ಚಪಾಕ್‌ ಸಿನೆಮಾ ಸದ್ದು ಮಾಡುತ್ತಿದೆ. ಆಸಿಡ್‌ ದಾಳಿಗೆ ಒಳಗಾದ ಸಂತ್ರಸ್ತೆಯಾಗಿ ದೀಪಿಕಾ ಅಭಿನಯ ನಿಮ್ಮ ಮನಸ್ಸನ್ನು ಸೂರೆ ಮಾಡಿರಬಹುದು. ಆದರೆ ನಿಜವಾಗಿಯೂ ಆಸಿಡ್‌ ದಾಳಿ ಸಂತ್ರಸ್ತೆಯರು ಹೇಗೆ ಜೀವನ ಮಾಡುತ್ತಾರೆ ಎಂಬ ಪ್ರಶ್ನೆಯೂ ನಿಮ್ಮನ್ನು ಕಾಡಿರಲಿಕ್ಕೂ ಸಾಕು. ಅದಕ್ಕೆ ಉತ್ತರ ಪಡೆಯಬೇಕಾದರೆ ಆಗ್ರಾದ ಈ ಕೆಫೆಗೆ ಭೇಟಿ ಕೊಡಿ.

ಆಗ್ರಾದ ತಾಜ್ ಮಹಲ್ ಸಮೀಪದ ಶಿರೋಸ್ ಕೆಫೆಗೆ ಭೇಟಿಕೊಟ್ಟರೆ ಈ ಧೀರೆಯರಿಗೆ ಹಾಯ್ ಹೇಳಬಹುದು. ಶಿರೋಸ್ ಹ್ಯಾಂಗೌಟ್ ಕೆಫೆ ಆಗ್ರಾದ ತಾಜ್ ಮಹಲ್ ಸಮೀಪದಲ್ಲೇ ಇದೆ. ಇದನ್ನು ಐದು ಜನ ಮಹಿಳೆಯರು ನಿರ್ವಹಿಸುತ್ತಾರೆ.

ಇವರು ಸಾಮಾನ್ಯ ಹೆಣ್ಮಕ್ಕಳಿಗಿಂತ ತುಸು ಭಿನ್ನ. ಛಲ, ಸ್ವಾಭಿಮಾನವನ್ನು ಎದೆಯಲ್ಲಿಟ್ಟುಕೊಂಡು ದಿಟ್ಟ ಹೆಜ್ಜೆ ಇಡುತ್ತಿರುವವರು. ಸಮಾಜದ ಕೆಲವು ವಿಕೃತ ಮನಸ್ಸುಗಳ ಕ್ರೌರ್ಯಕ್ಕೆ ಬಲಿಪಶುಗಳಾದವರು. ಹಾಗಂತ ಗೋಳಲ್ಲೇ ಬದುಕದೇ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡವರು.

ಆಗ್ರಾದ ಶಿರೋನ್ ಕೆಫೆ ಇವರ ದಿಟ್ಟ ಹೆಜ್ಜೆಗಳನ್ನು ದಾಖಲಿಸುತ್ತಾ ಗೆಲುವಿನ ದಿನಗಳಿಗೆ ಸಾಕ್ಷಿಯಾಗುತ್ತಿದೆ.  ಈ ಐವರು ಹೆಣ್ಮಕ್ಕಳಾದ ರಿತು ಸೈನಿ, ಚಂಚಲ್ ಕುಮಾರಿ, ನೀತು ಮಾಹೋರ್, ಗೀತಾ ಮಾಹೋರ್ ಮತ್ತು ರೂಪಾರಲ್ಲಿ ಒಬ್ಬೊಬ್ಬರದ್ದು ಒಂದೊಂದು ಕತೆ. ರೂಪಾ ಹದಿನೖದನೇ ವಯಸ್ಸಲ್ಲಿ ತನ್ನ ಮಲತಾಯಿಯಿಂದಲೇ ಆ್ಯಸಿಡ್ ಅಟ್ಯಾಕ್‌ಗೆ ತುತ್ತಾದವರು. ತುಟಿ, ಮುಖದ ಚರ್ಮ ಕರಗಿಹೋಯ್ತು. ಹದಿನೖದು ಅಂದರೆ ಉತ್ಸಾಹ ಚಿಮ್ಮುವ, ಭವಿಷ್ಯದ ಕನಸು ಕಾಣುವ ವಯಸ್ಸು. ಆದರೆ ಆ ಸಮಯದಲ್ಲೇ ಮಲತಾಯಿ ಈಕೆಯ ಕನಸುಗಳನ್ನು ಕಮರಿಸಿ ಹಾಕಲು ಪ್ರಯತ್ನಿಸಿದಳು.

ತಾಯಿ ಹತ್ಯೆಗೆ ನ್ಯಾಯ ಪಡೆಯಲು ಮಗನ ಹರ ಸಾಹಸ

ಆದರೆ ಈಕೆಯ ಕನಸು ಕೇವಲ ಚರ್ಮದಲ್ಲಿ, ಹೊರಗಿನ ಸೌಂದರ್ಯದಲ್ಲಿ ಸೀಮಿತಗೊಂಡಿರಲಿಲ್ಲ. ಚಿಕ್ಕಮ್ಮನ ಈ ಕ್ರೌರ್ಯ ಬಹಳ ಆಘಾತ ನೀಡಿದರೂ, ಒಂದು ದಿನ ಆ ನೋವುಗಳನ್ನೆಲ್ಲ ಕೊಡವಿ ಎದ್ದ ಈ ಬಾಲೆ ಕನಸುಗಳ ಹಿಂದೆ ಬಿದ್ದಳು. ಈಗ ಕೆಫೆಯ ಜೊತೆಗೆ ಬೊಟಿಕ್ ಡಿಸೖನರ್ ಆಗಿಯೂ ಕೆಲಸ ಮಾಡ್ತಿದ್ದಾರೆ ರೂಪಾ.

ಇನ್ನೊಬ್ಬ ಹುಡುಗಿ ರಿತು ಹದಿನೇಳನೇ ವಯಸ್ಸಲ್ಲಿ ಆ್ಯಸಿಡ್ ಧಾಳಿಗೆ ತುತ್ತಾದಳು. ಕೌಟುಂಬಿಕ ಕಲಹದಲ್ಲಿ ಸಂಬಂಧಿಗಳೇ ಈಕೆಯ ಮೇಲೆ ಆಸಿಡ್ ಸುರಿದರು. ಈ ಘಟನೆಯಲ್ಲಿ ರಿತು ತನ್ನ ಎಡಗಣ್ಣನ್ನೇ ಕಳೆದುಕೊಂಡಳು. ಮೂಗು, ಗಲ್ಲ, ಕತ್ತಿನ ಭಾಗದ ಚರ್ಮ ಸುಟ್ಟು ಹೋಯ್ತು. ಆ ದಿನಗಳಲ್ಲಿ ನನ್ನನ್ನು ಕಾಪಾಡಲು ಯಾರೂ ಬರಲಿಲ್ಲ ಎನ್ನುತ್ತಾರೆ ರಿತು. ಇಂದು ಈಕೆ ಶಿರೋಸ್ ಮೂಲಕ ಉತ್ಸಾಹಿ ಕೆಲಸಗಾರ್ತಿ.  

ಬೇರೆ ಬೇರೆ ಕಾರಣಕ್ಕೆ ಆ್ಯಸಿಡ್ ಧಾಳಿಗೆ ತುತ್ತಾದ ಒಬ್ಬೊಬ್ಬ ಹೆಣ್ಮಗಳದ್ದೂ ಒಂದೊಂದು ಕತೆ. ಮೂರ್ನಾಲ್ಕು ವರ್ಷಗಳ ಹಿಂದೆ ಶುರುವಾದ ಈ ರೆಸ್ಟೊರೆಂಟ್‌ನಲ್ಲಿ ಮೊದಲು ಐದು ಜನ ಆ್ಯಸಿಡ್ ಅಟ್ಯಾಕ್‌ಗೆ ತುತ್ತಾದವರಿದ್ದರು. ಈಗ ಅವರ ಸಂಖ್ಯೆ ಹತ್ತಕ್ಕೆ ಏರಿದೆ. ವರ್ಣಮಯ ಪೆಯಿಂಟಿಂಗ್ ಹೊಂದಿರುವ ಈ ರೆಸ್ಟೊರೆಂಟ್‌ನಲ್ಲಿ ಈ ಹತ್ತೂ ಜನ ಗ್ರಾಹಕರಿಗೆ ಊಟ, ತಿಂಡಿ ಸರ್ವ್ ಮಾಡ್ತಾರೆ.

ತಂದೆಗೆ ಕ್ಯಾನ್ಸರ್‌, ಚಿಕಿತ್ಸೆಗಾಗಿ ಆಟೋ ಓಡಿಸ್ತಿದ್ದಾಳೆ ದಿವ್ಯಾಂಗ ಹೆಣ್ಣುಮಗಳು

ಇದು ಹ್ಯಾಂಗೌಟ್‌ ಪ್ಲೇಸ್. ಇಲ್ಲಿ ಸ್ನಾಕ್ಸ್, ಚಾಟ್ಸ್‌ ಸವಿಯುವ ಜೊತೆಗೆ ಪುಸ್ತಕ ಓದಬಹುದು, ಹರಟೆ ಹೊಡೀಬಹುದು. ಸಮಯ ಇದ್ರೆ ಈ ಹೆಣ್ಮಕ್ಕಳ ಜೊತೆಗೆ ಮಾತಾಡಬಹುದು. ಈ ಜಾಗ ಈಗ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ. ಜನಸಾಮಾನ್ಯರ ಜೊತೆಗೆ ಇಲ್ಲಿಗೆ ಈ ರಾಜ್ಯದ ಮುಖ್ಯಮಂತ್ರಿಗಳು, ಇಟೆಲಿಯ ಪ್ರಧಾನಿ ಸೇರಿದಂತೆ ಹಲವು ಗಣ್ಯರು ಭೇಟಿ ಮಾಡಿದ್ದಾರೆ. ಈ ಹುಡುಗಿಯರ ಬದುಕಿಗೆ ಸಲಾಂ ಅಂದಿದ್ದಾರೆ.