How to grow plants from cuttings free: ಮನೆಗೆ ಸುಂದರವಾದ ಗಿಡ ತರಬೇಕೆಂದ್ರೆ ನರ್ಸರಿಗೆ ಹೋಗಿ ಹಣ ಕೊಟ್ಟು ಖರೀದಿಸಬೇಕಾಗಿಲ್ಲ. ನಮ್ಮ ಸುತ್ತಮುತ್ತ ಕಾಣ ಸಿಗುವ ಸಾಮಾನ್ಯ ಗಿಡಗಳ ಸಣ್ಣ ಕೊಂಬೆ ಅಥವಾ ಕೇವಲ ಒಂದು ಎಲೆಯನ್ನ ಬಳಸಿ ಉಚಿತವಾಗಿ ಹೊಸ ಗಿಡಗಳನ್ನು ಬೆಳೆಸಬಹುದು.  

ಕೆಲವೊಮ್ಮೆ ಮನೆಯೊಳಗಿನ ಕುಂಡ ಅಥವಾ ಪಾಟ್‌ ಗಿಡಗಳು ತುಂಬಾ ಎತ್ತರ ಬೆಳೆದು, ಎಲೆಗಳಿಲ್ಲದೆ ಬಡಕಲಾಗಿ ಕಾಣಲಾರಂಭಿಸುತ್ತವೆ. ಅವುಗಳನ್ನು ಮತ್ತೆ ಚಿಗುರಿಸಲು ಅಥವಾ ನಿಮ್ಮ ನೆಚ್ಚಿನ ಗಿಡವನ್ನು ಸ್ನೇಹಿತರಿಗೆ ಕೊಡಲು ಬರೀ ಕೊಂಬೆಗಳಿಂದಲೇ ಹೊಸ ಗಿಡ ಮಾಡುವುದು ಅತ್ಯಂತ ಸುಲಭವಾದ ಮಾರ್ಗ. ಗಿಡದ ಒಂದು ಸಣ್ಣ ಕೊಂಬೆ ಅಥವಾ ಕೇವಲ ಒಂದು ಎಲೆ ಇದ್ದರೆ ಸಾಕು, ಅದರಿಂದಲೇ ಹೊಸ ಗಿಡವನ್ನು ಸಿದ್ಧಪಡಿಸಬಹುದು. ಮೊದಲಿಗೆ ಅದ್ಹೇಗೆ ಎಂಬುದನ್ನ ತಿಳಿಯೋಣ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇವಲ ಕೊಂಬೆಗಳಿಂದ ಗಿಡ ಬೆಳೆಸುವ ಸರಳ ವಿಧಾನ

ವಿಧಾನ 1: ಗಿಡದ ಬೇರು ಬರಲು
ಗಿಡದ ಒಂದು ಸಣ್ಣ ಕೊಂಬೆಯನ್ನು ಕತ್ತರಿಸಿ, ಒಂದು ಗ್ಲಾಸ್ ನೀರಿನಲ್ಲಿ ಇಡಿ. ಇದನ್ನು ನೇರ ಸೂರ್ಯನ ಬೆಳಕು ಬೀಳದ, ಗಾಳಿ-ಬೆಳಕಿರುವ ಜಾಗದಲ್ಲಿ ಇರಿಸಿ. ಪ್ರತಿ ವಾರ ನೀರನ್ನು ಬದಲಾಯಿಸಿ. ಕೆಲವು ವಾರ ಅಥವಾ ತಿಂಗಳುಗಳಲ್ಲಿ ಬೇರುಗಳು ಬರಲು ಪ್ರಾರಂಭಿಸುತ್ತವೆ. ಬೇರುಗಳು ಕೆಲವು ಇಂಚು ಉದ್ದ ಬೆಳೆದ ನಂತರ, ಅದನ್ನು ಮಣ್ಣಿನ ಕುಂಡಕ್ಕೆ ವರ್ಗಾಯಿಸಿ.

ವಿಧಾನ 2: ನೇರವಾಗಿ ಮಣ್ಣಿನಲ್ಲಿ ನೆಡುವುದಾದರೆ
ಕತ್ತರಿಸಿದ ಕೊಂಬೆಯನ್ನು ನೇರವಾಗಿ ತೇವವಿರುವ ಮಣ್ಣಿನ ಮಿಶ್ರಣಕ್ಕೆ ನೆಡುವುದು ಎರಡನೇ ವಿಧಾನ. ಆದರೆ ಕೊಂಬೆಯನ್ನು ನೆಡುವ ಮುನ್ನ ಅದರ ತುದಿಯನ್ನು 'ರೂಟಿಂಗ್ ಹಾರ್ಮೋನ್' (ಬೇರು ಬರಲು ಸಹಾಯ ಮಾಡುವ ಪೌಡರ್) ನಲ್ಲಿ ಅದ್ದಿ ನೆಟ್ಟರೆ ಬೇಗ ಬೇರು ಬರುತ್ತದೆ (ಇದು ಇಲ್ಲದಿದ್ದರೂ ಪರವಾಗಿಲ್ಲ). ಕುಂಡವನ್ನು ನೆರಳಿನಲ್ಲಿ ಇಡಿ. ಕೆಲವು ವಾರಗಳಲ್ಲಿ ಹೊಸ ಚಿಗುರು ಕಾಣಿಸಿಕೊಳ್ಳುತ್ತದೆ.

ಈ ರೀತಿ ಕೊಂಬೆಗಳಿಂದಲೇ ಬೆಳೆಸಬಹುದಾದ 15 ಗಿಡಗಳು

1. ಪೋಥೋಸ್ (ಮನಿ ಪ್ಲಾಂಟ್)
ಬೆಳಕು: ಸಾಧಾರಣ ಬೆಳಕು
ಮಣ್ಣು: ನೀರು ನಿಲ್ಲದ ಮಣ್ಣು
ಕೆಲವು ಇಂಚುಗಳಷ್ಟು ಉದ್ದದ, ಎಲೆಗಳಿರುವ ಕೊಂಬೆಯನ್ನು ಕತ್ತರಿಸಿ (ಎಲೆಯ ಬುಡದಲ್ಲಿ ಕಂದು ಬಣ್ಣದ ಗಂಟು ಅಥವಾ ನೋಡ್ ಇರಬೇಕು). ಇದನ್ನು ತೇವವಿರುವ ಮಣ್ಣಿನಲ್ಲಿ ನೆಡಬಹುದು ಅಥವಾ ನೀರಿನಲ್ಲಿಟ್ಟು ಬೇರು ಬಂದ ನಂತರ ಮಣ್ಣಿಗೆ ಹಾಕಬಹುದು.

2. ಹಾರ್ಟ್‌ಲೀಫ್ ಫಿಲೋಡೆಂಡ್ರಾನ್ (Heartleaf Philodendron)
ಬೆಳಕು: ಸಾಧಾರಣ ಬೆಳಕು
ಮಣ್ಣು: ಫಲವತ್ತಾದ ಮಣ್ಣು
ಹೃದಯದ ಆಕಾರದ ಹೊಳೆಯುವ ಎಲೆಗಳಿರುವ ಈ ಬಳ್ಳಿಯನ್ನು ಕತ್ತರಿಸಿ ಸುಲಭವಾಗಿ ನೀರಿನಲ್ಲಿ ಅಥವಾ ಮಣ್ಣಿನಲ್ಲಿ ಬೆಳೆಸಬಹುದು. ಬೆಳಕು ಕಡಿಮೆಯಿದ್ದಾಗ ಇದು ಬಡಕಲಾಗುವುದರಿಂದ, ಕತ್ತರಿಸಿ ಹೊಸ ಗಿಡ ಮಾಡುವುದರಿಂದ ಕುಂಡ ಸದಾ ತುಂಬಿ ಕಾಣುತ್ತದೆ.

3. ಸ್ಪೈಡರ್ ಪ್ಲಾಂಟ್ (Spider Plant)
ಬೆಳಕು: ಉತ್ತಮ ಬೆಳಕು (ನೆರಳು)
ಮಣ್ಣು: ಫಲವತ್ತಾದ ಮಣ್ಣು
ಈ ಗಿಡದ ಕೊಂಬೆಗಳಲ್ಲಿ ಸಣ್ಣ ಸಣ್ಣ ಬೇಬಿ ಗಿಡಗಳು (ಸ್ಪೈಡರೆಟ್ಸ್) ತೂಗಾಡುತ್ತಿರುತ್ತವೆ. ಅವುಗಳನ್ನು ಕತ್ತರಿಸಿ ನೇರವಾಗಿ ಮಣ್ಣಿನಲ್ಲಿ ನೆಟ್ಟರೆ ಸುಲಭವಾಗಿ ಬದುಕುತ್ತವೆ. ನೀರಿನಲ್ಲಿಯೂ ಇಡಬಹುದು.

4. ಸ್ನೇಕ್ ಪ್ಲಾಂಟ್ (Snake Plant)
ಬೆಳಕು: ಕಡಿಮೆ ಅಥವಾ ಹೆಚ್ಚು ಬೆಳಕು
ಮಣ್ಣು: ನೀರು ಸರಾಗವಾಗಿ ಹೋಗುವ ಮಣ್ಣು
ಇದರ ನಿರ್ವಹಣೆ ತುಂಬಾ ಸುಲಭ. ಒಂದು ಇಡೀ ಎಲೆ ಅಥವಾ ಎಲೆಯನ್ನು ಕೆಲವು ಇಂಚುಗಳ ತುಂಡುಗಳಾಗಿ ಕತ್ತರಿಸಿ, ಅರ್ಧ ಇಂಚಿನಷ್ಟು ಮಣ್ಣಿನೊಳಗೆ ನೂಕಿ. ಇದು ನಿಧಾನವಾಗಿ ಬೆಳೆಯುವುದರಿಂದ ಒಂದೇ ಕುಂಡದಲ್ಲಿ 3-4 ತುಂಡುಗಳನ್ನು ನೆಡಿ.

5. ಆಫ್ರಿಕನ್ ವೈಲೆಟ್ (African violet)
ಬೆಳಕು: ಉತ್ತಮ ಬೆಳಕು
ಮಣ್ಣು: ಸ್ವಲ್ಪ ಆಮ್ಲೀಯ (Acidic) ಮಣ್ಣು
ಇದನ್ನು ಕೇವಲ ಒಂದು ಎಲೆಯಿಂದ ಬೆಳೆಸಬಹುದು! ಹಳೆಯ ಎಲೆಯನ್ನು ಬುಡದಿಂದ ಕತ್ತರಿಸಿ ನೀರು ಅಥವಾ ಮಣ್ಣಿನಲ್ಲಿ ಇಡಿ. ಒಂದೇ ಕುಂಡದಲ್ಲಿ ಹಲವು ಎಲೆಗಳನ್ನು ನೆಟ್ಟರೆ ಗಿಡ ಬೇಗ ದೊಡ್ಡದಾಗುತ್ತದೆ.

6. ಸಾಂಬಾರ ಗಿಡಗಳು (Herbs)
ಬೆಳಕು: ಪೂರ್ಣ ಸೂರ್ಯನ ಬೆಳಕು
ಮಣ್ಣು: ಸಾಧಾರಣ ಮಣ್ಣು
ಬೆಸಿಲ್ (ತುಳಸಿ ಜಾತಿಗೆ ಸೇರಿದ ಗಿಡ) ನೀರಿನಲ್ಲಿ ಬೇಗ ಬೇರು ಬಿಡುತ್ತದೆ. ರೋಸ್ಮೇರಿ ಮತ್ತು ಲ್ಯಾವೆಂಡರ್‌ನಂತಹ ಗಿಡಗಳ 2-3 ಇಂಚಿನ ಕೊಂಬೆಯನ್ನು ಕತ್ತರಿಸಿ, ಕೆಳಗಿನ ಎಲೆಗಳನ್ನು ತೆಗೆದು ಮಣ್ಣಿನಲ್ಲಿ ನೆಡಬೇಕು.

7. ಟ್ರೇಡಿಸ್ಕಾಂಟಿಯಾ (ಪರ್ಪಲ್ ಹಾರ್ಟ್)
ಬೆಳಕು: ಉತ್ತಮ ಬೆಳಕು
ಮಣ್ಣು: ಫಲವತ್ತಾದ ಮಣ್ಣು
ನೇರಳೆ ಬಣ್ಣದ ಈ ಸುಂದರ ಗಿಡದ ಕೊಂಬೆಯನ್ನು ಕತ್ತರಿಸಿ (ಗಂಟು ಇರಬೇಕು) ನೇರವಾಗಿ ಮಣ್ಣಿನಲ್ಲಿ ನೆಟ್ಟರೆ ಸಾಕು, ಬೇಗನೆ ಚಿಗುರುತ್ತದೆ.

8. ಅಲೋವೆರಾ (ಲೋಳೆಸರ)
ಬೆಳಕು: ಉತ್ತಮ ಬೆಳಕು
ಮಣ್ಣು: ಮರಳು ಮಿಶ್ರಿತ ಮಣ್ಣು
ತಾಯಿ ಗಿಡದ ಬುಡದಲ್ಲಿ ಸಣ್ಣ ಸಣ್ಣ ಮರಿ ಗಿಡಗಳು ಹುಟ್ಟಿಕೊಳ್ಳುತ್ತವೆ. ಅವುಗಳನ್ನು ಬೇರು ಸಮೇತ ಜಾಗರೂಕತೆಯಿಂದ ಬೇರ್ಪಡಿಸಿ ಬೇರೆ ಕುಂಡದಲ್ಲಿ ನೆಡಬಹುದು. ಅಥವಾ ಒಂದು ದೊಡ್ಡ ಎಲೆಯನ್ನು ಕತ್ತರಿಸಿ ಮಣ್ಣಿನಲ್ಲಿ ನೆಡಬಹುದು.

9. ಹಾಲಿಡೇ ಕ್ಯಾಕ್ಟಸ್
ಬೆಳಕು: ಉತ್ತಮ ಬೆಳಕು
ಮಣ್ಣು: ಫಲವತ್ತಾದ ಮಣ್ಣು
ಕ್ರಿಸ್ಮಸ್ ಅಥವಾ ಥ್ಯಾಂಕ್ಸ್‌ಗಿವಿಂಗ್ ಕ್ಯಾಕ್ಟಸ್ ಗಿಡಗಳನ್ನು ಅಂದಗೊಳಿಸಲು ಕತ್ತರಿಸಿದಾಗ ಸಿಗುವ ಸಣ್ಣ ಕೊಂಬೆಗಳನ್ನು ನೇರವಾಗಿ ತೇವವಿರುವ ಮಣ್ಣಿನಲ್ಲಿ ಚುಚ್ಚಿದರೆ ಸಾಕು, ಅವು ಸುಲಭವಾಗಿ ಬೆಳೆಯುತ್ತವೆ.

10. ಸ್ಟ್ರಿಂಗ್ ಆಫ್ ಪರ್ಲ್ಸ್ (String of Pearls)
ಬೆಳಕು: ಉತ್ತಮ ಬೆಳಕು
ಮಣ್ಣು: ಕ್ಯಾಕ್ಟಸ್ ಮಣ್ಣಿನ ಮಿಶ್ರಣ
ಮುತ್ತಿನ ಹಾರದಂತಿರುವ ಈ ಗಿಡ ಹಳೆಯದಾದಾಗ ಬಡಕಲಾಗುತ್ತದೆ. ಇದರ ಕೊಂಬೆಯನ್ನು ಕತ್ತರಿಸಿ, ಒಂದು ರಾತ್ರಿ ಒಣಗಲು ಬಿಟ್ಟು (ತುದಿ ಗಟ್ಟಿಯಾಗಲು), ನಂತರ ತೇವವಿರುವ ಮಣ್ಣಿನಲ್ಲಿ ನೆಡಬೇಕು.

11. ಡ್ರಾಕೇನಾ (Dracaena)
ಬೆಳಕು: ಸಾಧಾರಣ ಬೆಳಕು
ಮಣ್ಣು: ನೀರು ನಿಲ್ಲದ ಮಣ್ಣು
ಇದು ಜೋಳದ ಗಿಡದ ತರಹ ಕಾಣುತ್ತದೆ. ಗಿಡ ತುಂಬಾ ಎತ್ತರವಾಗಿ ಬಾಗಲಾರಂಭಿಸಿದಾಗ, ಅದರ ಮೇಲ್ಭಾಗವನ್ನು ಕತ್ತರಿಸಿ, ಮಣ್ಣಿನಲ್ಲಿ ನೆಟ್ಟು, ಗಿಡ ನೆಟ್ಟಗೆ ನಿಲ್ಲಲು ಒಂದು ಕೋಲಿನ ಆಸರೆ ಕೊಡಿ.

12. ಪೆನ್ಸಿಲ್ ಕ್ಯಾಕ್ಟಸ್ (Pencil cactus)
ಬೆಳಕು: ಉತ್ತಮ ಬೆಳಕು
ಮಣ್ಣು: ಮರಳು ಮಿಶ್ರಿತ ಮಣ್ಣು
ನೋಡಲು ವಿಚಿತ್ರವಾಗಿರುವ ಈ ಕಳ್ಳಿ ಗಿಡದ ಕೆಲವು ಇಂಚುಗಳ ಕೊಂಬೆಯನ್ನು ಕತ್ತರಿಸಿ ಮಣ್ಣಿನಲ್ಲಿ ನೆಟ್ಟರೆ ಮುಗಿಯಿತು. ಕುಂಡ ತುಂಬಿ ಕಾಣಲು ಒಂದೇ ಕಡೆ 3-4 ಕೊಂಬೆಗಳನ್ನು ನೆಡಿ.

13. ಅಗ್ಲೋನೆಮಾ (Aglaonema)
ಬೆಳಕು: ಕಡಿಮೆ ಅಥವಾ ಸಾಧಾರಣ ಬೆಳಕು
ಮಣ್ಣು: ನೀರು ನಿಲ್ಲದ ಮಣ್ಣು
ಇದು ಕಡಿಮೆ ಬೆಳಕಿನಲ್ಲೂ ಬದುಕುವ ಗಟ್ಟಿಯಾದ ಗಿಡ. ಕೆಳಗಿನ ಎಲೆಗಳು ಉದುರಿ ಹೋದಾಗ, 4-5 ಇಂಚಿನ ಕೊಂಬೆಯನ್ನು ಕತ್ತರಿಸಿ ಮಣ್ಣಿನಲ್ಲಿ ನೆಟ್ಟರೆ ಗಿಡ ಮತ್ತೆ ಸುಂದರವಾಗುತ್ತದೆ.

14. ಜೇಡ್ ಪ್ಲಾಂಟ್ (ಅದೃಷ್ಟದ ಗಿಡ)
ಬೆಳಕು: ಉತ್ತಮ ಬೆಳಕು
ಮಣ್ಣು: ನೀರು ಸರಾಗವಾಗಿ ಹೋಗುವ ಮಣ್ಣು
ಗಿಡ ದೊಡ್ಡದಾಗುತ್ತಿದ್ದಂತೆ ಕೆಳಗಿನ ಎಲೆಗಳು ಉದುರುತ್ತವೆ. 2-3 ಗಂಟುಗಳಿರುವ ಕೊಂಬೆಯನ್ನು ಕತ್ತರಿಸಿ, 2-3 ದಿನ ಒಣಗಿಸಿ, ನಂತರ ಮಣ್ಣಿನಲ್ಲಿ ನೆಡಿ. ಇದು ಬೆಳೆಯಲು ಕೆಲವು ವರ್ಷಗಳು ಬೇಕಾಗುತ್ತವೆ.

15. ಪ್ರೇಯರ್ ಪ್ಲಾಂಟ್ (Prayer Plant)
ಬೆಳಕು: ಉತ್ತಮ ಬೆಳಕು
ಮಣ್ಣು: ಫಲವತ್ತಾದ ಮಣ್ಣು
ಇದರ ಆಕರ್ಷಕ ಎಲೆಗಳಿಂದಾಗಿ ಇದನ್ನು ಎಲ್ಲರೂ ಇಷ್ಟಪಡುತ್ತಾರೆ. ಗಿಡವನ್ನು ಅಚ್ಚುಕಟ್ಟಾಗಿಡಲು ಕತ್ತರಿಸಿದ ಕೊಂಬೆಗಳನ್ನು (ಗಂಟು ಇರಬೇಕು) ನೀರು ಅಥವಾ ಮಣ್ಣಿನಲ್ಲಿಟ್ಟು ಸುಲಭವಾಗಿ ಹೊಸ ಗಿಡ ಮಾಡಬಹುದು.