಎಂದು  ಒಂದು  ಭೇಟಿಯಲ್ಲಿ ನಿರ್ಧರಿಸುವುದು ಹೇಗೆ? ಹಲವಾರು ಗೊಂದಲಗಳು.  ಆ ದಿನ ಏನು ಪ್ರಶ್ನೆಗಳನ್ನು ಕೇಳಬೇಕೆಂದು ನಾವು ಹೇಳುತ್ತೇವೆ. 

Here are the questions to ask on the first meeting if you are getting into  arranged marriage

ನಿಮ್ಮದು ಆರೆಂಜ್ಡ್ ಮ್ಯಾರೇಜ್ ಎಂದರೆ ಆ ಸಂಪೂರ್ಣ ರೀತಿ ರಿವಾಜುಗಳೇ ವಿಚಿತ್ರವೆನಿಸಬಹುದು. ನಿಮ್ಮ ಪೋಷಕರು ಫೋಟೋಗಳನ್ನು ತೋರಿಸಲು ಶುರು ಮಾಡುತ್ತಾರೆ. ಅವುಗಳಲ್ಲಿ ಆಯ್ಕೆಯಾದ ಫೋಟೋಗಳಲ್ಲಿರುವವರ ಕುಟುಂಬಕ್ಕೆ ಕರೆ ಮಾಡುತ್ತಾರೆ, ಜಾತಕಗಳು ಮ್ಯಾಚ್ ಆಗುತ್ತವೆಯೇ ಎಂಬ ಪರೀಕ್ಷೆ ನಡೆಯುತ್ತದೆ.

ನಿಮ್ಮ ಉದ್ಯೋಗ, ಆದಾಯ, ಊರುಕೇರಿ, ಕುಲ, ಗೋತ್ರಗಳೆಲ್ಲವನ್ನು ತಕ್ಕಡಿಗೆ ಹಾಕಿ ಅಳೆದು ತೂಗಿ ಅದೂ ಓಕೆಯಾದ ಬಳಿಕ ಹಿಂದಿನಿಂದ ರಹಸ್ಯವಾಗಿ ಎರಡೂ ಕುಟುಂಬದವರೂ ಮತ್ತೊಂದು ಕುಟುಂಬದ ಕುರಿತು ಹಿನ್ನೆಲೆ ಪರೀಕ್ಷಿಸಲು ತೊಡಗುತ್ತಾರೆ, ಇಷ್ಟೆಲ್ಲ ವಿಷಯಗಳು ಪಾಸ್ ಆದ ಮೇಲೆ ಬರುತ್ತದೆ ಆ ದಿನ, ನೀವು ಫೋಟೋದಲ್ಲಿ ನೋಡಿ ಒಪ್ಪಿದವರನ್ನು ಭೇಟಿಯಾಗಿ ಪರೀಕ್ಷಿಸುವ ಸಮಯ. ಯುವಕ, ಯುವತಿ ಇಬ್ಬರಿಗೂ ದೊಡ್ಡ ಪರೀಕ್ಷೆಗೆ ಹೋಗುತ್ತಿರುವ ಆತಂಕ, ಅನುಭವ. ಏನು ಮಾತನಾಡುವುದು, ಏನು ಪ್ರಶ್ನೆ ಕೇಳುವುದು, ಅವರು ನನಗೆ ಸರಿಯಾಗಿ ಹೊಂದುತ್ತಾರೋ ಇಲ್ಲವೋ ಎಂದು ತಿಳಿಯುವುದು ಹೇಗೆ ಎಂಬೆಲ್ಲ ಗೊಂದಲ, ಟೆನ್ಷನ್. ಇಂಥ ಭೇಟಿಯಲ್ಲಿ ಸಂಗಾತಿಯಾಗುವವರನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಸಹಾಯವಾಗುವ, ಅವರನ್ನು ಒಪ್ಪಬಹುದೋ ಬೇಡವೋ ಎಂದು ನಿರ್ಧರಿಸಲು ಸುಲಭವಾಗುವಂಥ ಕೆಲ ಪ್ರಶ್ನೆಗಳು ಇಲ್ಲಿವೆ. ಇವುಗಳನ್ನು ಕೇಳಿ, ಉತ್ತರಗಳನ್ನು ಪರೀಕ್ಷಿಸಿ.

1. ಮುಂದಿನ ಹತ್ತು ವರ್ಷಗಳಲ್ಲಿ ನಿಮ್ಮನ್ನು ನೀವು ಎಲ್ಲಿ ನೋಡಲು ಇಷ್ಟಪಡುತ್ತೀರಿ?

ಈ ಪ್ರಶ್ನೆಯು ವ್ಯಕ್ತಿಯ ವೈಯಕ್ತಿಕ ಹಾಗೂ ಔದ್ಯೋಗಿಕ ಗುರಿಗಳೇನು, ಮತ್ತೆ ಓದಲು ಬಯಸುತ್ತಾರಾ, ಹೊಸ ಬಿಸ್ನೆಸ್ ಮಾಡುವ ಇರಾದೆಯಿದೆಯೇ ಅಥವಾ ತಮ್ಮ ಉದ್ಯೋಗದಲ್ಲೇ ಮುಂದುವರಿಯುವ ಆಶಯವೇ ಎಂಬುದಕ್ಕೆಲ್ಲ ಉತ್ತರ ನೀಡುತ್ತದೆ. ವೈಯಕ್ತಿಕ ಮಟ್ಟದಲ್ಲಿ ವೈವಾಹಿಕ ಜೀವನ ಹೇಗೆ ತೆರೆದುಕೊಳ್ಳಬೇಕೆಂಬುದು ಆತನ ಬಯಕೆ? ಮನೆ, ಮಕ್ಕಳು ಅಥವಾ ಇನ್ಯಾವುದೋ ಭವಿಷ್ಯದ ಪ್ಲಾನ್ ಕುರಿತು ಅವರೇನೇನು ಕನಸು ಕಂಡಿದ್ದಾರೆ ಎಂಬುದರ ಹೊಳಹು ಸಿಗುತ್ತದೆ. 

ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು, ಹಾಗಂತ ಈ ವಿಷಯಗಳಲ್ಲಿ ತ್ಯಾಗ ಬೇಡ!

2. ಬೇರೆ ನಗರಕ್ಕೆ ಶಿಫ್ಟ್ ಆಗುವ ಅಥವಾ ವಿದೇಶದಲ್ಲಿ ಸೆಟಲ್ ಆಗುವ ಪ್ಲ್ಯಾನ್ ಇದೆಯೇ?

ಈ ಪ್ರಶ್ನೆಯಿಂದ ನಿಮ್ಮ ಸಂಗಾತಿಯಾಗಬಲ್ಲವರಿಗೆ ಬೇರೆ ದೇಶದಲ್ಲಿ ಹೋಗಿ ಇರುವ ಕನಸಿದೆಯೇ, ಅಥವಾ ನಗರ ಬದಲಿಸುವ ಆಸೆ ಇದೆಯೇ ಎಂಬುದು ತಿಳಿಯುತ್ತದೆ. ಇದರಿಂದ ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನಕ್ಕೇನು ಪರಿಣಾಮವಾಗುತ್ತದೆ, ನೀವು ಹೀಗೆ ಊರು ಬದಲಿಸಲು ತಯಾರಿದ್ದೀರಾ ಎಂಬುದನ್ನೆಲ್ಲ ಯೋಚಿಸಲು ಸಹಾಯವಾಗುತ್ತದೆ. 

3. ಜೀವನಸಂಗಾತಿ ಹಾಗೂ ವಿವಾಹದಿಂದ ನಿಮ್ಮ ನಿರೀಕ್ಷೆಗಳೇನು?

ಪ್ರತಿಯೊಬ್ಬರಿಗೂ ತನ್ನ ಸಂಗಾತಿ ಹೀಗೆಯೇ ಇರಬೇಕು, ವೈವಾಹಿಕ ಜೀವನ ಇಂಥಿರಬೇಕು ಎಂಬೆಲ್ಲ ಕನಸುಗಳಿರುತ್ತವೆ. ಈ ಪ್ರಶ್ನೆಯಿಂದ ಅವರ ಕನಸಿನ ಜೀವನ ಸಂಗಾತಿ ನೀವಾಗಲು ಸಾಧ್ಯವೇ, ಅಥವಾ ನಿಮ್ಮ ಕನಸು, ಗುರಿಗಳು ಸಂಪೂರ್ಣ ತದ್ವಿರುದ್ಧವೇ, ಭವಿಷ್ಯದ ಕುರಿತ ಇಬ್ಬರ ನಿರೀಕ್ಷೆಗಳು ಬೇರೆಯೇ ಎಂಬುದನ್ನೆಲ್ಲ ತಿಳಿದುಕೊಳ್ಳಬಹುದು. 

4. ನಿಮ್ಮ ಪೋಷಕರೊಂದಿಗಿನ ಸಂಬಂಧ ಹೇಗಿದೆ?

ಈ ಪ್ರಶ್ನೆಯು ಅವರ ಕುಟುಂಬದ ಕುರಿತು ಕೆಲ ಒಳಹೊಳಹುಗಳನ್ನು ನೀಡುತ್ತದೆ. ಪೋಷಕರೊಂದಿಗೆ ಬಹಳ ಹತ್ತಿರವಾ, ಅವರ ಎಲ್ಲ ಜವಾಬ್ದಾರಿಗಳೂ ಇವರದೆಯೇ ಅಥವಾ ಸಹೋದರನೊಂದಿಗೆ ಹಂಚಿಕೊಳ್ಳುತ್ತಾರಾ, ಅಥವಾ ಇನ್ನೂ ಪೋಷಕರೇ ಇವರ ಜವಾಬ್ದಾರಿ ವಹಿಸಿಕೊಂಡಿದ್ದಾರಾ, ಅವರ ಪೋಷಕರಿಗೆ ಸೊಸೆ/ಅಳಿಯನ ಕುರಿತ ನಿರೀಕ್ಷೆಗಳೇನು ಎಂಬುದನ್ನೆಲ್ಲ ತಿಳಿಯಲು ಈ ಪ್ರಶ್ನೆ ಸಹಾಯಕ. 

ಸಂಬಂಧ ಹಳತಾದರೂ ರೊಮ್ಯಾನ್ಸ್ ಹೊಸತರಂತಿರಲಿ!

5. ಎರಡೂ ಕುಟುಂಬದ ಜವಾಬ್ದಾರಿ ಹೊರಲು ತಯಾರಿದ್ದೀರಾ?

ಮದುವೆ ಎಂದರೆ ಜೊತೆಗೊಂದಿಷ್ಟು ಜವಾಬ್ದಾರಿಗಳ ಕಂತೆಯೂ ಬರುತ್ತದೆ. ನಿಮ್ಮ ಪಾರ್ಟ್ನರ್ ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ಪರಿಣಾಮ ಬೀರಬಲ್ಲದು. ತಂದೆತಾಯಿಯ ಜೊತೆ ಅತ್ತೆಮಾವನ ಬೇಕುಬೇಡಗಳನ್ನೂ ವಿಚಾರಿಸಬೇಕು, ಅನಾರೋಗ್ಯ ಸಂದರ್ಭದಲ್ಲಿ ಎಲ್ಲ ರೀತಿಯ ಜವಾಬ್ದಾರಿ ಹೊರಬೇಕು. ಈ ಎಲ್ಲ ಸಂದರ್ಭಗಳಲ್ಲಿ ಅವರ ತಂದೆತಾಯಿಯಂತೆಯೇ ನಿಮ್ಮ ಪೋಷಕರನ್ನೂ ನೋಡುತ್ತಾರಾ ಎಂಬುದು ತಿಳಿಯುತ್ತದೆ.

6. ನೀವು ಕುಟುಂಬದ ಒತ್ತಡಕ್ಕೆ ಮಣಿದಿದ್ದೀರಾ?

ಈಗಲೂ ಹಲವು ಕುಟುಂಬಗಳಲ್ಲಿ ಮಕ್ಕಳು ತಂದೆತಾಯಿಯ ಒತ್ತಾಯಕ್ಕೆ, ಅವರ ಸಮಾಧಾನಕ್ಕೆ ಇಷ್ಟವಿಲ್ಲದಿದ್ದರೂ ಮದುವೆಯಾಗಲು ತಲೆಯಾಡಿಸುವುದಿದೆ. ಹಾಗಾಗಿ, ಮೊದಲ ಭೇಟಿಯಲ್ಲೇ ಅಂಥ ಡೌಟ್ ಕ್ಲಿಯರ್ ಮಾಡಿಕೊಂಡರೆ ಒಳ್ಳೆಯದು. ಯಾರದೋ ಒತ್ತಡಕ್ಕೆ ನಿಮ್ಮನ್ನು ಮದುವೆಯಾದರೆ ನೀವು ಎಷ್ಟು ಸಂತೋಷವಾಗಿರಬಲ್ಲಿರಿ ಎಂಬುದನ್ನು ಯೋಚಿಸಿ ನಿರ್ಧರಿಸಬಹುದು. 

Latest Videos
Follow Us:
Download App:
  • android
  • ios