ಬದುಕಿನ ಏಕತಾನತೆ ಹಾಗೂ ನಮ್ಮ ಕೆಲ ತಪ್ಪುಗಳಿಂದಾಗಿ ಸಂಬಂಧಗಳು ಒಮ್ಮೊಮ್ಮೆ ರೊಮ್ಯಾನ್ಸ್‌ನ ಹೊಳಪನ್ನು ಕಳೆದುಕೊಂಡು ಸಪ್ಪೆಯಾಗುತ್ತವೆ. ಅವಕ್ಕೆ ನವಚೈತನ್ಯ ತುಂಬಲು, ಸದಾ ಹೊಸತರಂತಿಡಲು ಸಂಗಾತಿಗಳಿಬ್ಬರೂ ಸ್ವಲ್ಪ ಪ್ರಯತ್ನ ಹಾಕುವುದು ಅಗತ್ಯ. 

1. ಮಾತನಾಡಿ

ಹರಿಣಿ ಹಾಗೂ ಹರೀಶ್ ಬ್ರೇಕಪ್ ಆದಾಗ ಅವರ ಪರಿಚಯಸ್ಥರೆಲ್ಲರೂ ಆಶ್ಚರ್ಯ ಪಟ್ಟರು. ಏಕೆಂದರೆ ಅವರಿಬ್ಬರೂ ತಮ್ಮ ಸಂಬಂಧದ ಕುರಿತು ಸೀರಿಯಸ್ಸಾಗಿದ್ದರು. ಆದರೆ ಹರಿಣಿಗೆ ಆಶ್ಚರ್ಯವಾಗಲಿಲ್ಲ. ಅವಳಿಗೆ ಕಾರಣ ತಿಳಿದಿತ್ತು. ಸಣ್ಣ ಸಣ್ಣ ವಿಷಯಗಳು ಜೋಡಣೆಯಾಗುತ್ತಾ ದೊಡ್ಡದಾಗಿದ್ದವು. ಹರೀಶ್ ಮೇಲೆ ಕೋಪ ಬಂದಾಗ, ಬೇಜಾರಾದಾಗೆಲ್ಲ ಅದಕ್ಕೆ ಅವನೇ ಕಾರಣ ಹುಡುಕಲಿ ಎಂದುಕೊಳ್ಳುತ್ತಾ ಅವಳು ಕಳೆದುಬಿಟ್ಟಿದ್ದಳು. ಆದರೆ, ಈ ಗೆಸ್ಸಿಂಗ್ ಕೆಲಸ ಹರೀಶ್‌ಗೆ ಸಾಕಾಗಿ ಹೋಗಿತ್ತು. ಏನು ತಪ್ಪಾಯಿತೆಂದೇ ಅವನಿಗೆ ತಿಳಿಯುತ್ತಿರಲಿಲ್ಲ. ನಿಧಾನವಾಗಿ ಆತ ಆಕೆಯನ್ನು ಅಸಡ್ಡೆ ಮಾಡುತ್ತಾ ಹೋದ. ಅದರ ಬದಲು ಹರಿಣಿ ತಾನೇಕೆ ಅಪ್ಸೆಟ್ ಆಗಿದ್ದೀನಿ ಎಂದು ಅಲ್ಲಲ್ಲೇ ತಿಳಿಸುತ್ತಾ ಬಂದಿದ್ದರೆ, ವಾದ, ಜಗಳವೇ ಆಗಿದ್ದರೂ ಅಲ್ಲೇ ಸರಿ ಹೋಗಿಬಿಡುತ್ತಿತ್ತು. ಸಂಬಂಧಗಳು ಸ್ವಲ್ಪ ಹಳತಾದಂತೆಲ್ಲ ಮಾತು ಚುಟುಕಾಗುತ್ತದೆ. ಆದರೆ, ಈ ತಪ್ಪನ್ನು ಮಾಡದಂತೆ ಎಚ್ಚರಿಕೆ ವಹಿಸಬೇಕು. ಸಂಬಂಧಗಳ ನಡುವೆ ಮಾತುಕತೆ ಚೆನ್ನಾಗಿದ್ದರೆ ಮತ್ತೆಲ್ಲವೂ ಚೆನ್ನಾಗಿರುತ್ತದೆ. ಸುಮ್ಮನೆ ತಪ್ಪು ಹೊರಿಸುವ ಬದಲು ನಿಮಗೇನನ್ನಿಸುತ್ತಿದೆ ಎಂಬುದನ್ನಷ್ಟೇ ಹೇಳಿ. 

ಪ್ರೀತಿ ಮಾಡಿ ತಪ್ಪೇನಿಲ್ಲ; ಆದರೆ ಈ 7 ಸಂಗತಿ ನಿಮಗೆ ಗೊತ್ತಿರಲಿ

2. ಅಸಡ್ಡೆ ಬೇಡ

ಸಂಬಂಧದ ಆರಂಭದಲ್ಲಿ ಇಬ್ಬರೂ ಸಮಯ ಸಿಕ್ಕರೆ ಸಾಕು, ಭೇಟಿಯಾಗುತ್ತೀರಿ, ಫೋನ್ ಮಾಡಿ ಮಾತಾಡುತ್ತೀರಿ. ಮೆಸೇಜ್‌ಗಳಿಗಂತೂ ಪುರುಸೊತ್ತೇ ಇಲ್ಲ. ಇಬ್ಬರಿಗೂ ಒಬ್ಬರನ್ನೊಬ್ಬರು ಅರಿಯುವ ಹಂಬಲ. ತನ್ನವರಾಗಿಸಿಕೊಳ್ಳುವ ಗಡಿಬಿಡಿ. ಪರಿಚಯ ಹಳತಾದಂತೆಲ್ಲ ಹೇಗೂ ಇವಳಿನ್ನು ನನ್ನವಳೇ ತಾನೇ ಎಂಬ ಭಾವ ಆವರಿಸಿಬಿಟ್ಟ ಮೇಲೆ ನಿಮ್ಮ ಪಾಡಿಗೆ ನೀವು ಕೆಲಸದಲ್ಲಿ ಬ್ಯುಸಿಯಾಗುತ್ತೀರಿ, ಗೆಳೆಯರಿಗೆ ಸಮಯ ನೀಡುತ್ತೀರಿ, ನಿಮ್ಮದೇ ಲೋಕದಲ್ಲಿ ಮುಳುಗಿ ಬಿಡುತ್ತೀರಿ. ಇವುಗಳಲ್ಲಿ ಕೆಲವು ಒಳ್ಳೆಯದೇ ಆದರೂ, ಸಂಪೂರ್ಣವಾಗಿ ಸಂಗಾತಿಯನ್ನು ಇಗ್ನೋರ್ ಮಾಡುವುದು, ಅವರಿಗೆ ಅಗತ್ಯವಿದ್ದಾಗ ನೀವಿಲ್ಲದಿರುವುದು ಮಾತ್ರ ಸಂಪೂರ್ಣ ತಪ್ಪು. ಇಬ್ಬರೂ ಅಗತ್ಯಗಳನ್ನು ಹಂಚಿಕೊಳ್ಳಿ. ಒಬ್ಬರ ಮಾತನ್ನು ಮತ್ತೊಬ್ಬರು ವ್ಯವಧಾನದಿಂದ ಕೇಳುವ ಅಭ್ಯಾಸ ಮಾಡಿಕೊಳ್ಳಿ. ಇಬ್ಬರೂ ಸಣ್ಣ ಪುಟ್ಟ ಕಾಳಜಿ ತೋರಿಸಿಕೊಳ್ಳುವುದು ನಿಲ್ಲಿಸಬೇಡಿ. 

3. ಪ್ರವಾಸ ಹೋಗಿ

ಆರ್ಥಿಕ ಒತ್ತಡ, ಮನೆಗೆಲಸ, ಪ್ರಾಜೆಕ್ಟ್ ಡೆಡ್‌ಲೈನ್ಸ್, ಜಗತ್ತಿನ ದುಃಖದುಮ್ಮಾನಗಳೆಲ್ಲ ಸೇರಿ ಆಗಾಗ ಕಿರಿಕಿರಿ ಎನಿಸುವುದು ಸಾಮಾನ್ಯ. ದೈನಂದಿನ ಏಕತಾನತೆಯ ಬದುಕು ಎಲ್ಲರಿಗೂ ಒಂದು ದಿನ ಹಿಂಸೆ ಎನಿಸಲಾರಂಭಿಸುತ್ತದೆ. ಬ್ರೇಕ್ ಬೇಕು ಎನಿಸುತ್ತದೆ. ಕಪಲ್ ಕೂಡಾ ಈ ವಿಷಯಕ್ಕೆ ಹೊರತಲ್ಲ. ಸಂಬಂಧ ಏಕೋ ರುಚಿ ಕಳೆದುಕೊಳ್ಳುತ್ತಿದೆ ಎನಿಸಿದಾಗೆಲ್ಲ ಒಂದು ಪುಟ್ಟ ಪ್ರವಾಸ ಯೋಜಿಸಿ. ಮೂರು ತಿಂಗಳಿಗೊಮ್ಮೆಯಾದರೂ ಪ್ರವಾಸ ಹೋಗಬೇಕು ಎನ್ನುತ್ತಾರೆ ಮಾನಸಿಕ ತಜ್ಞರು. ಇದರಿಂದ ದಂಪತಿಯು ರಿಕನೆಕ್ಟ್ ಆಗಲು ಅವಕಾಶ ಸಿಗುತ್ತದೆ. ಪ್ರವಾಸದಿಂದ ಒತ್ತಡ ಕಡಿಮೆಯಾಗಿ ಸಂತೋಷ, ರಿಲ್ಯಾಕ್ಸೇಶನ್ ಹೆಚ್ಚುತ್ತದೆ.

ಸುಖ ದಾಂಪತ್ಯಕ್ಕೆ ಕಬೀರರ ಸೂತ್ರ, ನೀವೂ ಅಪ್ಲೈ ಮಾಡಿ ಕೊಂಡ್ರೆ ಬದುಕು ಸುಸೂತ್ರ 

4. ದೈಹಿಕ ಸಂಬಂಧ ಕಡೆಗಣನೆ ಬೇಡ

ಸಂಬಂಧವನ್ನು ಜೀವಂತಿಕೆಯಿಂದಿಡಲು ದೈಹಿಕ ಸಂಬಂಧದ ಅಗತ್ಯವನ್ನು ಹಲವರು ಕಡೆಗಣಿಸುತ್ತಾರೆ. ಸಂಬಂಧ ಉಳಿಯಲು ಇದೇ ಫೌಂಡೇಶನ್ ಅಲ್ಲ ನಿಜ, ಆದರೆ ಅದು ಬೇಡವೇ ಬೇಡ ಎನ್ನಲು ಸಕಾರಣವೂ ಅಲ್ಲ. ಪ್ರೀತಿಯ ಅಪ್ಪುಗೆ, ತಲೆ ಸವರುವಿಕೆ, ಸಿಹಿ ಮುತ್ತುಗಳು, ಫ್ಲರ್ಟೀ ಮೆಸೇಜ್‌ಗಳು ಎಲ್ಲವೂ ವಿಷಯಕ್ಕೆ ಮಸಾಲೆ ಹಚ್ಚುತ್ತವೆ. ಅವು ನಿಮ್ಮನ್ನು ದೈಹಿಕವಾಗಿಯೂ, ಮಾನಸಿಕವಾಗಿಯೂ ಹತ್ತಿರ ತರುತ್ತವೆ. 

5. ಸದ್ಗುಣಗಳಿಗೆ ಬೆಲೆ ಕೊಡಿ

ಹನಿಮೂನ್ ಫೇಸ್ ಮುಗಿಯುವವರೆಗೆ ಸಂಗಾತಿಯ ಕೊರತೆಗಳು ದೊಡ್ಡದೆನಿಸಿರುವುದೇ ಇಲ್ಲ. ಅವನ ಒಳ್ಳೆಯ ಗುಣಗಳು ಮಾತ್ರ ಎದ್ದು ಕಾಣಿಸುತ್ತಿರುತ್ತವೆ. ತದನಂತರದಲ್ಲಿ ಸಣ್ಣಪುಟ್ಟ ಕೊರತೆಗಳೂ ದೊಡ್ಡದಾಗಿ ಕಾಣಲಾರಂಭಿಸುತ್ತವೆ. ಒಳ್ಳೆಯ ಗುಣಗಳು ನಿಮಗೆ ಅಭ್ಯಾಸವಾಗಿ ಅವು ವಿಶೇಷವೆನಿಸುವುದೇ ಇಲ್ಲ. ಪ್ರತಿದಿನ ನಿಮ್ಮ ಸಂಗಾತಿಯ ಯಾವ ಗುಣ, ವರ್ತನೆ ನಿಮಗೆ ಖುಷಿ ನೀಡಿತು ಎಂಬುದನ್ನು ಬರೆಯುವ ಅಭ್ಯಾಸ ಮಾಡಿ. ನೆಗೆಟಿವ್ ಭಾವನೆಗಳು ಬೇಡವೇ ಬೇಡ. ವರ್ಷವಾದ ಬಳಿಕ ಆತನ ಹುಟ್ಟುಹಬ್ಬಕ್ಕೆ ಈ ಗ್ರ್ಯಾಟಿಟ್ಯೂಡ್ ಡೈರಿಯನ್ನೇ ಗಿಫ್ಟ್ ಆಗಿ ನೀಡಿ. ಅದಕ್ಕಿಂತ ಉತ್ತಮ ಉಡುಗೊರೆ ಇನ್ನೊಂದಿರಲಾರದು. 

ಈ ಅಪಾಯಕಾರಿ ಡೇಟಿಂಗ್ ಟ್ರೆಂಡ್ಸ್‌ನ ಸಂತ್ರಸ್ತರಾಗಬೇಡಿ!