Asianet Suvarna News Asianet Suvarna News

ಸಂಬಂಧಗಳಲ್ಲಿ ಹೊಂದಾಣಿಕೆ ಬೇಕು, ಹಾಗಂತ ಈ ವಿಷಯಗಳಲ್ಲಿ ತ್ಯಾಗ ಬೇಡ!

ಸಂಬಂಧವೊಂದರಲ್ಲಿ ಜೀವಂತಿಕೆ ಇರಲು, ಸಂತೋಷವಿರಲು ಅಲ್ಲಿ ಇಬ್ಬರದೂ ಕನಸುಗಳಿರಬೇಕು, ಆಸಕ್ತಿಗಳಿರಬೇಕು, ಕುಟುಂಬವರ್ಗವಿರಬೇಕು, ಐಡೆಂಟಿಟಿ, ಸ್ವಾತಂತ್ರ್ಯ ಇರಬೇಕು. ಅದು ಬಿಟ್ಟು ನನ್ನ ಕನಸುಗಳೇ ನಿನ್ನವಾಗಬೇಕು, ನಾನು ಹೇಳಿದಂತೆಯೇ ಇರಬೇಕು ಎನ್ನುವಂಥ ಮನೋಭಾವ ಇರುವೆಡೆ ಎಲ್ಲವನ್ನೂ ತ್ಯಾಗ ಮಾಡಿ ಬದುಕುವುದರಲ್ಲಿ ಅರ್ಥವಿಲ್ಲ. 

5 Things you should never sacrifice in a relationship
Author
Bangalore, First Published Aug 6, 2019, 1:51 PM IST

ಸಂಬಂಧಗಳಲ್ಲಿ ಹೊಂದಾಣಿಕೆ ಬಹಳ ಮುಖ್ಯ. ಕೆಲವೊಮ್ಮೆ ನಮ್ಮ ಸಂಗಾತಿಯ ಸಂತೋಷಕ್ಕಾಗಿ ನಮ್ಮ ಇಷ್ಟಕಷ್ಟಗಳನ್ನು ಬಿಟ್ಟುಬಿಡಬೇಕಾಗುತ್ತದೆ. ಇಬ್ಬರೂ ಇಂಥ ಹತ್ತು ಹಲವು ಅಡ್ಜಸ್ಟ್‌ಮೆಂಟ್‌ಗಳನ್ನು ಮಾಡಿಕೊಂಡಿರುತ್ತೀರಿ. ಇವೆಲ್ಲ ಬಿಟ್ಟು ಕೊಟ್ಟು ಪಡೆದುಕೊಳ್ಳುವ ಕಲೆ. ಇದರಲ್ಲಿ ತಪ್ಪಿಲ್ಲ. ಆದರೆ, ಕೆಲವೊಂದು ವಿಷಯಗಳಲ್ಲಿ ಮಾತ್ರ ಯಾವುದೇ ಕಾರಣಕ್ಕೂ ನೀವು ತ್ಯಾಗ ಮಾಡಬಾರದು, ಅವರು ತ್ಯಾಗ ಬಯಸಬಾರದು. ಅವು ಯಾವುದು ಗೊತ್ತಾ?

1. ನಿಮ್ಮ ಪ್ಯಾಶನ್

ನಮಗೆಲ್ಲರಿಗೂ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಆಸಕ್ತಿ ಇರುತ್ತದೆ. ನಾವದನ್ನು ಬಹಳ ಪ್ರೀತಿಯಿಂದ ಮಾಡುತ್ತಿರುತ್ತೇವೆ, ಅದೇ ನಮ್ಮಲ್ಲಿ ಜೀವನೋತ್ಸಾಹ ತುಂಬುವಂಥದು ಹಾಗೂ ನಮ್ಮ ಬದುಕಿಗೊಂದು ಬೆಲೆ ತರುವುದು. ಅದೇ ನಮ್ಮ ಆತ್ಮಕ್ಕೆ ಸಂತೋಷದಿಂದಿರಲು ಬೇಕಾದುದು. ನೀವು ಅದಿಲ್ಲದೆ ಏನಾಗುತ್ತೀರಿ ಎಂಬುದನ್ನು ಯೋಚಿಸಿ. ಅಂಥ ನಿಮ್ಮ ಪ್ಯಾಶನ್ ಬಿಟ್ಟುಬಿಡಲು ಸಂಬಂಧವೊಂದು ಡಿಮ್ಯಾಂಡ್ ಮಾಡುತ್ತಿದೆ ಎಂದರೆ ಅಲ್ಲಿ ಖಂಡಿತಾ ಹೊಂದಾಣಿಕೆ ಬೇಡ. ಬದಲಿಗೆ ನಿಮ್ಮ ಪಾರ್ಟ್ನ‌ರ್‌ಗೆ ಅದು ನಿಮಗೆಷ್ಟು ಮಹತ್ವದ್ದು ಎಂದು ವಿವರಿಸಿ ಹೇಳಿ. ನಟನೆಯೇ ಜೀವನ ಎಂದುಕೊಂಡ ನಟಿ ಮದುವೆಯಾದ ಬಳಿಕ, ಪತಿಗೆ ಇಷ್ಟವಿಲ್ಲವೆಂದು ನಟನೆಗೆ ತಿಲಾಂಜಲಿ ಹಾಡುವುದನ್ನು ನಾವು ನೋಡಿರಬಹುದು. ಆದರೆ, ಅಂಥವರು ಸಂಬಂಧದಲ್ಲಿ ಮತ್ತೆ ಖುಷಿಯಾಗಿರಲು ಸಾಧ್ಯವೇ? ಖಂಡಿತಾ ಇಲ್ಲ.

ಸುಖಿ ದಾಂಪತ್ಯಕ್ಕೆ ಪಂಚ ಸೂತ್ರಗಳು!

2. ನಿಮ್ಮ ಕನಸುಗಳು

ಭವಿಷ್ಯದ ಬಗ್ಗೆ ನೀವು ಸಾಕಷ್ಟು ಕನಸು ಕಟ್ಟಿರಬಹುದು. ಆದರೆ ಪತಿ/ಪತ್ನಿಗೆ ಇಷ್ಟವಿಲ್ಲವೆಂದು ಕನಸುಗಳನ್ನೆಲ್ಲ ಬಿಡುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಇಷ್ಟಕ್ಕೂ ಕನಸುಗಳಿಲ್ಲದ ಜೀವನಕ್ಕಾದರೂ ಅರ್ಥವಿದೆಯೇ? ಕ್ರೀಡೆಯಲ್ಲಿ ರಾಷ್ಟ್ರಪದಕ ತೆಗೆದುಕೊಳ್ಳುವ ಕನಸು ಕಾಣುವ ಯುವತಿಯನ್ನು ಮದುವೆಯಾಗಿ, ''ನೀನು ಗಿಡ್ಡ ಚಡ್ಡಿ ಹಾಕಿಕೊಂಡು ಆಟವಾಡುವುದು ನನಗಿಷ್ಟವಿಲ್ಲ. ನನ್ನ ದುಡಿಮೆಯೇ ಸಾಕಲ್ಲ, ಮನೆ ಬಿಟ್ಟು ಹೊರ ಹೋಗಬೇಡ''  ಎಂದರೆ ಅದು ಬಂಧವಲ್ಲ, ಬಂಧನ. ಅಂಥ ಸಂದರ್ಭದಲ್ಲಿ ಕನಸುಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ.

5 Things you should never sacrifice in a relationship

3. ನಿಮ್ಮ ಕುಟುಂಬ

ಕುಟುಂಬ ಎಂದರೆ ಬರೀ ರಕ್ತ ಸಂಬಂಧಿಗಳಲ್ಲ, ನಿಮ್ಮ ಅತಿ ಹತ್ತಿರದ ಸ್ನೇಹಿತರು ಕೂಡಾ. ನೀವೆಷ್ಟೇ ಡೀಪ್ ಲವ್‌ನಲ್ಲಿ ಬಿದ್ದಿರಿ, ಏನೇ ಸಂದರ್ಭ ಬಂದರೂ ಹತ್ತಿರದವರನ್ನು ದೂರುವ, ಅವರಿಂದ ದೂರವಾಗುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಈ ಕುಟುಂಬವು ನಿಮ್ಮ ಸಂಬಂಧದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಅರ ಮಾತುಗಳನ್ನು ಸ್ವಲ್ಪ ಗಮನ ಕೊಟ್ಟು ಕೇಳಿ ಅದರಲ್ಲಿ ನಿಜವಿದೆಯೇ ಯೋಚಿಸಿ ನೋಡಿ. ನಿಮ್ಮ ಸಂಗಾತಿ, ನಿಮ್ಮವರ ಕುರಿತು ಅಸಡ್ಡೆ ಮಾಡಿದರೆ ನೀವು ಖಂಡಿತಾ ನಿಮ್ಮ ಸಂಗಾತಿಯ ಬಗ್ಗೆ ಎರಡನೇ ಬಾರಿ ಯೋಚಿಸಲೇಬೇಕು. ಅಲ್ಲದೆ, ಜೀವನದಲ್ಲಿ ಗಂಡ ಅಥವಾ ಹೆಂಡತಿಯೊಬ್ಬರೇ ಎಲ್ಲ ಆಗಿರಲು ಸಾಧ್ಯವಿಲ್ಲ. ಅಕ್ಕ, ಅಣ್ಣ, ಅಪ್ಪ, ಅಮ್ಮ, ಗೆಳೆಯರು ಸೇರಿದಂತೆ ಬೇರೆ ಸಂಬಂಧಗಳೂ ಬೇಕು. 

ಈ ಅಪಾಯಕಾರಿ ಡೇಟಿಂಗ್ ಟ್ರೆಂಡ್ಸ್‌ನ ಸಂತ್ರಸ್ತರಾಗಬೇಡಿ!

4. ನಿಮ್ಮ ಸ್ವಾತಂತ್ರ್ಯ

ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಎಂದ ಮೇಲೆ ನೀವೇಕೆ ಇನ್ನೂ ಬಂಧನದಲ್ಲಿದ್ದೀರಿ. ಯಾರದೋ ಆಳ್ವಿಕೆಯಲ್ಲಿದ್ದೀರಿ? ಕೆಲ ಮಹಿಳೆಯರು ತಮ್ಮ ಪತಿಯ ಅಹಂಕಾರವನ್ನು ತೃಪ್ತಗೊಳಿಸುವ ಸಲುವಾಗಿ ಆರ್ಥಿಕ ಸ್ವಾತಂತ್ರ್ಯ ಬಿಟ್ಟುಕೊಡುತ್ತಾರೆ. ಮತ್ತೆ ಕೆಲವರು ಬಟ್ಟೆಯ ವಿಷಯದಲ್ಲಿ, ಸ್ವಂತದ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಷಯದಲ್ಲಿ ಕೂಡಾ ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಇದು ಸರಿಯಲ್ಲ. ಪತಿ ಪತ್ನಿ ಸ್ನೇಹಿತರಂತಿರಬೇಕೇ ಹೊರತು, ಯಜಮಾನ-ಜೀತದಾಳಿನಂಥಲ್ಲ. ಇಬ್ಬರಿಗೂ ಸ್ವಾತಂತ್ರ್ಯ ಬೇಕೇ ಬೇಕು.

5. ನಿಮ್ಮ ಸ್ವಾಭಿಮಾನ

ನಿಮ್ಮ ಸಂಗಾತಿ ಪದೇ ಪದೇ ನಿಮ್ಮನ್ನು ನೀವು ಕಡಿಮೆ ಎಂದು ಭಾವಿಸುವಂತೆ ಮಾತನಾಡುತ್ತಿದ್ದರೆ, ಅಂಥ ಸಂಬಂಧದ ಬಗ್ಗೆ ನೀವು ಯೋಚಿಸಬೇಕಾಗುತ್ತದೆ. ಏನಾದರೂ ಕೊರತೆಯಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದು ಹೇಗೆ, ಇನ್ನೂ ಬೆಳೆಯಲು ಸಾಧ್ಯ ಎಂಬ ಪಾಸಿಟಿವ್ ಮಾತುಗಳನ್ನಾಡುವಂಥ ಸಂಗಾತಿ ಆಯ್ದುಕೊಳ್ಳಿ. ಸಂಬಂಧಕ್ಕಾಗಿ ಸ್ವಾಭಿಮಾನ, ಸ್ವಾವಲಂಬನೆ, ಸ್ವಂತಿಕೆಯನ್ನು ಬಿಟ್ಟುಕೊಡಬೇಡಿ. 

Follow Us:
Download App:
  • android
  • ios