ಟೀ ಪುಡಿಯಿಂದ ಹೊಳೆಯುತ್ತೆ ಮರದ ಕುರ್ಚಿ, ಕಸಕ್ಕೆ ಹಾಕೋ ಮೊದಲು ಉಪಯೋಗ ತಿಳಿದುಕೊಳ್ಳಿ
ಬಹುತೇಕರ ದಿನ ಶುರುವಾಗೋದು ಟೀ ಕುಡಿದ್ಮೇಲೆ. ಬೆಳಿಗ್ಗೆಯಿಂದ ರಾತ್ರಿವರೆಗೆ ಎಷ್ಟೋ ಬಾರಿ ಟೀ ಕುಡಿದಿರ್ತೇವೆ. ಹಾಗೆ ಟೀ ಮಾಡಿದ್ಮೇಲೆ ಉಳಿಯೋ ಟೀ ಪುಡಿಯನ್ನು ಕಸಕ್ಕೆ ಹಾಕ್ತೇವೆ. ಆದ್ರೆ ನೀವು ಕಸಕ್ಕೆ ಎಸೆಯುವ ಈ ಟೀ ಪುಡಿ ಬೆಲೆ ಬಾಳುವಂತಹದ್ದು. ಅದ್ರ ಮರುಬಳಕೆ ತಿಳಿದುಕೊಂಡ್ರೆ ನಿಮಗೇ ಲಾಭ.

ಟೀ ಪುಡಿ
ಟೀ ಕುಡಿದ್ಮೇಲೆ ಟೀ ಪುಡಿ ವೇಸ್ಟ್. ದಿನಕ್ಕೆ ನಾಲ್ಕೈದು ಸ್ಪೂನ್ ಟೀ ಪುಡಿ ಕಸ ಸೇರುತ್ತೆ. ಆದ್ರೆ ಈ ಟೀ ಪುಡಿ ಸಾಕಷ್ಟು ನೈಸರ್ಗಿಕ ಪೋಷಕಾಂಶವನ್ನು ಹೊಂದಿದೆ. ನೀವು ಅದನ್ನು ಸುಲಭವಾಗಿ ಮರುಬಳಕೆ ಮಾಡ್ಬಹುದು. ಗ್ಲಾಸ್ ಸೇರಿದಂತೆ ಅನೇಕ ವಸ್ತುಗಳ ಕ್ಲೀನಿಂಗ್ ಗೆ ಇದನ್ನು ಬಳಸಬಹುದು.
ಗ್ಲಾಸ್ ಕ್ಲೀನಿಂಗ್
ಮನೆಯಲ್ಲಿರುವ ಗ್ಲಾಸ್ ಜಾರ್, ಕಿಟಕಿ ಗಾಜುಗಳು ಹೊಳೆಯುತ್ತಿದ್ರೆ ಮನೆ ಸೌಂದರ್ಯ ಹೆಚ್ಚಾಗುತ್ತದೆ. ಮಾರ್ಕೆಟ್ ನಿಂದ ದುಬಾರಿ ಬೆಲೆ ನೀಡಿ ಕ್ಲೀನರ್ ತರುವ ಬದಲು ನೀವು ಉಳಿದ ಟೀ ಪುಡಿ ಬಳಸ್ಬಹುದು. ಟೀ ಮಾಡಿ ಉಳಿದ ಟೀ ಪುಡಿಗೆ ಸ್ವಲ್ಪ ನೀರನ್ನು ಹಾಕಿ ಮತ್ತೆ ಕುದಿಸಿ. ಇದನ್ನು ಸೋಸಿ ನೀರನ್ನು ಒಂದು ಸ್ಪ್ರೇ ಬಾಟಲ್ ಗೆ ಹಾಕಿ. ಕಿಟಕಿ ಗಾಜುಗಳು, ಡ್ರೆಸ್ಸಿಂಗ್ ಟೇಬಲ್ ಕನ್ನಡಿಗಳು ಅಥವಾ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಇದನ್ನು ಬಳಸಿ. ಎಲ್ಲವೂ ಕನ್ನಡಿಯಂತೆ ಹೊಳೆಯುತ್ತದೆ.
ಗಿಡಕ್ಕೆ ಬಳಸಿ
ನೀವು ಟೀ ಪುಡಿಯನ್ನು ಗಿಡಕ್ಕೆ ಹಾಕಬಹುದು. ಚಹಾ ಎಲೆಗಳು ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿವೆ. ಇದು ಸಸ್ಯಗಳಿಗೆ, ವಿಶೇಷವಾಗಿ ಗುಲಾಬಿ ಗಿಡ, ಮನಿ ಪ್ಲಾಂಟ್ ಮತ್ತು ತುಳಸಿಗೆ ಅತ್ಯುತ್ತಮ ಗೊಬ್ಬರವಾಗಿದೆ. ಬಳಸಿದ ಟೀ ಪುಡಿಯನ್ನು ನೀರಿನಲ್ಲಿ ಕ್ಲೀನ್ ಮಾಡಿ ಒಣಹಾಕಿ. ನಂತ್ರ ಅದನ್ನು ಮಣ್ಣಿಗೆ ಹಾಕಿ. ಇದು ಸಸ್ಯಕ್ಕೆ ಮರು ಜೀವ ನೀಡುವುದಲ್ಲದೆ ಹೂ ಬಿಡಲು ಸಹಾಯ ಮಾಡುತ್ತವೆ.
ಮರದ ಖುರ್ಚಿ
ಮರದ ಪೀಠೋಪಕರಣಗಳಿಗೆ ಹೊಳಪು ನೀಡಲು ನೀವು ಇದನ್ನು ಬಳಸಬಹುದು. ಟೀ ಪುಡಿಯನ್ನು ನೀವು ಉಗುರುಬೆಚ್ಚಗಿನ ನೀರಿನಲ್ಲಿ ಇಡಿ. ನಂತ್ರ ಆ ನೀರಿಗೆ ಸ್ವಚ್ಛವಾದ ಹತ್ತಿ ಬಟ್ಟೆಯನ್ನು ನೆನೆಸಿ, ಮರದ ಮೇಜುಗಳು, ಸೋಫಾಗಳು ಅಥವಾ ಕಪಾಟುಗಳನ್ನು ಒರೆಸಿ. ಇದು ಮಸುಕಾದ ಮರಕ್ಕೆ ಹೊಳೆಯುವ, ತಾಜಾ ನೋಟವನ್ನು ನೀಡುತ್ತದೆ.
ಸಿಂಕ್ ಮೊಂಡುತನಕ್ಕೆ ಮುಕ್ತಿ
ಸಿಂಕ್ಗಳು ಮತ್ತು ಪಾತ್ರೆಗಳಿಂದ ಮೊಂಡುತನದ ವಾಸನೆಯನ್ನು ತೆಗೆದುಹಾಕಲು ಇದು ಸಹಕಾರಿ. ಮಾಂಸಾಹಾರ, ಈರುಳ್ಳಿ ಅಥವಾ ಬೆಳ್ಳುಳ್ಳಿ ಪಾತ್ರೆಗಳು ಮತ್ತು ಪ್ಲಾಸ್ಟಿಕ್ ಪಾತ್ರೆಗಳಿಂದ ವಾಸನೆ ಬರ್ತಿದ್ದರೆ, ಟೀ ಪುಡಿಗೆ ನೀರನ್ನು ಹಾಕಿ, ಆ ನೀರಿನಲ್ಲಿ ಪಾತ್ರೆಯನ್ನು ನೆನೆಸಿ. 2 ನಿಮಿಷ ಬಿಟ್ಟು ಪಾತ್ರೆಯನ್ನು ಉಜ್ಜಿ ತೊಳೆದ್ರೆ ಜಿಡ್ಡು ವಾಸನೆ ಹೋಗುತ್ತದೆ.
ನೊಣಗಳ ಕಾಟಕ್ಕೆ ಪರಿಹಾರ
ಮನೆಯಲ್ಲಿ ನೊಣ ಅಥವಾ ಸೊಳ್ಳೆ ಕಾಟವಿದ್ರೆ ತೊಳೆದು ಒಣಗಿಸಿದ ಚಹಾ ಪುಡಿ ಅಥವಾ ಎಲೆಗಳನ್ನು ಸುಟ್ಟು ಮನೆಯಾದ್ಯಂತ ಹೊಗೆಯನ್ನು ಹರಡಿ. ವಾಸನೆಯು ತಕ್ಷಣವೇ ಕೀಟಗಳನ್ನು ಓಡಿಸುತ್ತದೆ.
ಮರೆಯಬೇಡಿ
ನೀವು ಟೀ ಮಾಡುವಾಗ ಟೀ ಪುಡಿಗೆ ಹಾಲು, ಸಕ್ಕರೆ ಹಾಕೋದ್ರಿಂದ ಸೋಸಿದ ಟೀ ಪುಡಿಯಲ್ಲೂ ಹಾಲು ಅಥವಾ ಸಕ್ಕರೆ ಅಂಶ ಇರುತ್ತದೆ. ಅದನ್ನು ಮೊದಲು ಕ್ಲೀನ್ ಮಾಡಬೇಕು. ಹಾಗಾಗಿ ಟೀ ಮಾಡಿ ಉಳಿದ ಟೀ ಪುಡಿನ್ನು ಹಾಳು ಮತ್ತು ಸಕ್ಕರೆಯಿಂದ ಮುಕ್ತಗೊಳಿಸಲು ನಾಲ್ಕೈದು ಬಾರಿ ನೀರಿನಲ್ಲಿ ತೊಳೆಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

