2020ರಲ್ಲಿ ಬೆಸ್ಟ್ ಪೇರೆಂಟ್ ಆಗಬೇಕೇ? ಹಾಗಾದ್ರೆ ಈ ರೆಸಲ್ಯೂಶನ್‍ಗಳನ್ನು ಕೈಗೊಳ್ಳಿ
2020ರಲ್ಲಿ ಮಕ್ಕಳಿಗೋಸ್ಕರ ನಾನು ಈ ಕೆಲಸಗಳನ್ನೆಲ್ಲ ಮಾಡುತ್ತೇನೆ ಎಂಬ ಸಂಕಲ್ಪ ಕೈಗೊಳ್ಳಲು ಇದು ರೈಟ್ ಟೈಮ್. ಈ ರೆಸಲ್ಯೂಶನ್‍ಗಳು ಮಕ್ಕಳ ಕಡೆಗೆ ಸರಿಯಾಗಿ ಗಮನ ನೀಡಲು ಸಾಧ್ಯವಾಗಲಿಲ್ಲ ಎಂಬ ನಿಮ್ಮ ಗಿಲ್ಟ್‍ನ್ನು ತಗ್ಗಿಸಬಲ್ಲವು ಕೂಡ.
ಈ ವರ್ಷ ಕೆಲಸದ ಒತ್ತಡ ಅಥವಾ ಇನ್ಯಾವುದೋ ಕಾರಣಗಳಿಂದ ಮಕ್ಕಳ ಕಡೆಗೆ ಹೆಚ್ಚಿನ ಗಮನ ನೀಡಲು ಸಾಧ್ಯವಾಗಿಲ್ಲ ಎಂಬ ಕೊರಗು ನಿಮ್ಮನ್ನು ಕಾಡುತ್ತಿದೆಯಾ? ಲೈಫ್‍ಸ್ಟೈಲ್, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ರೆಸಲ್ಯೂಶನ್‍ಗಳನ್ನು ಸೆಟ್ ಮಾಡುವ ನೀವು 2020ರಲ್ಲಿ ಮಕ್ಕಳ ಪಾಲನೆ ಹೇಗಿರಬೇಕು ಎಂಬ ಕುರಿತೇಕೆ ರೆಸಲ್ಯೂಶನ್‍ಗಳನ್ನು ಕೈಗೊಳ್ಳಬಾರದು?
ಕಟಾಚಾರಕ್ಕೆ ಕಟ್ಟು ಬೀಳಬೇಡಿ: ಪ್ರತಿವರ್ಷದಂತೆ ಈ ವರ್ಷವೂ ರೆಸಲ್ಯೂಶನ್ ಕೈಗೊಂಡು ವಾರಕ್ಕೆ ಮರೆತು ಬಿಡುವ ಜಾಯಮಾನ ನಿಮ್ಮದಾಗಿದ್ದರೆ ಮಕ್ಕಳ ಕುರಿತು ಸಂಕಲ್ಪಗಳನ್ನು ಕೈಗೊಳ್ಳುವ ನಿರ್ಧಾರವನ್ನು ಬಿಟ್ಟುಬಿಡಿ. ಏಕೆಂದರೆ ಇದು ಬೇರೆಲ್ಲ ರೆಸಲ್ಯೂಶನ್‍ಗಳಿಗಿಂತ ಭಿನ್ನವಾದದ್ದು ಮತ್ತು ನೀವಿದಕ್ಕೆ ಕಮಿಟ್ ಆಗುವುದು ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ದೃಷ್ಟಿಯಿಂದ ಕೂಡ ಮಹತ್ವದಾಗುತ್ತದೆ.
ಮಗುವಿಗೆ ಗುಡ್ ಟಚ್, ಬ್ಯಾಡ್ ಟಚ್ ಪಾಠ ಮಾಡುವುದು ಹೇಗೆ ಗೊತ್ತಾ?
ಹೀಗಿದ್ರೆ ಚೆಂದ: ನಿಮ್ಮ ಮಗು ಅಥವಾ ಮಕ್ಕಳಿಗೆ ಸಂಬಂಧಿಸಿ ನೀವು ಕೈಗೊಳ್ಳುವ ರೆಸಲ್ಯೂಶನ್‍ನಲ್ಲಿ ನಿಮ್ಮ ಪತಿ ಅಥವಾ ಪತ್ನಿಯನ್ನೂ ಪಾಲುದಾರರನ್ನಾಗಿಸಿಕೊಳ್ಳಿ. ಒಬ್ಬರಿಗಿಂತ ಇಬ್ಬರು ಸೇರಿದರೆ ಸಂಕಲ್ಪಗಳನ್ನು ಕಾರ್ಯರೂಪಕ್ಕೆ ತರುವುದು ಸುಲಭವಾಗುತ್ತದೆ. ಇನ್ನು ಸಂಕಲ್ಪಗಳು ವಾಸ್ತವಕ್ಕೆ ಹತ್ತಿರವಾಗಿರಲಿ. ಸರಳ, ಚಿಕ್ಕ-ಚೊಕ್ಕ ಹಾಗೂ ಆಚರಣೆಗೆ ಸುಲಭವೆನಿಸುವಂತಿರಲಿ.
1.ಮಕ್ಕಳ ಇಷ್ಟಕಷ್ಟಕ್ಕೆ ಕಿವಿಯಾಗುವುದು: ಪ್ರತಿದಿನ ಮಕ್ಕಳನ್ನು ಮಾತನಾಡಿಸುವ ಮೂಲಕ ಅವರ ಮನಸ್ಸಲ್ಲಿ ಏನಿದೆ ಎಂಬುದನ್ನು ತಿಳಿದುಕೊಳ್ಳುವುದು. ಆಫೀಸ್‍ಗೆ ರೆಡಿಯಾಗುತ್ತಿರಲಿ ಅಥವಾ ಇನ್ಯಾವುದೋ ಪ್ರಮುಖವಾದ ಕೆಲಸದಲ್ಲಿ ಬ್ಯುಸಿಯಾಗಿರಲಿ, ಮಕ್ಕಳು ಏನ್ನನ್ನೋ ಹೇಳಲು ಪ್ರಾರಂಭಿಸಿದಾಗ ಶ್ರದ್ಧೆಯಿಂದ ಅವರ ಮಾತನ್ನು ಆಲಿಸುತ್ತೇನೆ ಎಂಬ ಸಂಕಲ್ಪ ಕೈಗೊಳ್ಳಿ.
2.ಮುದ್ದು ಮಾಡಿ ಪಪ್ಪಿ ಕೊಡಿ: ದಿನದಲ್ಲಿ ಕನಿಷ್ಠ ಒಂದು ಬಾರಿಯಾದರೂ ಮಗುವನ್ನು ಬರಸೆಳೆದು ಅಪ್ಪಿಕೊಂಡು ಮುದ್ದು ಮಾಡುತ್ತೇನೆ ಎಂಬ ನಿರ್ಧಾರವನ್ನು ಕೈಗೊಳ್ಳಿ. ಅದೆಷ್ಟೇ ಕೆಲಸವಿರಲಿ, ಟೆನ್ಷನ್ ಇರಲಿ ಮಗುವನ್ನು ಒಮ್ಮೆಯಾದರೂ ಅಪ್ಪಿಕೊಂಡು ಮುದ್ದಾಡಿ.
ಮಗುವಿನ ಲಾಲನೆ ಪಾಲನೆಯಲ್ಲಿ ಅಪ್ಪಯಾಕೆ ಅಮ್ಮನಂತಾಗಬಾರದು?
3.ಚಾಕ್‍ಲೇಟ್, ಫಾಸ್ಟ್‍ಫುಡ್‍ಗೆ ನೋ: ಆಫೀಸ್‍ನಿಂದ ಬರುವಾಗ ಮಕ್ಕಳಿಗೆ ಚಾಕಲೇಟ್, ಪೇಸ್ಟ್ರೀಸ್ ಸೇರಿದಂತೆ ಜಂಕ್‍ಫುಡ್‍ಗಳನ್ನು ತರುವ ಅಭ್ಯಾಸ ನಿಮಗಿದ್ದರೆ 2019ರಲ್ಲೇ ಅದಕ್ಕೆ ವಿದಾಯ ಹೇಳಿ. 2020ರಲ್ಲಿ ಈ ಅಭ್ಯಾಗಳನ್ನು ಯಾವುದೇ ಕಾರಣಕ್ಕೂ ಮುಂದುವರಿಸಬೇಡಿ. ಮಕ್ಕಳು ಸ್ವಲ್ಪ ದಿನ ಹಟ ಮಾಡಬಹುದು, ಆಮೇಲೆ ಸರಿ ಹೋಗುತ್ತಾರೆ. ಹಾಗಂತ ಆಫೀಸ್‍ನಿಂದ ಬರುವಾಗ ಮಕ್ಕಳಿಗೆ ಏನನ್ನೂ ತರಬೇಡಿ ಎಂದು ಹೇಳುತ್ತಿಲ್ಲ. ಆರೋಗ್ಯಕರವಾದ ತಿನಿಸುಗಳನ್ನು ಧಾರಳವಾಗಿ ತನ್ನಿ.
4.ಹಣ್ಣು-ತರಕಾರಿ ಮೇಲೆ ಪ್ರೀತಿ ಹುಟ್ಟಿಸಿ: ಮಕ್ಕಳಿಗೆ ಹಣ್ಣು-ತರಕಾರಿಗಳನ್ನು ಹೆಚ್ಚೆಚ್ಚು ತಿನ್ನುವಂತೆ ಪ್ರೋತ್ಸಾಹಿಸಿ. ಸ್ನಾಕ್ಸ್ ಬಾಕ್ಸ್‍ಗೆ ಬಿಸ್ಕೆಟ್, ಕುರುಕಲು ತಿಂಡಿಗಳ ಬದಲು ಹಣ್ಣು, ತರಕಾರಿಗಳನ್ನು ಹಾಕಿ ಕೊಡಿ. ಸಲಾಡ್, ಕಟ್ಲೇಟ್, ಸ್ಯಾಂಡ್‍ವಿಚ್ ಮುಂತಾದ ಮಕ್ಕಳಿಗೆ ಇಷ್ಟವಾಗುವ ತಿಂಡಿ-ತಿನಿಸುಗಳ ಮೂಲಕ ತರಕಾರಿಗಳನ್ನು ತಿನ್ನಿಸಲು ಪ್ರಯತ್ನಿಸಿ.
5. ಔಟ್‍ಡೋರ್ ಗೇಮ್ಸ್‍ಗೆ ಮಹತ್ವ ನೀಡಿ: ಮಗುವನ್ನು ಪ್ರತಿದಿನ ಒಂದಷ್ಟು ಹೊತ್ತು ಹೊರಗೆ ಆಟವಾಡಲು ಬಿಡಿ. ಮಗು ಹೊರಗಡೆ ಹೋಗಲ್ಲ ಟಿವಿ ನೋಡುತ್ತೇನೆ ಎಂದು ಹಟ ಹಿಡಿಯಬಹುದು. ಏನಾದರೂ ನೆಪ ಹೇಳಿ ಮನೆಯಿಂದ ಹೊರಗಡೆ ಆಟವಾಡಿಸಿ. ಮನೆ ಹತ್ತಿರದಲ್ಲಿ ಪಾರ್ಕ್ ಇದ್ದರೆ ಅಲ್ಲಿಗೆ ಕರೆದುಕೊಂಡು ಹೋಗಿ. ಮನೆ ಮುಂದೆ ಆಟವಾಡಲು ಸ್ಥಳಾವಕಾಶವಿಲ್ಲವೆಂದರೆ ಟೆರೇಸ್ ಮೇಲಾದರೂ ಸ್ವಲ್ಪ ಹೊತ್ತು ಆಟವಾಡುವಂತೆ ಮಾಡಿ.
6.ವಾರಕ್ಕೊಮ್ಮೆ ಔಟಿಂಗ್ ಹೋಗಿ: ವಾರಾಂತ್ಯದಲ್ಲಿ ಮಕ್ಕಳನ್ನು ಸುತ್ತಾಟಕ್ಕೆ ಕರೆದುಕೊಂಡು ಹೋಗಿ. ಝೋ, ವಾಟರ್ ಪಾರ್ಕ್, ಮಾಲ್ ಎಲ್ಲದರೂ ಸರಿ. ಇದ್ಯಾವುದೂ ಬೇಡ ಅನಿಸಿದರೆ ನಿಮ್ಮ ಹತ್ತಿರದ ಸಂಬಂಧಿಗಳ ಮನೆಗಾದರೂ ಒಂದು ವಿಸಿಟ್ ನೀಡಿ.
ಮಗುವಿನ ಜೊತೆ ಇಂಗ್ಲಿಷ್‌ನಲ್ಲೇ ಹೆಚ್ಚು ಮಾತಾಡ್ತೀರಾ? ಹಾಗಾದ್ರೆ ಇದನ್ನು ಓದಿ!
7. ಮೊಬೈಲ್ ಕೈಗೆ ಸಿಗದಂತೆ ಎಚ್ಚರ ವಹಿಸಿ: ನಿಮ್ಮ ಮಗ ಅಥವಾ ಮಗಳು ಮೊಬೈಲ್‍ಗೆ ಅಡಿಕ್ಟ್ ಆಗಿದ್ದು ಅದನ್ನು ಬಿಡಿಸೋದು ಹೇಗಪ್ಪಾ? ಎನ್ನುವ ಚಿಂತೆಯಲ್ಲಿದ್ದರೆ 2020ರಲ್ಲಿ ಅದೇನೆ ಆಗಲಿ ಮೊಬೈಲ್ ಅನ್ನು ಅವರಿಗೆ ಮುಟ್ಟಲು ಬಿಡೋದಿಲ್ಲ ಎಂಬ ದೃಢ ಸಂಕಲ್ಪ ಕೈಗೊಳ್ಳಿ. ಅಂದಹಾಗೇ ಮಕ್ಕಳಿಗೆ ಮೊಬೈಲ್ ಮೇಲಿನ ಆಕರ್ಷಣೆ ತಗ್ಗಬೇಕೆಂದರೆ ನೀವು ಕೂಡ ಮೊಬೈಲ್ ಬಳಕೆ ಕಡಿಮೆ ಮಾಡುವುದು ಅಗತ್ಯ ಎಂಬುದು ನೆನಪಿರಲಿ.
8.ಟಿವಿ ವೀಕ್ಷಣೆಗೆ ಲಿಮಿಟ್ ಹಾಕಿ: ಮಗು ಎಷ್ಟೊತ್ತು ಟಿವಿ ನೋಡಬೇಕು, ಯಾವ ಕಾರ್ಯಕ್ರಮ ನೋಡಬೇಕು ಎಂಬುದನ್ನು ನೀವೇ ನಿರ್ಧರಿಸಿ, ಅವರು ಫಾಲೋ ಮಾಡುವಂತೆ ಮಾಡಿ.
9.ಕೇಳಿದ್ದನ್ನೆಲ್ಲ ಕೊಡಿಸದಿರುವುದು: ಇಲ್ಲಿಯ ತನಕ ಮಕ್ಕಳು ಕೇಳಿದ್ದನ್ನೆಲ್ಲ ಕೊಡಿಸುವ ಅಭ್ಯಾಸ ನಿಮಗಿದ್ದರೆ ಅದನ್ನು ಬಿಡಲು ಇದು ಸೂಕ್ತ ಸಮಯ. ನಿಮ್ಮ ಈ ಅಭ್ಯಾಸವನ್ನು 2020ಕ್ಕೆ ಮುಂದುವರಿಸಬೇಡಿ. ಅಗತ್ಯವೆನಿಸಿದ ವಸ್ತುಗಳನ್ನು ಮಾತ್ರ ಕೊಡಿಸಿ. ಇದರಿಂದ ನಿಮ್ಮ ಜೇಬಿನ ಮೇಲಿನ ಅನಗತ್ಯ ಹೊರೆ ತಪ್ಪುವ ಜೊತೆಗೆ ಮಕ್ಕಳಿಗೆ ಹಣ ಮತ್ತು ವಸ್ತುವಿನ ಮೌಲ್ಯದ ಅರಿವಾಗುತ್ತದೆ.
10.ದಿನಕ್ಕೊಂದು ಕಥೆ ಹೇಳಿ: ಪ್ರತಿದಿನ ಮಕ್ಕಳಿಗೆ ಒಂದೊಳ್ಳೆ ನೀತಿ ಕಥೆ ಹೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ರಾತ್ರಿ ಮಲಗುವಾಗ ಕಥೆ ಹೇಳಿದರೆ ಮಕ್ಕಳು ಆಸಕ್ತಿಯಿಂದ ಕೇಳುತ್ತ ನಿದ್ರೆಗೆ ಜಾರುತ್ತಾರೆ.
11.ಉತ್ತಮ ಪುಸ್ತಕಗಳನ್ನು ಗಿಫ್ಟ್ ಮಾಡಿ: ಹುಟ್ಟುಹಬ್ಬ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಗುವಿಗೆ ಪುಸ್ತಕಗಳನ್ನು ಗಿಫ್ಟ್ ಮಾಡುವ ಅಭ್ಯಾಸಕ್ಕೆ ನಾಂದಿ ಹಾಡಿ.
12. ಅವರಿಷ್ಟದ ಕ್ಲಾಸ್‍ಗೆ ಸೇರಿಸೋದು: ಡ್ಯಾನ್ಸ್, ಸಂಗೀತ, ಕರಾಟೆ, ಪೇಂಟಿಂಗ್...ಹೀಗೆ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿಯಿದೆಯೋ ಆ ಕ್ಲಾಸ್‍ಗೆ 2020ರಲ್ಲಿ ಸೇರಿಸುತ್ತೇನೆ ಎಂದು ನಿರ್ಧರಿಸಿ.
13.ಟೂರ್‍ಗೆ ಹೋಗಲು ಮರೆಯಬೇಡಿ: 2020ರಲ್ಲಿ ಮಕ್ಕಳೊಂದಿಗೆ ದೂರ ಎಲ್ಲಾದರೂ ಹೋಗಿ ಬನ್ನಿ. ಕನಿಷ್ಠ 4-5 ದಿನವಾದರೂ ಮನೆಯಿಂದ ದೂರವಿದ್ದು, ಮಕ್ಕಳೊಂದಿಗೆ ಎಂಜಾಯ್ ಮಾಡಿ.