ಮಕ್ಕಳು ದೊಡ್ಡವರಾಗುವವರೆಗೂ ಆರೋಗ್ಯಕ್ಕೆ ಸಂಬಂಧಿಸಿ ಒಂದಲ್ಲ ಒಂದು ಆತಂಕ ತಪ್ಪಿದ್ದಲ್ಲ. ಎಷ್ಟೋ ಸಲ ಈ ಆತಂಕದಲ್ಲೇ ಮಕ್ಕಳ ಬಗ್ಗೆ ಅತಿಯಾಗಿ ಕಾಳಜಿ ಮಾಡುತ್ತೀವಿ. ಈ ಅತಿಯೇ ಮಗುವಿನಲ್ಲಿ ಪ್ರತಿರೋಧ ಶಕ್ತಿ ಕಡಿಮೆಯಾಗುವಂತೆ ಮಾಡುತ್ತದೆ. ಇದನ್ನು ವೈದ್ಯಕೀಯವೂ ಒಪ್ಪುತ್ತಿದೆ. ಒಮ್ಮೆ ಯೋಚಿಸಿ, ನಮ್ಮ ತಂದೆ, ತಾಯಿ ಅವರು ಎಷ್ಟು ಆರೋಗ್ಯವಂತರಾಗಿದ್ದರು, ಅಜ್ಜ ಅಜ್ಜಿಯ ವಿಷಯದಲ್ಲಂತೂ ಕೇಳೋದೇ ಬೇಡ. ಅವರು ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಸ್ಟ್ರಾಂಗ್. ಆದರೆ ನಮ್ಮ ಮುಂದುವರಿದ ಜನಾಂಗ ನಮ್ಮ ಮಕ್ಕಳು, ಅವರ ಬಗ್ಗೆ ಯೋಚಿಸಿದಾಗ ಸಣ್ಣ ಬೇಸರ ಮನಸ್ಸಲ್ಲಿ ಮೂಡುತ್ತದೆ. ಅವರು ನಮ್ಮಷ್ಟೂ ಸ್ಟ್ರಾಂಗ್ ಇಲ್ಲ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೇ ಹೈರಾಣಾಗ್ತಾರೆ. ಮಾನಸಿಕವಾಗಿಯೂ ಸಮಸ್ಯೆಯನ್ನು ಫೇಸ್‌ ಮಾಡುವ ಶಕ್ತಿ ಅವರಲ್ಲಿಲ್ಲ. ಬಹಳ ಸೂಕ್ಷ್ಮವಾಗುತ್ತಾ ಹೋಗಿ ಸಣ್ಣಪುಟ್ಟದ್ದನ್ನೂ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಾರೆ. ಆದರೆ ಮಕ್ಕಳ ಈ ಸ್ಥಿತಿಗೆ ಪರೋಕ್ಷವಾಗಿ ನಾವು ತೋರಿಸುವ ಅತಿ ಕಾಳಜಿಯೇ ಕಾರಣ ಅಂದರೆ ನಂಬ್ತೀರಾ..

೧. ಮಣ್ಣಲ್ಲಿ ಆಟ ಆಡಿದ್ರೆ ಇನ್ ಫೆಕ್ಷನ್ ಆಗುತ್ತೆ!

ಮಗುವನ್ನು ಮನೆಯಲ್ಲೇ ಆಟ ಆಡೋದಕ್ಕೆ ಬಿಡ್ತೀವಿ. ಕೆಲವೊಮ್ಮೆ ಪಾರ್ಕ್ ಗೆ ಕರ್ಕೊಂಡು ಹೋದರೂ ಅಲ್ಲಿ ಮಣ್ಣು ಮುಟ್ಟಲು ಬಿಡಲ್ಲ. ಇನ್ನು ಹೊರಗೆಲ್ಲೂ ಮಣ್ಣಾಟ ಆಡುವ ಪ್ರಮೇಯವೇ ಬರಲ್ಲ ಬಿಡಿ. ಮಳೆ ಬಂದಾಗ ಮಗುವಿಗೆ ಮಳೆ ನೀರಲ್ಲಿ ಆಡುವ ಆಸೆ. ಆದರೆ ಅಪ್ಪಿತಪ್ಪಿಯೂ ಒಂದು ಹನಿ ಮಳೆ ನೀರು ಮಗುವಿನ ಮೇಲೆ ಬೀಳದ ಹಾಗೆ ಕಾಳಜಿ ಮಾಡುತ್ತೇವೆ. ಅದು ಮರದ ಹತ್ರ ಹೋದ್ರೆ ಇರುವೆ ಕಚ್ಚುತ್ತೆ ಅಂತ ಹೆದರಿಸ್ತೀವಿ. ನಿಸರ್ಗದಿಂದ ಸಂಪೂರ್ಣ ವಿಮುಖವಾಗಿಯೇ ಮಗು ಬೆಳೆಯುತ್ತಾ ಹೋಗುತ್ತದೆ. ಇದರಿಂದ ಮಗುವಿನಲ್ಲಿ ಪ್ರತಿರೋಧ ಶಕ್ತಿ ಕಡಿಮೆಯಾಗುತ್ತೆ. ಮಣ್ಣಲ್ಲಿ ಆಡಿದಾಗ ಮಣ್ಣಲ್ಲಿರುವ ಕೆಲವು ಅಂಶಗಳು ಮಗುವಿನ ದೇಹ ಸೇರುತ್ತವೆ. ಇಂಥಾ ಸೂಕ್ಷ್ಮಾಣು ಜೀವಿಗಳು ದೇಹದ ಪ್ರತಿರೋಧ ಶಕ್ತಿ ಅಥವಾ ರೋಗ ನಿರೋಧಕ ಗುಣವನ್ನು ಹೆಚ್ಚಿಸುತ್ತವೆ. ಸಣ್ಣ ಪುಟ್ಟ ರೋಗಗಳನ್ನೆಲ್ಲ ದೇಹವೇ ಎದುರಿಸುತ್ತದೆ. ಆದರೆ ಮಣ್ಣಲ್ಲಿ ಆಡದ ಮಗುವಿನಲ್ಲಿ ಈ ಶಕ್ತಿ ಇರಲ್ಲ.

 

೨. ಮಳೆ ನೀರಲ್ಲಿ ಆಡಿದ್ರೆ ನೆಗಡಿ ಗ್ಯಾರೆಂಟಿ

ಇದು ಇನ್ನೊಂದು ತಪ್ಪು ಕಲ್ಪನೆ. ಕೆಲವು ತೀರಾ ಸೂಕ್ಷ್ಮ ದೇಹಸ್ಥಿತಿಯ ಮಕ್ಕಳಲ್ಲಿ ಹಾಗಾಗಬಹುದೋ ಏನೋ, ಆದರೆ ಅಮ್ಮನ ಎದೆಹಾಲು ಸಾಕಷ್ಟು ಕುಡಿದಿರುವ ಮಕ್ಕಳು ಅಷ್ಟು ದುರ್ಬಲವಾಗಿರುವುದಿಲ್ಲ. ಮಳೆಯಲ್ಲಿ ಆಟ ಆಡೋದು ಅವರ ದೇಹ ಮನಸ್ಸಿನಲ್ಲಿ ಹುರುಪು ತುಂಬುತ್ತೆ. ದೇಹವನ್ನು ಚೈತನ್ಯಶೀಲವಾಗಿಡಲು ಮಳೆ ಬಹಳ ಒಳ್ಳೆಯದು. ಮಕ್ಕಳನ್ನು ಮಳೆಯಲ್ಲಿ ಆಡಲು ಬಿಡಿ. ನೀವೂ ಅವರ ಜೊತೆಗೆ ಆಟವಾಡಿ. ಬದಲಾಗಿ ಆರೋಗ್ಯದ ಕಾರಣ ಕೊಟ್ಟು ಮಗುವನ್ನು ಮಳೆ ನೀರಲ್ಲಿ ಆಡದ ಹಾಗೆ ಮಾಡಿದರೆ ನಷ್ಟ ನಿಮ್ಮ ಮಗುವಿಗೇ.

 

೩. ಸಾನಿಟೈಸರ್ ಬಳಕೆ

ಮಕ್ಕಳು ಮಣ್ಣಾಟ ಆಡಿದರೆ ಬಿಡಿ, ಏನಾದರೂ ತಿಂದರೂ ಸ್ಯಾನಿಟೈಸರ್ ನಲ್ಲಿ ಕೈ ತೊಳಿ ಅಂತೀವಿ. ಹೊರಗೆಲ್ಲೋ ಆಟ ಆಡಿ ಬಂದಾಗ, ಊಟಕ್ಕೆ ಮೊದಲು ಮಕ್ಕಳು ಸ್ಯಾನಿಟೈಸರ್ ಬಳಸಿಯೇ ಕೈ ತೊಳೆಯುತ್ತಾರೆ. ಮಕ್ಕಳು ಅತಿಯಾಗಿ ಸ್ಯಾನಿಟೈಸರ್ ಬಳಸೋದು ಹಾನಿಕರ ಅಂತ ವೈದ್ಯಕೀಯ ರಂಗ ಎಚ್ಚರಿಕೆ ನೀಡಿದೆ. ಈ ಸ್ಯಾನಿಟೈಸರ್ ನಲ್ಲಿ ಕೈ ತೊಳೆದರೆ ಕೇವಲ ಹಾನಿಕರ ಬ್ಯಾಕ್ಟೀರಿಯಾಗಳು ಮಾತ್ರವಲ್ಲ, ದೇಹಕ್ಕೆ ಅಗತ್ಯವಾದ ಜೈವಿಕ ಅಂಶಗಳೂ ನಾಶವಾಗುತ್ತವೆ. ಇದರಿಂದ ಮಗುವಿಗೆ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು.

 

2020ರಲ್ಲಿ ಬೆಸ್ಟ್ ಪೇರೆಂಟ್ ಆಗಬೇಕೇ? ಹಾಗಾದ್ರೆ ಈ ರೆಸಲ್ಯೂಶನ್‍ಗಳನ್ನು ಕೈಗೊಳ್ಳಿ 

 

೪. ಸಣ್ಣ ನೆಗಡಿ ಜ್ವರಕ್ಕೂ ಮೆಡಿಸಿನ್

ಎಲ್ಲೋ ಹೋಗಿ ಬಂದ ಮಗುವಿಗೆ ಒಂಚೂರು ನೆಗಡಿಯಾದರೂ ಮೆಡಿಸಿನ್‌ ಹಾಕುವ ಪರಂಪರೆ ಬೆಳೆಯುತ್ತದೆ. ಇನ್ನು ಮೈ ಸ್ವಲ್ಪ ಹೆಚ್ಚು ಬಿಸಿಯಿದ್ರೂ ಜ್ವರ ಬಂತು ಅಂತ ಡಾಕ್ಟರ್ ಶಾಪ್ ಗೆ ಹೋಗ್ತೀವಿ. ಎಷ್ಟೋ ಸಲ ವೈದ್ಯರೇ ಹೇಳ್ತಾರೆ, ಮಗುವಿಗೆ ಜ್ವರ ಬಂದ ಒಂದೆರಡು ದಿನದ ಬಳಿಕ ಇಲ್ಲಿ ಕರ್ಕೊಂಡು ಬಂದರೆ ಸಾಕು, ಮಕ್ಕಳಲ್ಲಿ ಮೈಬಿಸಿ ಜಾಸ್ತಿಯಾಗೋದು ಸಾಮಾನ್ಯ. ಅದಕ್ಕೆಲ್ಲ ಹೆದರಬೇಡಿ ಅಂತ. ಆದರೂ ನಮಗೆ ಭಯ. ಹೀಗೆ ಚಿಕ್ಕಪುಟ್ಟದಕ್ಕೂ ಔಷಧದ ಮೊರೆ ಹೋದರೆ ನಮ್ಮ ದೇಹದ ಸ್ವಯಂ ಶಕ್ತಿಯನ್ನು ನಾವೇ ಕೊಂದ ಹಾಗಲ್ಲವೇ..

 

ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ? 

 

೫. ಆಂಟಿ ಬಯೋಟಿಕ್ ಬಳಕೆ
ಅಲ್ಪ ಪ್ರಮಾಣದ ಅನಾರೋಗ್ಯಕ್ಕೂ ಆಂಟಿ ಬಯಾಟಿಕ್ ನೀಡುವುದರಿಂದ ಮಗುವಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಆಗುತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆ ಹಿಂದೊಮ್ಮೆ ಎಚ್ಚರಿಕೆ ನೀಡಿತ್ತು. ಅವಶ್ಯಕತೆ ಇಲ್ಲದ ಹೊರತು ಆಂಟಿ ಬಯಾಟಿಕ್ ಅನ್ನು ವೈದ್ಯರು ನೀಡಿದರೆ ನೀವದನ್ನು ಪ್ರಶ್ನಿಸಬಹುದು. ಸೆಕೆಂಡ್‌ ಒಪೀನಿಯನ್‌ ತಗೊಂಡೇ ಆಂಟಿ ಬಯಾಟಿಕ್ ನೀಡಿ. ಒಂದು ವೇಳೆ ಕೊಡೋದಿಕ್ಕೆ ಶುರು ಮಾಡಿದರೆ ಆ ಕೋರ್ಸ್ ಕಂಪ್ಲೀಟ್ ಮಾಡಲೇಬೇಕು. ಮಗು ಹುಷಾರಾದ್ಲು ಅಂತ ಅರ್ಧದಲ್ಲೇ ಆಂಟಿ ಬಯಾಟಿಕ್ ನೀಡೋದು ನಿಲ್ಲಿಸಿದರೆ ಮುಂದೆ ಆ ರೋಗ ಮರುಕಳಿಸಬಹುದು. ಆಗ ಇದಕ್ಕಿಂತ ಪವರ್ ಫುಲ್‌ ಆಂಟಿ ಬಯಾಟಿಕ್ ನೀಡಬೇಕಾಗುತ್ತೆ. ಇದರಿಂದ ಮಗುವಿಗೆ ಅಪಾಯ.